ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವರೆಕಾಯಿ ಹೋರಾಟ

Last Updated 10 ಜನವರಿ 2021, 19:31 IST
ಅಕ್ಷರ ಗಾತ್ರ

ಚಟ್ನಿಹಳ್ಳಿ ರೈತರು ಮಂತ್ರಿ ಮನೆ ಮುಂದೆ ಅವರೆಕಾಯಿ ತಂದು ಸುರಿದು ದಿಢೀರ್ ಪ್ರತಿಭಟನೆ ನಡೆಸಿದರು. ವಿಷಯ ಗೊತ್ತಾಗಿ ಪೊಲೀಸರು ಓಡಿ ಬಂದರು. ಪತ್ರಿಕೆ, ಟಿ.ವಿ ಚಾನೆಲ್‍ನವರು ಧಾವಿಸಿ ಬಂದರು.

ಆಗ ಮಂತ್ರಿ ಮನೆಯಲ್ಲಿರಲಿಲ್ಲ. ತಾಜಾ ಅವರೆಕಾಯಿಗೆ ಮನಸೋತ ಮಂತ್ರಿ ಪತ್ನಿ, ಬೆಂಬಲ ಬೆಲೆ ಕೊಟ್ಟು ಪ್ರತಿಭಟನಾನಿರತ ರೈತರಿಂದ ನಾಲ್ಕು ಕೆ.ಜಿ. ಅವರೆಕಾಯಿ ಖರೀದಿಸಿದರು. ಬಂದೋಬಸ್ತಿಗೆ ಬಂದಿದ್ದ ಪೊಲೀಸರು, ವರದಿಗೆ ಬಂದಿದ್ದ ಪತ್ರಕರ್ತರೂ ಆಸೆಬಿದ್ದು ಅವರೆಕಾಯಿ ಕೊಂಡು ಬ್ಯಾಗ್ ತುಂಬಿಸಿಕೊಂಡರು.

ಮಂತ್ರಿ ಮನೆಯ ಮುಂದೆ ಅವರೆಕಾಯಿ ಸುರಿದು ರೈತರು ಪ್ರತಿಭಟನೆ ನಡೆಸುವ ವಿಷಯ ಟಿ.ವಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಆಗಿ ಬಿತ್ತರವಾಯಿತು. ಜನ ಬ್ಯಾಗ್ ಹಿಡಿದು ಓಡೋಡಿ ಬಂದರು. ಘಮಘಮಿಸುವ ಸೊಗಡು ಅವರೆಕಾಯಿಯನ್ನು ಮುಗಿಬಿದ್ದು ಖರೀದಿಸಿದರು. ನೋಡನೋಡುತ್ತಲೇ ರೈತರು ಸುರಿದಿದ್ದ ಅಷ್ಟೂ ಅವರೆಕಾಯಿ ರಾಶಿ ಬಿಕರಿಯಾಯಿತು. ಅಷ್ಟೊತ್ತಿಗೆ ಮಂತ್ರಿ ಬಂದರು. ‘ಅವರೆಕಾಯಿಗೆ ಬೆಂಬಲ ಬೆಲೆ ನಿಗದಿ ಮಾಡಿ, ಸರ್ಕಾರ ಖರೀದಿ ಮಾಡಬೇಕು’ ಎಂದು ರೈತರು ಒತ್ತಾಯಿಸಿದರು.

‘ಆಡಳಿತ ನಡೆಸುವುದನ್ನು ಬಿಟ್ಟು, ನೀವು ಬೆಳೆದ ಅವರೆಕಾಯಿ, ಕುಂಬಳಕಾಯಿ, ಸೋರೆಕಾಯಿಯನ್ನು ಕೊಂಡುಕೊಂಡು ನಾವು ಸಂತೆ ನಡೆಸಬೇಕೇನ್ರೀ...? ನೀವು ಬೆಳೆದಿದ್ದನ್ನೆಲ್ಲಾ ಕೊಂಡುಕೊಳ್ಳಲಾಗಲ್ಲ...’ ಎಂದರು ಮಂತ್ರಿ.

‘ಸಂತೆನಾದ್ರೂ ಮಾಡಿ, ನೀವಾದ್ರೂ ತಿನ್ನಿ, ಬೆಂಬಲ ಬೆಲ ಕೊಟ್ಟು ಅವರೆಕಾಯಿ ಕೊಳ್ಳಬೇಕು, ಇಲ್ಲಾಂದ್ರೆ ಹೋರಾಟ ತೀವ್ರಗೊಳಿಸ್ತೀವಿ’ ಎಂದರು.

ಮಂತ್ರಿಗೆ ಸಿಟ್ಟು ಬಂದರೂ ತೋರಿಸಿಕೊಳ್ಳದೆ, ‘ಆಯ್ತು, ಅಸೆಂಬ್ಲಿಯಲ್ಲಿ ಚರ್ಚೆ ಮಾಡಿ ಅವರೆಕಾಯಿ ಖರೀದಿಗೆ ಕ್ರಮ ತೆಗೆದುಕೊಳ್ತೀವಿ’ ಎಂದು ಭರವಸೆ ಕೊಟ್ಟರು.
ಅವರೆಕಾಯಿ ಖಾಲಿಯಾಗಿ ರೈತರು ಗೋಣಿಚೀಲ ಒದರಿಕೊಂಡು, ದುಡ್ಡು ಎಣಿಸಿಕೊಂಡು, ಹೋರಾಟ ಕೈಬಿಟ್ಟು ಅಲ್ಲಿಂದ ಹೊರಟರು.

ಮಂತ್ರಿ ಮನೆಯಲ್ಲಿ ಅವರೆಕಾಳಿನ ಸಾಂಬಾರ್ ‘ಘಮ್’ ಎನ್ನುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT