ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮೆಗಾಫೋನ್ ಬವಣೆ

Last Updated 7 ಅಕ್ಟೋಬರ್ 2021, 18:47 IST
ಅಕ್ಷರ ಗಾತ್ರ

ತಿಂಗಳೇಶ ದಿನಪತ್ರಿಕೆಯಲ್ಲಿ ತುಂಬಿಕೊಂಡಿದ್ದ, ಮುಖ್ಯಮಂತ್ರಿಗಳಿಂದ ಉದ್ಘಾಟನೆ, ಆಶ್ವಾಸನೆ ಸುದ್ದಿ ಓದಿ ಮುಗಿಸಿದ. ಏನಾದರೂ ಮಾಡಬೇಕೆಂಬ ಅವರ ಕಳಕಳಿ ಹಿಡಿಸಿತು. ಆದರೆ ಪ್ರತೀ ಭಾಷಣದಲ್ಲೂ ರಾಜಾಹುಲಿಯ ಕಡ್ಡಾಯ ಶ್ಲಾಘನೆಯ ಹಿಂದಿನ ರಾಜಕೀಯ ತಂತ್ರ ಅರ್ಥವಾಗದೆ ತಲೆ ಕೆರೆದುಕೊಂಡ.

ಅಷ್ಟೊತ್ತಿಗೆ ಒಂಬತ್ತು ಹೊಡೆದರೂ ಸೌಟು ಕುಕ್ಕುವ ಸಪ್ಪಳವಾಗಲೀ ಒಗ್ಗರಣೆ ಪರಿಮಳವಾಗಲೀ ಅಡುಗೆಮನೆ ಹೊಸ್ತಿಲು ದಾಟಲಿಲ್ಲ. ‘ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರೂಪಾಯಿ…’ ಹಾಡು ಗುನುಗಿದ. ಮೆಗಾ ಸೇಲ್ ಜಾಹೀರಾತುಗಳ ಅಬ್ಬರದ ಮಧ್ಯೆ ಅಲ್ಲಲ್ಲಿ ಅಡಗಿಕುಳಿತ ಸುದ್ದಿಗಳನ್ನು ಹುಡುಕಿಹುಡುಕಿ ಓದುವುದರಲ್ಲಿ ಇನ್ನೊಂದು ಗಂಟೆ ಕಳೆಯಿತು.

ತಿಂಗಳೇಶನ ತಲೆಯೇನೋ ಪ್ರೇಮಗೀತೆಯಲ್ಲಿ ಓಲಾಡುತ್ತಿತ್ತು. ಆದರೆ ಹೊಟ್ಟೆ ಅದಕ್ಕೆ ತಕ್ಕಂತೆ ತಾಳ ಹಾಕುವಂತಿರಲಿಲ್ಲ. ಮಡದಿಯ ಸುಳಿವೇ ಇಲ್ಲ. ಅಷ್ಟರಲ್ಲಿ, ಪದುಮಳು ಬಂದಳು ಕೈಯಲ್ಲಿ ಕೊತ್ತಂಬರಿ ಶಿವುಡು ಹಿಡಿದು, ಬಾಯಲ್ಲಿ ಪೊಲೀಸರ ಗುಣಗಾನ.

‘ಈ ಪೊಲೀಸರದು ಅತಿಯಾಯ್ತು. ಕಂಡಲ್ಲೆಲ್ಲಾ, ಕಂಡವರಿಂದ, ಕಂಡಾಪಟ್ಟೆ ದಂಡ ವಸೂಲಿಯೇನೋ ಸರಿ, ಅದು ಸರ್ಕಾರದ ಬೊಕ್ಕಸ ತುಂಬಿಸುವ ಕ್ರಮ. ಇವರಿಗೆ ನಮ್ಮಂತಹ ಹೆಣ್ಣು ಮಕ್ಕಳ ಮೇಲೇಕೆ ಕಣ್ಣು…?’

ಹಸಿವೆಯಿಂದ ತತ್ತರಿಸಿದ್ದ ತಿಂಗಳೇಶ ಅವಳ ರೌದ್ರಾವತಾರ ಕಂಡು ಬೆದರಿದ. ‘ಏನಾಯ್ತು…?’ ಎಂದು ಕೇಳಲು ಹೋಗಿ, ‘ಜಾಲಿಬಾಗ್… ಜಾವೆಲಿನ್‌ವಾಲಾ… ಜನವಾಲಾ… ಅದಕ್ಕಿನ್ನ ಹೀನವಾದ ಪರಿಸ್ಥಿತಿ…’ ಎಂದು ತನ್ನ ಹೊಟ್ಟೆ ಮುಟ್ಟಿಕೊಂಡು ಏನೇನೋ ಬಡಬಡಿಸಿದ.

‘ಅಲ್ರೀ… ಪೊಲೀಸರಿಗೆ ತರಕಾರಿ ಮಾರೋರ ಮೆಗಾ ಫೋನ್ ಕಿತ್ತುಕೊಳ್ಳಲು ಯಾರು ಅಧಿಕಾರ ಕೊಟ್ಟಿದ್ದು? ತರಕಾರಿ ಮಾರೋರು ತಂತ್ರಜ್ಞಾನ ಅಳವಡಿಸಿಕೊಂಡರೆ ತಪ್ಪೇನು? ನಮ್ಮ ಮಾರೆಣ್ಣ ಮೆಗಾಫೋನ್‌ನಲ್ಲಿ ತಾನು ತಂದ ತಾಜಾ ತರಕಾರಿ ಹೆಸರು ಕೂಗದಿದ್ದರೆ ಒಳಗೆ ಕೆಲಸದಲ್ಲಿ ಮಗ್ನಳಾದ ನನಗೆ ಆತ ಬಂದದ್ದು ಹೇಗೆ ಗೊತ್ತಾಗಬೇಕು? ತಿಂಡಿ ಲೇಟಾಯ್ತು ಅಂತ ನನ್ನ ಮೇಲೆ ರೇಗಬೇಡಿ!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT