ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ಮದ್ಯಮಾರ್ಗ..

ಚುರುಮುರಿ
Published 24 ಜೂನ್ 2024, 19:12 IST
Last Updated 24 ಜೂನ್ 2024, 19:12 IST
ಅಕ್ಷರ ಗಾತ್ರ

‘ಕೃಷಿಕರಿಗೆ ಅನುಕೂಲಾಗಲೀ ಅಂತ ದೋಟಿಗ್ಯಾಂಗ್ ಹುಟ್ಟಿಕ್ಯಂಡದಂತೆ? ನಾವು ಕಾಯು ಕೀಳಕ್ಕೆ ಜಾವಣಿಗೆ ಅಂತ ಮನೆಗೊಂದು ಮಡಿಕತಿದ್ವಲ್ಲ, ಆ ಥರದ್ದು’ ಅಂತಂದ ಚಂದ್ರು.

‘ಈ ತುರೇಮಣೆ ಇದಕ್ಕೊಂದು ಇಪರೀತದ ಕತೆ ಕಟ್ತನೆ ಕೇಳು’ ಅಂತ ಯಂಟಪ್ಪಣ್ಣ ಪಿಸುಗುಟ್ಟಿತು.

‘ನಾವೇನು ಕಮ್ಮಿ ಇಲ್ಲ ಕಣಿರ್‍ಲಾ, ನಮ್ಮದೂ ಬೋಟಿಗ್ಯಾಂಗ್ ಅಂತ ಅದೆ. ಎಲ್ಲೆಲ್ಲಿ ಬೀಗರೂಟ ನಡೀತದೋ ಅಲ್ಲಿಗೆಲ್ಲಾ ಹೋಗಿ ಅಡಿಗೆಗೆ ಕೈಲಾದ ಸಹಾಯ ಮಾಡಿ ಬತ್ತೀವಿ’ ತುರೇಮಣೆ ಕ್ಲ್ಯಾರಿಫಿಕೇಶನ್ ಕೊಟ್ಟರು.

‘ನೀನು ಮಾಡದು ಕಂಡಿವ್ನಿ ತಕ್ಕಳಪ್ಪಾ. ಟೇಸ್ಟು ನೋಡ್ತೀನಿ ಅಂತ ದಬರಿಗಟ್ಲೇ ಬೋಟಿ, ಕಳ್ಳು-ಪಚ್ಚಿ ಅಲ್ಲೇ ತಿಂದುಬುಡ್ತೀಯ. ರೇಟು ಇಳಿದದೆ ಅಂತ ಪುಗಸಟ್ಟೆ ಪಾರಿನ್ ಲಿಕ್ಕರ‍್ರೇ ಕೇಳಿ ತರಿಸ್ಗತೀಯ. ಊಟ ಮಾಡ್ಸಿದೋರು ಅನ್ನಂಗುಲ್ಲ ಆಡಂಗುಲ್ಲ. ನಿಮ್ದು ಜೂಟಿಗ್ಯಾಂಗು ಕಲಾ’ ಅಂತ ಯಂಟಪ್ಪಣ್ಣ ತಿವಿಯಿತು.

‘ಅಣೈ, ಹಂಗೆಲ್ಲ ಜರೀಬ್ಯಾಡಿ. ಸರ್ಕಾರಕ್ಕೆ ಗ್ಯಾರಂಟಿ ಖರ್ಚು ಹುಟ್ಟಲಿ ಅಂತ ಸ್ಯಾನೆ ಕಷ್ಟಬೀಳ್ತಿದೀವಿ. ಬಸ್ಸು ಟಿಕೆಟ್ ರೇಟು ಜಾಸ್ತಿಯಾತು ಅಂತ ತೂರಾಡಿಕ್ಯಂದು ನಡಕೋಯ್ತಿವಿ, ಕರಂಟು ರೇಟು ಜಾಸ್ತಿಯಾಗಿದ್ಕೆ ಮನೆ ಲೈಟೇ ಹಾಕ್ತಿಲ್ಲ, ನೀರಿನ ರೇಟು ಜಾಸ್ತಿಯಾಗಿರೋತ್ಗೆ ಶೇಕುತೈಲ ಕುಡಕಂದೇ ಬದುಕಾಟ ಮಾಡ್ತುದವಿ!’ ತುರೇಮಣೆ ಕ್ಲ್ಯಾರಿಫಿಕೇಶನ್ ಕೊಟ್ಟರು.

‘ಯಂಟಪ್ಪಣ್ಣ, ಕುಡುಕರು ಅಪಾಯಕಾರಿಗಳಲ್ಲ. ಹೊಟ್ತುಂಬ ಕುಡದು ತೆಪ್ಪಗೆ ಮಕ್ಕಂತರೆ. ರಾಜಕಾರಣಿಗಳಂಗೆ ತಡಕಾಡಿಕ್ಯಂದು ಬೆರಣಿ ಸುಂಟಿ ತಿನ್ನಕ್ಕುಲ್ಲ. ಇವರದ್ದು ಮದ್ಯ ಮಾರ್ಗ’ ಅಂತ ಸಪೋರ್ಟು ಮಾಡಿದೆ.

‘ಕುರಿತೇಟಾಗಿ ಹೇಳಿದೆ ಕಲಾ. ಇಲ್ಲೀಗಂಟ ಮಕಮಕ ನೋಡ್ದೇ ಇದ್ದ ರಾಜಕಾರಣಿಗಳು ಈವತ್ತು ಅಧಿಕಾರಕ್ಕೋಸ್ಕರ ಅಣ್ಣ-ತಮ್ಮದೀರು
ಆಗ್ಯವರೆ. ಜನ ಹೇಳಿದರು ಅಂತ ತಮ್ಮ ಆಸೆನೆಲ್ಲಾ ಪಬ್ಲಿಕ್ ಮ್ಯಾಲೆ ಹೇರ್ತರೆ. ಇವರದ್ದು ವಯಾಮೀಡಿಯಾ ಮಧ್ಯಮ ಮಾರ್ಗ’ ಅಂತ ಷರಾ ಬರೆಯಿತು ಯಂಟಪ್ಪಣ್ಣ.

ಇದ ಒಪ್ಪಿಕ್ಯಣದು ಬುಟ್ರೆ ನಮಗೆ ಬ್ಯಾರೆ ಮಾರ್ಗವೇ ಇರನಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT