ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಕೊರೊನಾ ಖಾತೆ

Last Updated 27 ಏಪ್ರಿಲ್ 2021, 21:40 IST
ಅಕ್ಷರ ಗಾತ್ರ

ಮಂತ್ರಿಗಳು ಮಾಸ್ಕ್ ಹಾಕ್ಕೊಂಡು ಮಂಕಾಗಿ ಕುಳಿತಿದ್ದರು. ‘ಏನು ನಿಮ್ಮ ಸಮಸ್ಯೆ?’ ಮುಖ್ಯಮಂತ್ರಿ ಕೇಳಿದರು.

‘ಕೊರೊನಾ ಶುರುವಾದಾಗಿನಿಂದ ಹೆಲ್ತು, ಪೊಲೀಸು ಮುಂತಾದ ಕೋವಿಡ್ ಸಂಬಂಧಿ ಇಲಾಖೆಗಳನ್ನು ಬಿಟ್ಟರೆ ಬೇರೆ ಇಲಾಖೆಗಳಲ್ಲಿ ಕೆಲಸ-ಕಾರ್ಯ ನಡೆಯುತ್ತಿಲ್ಲ’ ಮಂತ್ರಿಯೊಬ್ಬರು ಮಾಸ್ಕ್ ಬಿಚ್ಚಿದರು.

‘ಹೌದು. ದುಡ್ಡಿಲ್ಲ-ಕಾಸಿಲ್ಲ ಹೆಸರಿಗಷ್ಟೇ ಸರದಾರ ಅನ್ನುವಂತಾಗಿದೆ ನಮ್ಮ ಸ್ಥಿತಿ. ನಮ್ಮ ಖಾತೆಗಳಲ್ಲಿ ಅನುದಾನ, ಆದಾಯ, ಅಭಿವೃದ್ಧಿ ಯಾವುದೂ ಇಲ್ಲ...’ ಮತ್ತೊಬ್ಬ ಮಂತ್ರಿಯ ಸಂಕಟ.

‘ನಿಮ್ಮ ಖಾತೆಗಳ ಅನುದಾನವನ್ನು ಕೊರೊನಾ ನುಂಗುತ್ತಿದೆ...’ ಅಂದ್ರು ಸಿಎಂ. ‘ನಮ್ಮ ಖಾತೆಗಳನ್ನು ಕೊರೊನಾ ಸೋಂಕಿನಿಂದ ಮುಕ್ತಗೊಳಿಸಿ’ ಅಂದ್ರು ಇನ್ನೊಬ್ಬ ಮಂತ್ರಿ.

‘ಪ್ರತ್ಯೇಕ ಕೊರೊನಾ ಖಾತೆ ರಚನೆ ಮಾಡಿ, ಆರೋಗ್ಯವಂತ ಸಚಿವರನ್ನು ನೇಮಕ ಮಾಡಿ ಕೊರೊನಾ ನಿಭಾಯಿಸಲು ಜವಾಬ್ದಾರಿ ನೀಡಿ’ ಎಂದರು.

‘ನಮ್ಮ ಖಾತೆಗಳ ಸಂಪರ್ಕ, ಸಂಬಂಧಕ್ಕೆ ಬಾರದಂತೆ ಕೊರೊನಾ ಖಾತೆಯು ಅಂತರ ಕಾಪಾಡಿಕೊಳ್ಳಲಿ. ತನ್ನ ಹಣದಿಂದಲೇ ಕೊರೊನಾ ಖರ್ಚು-ವೆಚ್ಚ ನಿಭಾಯಿಸಲಿ’ ಅಂದ್ರು ಮತ್ತೊಬ್ಬ ಮಂತ್ರಿ.

‘ಕೊರೊನಾ ಖಾತೆಗೆ ಆದಾಯ ಮೂಲ ಇರೊಲ್ಲ, ಬರೀ ಖರ್ಚು...’ ಸಿಎಂ ಹೇಳಿದರು.

‘ಕೊರೊನಾ ಖಾತೆಯಡಿ ಯೋಜನೆಗಳನ್ನು ರೂಪಿಸಿ, ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್, ಹಾಸಿಗೆ, ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದರೆ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಬಹುದು, ಉತ್ಪನ್ನಗಳ ಮಾರಾಟದಿಂದ ಆದಾಯ ಬರುತ್ತದೆ. ಜೊತೆಗೆ, ಮಾಸ್ಕ್ ದಂಡ, ಹಾಸಿಗೆ ತೆರಿಗೆ, ಆಕ್ಸಿಜನ್ ವೆಚ್ಚ, ಆರೋಗ್ಯ ಸೇವಾ ಶುಲ್ಕ ಅಂತ ಹಣ ಸಂಗ್ರಹಿಸಿದರೆ ಕೊರೊನಾ ಖಾತೆ ಆರ್ಥಿಕ ಸ್ವಾವಲಂಬಿಯಾಗಿ ನಮ್ಮ ಖಾತೆ ಹಣಕ್ಕೆ ಕೈ ಹಾಕೋದು ತಪ್ಪುತ್ತದೆ’ ಎಂದರು ಮಂತ್ರಿಗಳು.

‘ಒಳ್ಳೆಯ ಐಡಿಯಾ, ಚರ್ಚೆ ಮಾಡೋಣ’ ಎಂದರು ಸಿಎಂ. ಮಂತ್ರಿಗಳು ಸಂತಸಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT