ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮೈತ್ರಿ ಆಟ!

ಚುರುಮುರಿ
Published 18 ಅಕ್ಟೋಬರ್ 2023, 19:04 IST
Last Updated 18 ಅಕ್ಟೋಬರ್ 2023, 19:04 IST
ಅಕ್ಷರ ಗಾತ್ರ

‘ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ ತಂದೆ, ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯಾ ತಂದೆ, ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ ತಂದೆ...’

ಬಸವಣ್ಣನವರ ವಚನವನ್ನು ಭಾವತುಂಬಿ ಹೇಳುತ್ತಿದ್ದರು ಸಾಹೇಬ್ರು.

‘ಯಾವುದೋ ನೋವಲ್ಲಿ ವಚನ ಹೇಳ್ತಿರೋ ಹಾಗಿದೆಯಲ್ಲ ಸರ್’ ಕಿಚಾಯಿಸಿದ ಪಿ.ಎ. ವಿಜಿ.

‘ನಾನ್ಯಾರು? ಪಕ್ಷದ ರಾಜ್ಯ ಘಟಕದ ಅಧ್ಯಕ್ಷ. ನಾನು ವಿರೋಧಿಸಿಕೊಂಡು ಬಂದ ಪಕ್ಷದ ಜೊತೆಗೇ ಮೈತ್ರಿ ಮಾಡ್ಕೊಂಡು ಬರೋಣ ಬನ್ನಿ ಅಂತ ದೆಹಲಿಗೆ ಕರೆದರೆ ಹೇಗೆ ಹೋಗಲಿ? ಅದಕ್ಕೇ ನನ್ನನ್ನ ಹೆಳವನ ಮಾಡಿಬಿಡು ಅಂತ ದೇವರಲ್ಲಿ ಕೇಳಿಕೊಳ್ತಿದೀನಿ’.

‘ನೀವಿಲ್ಲದೆ ಮೈತ್ರಿ ಆಗುತ್ತಾ ಸರ್?’

‘ಆಗಲ್ಲ, ಆಗಬಾರದು, ಆದರೂ ಆಗಿದೆ. ಅದಕ್ಕೇ ಅದನ್ನ ನೋಡೋಕಾಗದೆ ಕುರುಡನನ್ನಾಗಿ ಮಾಡು ಅಂತ‌ ಪ್ರಾರ್ಥಿಸ್ತಿದೀನಿ’.

‘ಯಾವ ಅಧ್ಯಕ್ಷರೀ, ಅವರ ಮಾತಿಗೆ ಯಾಕ್ರೀ ಮಹತ್ವ ಕೊಡ್ತೀರಿ ಅಂತ ನಿಮ್ಮ ನಾಯಕರೇ ಹೇಳ್ತಿದಾರಲ್ಲ ಸರ್’.

‘ಅದಕ್ಕೇ ಕಿವುಡನಾಗ್ತಿದೀನಿ’.

‘ಆದರೂ ಸರ್, ನಿಮ್ಮ  ಪಕ್ಷಕ್ಕೆ ನೀವೇ ಒರಿಜಿನಲ್ ಅಧ್ಯಕ್ಷರಲ್ವ ಸರ್?’

‘ಹೌದೌದು, ನಾನೇ ಒರಿಜಿನಲ್’.

‘ನಿಮ್ ಒರಿಜಿನಲ್ ಪಾರ್ಟಿ ಮುಂದಿನ ಎಲೆಕ್ಷನ್‌ನಲ್ಲಿ ಯಾರ ವಿರುದ್ಧ ಹೋರಾಡುತ್ತೆ ಸರ್?’

‘ಇವರ ವಿರುದ್ಧ’.

‘ನಿಮ್ಮ ಪಾರ್ಟಿಯ ದೊಡ್ಡ ನಾಯಕರು ಇವರೊಂದಿಗೆ ಮೈತ್ರಿ ಮಾಡ್ಕೊಂಡಿದಾರಲ್ಲ’.

‘ಹೌದಲ್ವ, ಹಾಗಾದರೆ ಅವರ ವಿರುದ್ಧ’.

‘ಅವರ ಒಕ್ಕೂಟಕ್ಕೆ ನನ್ನ ಬೆಂಬಲ ಅಂತ ನೀವೇ ಹೇಳಿದೀರಲ್ಲ’.

‘ಥೋ ಹೋಗಪ್ಪ. ಒಲಿಂಪಿಕ್ಸ್‌ನಲ್ಲಿ ಫೈಟ್ ಮಾಡ್ತೀನಿ ಬಿಡು’.

‘ಯಾವ ಆಟ?’

‘ಮೈತ್ರಿ ಆಟ. ಮುಂದಿನ ಒಲಿಂಪಿಕ್ಸ್‌ಗೆ ಹೊಸದಾಗಿ ಸೇರಿಸಿದ್ದಾರೆ. ಅದರಲ್ಲಿ ನಮ್ ಪಾರ್ಟಿಗೆ ಮೆಡಲ್ ಗ್ಯಾರಂಟಿ’.

‘ಓಹ್ ಸೂಪರ್. ಟ್ಯಾಗ್‌ಲೈನ್ ಏನು ಸರ್?’

‘ಆಡೋಣ ಬಾ, ಕೆಡಿಸೋಣ ಬಾ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT