ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಶುನಕ ಭಾಗ್ಯ

Last Updated 21 ಮಾರ್ಚ್ 2023, 4:12 IST
ಅಕ್ಷರ ಗಾತ್ರ

‘ಮುಂದಿನ ಜನ್ಮ ಅಂತ ಏನಾದರೂ ಇದ್ದರೆ ನಾನು ನಾಯಿಯಾಗಿ ಹುಟ್ತೀನಿ’ ಎಂದ ಗೆಳೆಯ ಸೀರಿಯಸ್ಸಾಗಿ.

‘ಯು ಮೀನ್ ಬೀದಿ ನಾಯಿ?’ ಎಂದು ಕೇಳಿದೆ ಅಷ್ಟೇ ಸೀರಿಯಸ್ಸಾಗಿ.

‘ನೊ ನೊ. ಶ್ರೀಮಂತರ ಮನೆ ನಾಯಿಯಾಗಿ’ ಎಂದು ಕ್ಲಾರಿಫೈ ಮಾಡಿದ.

‘ದಟ್ಸ್ ಓಕೆ. ಬಟ್ ನಾಯಿಯಾಗಿಯೇ ಏಕೆ? ಅದೂ ಶ್ರೀಮಂತರ ಮನೆಯಲ್ಲಿಯೇ?’ ನನಗೆ ಕುತೂಹಲ.

‘ಅಲ್ಲಾ ಗುರು, ಈಗೀಗ ಅಲ್ಲಿ ನಾಯಿಗಳಿಗೆ ರಾಯಲ್ ಟ್ರೀಟ್‍ಮೆಂಟ್ ಸಿಗ್ತಿದೆ’ ಎಂದು ಜೊಲ್ಲು ಸುರಿಸತೊಡಗಿದಾಗ, ಅವನು ಈಗಲೇ ನಾಯಿಯಾಗಿದ್ದಾನೆ ಎಂದೆನಿಸಿತು.

‘ಒಂದು ಒಳ್ಳೇ ಊಟ ಸಿಗ್ತಿದೆ ತಾನೆ?’

‘ಬರೀ ಊಟ? ರಾಯಲ್ ಟ್ರೀಟ್‍ಮೆಂಟ್ ಬರೇ ಊಟಕ್ಕಲ್ಲ, ಇನ್ನೂ ಏನೇನೋ ಇವೆ’.

‘ಅದು ಏನೇನು ಹೇಳಪ್ಪ...’

‘ನಾಯಿಗಳ ಅಗತ್ಯಗಳನ್ನು ಪೂರೈಸಲು ಅಂಗಡಿಗಳು ಬಂದಿವೆ. ರೈನ್ ಕೋಟ್, ಪಾದರಕ್ಷೆ, ಹಾಸಿಗೆ ಎಲ್ಲ ಸಿಗುತ್ತೆ. ಇನ್ನು ಊಟ ಅಂತೂ ಕೇಳಲೇಬೇಡ. ಥರಾವರಿ ವೆಜ್, ನಾನ್‌ವೆಜ್ ಐಟಂಗಳು ಬಾಯಿಯಲ್ಲಿ ನೀರೂರಿಸುತ್ತವೆ. ಸಲಹೆ ಕೊಡೋದಿಕ್ಕೆ ಆಹಾರ ತಜ್ಞರು ಇದ್ದಾರೆ. ಮನೇಗೆ ನಾಯಿ ಊಟ ಸಪ್ಲೈ ಮಾಡೋದಿಕ್ಕೆ ಜನ ಸಿಗ್ತಾರೆ...’

‘ಬ್ಯೂಟಿ ಪಾರ್ಲರ್...?

‘ಅದೂ ಇದೆ ಗುರು. ಅಷ್ಟೇ ಅಲ್ಲ, ನಾಯಿಗಳಿಗೆ ರಿಲ್ಯಾಕ್ಸ್ ಮಾಡಿಕೊಳ್ಳೋಕೆ ಅವಕಾಶ ಇರುತ್ತೆ ಅಲ್ಲಿ. ಕಂಪನಿ ಕೊಡೋಕೆ ಬೇರೆ ನಾಯಿಗಳು ಬಂದಿರುತ್ತವೆ’.

‘ಭಾರಿ ಜೋರಿದೆ ಕಣಯ್ಯಾ’.

‘ಈಗ ನೋಡು, ಓನರ್ ಊರಿಗೆ ಹೋದಾಗ ನಾಯೀನ ಯಾರದ್ದೋ ಪರಿಚಯಸ್ಥರ ಮನೇಲಿ
ಬಿಡಬೇಕಿಲ್ಲ. ಅದಕ್ಕೇನೆ ಹೋಟೆಲ್ ಇದೆ. ಅಲ್ಲಿ
ಸ್ವಿಮ್ಮಿಂಗ್ ಪೂಲ್ ಇರುತ್ತೆ. ಪೆಟ್ ಫೋಟೊ
ಗ್ರಫಿಗೂ ಕ್ಯಾಮೆರಾಮನ್ ರೆಡಿ ಇದ್ದಾರೆ ಗುರೂ...’

‘ಇದಕ್ಕೆಲ್ಲ ಭಾರಿ ಖರ್ಚು ಬರುತ್ತೆ’.

‘ಖಂಡಿತ. ಅದಕ್ಕೆ ಗುರೂ ನಾನು ಹೇಳಿದ್ದು ಹುಟ್ಟಿದರೆ ಶ್ರೀಮಂತರ ಮನೆ ನಾಯಿಯಾಗಿ ಹುಟ್ಟಬೇಕು ಅಂತ’.

ನನಗೂ ಬಾಯಿಯಲ್ಲಿ ನೀರೂರತೊಡಗಿತು. ಆದರೆ ನಾಯಿಯಾಗಿ ಹುಟ್ಟುವುದು ಹೇಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT