ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಂತ ಕಾಲ್ಕೊಟ್ಟಾ...!

Last Updated 15 ಜನವರಿ 2021, 19:31 IST
ಅಕ್ಷರ ಗಾತ್ರ

ಪೆಂಡಿಂಗ್‍ನಲ್ಲಿದ್ದ ಮನೆ ಪ್ಲ್ಯಾನ್‌ ಸ್ಯಾಂಕ್ಷನ್ ಕತೆ ಏನಾಯಿತೂಂತ ತಿಳ್ಕೊಳ್ಳೋಕೆ ಕಾರ್ಪೊರೇಷನ್ ಕಚೇರಿಗೆ ಹೋದೆ. ‘ಸರ್, ಜೆ.ಇ., ಎ.ಇ., ಇಬ್ರೂ ಇಲ್ಲ. ಫೀಲ್ಡಿಗೆ ಹೋಗಿದಾರೆ’ ಅಂದ್ರು ಸೂಪರಿಂಟೆಂಡೆಂಟ್. ‘ಏನಪ್ಪಾ, ಬೆಳಗ್ಗೇನೇ ಇನ್‍ಸ್ಪೆಕ್ಷನ್‍ಗೆ ಹೋಗಿದಾರಾ?’ ಎಂದೆ. ‘ಇಲ್ಲ, ಸರ್, ಮಾರಮ್ಮನ ಗುಡಿ ಪಕ್ಕದ ಫೀಲ್ಡ್‌ನಲ್ಲಿದಾರೆ, ಬೇಕಿದ್ರೆ ಅಲ್ಲೇ ಹೋಗಿ ನೋಡಿ, ಸಿಕ್ತಾರೆ’ ಅಂದ್ರು.

ಅಲ್ಲಿಗೆ ಹೋದೆ, ಫುಟ್‍ಬಾಲ್ ಮ್ಯಾಚ್ ನಡೀತಿತ್ತು. ಇಲ್ಲಿ ನಮ್ಮ ಎಂಜಿನಿಯರುಗಳನ್ನು ಎಲ್ಲಿ ಹುಡುಕೋದು ಅಂದುಕೊಳ್ಳುವಾಗಲೇ ಮ್ಯಾಚಿನ ಡ್ರೆಸ್‍ನಲ್ಲಿದ್ದ ಏರಿಯಾ ಜೆ.ಇ.ನೇ ಸಿಕ್ರು. ‘ಏನು ಸರ್? ನಿಮ್ಮ ಸಂಘದ ವಾರ್ಷಿಕೋತ್ಸವದ ಮುನ್ನ ಕ್ರೀಡಾಸ್ಪರ್ಧೆಗೆ ತಯಾರೀನಾ?’ ಎಂದು ಕೇಳಿದೆ.

‘ಇಲ್ಲಾರೀ, ಮುಂದಿನ ವಾರ ನಮ್ಮ ಮಿನಿಸ್ಟ್ರ ವಿಸಿಟ್ ಇದೆ. ಅದಕ್ಕೆ ರೆಡಿ ಮಾಡ್ಕೊತಿದೀವಿ. ಅಲ್ಲೀತನಕ ನಾವ್ಯಾರೂ ಸಿಗೋಲ್ಲ ನಿಮಗೆ. ಕೆಲಸ ಏನಾದ್ರೂ ಇದ್ರೆ ಎರಡು ವಾರ ಬಿಟ್ಕೊಂಡು ಬನ್ನಿ’ ಎಂದರು. ಅರ್ಥವಾಗದೇ ಮುಂದಿನ ಪ್ರಶ್ನೆ ಕೇಳಲು ಹೊರಡುವಷ್ಟರಲ್ಲಿ ಅವರಾಗಲೇ ಫುಟ್‍ಬಾಲ್ ನೆಲಕ್ಕಿಟ್ಟು ಫ್ರೀಕಿಕ್ ಮಾಡಲು ಫೀಲ್ಡಿಗಿಳಿದಿದ್ದರು.

ಅವರು ಆಟ ಮುಗಿಸಿದ ಮೇಲೆ ವಿಚಾರಿಸೋಣವೆಂದುಕೊಂಡು ಟೀ ಸ್ಟಾಲಿಗೆ ಬಂದೆ. ‘ನಮ್ಮ ಸಾಹೇಬ್ರು ಶಾಟ್ ಕೊಟ್ರೆ ನಿಮ್ಮೋರ ಮಂಡಿ ಎಗರೋಯ್ತದೆ’ ಅನ್ನೋ ಮಾತು ಅಲ್ಲಿದ್ದೋರೊಬ್ಬರ ಬಾಯಿಂದ ಬಂತು. ಅತ್ತ ತಿರುಗಿದರೆ, ಕಾರ್ಪೊರೇಷನ್ ಸಾಹೇಬರುಗಳ ಕಾರು ಡ್ರೈವರುಗಳೆಲ್ಲಾ ಟೀ ಕುಡೀತಿದ್ರು. ‘ಅಯ್ಯೋ ಬುಡಿ. ನಮ್ಮ ಸಾಯೇಬ್ರ ವಿಸ್ಯ ನಿಮಗ್ಗೊತ್ತಿಲ್ಲ. ಸುಮ್ನಿರ‍್ತಾರಾ? ಮಿನಿಸ್ಟ್ರ ಕೈಲೇ ಒದಿಸ್ತಾರೆ’.

ಕೆಲಸ ಮಾಡ್ದಿರೋ ಎಂಜಿನಿಯರುಗಳಿಗೆಲ್ಲಾ ಮಿನಿಸ್ಟ್ರು ಒದಿಯೋ ಪ್ರೋಗ್ರಾಂ ಹಾಕ್ಕೊಂಡಿರೋ ವಿಷಯ ಪೇಪರಿನಲ್ಲಿ ಓದಿದ್ದು ನೆನಪಾಯಿತು. ಮಿನಿಸ್ಟ್ರು ಒದಿಯೋಕೆ ಬಂದರೆ ತಪ್ಪಿಸಿಕೊಳ್ಳೋದ್ಹೇಗೆ ಅಂತ ಪ್ರ್ಯಾಕ್ಟೀಸ್ ಮಾಡ್ತಿದಾರೆ. ಮಿನಿಸ್ಟ್ರ ಪ್ರೋಗ್ರಾಂ ಮುಗಿಯುವ ತನಕ ನನ್ನ ಪ್ಲಾನ್ ಸ್ಯಾಂಕ್ಷನ್ ಆಗೋಲ್ಲ ಅನ್ನೋದು ಗ್ಯಾರಂಟಿಯಾಯ್ತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT