‘ಇದೇನ್ರಿ, ಈ ನಡುವೆ ಎಲ್ಲಾ ಬಿಚ್ಚಿಡೋದೇ ಆಗಿದೆ’ ಎಂದು ಮಡದಿ ಶುರು ಮಾಡಿದಳು.
‘ಓಲೆಗಳು ತಾನೆ? ಹೇಗಿದ್ರೂ ಚಿನ್ನದ ರೇಟ್ ಕಡಿಮೆಯಾಗಿದೆ, ಹಳೆಯದನ್ನು ಬಿಚ್ಚಿಟ್ಟು ಹೊಸ ಡಿಸೈನ್ ಓಲೆ ತಗೊಬೇಕು ಅಂತ ಅಲ್ವಾ ನೀನು ಹೇಳ್ತಿರೋದು?’
‘ಅಯ್ಯೋ! ಅದಲ್ಲಾರೀ. ಶಿವಕುಮಾರೂ ರೀ... ಆಮೇಲೆ ಕುಮಾರಸ್ವಾಮಿ ಈ ಕಡೆ’.
‘ಓ ಅವರಾ... ಇವರು ಅವರನ್ನ ಬಿಚ್ಚಿಡ್ತೀನಿ ಅಂತಾರೆ, ಅವರು ಇವರನ್ನ ಬಿಚ್ಚಿಡ್ತೀನಿ ಅಂತ ಹೇಳುತ್ತಲೇ ಇದ್ದಾರೆ. ಆದರೆ ಯಾರೂ ಬಿಚ್ಚಿಟ್ಟ ಹಾಗೆ ಕಾಣ್ತಾ ಇಲ್ಲ’.
‘ಇವರು ಮೊದಲು ಬಿಚ್ಚಿಡಲಿ ಅಂತ ಅವರು ಕಾಯ್ತಾ ಇದಾರೆ, ಅವರು ಮೊದಲು ಬಿಚ್ಚಿಡಲಿ ಅಂತ ಇವರು ಕಾಯ್ತಾ ಇದಾರೆ.... ಇಬ್ಬರೂ ಬಿಚ್ಚಿಡಲಿ ಅಂತ ನಾವೆಲ್ಲ ಕಾಯ್ತಾ ಇದೀವಿ’.
‘ನಾವು ಕಾಯ್ತಾನೇ ಇರತೀವಿ. ಇತ್ತೀಚೆಗೆ ಕುಮಾರಸ್ವಾಮಿ ಜೇಬಿನಿಂದ ಒಂದು ಪೆನ್‍ಡ್ರೈವ್ ತೆಗೆದು ತೋರಿಸಿ, ಇದರಲ್ಲಿ ಎಲ್ಲಾ ಇದೆ, ಹೊರಗೆ ಬಿಡ್ತೀನಿ ಎಂದು ಹೇಳಿದ್ದು ನೆನಪಿದೆಯಾ?’
‘ಇದೇರಿ. ಆದರೆ ಬೇರೆ ಯಾವುದೋ ಪೆನ್‍ಡ್ರೈವ್ ಬೇರೆ ಯಾರೋ ಹೊರಗೆ ಬಿಟ್ರು. ಅದು ಬೇರೆ ಏನನ್ನೋ ಬಿಚ್ಚಿಡ್ತು’.
‘ಇವರು ಹೀಗೆ ಬಿಚ್ಚಿಡ್ತೀನಿ ಬಿಚ್ಚಿಡ್ತೀನಿ ಅಂತಿದ್ರೆ ಮುಚ್ಚಿಟ್ಟಿರೋದು ಏನೋ ಇದೆ ಅಂತ ಅನ್ನಿಸೋಲ್ವ?’
‘ಖಂಡಿತ. ಮುಚ್ಚಿಟ್ಟಿದ್ದರೆ ತಾನೆ ಬಿಚ್ಚಿಡೋದಕ್ಕೆ ಆಗೋದು. ಕಿಸೆಯೇ ಇಲ್ಲದವನ ಬಳಿ ಕಿಸೆಗಳ್ಳನಿಗೆ ಏನು ಕೆಲಸ?’
‘ಅಂದರೆ, ಇವರು ಏನು ಮುಚ್ಚಿಟ್ಟಿದ್ದಾರೆ ಅಂತ ಅವರಿಗೆ ಗೊತ್ತು, ಅವರು ಏನು ಬಚ್ಚಿಟ್ಟಿದ್ದಾರೆ ಅಂತ ಇವರಿಗೆ ಗೊತ್ತು’.
‘ಅದಕ್ಕೇ ಅಲ್ಲವೆ, ನನ್ನ ಬಳಿ ಎಲ್ಲಾ ದಾಖಲೆಗಳಿವೆ ಸೂಕ್ತ ಸಮಯದಲ್ಲಿ ಬಿಚ್ಚಿಡ್ತೀನಿ ಅಂತ ಅವರು ಆಗಾಗ್ಗೆ ಹೇಳೋದು. ಆದರೆ ಸೂಕ್ತ ಸಮಯ ಬರೋದೇ ಇಲ್ಲ’.
‘ಆದರೆ ಎಲ್ಲಾ ಬಿಚ್ಚಿಡ್ತೀನಿ ಬಿಚ್ಚಿಡ್ತೀನಿ ಅಂತ ಹೇಳಲು ಸಮಯ ಸಿಗ್ತಾನೇ ಇರುತ್ತೆ’.
‘ಪಬ್ಲಿಕ್ ಸ್ನಾನಗೃಹದಲ್ಲಿ ಎಲ್ಲರೂ ಬೆತ್ತಲೆ ಎಂಬ ಗಾದೆ ಮಾತೇ ಇದೆಯಲ್ಲ!’
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.