ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಟ್ಟದ ಪ್ರಭು

Last Updated 1 ಜನವರಿ 2020, 20:14 IST
ಅಕ್ಷರ ಗಾತ್ರ

‘ಭಕ್ತ, ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ, ನಿನಗೆ ಏನು ವರ ಬೇಕು ಕೇಳು’.

‘ಭಗವಂತ, ದೇವರುಗಳೆಲ್ಲಾ ನೆಲ ಬಿಟ್ಟು ಬೆಟ್ಟದ ಮೇಲೆ ವಾಸ್ತವ್ಯ ಹೂಡಬೇಕು ಎಂಬುದು ನನ್ನ ಕೋರಿಕೆ’.

‘ಹಹ್ಹಹ್ಹ... ಮನುಷ್ಯರು ಗಗನಚುಂಬಿ ಅಪಾರ್ಟ್‌ಮೆಂಟ್‌ಗಳಲ್ಲಿದ್ದಾರೆ, ನಾವು ಅವರಿಗಿಂತ ಎತ್ತರದಲ್ಲಿ ಬೆಟ್ಟದ ಮೇಲಿರಬೇಕು ಎಂಬುದು ನಿನ್ನ ಅಭಿಲಾಷೆಯೇ?’

‘ಹಾಗೇನಿಲ್ಲ ಪ್ರಭು, ಬೆಟ್ಟಗಳು ಈಗ ಸಂಕಷ್ಟ ದಲ್ಲಿವೆ, ನೀವು ಅವುಗಳ ಕಷ್ಟ ನಿವಾರಿಸಬೇಕು’.

‘ರಾಮನಗರದ ಕಪಾಲ ಬೆಟ್ಟಕ್ಕೆ ಬಂದಿರುವ ಕಷ್ಟವೇ? ಅಲ್ಲಿ ಯೇಸು ಪ್ರತಿಮೆ ಸ್ಥಾಪನೆಗೆ ನಿನ್ನ ವಿರೋಧವೇ?’

‘ಪರ-ವಿರೋಧ ಅಂತೇನಿಲ್ಲ ದೇವಾ. ಶಿವ, ಯೇಸು, ಅಲ್ಲಾ... ಎಲ್ಲ ದೇವರೂ ತಿರುಪತಿ ತಿಮ್ಮಪ್ಪನಂತೆ ಇನ್ನು ಮುಂದೆ ಬೆಟ್ಟಗಳ ಮೇಲೆಯೇ ನೆಲೆಸಿ, ಬೆಟ್ಟಗಳು ಕಳವಾಗದಂತೆ ಕಾವಲು ಕಾಯಲಿ ಅಂತ’.

‘ಬೆಟ್ಟಗಳ ಕಳವೇ?! ಅಸಂಭವ. ಆಂಜನೇಯನು ಸಂಜೀವಿನಿ ಪರ್ವತವನ್ನು, ಶ್ರೀಕೃಷ್ಣನು ಗೋವರ್ಧನಗಿರಿಯನ್ನು ಹೊತ್ತ ರೀತಿ, ಮನುಷ್ಯ ಬೆಟ್ಟ ಎತ್ತುವುದು, ಹೊತ್ತು ಹೋಗುವುದು ಸಾಧ್ಯವೇ ಭಕ್ತ?’

‘ಪ್ರಭು, ನೀವಿನ್ನೂ ಅಪ್‍ಡೇಟ್ ಆಗಿಲ್ಲ. ಕಲ್ಲು ಗಣಿಗಾರರ ಕಣ್ಣಿಗೆ ಬೀಳುವ ಬೆಟ್ಟಗಳು ಮಂಜುಗಡ್ಡೆಯಂತೆ ಕುಳಿತಲ್ಲೇ ಕರಗಿ ಹೋಗುತ್ತವೆ, ಕರಗದಂತೆ ದೇವರುಗಳು ಕಾವಲಿದ್ದು ಮುಂದಿನ ಪೀಳಿಗೆಗೆ ಬೆಟ್ಟಗಳನ್ನು ಉಳಿಸಿ. ಇಲ್ಲವೇ ಹೊಸ ಬೆಟ್ಟಗಳನ್ನು ಸೃಷ್ಟಿಸಿ’.

‘ನಾನು ಸೃಷ್ಟಿಕರ್ತ ನಿಜ. ಆದರೆ, ಬೆಟ್ಟಗಳನ್ನು ಸೃಷ್ಟಿಸಲಾರೆ’.

‘ನೀವು ಬೆಟ್ಟದಲ್ಲಿ ಪ್ರತಿಷ್ಠಾಪನೆಗೊಂಡರೆ ಆಗ ಬೆಟ್ಟವನ್ನು ಒಡೆದು, ಪುಡಿ ಮಾಡಲು ಗಣಿಗಾರರು ಹಿಂಜರಿಯುತ್ತಾರೆ. ಪಾಪಪ್ರಜ್ಞೆಯ ಕಾರಣಕ್ಕಾದರೂ ಬೆಟ್ಟಗಳು ಉಳಿಯುತ್ತವೆ’.

‘ಸುಮ್ಮನಿರು ಭಕ್ತ, ಗಣಿಧಣಿಗಳು ನಮಗೆ ಬಂಗಾರದ ಕಿರೀಟ ತೊಡಿಸಿ, ಹುಂಡಿ ತುಂಬಿಸಿ ತಮ್ಮ ಪಾಪ ನಿವಾರಣೆ ಮಾಡಿಕೊಳ್ಳುತ್ತಾರೆ. ಬೆಟ್ಟಗಳ ಉಸಾಬರಿಯೇ ಬೇಡ...’ ಎನ್ನುತ್ತಾ ದೇವರು ಅದೃಶ್ಯನಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT