ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ದೇವರೇಗತಿ.ಇನ್

Last Updated 26 ಏಪ್ರಿಲ್ 2021, 21:56 IST
ಅಕ್ಷರ ಗಾತ್ರ

ಮೊನ್ನೆ ಹೈಕೋರ್ಟು ಈ ದೇಶಾನ ದೇವರೇ ಕಾಯಬೇಕು ಅಂತಂದ್ರೆ, ಸುಪ್ರೀಂ ಕೋರ್ಟು ಆರೋಗ್ಯ ತುರ್ತುಪರಿಸ್ಥಿತಿ ಬಂದದೆ ಅಂತ ಬೇಜಾರು ಮಾಡಿಕ್ಯಂಡಿತ್ತು. ಕೋವಿಡ್ ಯುದ್ಧದಲ್ಲಿ ರಾಜಾವುಲಿಗೆ ಸಪೋರ್ಟು ಮಾಡುಮಾ ಅಂತ ವಾಯುಮುದ್ರೆ ಹಾಕಿ ‘ಮೋದಿ ನಾಮೋಚ್ಚರಣ ಸಕಲ ರೋಗಃ ನಶ್ಯಂತಿ. ನಮೋ ನಮೋ ಆಕ್ಸಿಜನ್ ದೇಹಿ ದೇಹಿ, ವ್ಯಾಕ್ಸಿನ್ ದೇಹಿ ದೇಹಿ’ ಅಂತ ಮಂತ್ರ
ಕೀ ಬಾತ್ ಹೇಳಿಕ್ಯತಿದ್ದೆ.

ಯಾರೋ ತಿವುದಂಗಾಯ್ತು. ಕಣ್ಬುಟ್ಟು ನೋಡಿದರೆ ಯಮದೂತ! ‘ಯಮಲೋಕಕ್ಕೆ ಜನ ತಕ್ಕೋಗುವಾಗ ನೀನು ಮಾಸ್ಕಾಕ್ಕ್ಯಂಡೇ ಕಷ್ಟೋತ್ತರ ಮಂತ್ರ ಹೇಳತಿದ್ದಲ್ಲಾ, ಅದುಕ್ಕೇ ಮಾತಾಡಿಸ್ಕೋಗುಮಾ ಅಂತ ಕುಂತೆ’ ಅಂದ.

‘ಏನು ಮಾಡನಣೈ, ವ್ಯಾಕ್ಸಿನ್‌ ಇಲ್ಲ, ಬೆಡ್ ಇಲ್ಲ, ಆಕ್ಸಿಜನ್ ಇಲ್ಲ, ವೆಂಟಿಲೇಟರ್ ಇಲ್ಲ, ಇಂಜೆಕ್ಷನ್ ಇಲ್ಲ. ನಾವು ತಿರುಪೆಯೋರ ಥರ ಆಗಿದೀವಿ. ಹೋದೊರ್ಸದ ಹಾಸಿಗೆ, ಮಂಚ, ವೆಂಟಿಲೇಟರ್ ಏನಾದ್ವೋ ಕಾಣೆ. ಕಾಸಿದ್ರೆ ಮಾತ್ರ ಸತ್ತೋರಿಗೆ ಕೈಲಾಸ. ಸರ್ಕಾರಗಳು ನಮ್ಮ ಭಂಗಕ್ಕಾಯ್ತಿಲ್ಲ. ವಿರೋಧ ಪಕ್ಸಗಳು ತೌಡು ಕುಟ್ಟುತಾವೆ’.

‘ಮಾಸ್ಕಾಕ್ಕಳಿ, ಕೈತೊಳೀರಿ, ಡಿಸ್ಟೆನ್ಸ್ ಇರಲಿ ಅಂತ ಡಾಕ್ಟ್ರುಗಳು ಬಡಕಂಡ್ರೂ ನೀವು ಬಾಡು-ಬಳ್ಳೆ, ತರಕಾರಿ ಅಂತ ಅಲೀತಿದ್ದೀರಿ! ನಾಯಕರು ಬೂತುಚೇಷ್ಟೆಯಲ್ಲೇ ಬಿಜಿಯಾಗವ್ರೆ!’ ಅಂದ ಯಮದೂತ.

‘ನಮ್ಮದಿರಲಿ ನೀವೇನು ಓವರ್ ಟೈಂ ಮಾಡ್ತಿದ್ದರಿಯಾ?’ ವಿಚಾರಿಸಿದೆ.

‘ನಮ್ಮ ಸಯಾಬ್ರು ಎಕ್ಸ್‌ಪೈರಿ ಡೇಟ್ ಆಗಿರೋರ ಲಿಸ್ಟ್ ಕೊಟ್ಟವ್ರೆ. ಮಾಸ್ಕಾಕಿಕೊಂಡೋರ ಮಧ್ಯೆ ಎಕ್ಸ್‌ಪೈರಿ ಡೇಟ್ ಆಗಿರೋರ ಗುರುತೇ ಸಿಕ್ತಿಲ್ಲ ಅನ್ನದೇ ಪ್ರಾಬ್ಲಮ್ಮು ಕನೋ!’ ಅಂದ ದೂತಣ್ಣ.

‘ಅದುಕ್ಕೇನು ಮಾಡಿಯೇ?’

‘ಮಾಡದೇನು? ಮಾಸ್ಕಾಕದೇ ಬೀದೀಲಿ ಸುತ್ತೋರ‍್ನ ಹಿಡಕಬಂದು ಬೊಂಬುಲೆನ್ಸಿಗೆ ಹಾಕ್ಕ್ಯಂಡಿವನಿ. ಜನ ಬುದ್ಧಿ ಕಲೀದಿದ್ರೆ ನಾನೇ ಫೀಲ್ಡಿಗೆ ಬತ್ತಿನಿ ಅಂತ ನಮ್ಮ ಸಾಯಬ್ರು ಏಳ್ಯವರೆ!’ ಅಂತ ದೂತಣ್ಣ ಫೈನಲ್‌ ನೋಟಿಸ್ ಕೊಟ್ಟು ಕಡದೋದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT