ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಶಾಲೆ ಸಂಕಟ

Published 29 ಜುಲೈ 2023, 1:11 IST
Last Updated 29 ಜುಲೈ 2023, 1:11 IST
ಅಕ್ಷರ ಗಾತ್ರ

ಚಟ್ನಿಹಳ್ಳಿ ಸರ್ಕಾರಿ ಶಾಲೆಯ ಎಸ್‍ಡಿಎಂಸಿ ಅಧ್ಯಕ್ಷರು ಶಿಕ್ಷಕರ ಹಾಜರಾತಿ ಪುಸ್ತಕ ಪರಿಶೀಲಿಸಿದರು.

‘ಕನ್ನಡ ಶಿಕ್ಷಕ... ಗೈರುಹಾಜರಿ, ಇಂಗ್ಲಿಷ್ ಮೇಷ್ಟ್ರು... ಆ್ಯಬ್ಸೆಂಟ್, ಗಣಿತ, ವಿಜ್ಞಾನ ಟೀಚರ್‌ಗಳೂ ಆ್ಯಬ್ಸೆಂಟ್... ಏನ್ರೀ ಇದು? ಮಕ್ಕಳಂತೆ ಶಿಕ್ಷಕರೂ ಶಾಲೆಗೆ ಚಕ್ಕರ್ ಹಾಕಿದ್ದಾರೆ?’ ಸಿಟ್ಟಾದ ಎಸ್‍ಡಿಎಂಸಿ ಅಧ್ಯಕ್ಷರು, ‘ಆ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲು ಇಲಾಖೆಗೆ ಕಂಪ್ಲೇಂಟ್‌ ಮಾಡಿ’ ಎಂದು ಶಿಕ್ಷಕರಿಗೆ ಹೇಳಿದರು.

‘ಪ್ರಯೋಜನವಿಲ್ಲ ಸಾರ್, ಆ ಶಿಕ್ಷಕರೆಲ್ಲಾ ಬೇರೆ ಶಾಲೆಗಳಿಗೆ ವರ್ಗಾವಣೆಯಾಗಿದ್ದಾರೆ’ ಅಂದರು ಶಿಕ್ಷಕರು.

‘ಹೆಡ್‌ಮಾಸ್ಟರೂ ಸ್ಕೂಲಿಗೆ ಬಂದಿಲ್ಲ, ಅವರಿಗಾದರೂ ಜವಾಬ್ದಾರಿ ಬೇಡ್ವಾ?’

‘ಅವರೂ ಟ್ರಾನ್ಸ್‌ಫರ್ ಆಗಿದ್ದಾರೆ ಸಾರ್’.

‘ಹಾಗಾದ್ರೆ ಹೆಡ್‌ಮಾಸ್ಟರ್ ಯಾರ್ರೀ?’

‘ಈಗ ನಾನೇ ಹೆಡ್‌ಮಾಸ್ಟರ್ ಸಾರ್, ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯ’.

‘ಸರಿಹೋಯ್ತು... ಅದುಬಿಡಿ, ನಮ್ಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಎಷ್ಟಿದೆ?’

‘ಒಂದರಿಂದ ಎಂಟನೇ ತರಗತಿವರೆಗೆ ಹನ್ನೆರಡು ಮಕ್ಕಳು ಕಲಿಯುತ್ತಿದ್ದಾರೆ ಸಾರ್’.

‘ಉಳಿದವರು ಎಲ್ಲಿ ಹೋದ್ರು?’

‘ಮಕ್ಕಳೂ ಬೇರೆ ಶಾಲೆಗೆ ವರ್ಗವಾಗಿದ್ದಾರೆ. ನಮ್ಮ ಶಾಲೆಯ ಪುಸ್ತಕ, ಯೂನಿಫಾರಂ, ಬಿಸಿಯೂಟ ಬೇಡ ಅಂತ ಆ ಮಕ್ಕಳು ಪಕ್ಕದೂರಿನ ಖಾಸಗಿ ಶಾಲೆಯ ಬಸ್ ಹತ್ತಿ ಹೋಗುತ್ತಿದ್ದಾರೆ’.

‘ಹೀಗಾದರೆ ಶಾಲೆ ಉಳಿಯುತ್ತೇನ್ರೀ?’ ಎಸ್‍ಡಿಎಂಸಿ ಅಧ್ಯಕ್ಷರು ಕಳವಳಗೊಂಡರು.

‘ನಮ್ಮ ಶಾಲೆಯೇ ಬೆಟರ್ ಸಾರ್. ರಾಜ್ಯದ ಸಾವಿರಾರು ಶಾಲೆಗಳಲ್ಲಿ ಹತ್ತಕ್ಕಿಂತ ಕಡಿಮೆ ಮಕ್ಕಳಿದ್ದಾರಂತೆ. ಎಷ್ಟೋ ಶಾಲೆಗಳಲ್ಲಿ ಒಬ್ಬ ವಿದ್ಯಾರ್ಥಿಯೂ ಇಲ್ಲವಂತೆ’ ಶಿಕ್ಷಕರು ಅಂಕಿಅಂಶ ನೀಡಿದರು.

ನಿಟ್ಟುಸಿರುಬಿಟ್ಟ ಅಧ್ಯಕ್ಷರು, ‘ನೀವೊಬ್ಬರಾದರೂ ಶಾಲೆಯಲ್ಲಿ ಉಳಿದಿದ್ದೀರಲ್ಲ’ ಎಂದರು.

‘ನಮ್ಮೂರಿನ ಶಾಲೆಗೆ ಟ್ರಾನ್ಸ್‌ಫರ್‌ಗೆ ಪ್ರಯತ್ನಿಸಿದ್ದೆ, ಸ್ಟೂಡೆಂಟ್ಸ್‌ ಸ್ಟ್ರೆಂಥ್‌ ಇಲ್ಲ ಅಂತ ಆ ಶಾಲೆ ಮುಚ್ಚಿಹೋಯ್ತು, ಹಾಗಾಗಿ ಇಲ್ಲೇ ಉಳಿದೆ. ಮುಂದಿನ ತಿಂಗಳು ನಾನು ರಿಟೈರ್ ಆಗ್ತಿದ್ದೀನಿ ಸಾರ್...’ ಅಂದರು ಮೇಷ್ಟ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT