ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ರೈಲು ಬಿಟ್ಟಿದ್ದಾರೆ!

Published 18 ಜನವರಿ 2024, 4:00 IST
Last Updated 18 ಜನವರಿ 2024, 4:00 IST
ಅಕ್ಷರ ಗಾತ್ರ

‘ನಾವೆಲ್ಲ ದಿನಾ ಹತ್ತಾರು ಕಿ.ಮೀ. ನಡ್ಕೊಂಡು ಸ್ಕೂಲ್‌ಗೆ ಹೋಗ್ತಿದ್ವಿ. ನೀನು ನೋಡಿದ್ರೆ ವರ್ಷಕ್ಕೊಮ್ಮೆ ಬೆಂಗಳೂರಿಗೆ ಹೋಗಿ ಪರೀಕ್ಷೆ ಬರೆಯೋಕೆ ಅಳ್ತೀಯ’ ಅಪ್ಪನ ಸುಪ್ರಭಾತ ಶುರುವಾಯಿತು. 

‘ಎಕ್ಸಾಮ್‌ಗೆ ಓದೋಕಿಂತ, ಹೋಗೋದೇ ಹಿಂಸೆ ಅನಿಸುತ್ತಪ್ಪ. ಕಲಬುರಗಿಯಿಂದ 630 ಕಿ.ಮೀ., 12 ತಾಸು ಪ್ರಯಾಣ!’

‘ಕಲ್ಲು ತಿಂದು, ಕಲ್ಲು ಕರಗಿಸೋ ವಯಸ್ಸು ನಿಂದು. ನೀನೇನು ನಡ್ಕೊಂಡಾ ಹೋಗ್ತೀಯ, ರೈಲಲ್ಲಿ ತಾನೇ ಹೋಗೋದು’.

‘ಹೋದ ಸಲ ರೈಲಲ್ಲೇ ಹೋಗಿದ್ದು, ಟ್ರೈನಿನ ಟಾಯ್ಲೆಟ್‌ನಲ್ಲೆಲ್ಲ ಕೂತ್ಕೊಂಡು ಬಂದೆ. ಈ ಸಲ ನಾನೊಲ್ಲೆ’.

‘ಇವೆಲ್ಲ ಪ್ರ್ಯಾಕ್ಟಿಕಲ್ ಪರೀಕ್ಷೆ ಇದ್ದಂಗೆ ಕಣೊ. ಮುಂದೆ ನೀನು ಲೆಕ್ಚರರ್ರೋ ಟೀಚರ್ರೋ ಆಗೋನು. ಸ್ಕೂಲು, ಕಾಲೇಜಿನ ಟಾಯ್ಲೆಟ್ ವಾಸನೆ ಸಹಿಸ್ಕೊಬೇಕಾಗುತ್ತಲ್ಲ, ಈಗಿನಿಂದಲೇ ಅದರ ಅನುಭವ ಆಗಲಿ ಅಂತ ಹಾಗೆ ವ್ಯವಸ್ಥೆ ಮಾಡಿದಾರೆ ಸರ್ಕಾರದೋರು’.

‘ನಮ್ಮ ಜಿಲ್ಲೆಯ ಪೊಲಿಟಿಷಿಯನ್‌ಗಳು, ಪದವೀಧರ, ಶಿಕ್ಷಕರ ಕ್ಷೇತ್ರದ ಶಾಸಕರೇ ಮಾತಾಡ್ತಿಲ್ಲ. ನೀನು ಮಾತ್ರ ಅವರನ್ನ ಮೀರಿಸೋ ಹಾಗೆ ಮಾತಾಡ್ತಿದೀಯ’.

‘ಅಲ್ವೋ, ಪರೀಕ್ಷೆ ಇದ್ದಾಗ ಮಾತ್ರ ತಾನೇ ನೀನು ಎಕ್ಸಾಂ ಹಾಲ್‌ಗೆ ಹೋಗೋದು.‌ ಅವರೂ ಹಾಗೇ, ಎಲೆಕ್ಷನ್ ಅನ್ನೋ ಎಕ್ಸಾಂ ಇದ್ದಾಗ ಮಾತ್ರ ಬರ್ತಾರೆ’ ನಕ್ಕರು ಅಪ್ಪ.

‘ನೀನ್ಯಾಕೋ ನನ್ನ ಬಿಡೋ ಹಾಗೆ ಕಾಣಲ್ಲ’ ಎನ್ನುತ್ತಲೇ ಪರೀಕ್ಷೆಗೆ ಹೊರಡಲು ಸಿದ್ಧನಾದ ಮಗ.

‘ಇದೇನೋ ಹಾಸಿಗೆ, ದಿಂಬು ಎಲ್ಲ ಇಟ್ಕೊಂಡಿದೀಯ? ಇದೇನಿದು, ಫೋಲ್ಡಿಂಗ್ ಚೇರ್ ಬೇರೆ ಇದೆ’.

‘ರೈಲಿನ ಬೋಗಿಯೊಳಗೆ ಮಲಗೋಕೆ ಜಾಗ ಇಲ್ಲ ಅಂದ್ರೆ ಕೂತ್ಕೊಳ್ಳೋಕೆ ಚೇರ್ ಬೇಕಲ್ಲ, ಅದಕ್ಕೆ ಎಲ್ಲ ಇಟ್ಕೊಂಡಿದೀನಿ’.

‘ಸರಿ, ವಂದೇ ಭಾರತ್ ಟ್ರೈನ್‌ನಲ್ಲೇ ಹೋಗು’.

‘ಅದರಲ್ಲಿ ಹೋಗೋಕೆ ನಿನ್ನ ಒಂದು ತಿಂಗಳ ಸಂಬಳ ಬೇಕು, ಕೊಡ್ತೀಯಾ?’

ಸ್ವಲ್ಪ ಹೊತ್ತು ಸುಮ್ಮನಿದ್ದ ಅಪ್ಪ, ನಂತರ ಮತ್ತೆ ಕೇಳಿದರು, ‘ಅದೇನೋ ಬುಲೆಟ್ ರೈಲು ಬಿಡ್ತೀವಿ ಅಂದಿದ್ರಲ್ಲ, ಅದಾದರೂ ಬಂತಾ?’

‘ರೈಲು ಬಿಟ್ಟಿದ್ದಾರೆ...!’ ಎನ್ನುತ್ತಾ ಬ್ಯಾಗ್ ಏರಿಸಿಕೊಂಡು ಹೊರಟ ಮಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT