ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹ್ಯಾಪಿ ಫ್ರೆಂಡ್‌ಷಿಪ್ ಡೇ!

Last Updated 3 ಡಿಸೆಂಬರ್ 2019, 17:14 IST
ಅಕ್ಷರ ಗಾತ್ರ

ಗ್ರೀಟಿಂಗ್ಸ್‌ ಕಾರ್ಡ್‌ಗಳ ಅಂಗಡಿಗೆ ನುಗ್ಗಿದರು ಆ ಮೂವರು ರಾಜಕಾರಣಿಗಳು. ‘ಹ್ಯಾಪಿ ಫ್ರೆಂಡ್‌ಷಿಪ್ ಡೇ, ಸ್ನೇಹ ದಿನದ ಶುಭಾಶಯ...’ ಎಂಬಂತಹ ಸಂದೇಶವುಳ್ಳ ಕಾರ್ಡ್‌ಗಳ ಕಡೆ ದೃಷ್ಟಿ ಹರಿಸಿದರು.

‘ಏನ್ ಸ್ವಾಮಿ, ಗ್ರೀಟಿಂಗ್ಸ್ ಕಾರ್ಡ್ ತಗೊಳೋಕೆ ಬಂದ್ರಾ’ ಕೇಳ್ದ ಕಮಲ ಪಕ್ಷದ ನಾಯಕ.

‘ಹೌದು ಬ್ರದರ್, ಡಿಸೆಂಬರ್‌ 9 ನಮಗೆಲ್ಲ ಮುಖ್ಯವಾದ ದಿನಾ ಅಲ್ವಾ, ಇಂಥ ಕಾರ್ಡ್ ಎಲ್ಲ ಬೇಕಾಯ್ತವೆ’ ಮುಗುಳ್ನಕ್ಕ ತೆನೆ ಪಕ್ಷದ ಲೀಡರ್.

‘ಹೌದೌದು, ಚುನಾವಣೆ ರಿಸಲ್ಟ್ ದಿನವೇ ನಮಗೆಲ್ಲ ನಿಜವಾದ ಫ್ರೆಂಡ್ಸಿಪ್ ಡೇ’ ತಲೆದೂಗಿದ ಕೈ ಮುಖಂಡ.

‘ಹೊರಗೆ ಬೈದಾಡಿಕೊಳ್ತೀರಿ, ಇಲ್ಲಿ ಬಂದು ಗ್ರೀಟಿಂಗ್ಸ್ ಕಾರ್ಡ್ ತಗೊಳ್ತೀರಿ. ನಿಮ್ ಥಿಂಕಿಂಗೇ ಅರ್ಥವಾಗ್ತಿಲ್ಲ’ ತಲೆಕೆರೆದುಕೊಳ್ಳುತ್ತಾ ಹೇಳ್ದ ಅಂಗಡಿಯ ವಿಜಿ.

‘ಅದೇ ಪಾಲಿಟಿಕ್ಸು. ನಮಗೆ ಅನುಕೂಲವಾಗಿ ರಿಸಲ್ಟ್‌ ಬಂದ್ರೆ ಪಕ್ಷದವರಿಗೆ ಗ್ರೀಟಿಂಗ್ಸ್ ಕಾರ್ಡ್ ಕೊಡ್ತೀವಿ. ಬರಲಿಲ್ಲ ಅಂದ್ರೆ ವಿರೋಧ ಪಕ್ಷದವರಿಗೆ ಕೊಡ್ತೀವಿ’.

‘ಮತ್ತೀಗ, ಯಾವುದೇ ಕಾರಣಕ್ಕೂ ಕೈ ಜೋಡಿಸಲ್ಲ ಅಂತೀರಿ’.

‘ಅಂದ್ರೆ, ಗೆದ್ದಮೇಲೆ ಜನ್ರಿಗೆ ಎರಡೂ ಕೈ ಜೋಡಿಸಿ ನಮಸ್ಕಾರ ಮಾಡಲ್ಲ ಅಂತ’.

‘ಚುನಾವಣೆ ಮುಗಿದ್ಮೇಲೆ ಒಂದಾಗಿದ್ದೇಕೆ ಅಂತ ಕೇಳಿದ್ರೆ?’

‘ಮತ್ತೊಂದು ಚುನಾವಣೆ ಬರಬಾರದು ಅನ್ನೋ ಉದ್ದೇಶಕ್ಕೆ ಅಂತೀವಿ’.

‘ಜಿಡಿಪಿ ಚೆನ್ನಾಗಿಲ್ಲ ಅಂತ ಬೈತಿದೀರಿ, ಕಮಲ ಗೆದ್ರೆ ಏನಂತೀರಿ?’

‘ನಾನು ಹೇಳಿದ್ದು ಜಿಡಿಪಿ ಬಗ್ಗೆ ಅಲ್ಲ, ಡಿಪಿ ಬಗ್ಗೆ ಅಂತೀನಿ’ ಹೇಳ್ದ ತೆನೆ ಬ್ರದರ್.

‘ಕೈ ಗೆದ್ದರೆ?’

‘ಮಾಮೂಲಿ ಡೈಲಾಗ್, ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು...’

ಇವರದೆಲ್ಲ ನಾಲಿಗೆ ಅಲ್ಲ ಅಂದುಕೊಂಡ ವಿಜಿ, ಕಾರ್ಡ್ಸ್ ಪ್ಯಾಕ್ ಮಾಡತೊಡಗಿದ.

‘ಬ್ರದರ್, ಕೈ ಚಿತ್ರ ಇರೋದು ಇನ್ನೂರು, ಕಮಲ ಚಿತ್ರ ಇರೋದು ಇನ್ನೂರು ಸಪರೇಟ್ ಪ್ಯಾಕ್ ಮಾಡು!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT