ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕಪಲ್ ಚಾಲೆಂಜ್!

Last Updated 23 ಸೆಪ್ಟೆಂಬರ್ 2020, 23:27 IST
ಅಕ್ಷರ ಗಾತ್ರ

‘ಇದೇನ್ ಮುದ್ದಣ್ಣ, ಕಣ್ಣು ಕೆಂಪಾಗಿದೆ, ಕೆನ್ನೆ ಊದಿಕೊಂಡಿದೆ, ಕ್ಯಾಪ್ಸಿಕಂ ಬಜ್ಜಿ ಥರ ಮೂಗು ಶೇಪ್‌ಲೆಸ್ ಆಗಿದೆಯಲ್ಲ, ಏನಾಯ್ತು...’ ಅಚ್ಚರಿಯಿಂದ ಕೇಳ್ದ ವಿಜಿ.

‘ಅದೆಂಥದೋ ಕಪ್‌ನಲ್ಲಿ ಚಾಲೆಂಜ್ ಅಂತಲ್ಲ ಸರ್, ಅದರ ಎಫೆಕ್ಟ್ ಇದು...’ ದವಡೆ ಮೇಲೆ ಕೈ ಇಟ್ಕೊಂಡೇ ಉತ್ತರಿಸಿದ ಮುದ್ದಣ್ಣ.

‘ಕಪ್‌ನಲ್ಲಿ ಚಾಲೆಂಜ್ ಅಲ್ಲ ಅದು, ಕಪಲ್ ಚಾಲೆಂಜ್ ಅಂತಾ...’

‘ಎಂಥದೋ ಸುಡುಗಾಡು... ಅದರ ಬದಲು ಕನ್ನಡದಲ್ಲೇ ಮಾತಾಡೋ ಚಾಲೆಂಜು, ಸುಳ್ಳನ್ನ ಬಯಲಿಗೆಳೆಯೋ ಚಾಲೆಂಜ್, ಕೊರೊನಾ ಹಗರಣ ಚಾಲೆಂಜ್ ಅಂತನಾದರೂ ಮಾಡಿದ್ರೆ ನಾಡು, ನುಡಿ, ದೇಶ ಆದ್ರೂ ಉದ್ಧಾರ ಆಗಿರೋದಲ್ವ ಸರ್...’ ಮುದ್ದಣ್ಣ ಗಂಭೀರವಾಗಿ ಕೇಳ್ದ.

‘ಯಜಮಾನ್ರೆ, ನಿಮ್ದೆಲ್ಲ ಔಟ್‌ಡೇಟೆಡ್ ಐಡ್ಯಾಗಳು. ಕಪಲ್ ಚಾಲೆಂಜ್ ಅನ್ನೋದು ಅಪ್‌ಡೇಟೆಡ್ ಐಡ್ಯಾ...’ ಅಣಕಿಸಿದ ವಿಜಿ, ‘ವಾರದ ಹಿಂದೆ ಮದುವೆ ಆದವರಿಂದ ಹಿಡಿದು, ದಶಕಗಳ ಮುಂಚೆ ಜೋಡಿಯಾದವರೆಲ್ಲ ಫೇಸ್‌ಬುಕ್‌ನಲ್ಲಿ ಫೋಟೊ ಹಾಕಿ ನಮ್ ಹೊಟ್ಟೆ ಉರಿಸ್ತಿದ್ದಾರೆ.‌ ನಮ್ಮಂಥ ಸಿಂಗಲ್‌ಗಳೆಲ್ಲ ಏನ್ ಮಾಡ್ಬೇಕು’ ಎಂದು ಹಣೆ ಬಡ್ಕೊಂಡ.

‘ಅದರಲ್ಲೂ ಹೆಂಡ್ತಿಗೆ ಹೆದರಿ ಫೋಟೊ ಹಾಕಿದವರ ಸಂಖ್ಯೆ ಕಡಿಮೆಯೇನಿಲ್ಲ ಬಿಡಿ ಸರ್...’ ನೋವಲ್ಲೂ‌ ನಕ್ಕ ಮುದ್ದಣ್ಣ.

‘ಗೊತ್ತಾಯ್ತು ಬಿಡು, ಕಪಲ್ ಚಾಲೆಂಜ್‌ಗೆ ನೀನು ಫೋಟೊ ಹಾಕದೇ ಇದ್ದಿದ್ದಕ್ಕೆ ಈ ಪೂಜೆ ಆಗಿದೆ ಅನಿಸುತ್ತೆ...’

‘ಇಲ್ಲ ಸರ್, ನಾನೂ ಫೇಸ್‌ಬುಕ್‌ನಲ್ಲಿ ಫೋಟೊ ಹಾಕಿದ್ದೆ...’

‘ಆದರೂ‌ ಒದೆ ಬಿದ್ದಿದ್ದೇಕೆ...?’

‘ಕಪಲ್‌ ಅಂದ್ರೆ ಏನು ಅಂತಾ ಮಗಳಿಗೆ ಕೇಳ್ದೆ, ಕಪಲ್ ಅಂದ್ರೆ ‘ಇಬ್ಬರು’ ಅಪ್ಪಾ ಅಂದ್ಳು...’

‘ಕಪಲ್ ಚಾಲೆಂಜ್ ಅಂತಾ ಟೈಪ್ ಮಾಡಿ, ಹೆಂಡ್ತಿ ಮತ್ತು ಹೆಂಡ್ತಿ ಸ್ನೇಹಿತೆ ಮಧ್ಯೆ ನಾನು ನಿಂತಿರೋ ಫೋಟೊ ಹಾಕಿದ್ದೆ...!’

ಹಿಂದಿನಿಂದ ಪೊರಕೆ, ಸೌಟು ತನ್ನನ್ನೂ ಬೆನ್ಹತ್ತಿಬಿಟ್ಟಾವು ಎಂಬ ಭೀತಿಯಲ್ಲಿ ಅಲ್ಲಿಂದ ಕಾಲ್ಕಿತ್ತ ವಿಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT