ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಅಭಿವೃದ್ಧಿ ಮಂತ್ರ

Last Updated 28 ಫೆಬ್ರುವರಿ 2021, 19:31 IST
ಅಕ್ಷರ ಗಾತ್ರ

ಬೆಕ್ಕಣ್ಣ ಬೆಳಗ್ಗೆಯಿಂದ ಧುಸುಮುಸು ನಡೆಸಿತ್ತು.

‘ನೋಡು... ಬಳ್ಳಾರಿ ಡಾಗ್ ಶೋವಳಗ ಮುಧೋಳದ ನಾಯಿನೇ ಫಸ್ಟ್‌ ಬಂತಂತ. ನಂಗೂ ಹಂಗೇ ಎಲ್ಲಾರೂ ಕ್ಯಾಟ್ ಶೋಗೆ ಕಳ್ಸು ಅಂದ್ರ ನೀ ಎಲ್ಲಿಗೂ ಕಳಿಸಂಗಿಲ್ಲ’ ಎಂದು ಗುರುಗುಟ್ಟಿತು.

‘ಕ್ಯಾಟ್ಶೋವಳಗ ಪರ್ಷಿಯನ್ ಬೆಕ್ಕು ತಂದಿರ್ತಾರ. ನಿನ್ನಂಗ...’ ನನ್ನ ಮಾತು ಪೂರ್ಣಗೊಳಿಸಲೂ ಬಿಡದೆ ‘ಈಗೇನಿದ್ರೂ ಎಲ್ಲ ಕಡೆ ಸ್ವದೇಶಿ ಬ್ರಾಂಡ್ ನಡಿತೈತಿ. ಯೆಡ್ಯೂರಜ್ಜಾರು ಮೊನ್ನೆ ಅಷ್ಟೆ ಮೇಕ್ ಇನ್ ಇಂಡಿಯಾ ಲಾಂಛನ ಬಿಡುಗಡೆ ಮಾಡ್ಯಾರೆ, ನೋಡೀಯಿಲ್ಲೋ. ಮತ್ತ ನಾ ಏನ್ ಖಾಲಿಪೀಲಿ ಬೀದಿಬೆಕ್ಕು ಅಂದ್ಕಂಡೀಯೇನ್... ನಾ ಡೊಮೆಸ್ಟಿಕ್ ಲಾಂಗ್ ಹೇರ್ ಕ್ಯಾಟ್ ಅದೀನಿ’ ಎಂದು ತನ್ನ ಜೂಲು ಬಾಲವನ್ನು ಅಲ್ಲಾಡಿಸಿತು.

‘ಮತ್ತ ಅದ್ಕೆಲ್ಲ ತರಬೇತಿ ತಗಂಬೇಕಲೇ... ಸುಮ್ಸುಮ್ನೆ ಗೆಲ್ತಾರೇನ್... ನಿನ್ನ ಸಾಕೂ ಬದಲಿಗೆ ನಾ ಮುಧೋಳದ ನಾಯಿನೇ ಸಾಕಿದ್ರ ನಾಯಿ ಮಾಲೀಕಳು ಅಂತ ನಂಗೂ ಮಂದಿ ರಗಡ್ ಮರ್ಯಾದಿ ಕೊಡ್ತಿದ್ರು’ ಎಂದು ಕಿಚಾಯಿಸಿದೆ. ನಾಯಿ ಸಾಕುವ ವಿಚಾರ ತೆಗೆಯುತ್ತಿದ್ದಂತೆ ಬಾಲಮುದುರಿಕೊಂಡು ಪೇಪರು ಓದತೊಡಗಿತು.

‘ನಮಗ ಈ ಕೊರೊನಾನೇ ಓಡಿಸಾಕೆ ಆಗವಲ್ದು. ಆ ಚೀನಾದವ್ರು ನೋಡ್... ನಲ್ವತ್ತು ಉಪಗ್ರಹ ಒಂದೇ ಸಲಕ್ಕೆ ಮ್ಯಾಲೆ ಹಾರಿಸ್ತಾರಂತ. ಬದನೇಕಾಯಿ ಮಾಹಿತಿ ಕೇಳಿದರೂ ನೀ ಗೂಗಲಣ್ಣಂಗೆ ಕೇಳ್ತೀನಿ ಅಂತಿ. ಅವರ್ ನೋಡು... ಗೂಗಲ್ಲು, ಫೇಸುಬುಕ್ಕು, ವಾಟ್ಸಾಪ್ಪು ಮುಟ್ಟಂಗಿಲ್ಲಂತ. ಎಲ್ಲ ತಮ್ಮದೇ ಬ್ಯಾರೆ ಸ್ವಂತ ಮಾಡಿಕೊಂಡಾರಂತ... ಎಷ್ಟರ ದೇಶಭಕ್ತಿ, ಎಷ್ಟರ ಆತ್ಮನಿರ್ಭರ ಆಗ್ಯಾರ’ ಚೀನೀ ಗುಣಗಾನ ಶುರು ಮಾಡಿತು.

‘ದೇಶಭಕ್ತಿ ನಮಗೇನ್ ಕಡಿಮಿ... ಕ್ರೀಡಾಂಗಣದಿಂದ ಹಿಡಿದು ಎಷ್ಟಕೊಂದು ಹೊಸ ಹೆಸರು ಇಟ್ಟಿಲ್ಲೇನ್‌’ ಎಂದೆ.

‘ಖರೇ ಅದ ಮತ್ತ... ನಮೋನಾಡು ಅಂತ ನಮ್ಮ ದೇಶಕ್ಕೆ ಮರುನಾಮಕರಣ ಮಾಡಿದ್ರ ವಾಸ್ತು ಚೇಂಜ್ ಆಗತೈತಿ, ಬರೀ ಉಪಗ್ರಹ ಅಲ್ಲ, ನಾವ್ ಜಿಡಿಪಿನೇ ಆಕಾಶಕ್ಕೆ ಹಾರಿಸಬೌದು’ ಎಂದು ಮುಸಿಮುಸಿ ನಕ್ಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT