ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಐರನ್‌ಲೆಗ್ ಗುರು

Last Updated 25 ಮೇ 2021, 18:41 IST
ಅಕ್ಷರ ಗಾತ್ರ

ತುರೇಮಣೆ ‘ಲೇಯ್ ಒಬ್ಬ ದೊಡ್ಡ ಕನ್ಸಲ್ಟೆಂಟು ಬಂದವ್ರಂತೆ. ನೋಡಿಕ್ಯ ಬರಮು ಬಾ. ಇವುರು ಕಾಲು ಮಡಗಿದ ಕಡೆ ಸರ್ವನಾಶವಂತೆ. ಇವುರು ಕೆಲಸ ಮಾಡ್ತಿದ್ದ ಎಲ್ಲಾ ಆಪೀಸುಗಳು ಒಂದಲ್ಲಾ ಒಂದು ಕಾರಣಕ್ಕೆ ಮೂರು ತಿಂಗಳಿಗೆ ಮುಚ್ಚೋದ್ವಂತೆ ಕಲಾ’ ಅಂದ್ರು.

‘ಇವರು ಎಲ್ಲಾರಂಗಲ್ಲ ಕನೋ! ಒಂಥರಾ ಎಡವಟ್ ಕನ್ಸಲ್ಟೆಂಟು. ಅವುರುನ್ನ ವಿಧಾನಸೌಧುಕ್ಕೆ ಕಳಿಸಿದ್ರೆ ಸರ್ಕಾರ ಬಿದ್ದೋಯ್ತದೆ ಅಂತ ಹಸ್ತಸಾಮುದ್ರಿಕೆ ಪಕ್ಸ ಪ್ಲಾನ್ ಮಾಡ್ತಾದಂತೆ ಕಯ್ಯಾ’ ಅಂತು ಯಂಟಪ್ಪಣ್ಣ.

‘ಯಾರು ಸಾ ಈ ಖರಾಬ್ ಕನ್ಸಲ್ಟೆಂಟ್? ಏನು ಅವುರ ಹೆಸರು?’ ಕೇಳಿದೆ.

‘ಅವರೆಸರು ಐರನ್ ಲೆಗ್ ಸ್ವಾಮಿಗಳು ಅಂತ ಕನೋ. ಅವರ ಕಾಲಿಗೇ ಕೋಟಿ ರುಪಾಯಿ ಇನ್ಸೂರೆನ್ಸು ಅದೆ!’ ಅಂದ್ರು. ಅವುರ ಐದಂತಸ್ತಿನ ಮನೆ ಐರನ್‍ಲೆಗ್‍ ವಿಲ್ಲಾಕ್ಕೆ ಬಂದೋ. ಭಾರೀ ಜನ ಸೇರಿದ್ರು. ಕನ್ಸಲ್ಟೆಂಟಿನ ಶಿಷ್ಯಕೀಟಗಳು ಗುರುಗಳನ್ನ ಹೊತ್ಕಬಂದು ಸಿಮ್ಮಾಸನದ ಮೇಲೆ ಇಳುಕಿದ್ರು. ಅವರು ನೆಲಕ್ಕೆ ಕಾಲೇ ಮಡಗತಿರಲಿಲ್ಲ. ಅಷ್ಟೊತ್ತಿಗೆ ರಾಜಾವುಲಿನೂ ಆಸ್ಥಾನ ಪಂಡಿತರ ಜೊತೆಗೆ ಬಂದು ಕನ್ಸಲ್ಟೆಂಟಿಗೆ ದೂರದಿಂದ್ಲೇ ಅಡ್ಡಬಿದ್ದರು.

‘ನಮ್ಮಂತೋರಿಗೂ ಒಂದು ಪ್ಯಾಕೇಜು ಕೊಡಿ’ ಅಂದ್ರು ಗುರುಗಳು. ರಾಜಾವುಲಿ ‘ಸ್ವಾಮಿ, ರಾಜ್ಯದೇಲಿ ಏನು ಮಾಡಿದ್ರೂ ಕೊರೊನಾ ಹೋಯ್ತಿಲ್ಲ! ತಮ್ಮ ಖರಾಬು ಕೀರ್ತಿ ಕೇಳಿದೀನಿ. ತಾವು ಎಲ್ಲೆಲ್ಲಿ ಕೊರೊನಾ ಜಾಸ್ತಿ ಅದೋ ಅಲ್ಲಿ ತಮ್ಮ ಐರನ್‌ಲೆಗ್ಗು ಮಡಗಬೇಕ್ರಾ! ಕೊರೊನಾ ತಮ್ಮಿಂದ ಹೊಂಟೋದ್ರೆ ಒಂದು ಐರನ್‍ಲೆಗ್ ಅಧ್ಯಯನ ಪೀಠ ಮಾಡ್ತೀನಿ. ಅದಕ್ಕೆ ನೀವೇ ಪರ್ಮನೆಂಟ್ ಅಧ್ಯಕ್ಸರು! ಕೋಟಿ ಅನುದಾನ ಕೊಡ್ತೀವಿ’ ಅಂದ್ರು.

‘ಆಯ್ತು ಭಕ್ತಾ, ಕೊರೊನಾ ಖೇಲ್ ಖತಂ, ನಾಟಕ್ ಬಂದ್’ ಅಂತ ಸ್ವಾಮಿಗಳು ಎದ್ದು ಬೆಂಗಳೂರು ರೌಂಡ್ಸಿಗೆ ಹೊಂಟರು.

ಮಾರನೇಗೆ ಆಗಲೇ ಸುದ್ದಿ, ಕೊರೊನಾ ಡಯಾಬಿಟೀಸು, ವೈಟ್ ಫಂಗಸ್ ಕಾಯಿಲೆ ಸುರುವಾಗ್ಯದೆ ಅಂತ. ಕನ್ಸಲ್ಟೆಂಟು ಕೊರೊನಾ ಪೀಡಿತರಾಗಿ ಮನೆ ಸೇರಿಕ್ಯಂಡಿದ್ರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT