ಸೋಮವಾರ, ಮೇ 23, 2022
21 °C

ಚುರುಮುರಿ: ಬುಕ್ ಮೈ ಬುಕ್!

ನಾರಾಯಣ ರಾಯಚೂರ್ Updated:

ಅಕ್ಷರ ಗಾತ್ರ : | |

Prajavani

‘ಹಲೊ... ಯಾರು ಮಾತಾಡೋದು?

‘ಸರ್, ಅದು ನ್ಯೂ- ನ್ಯೂಸ್ ಪುಸ್ತಕಾಲಯಾನಾ?’

‘ಹೌದು, ಪ್ರೊಪ್ರೈಟರ್ ಮಾರಯ್ಯ ಮಾತಾಡ್ತಿರೋದು, ನೀವು?’

‘ನನ್ನ ಹೆಸರು ವಾಚಸ್ಪತಿ ಅಂತ. ನನಗೆ ಪುಸ್ತಕದ ಹುಚ್ಚು, ಲೇಟೆಸ್ಟ್ ಆಗಿ ಬಂದಿರೋ ಪುಸ್ತಕ ಬೇಕಿತ್ತು ಸಾರ್’.

‘ನೇಮಕಾತಿ ಕಿತಾಪತಿ ಅಂತ ಒಳ್ಳೆಯ ಪುಸ್ತಕ ಬಂದಿದೆ. ಭಾರೀ ಡಿಮ್ಯಾಂಡ್ ಇದೆ’.

‘ಪತ್ತೇದಾರಿನಾ ಸಾರ್ ಅದು?’

‘ಒಂಥರಾ ಚೇಸಿಂಗ್ ನಾವೆಲ್. ಜೊತೆಗೆ ‘ಮರುಪರೀಕ್ಷೆ’ ಅಂತ ಕಿರುಕಾದಂಬರಿ ಉಚಿತ’.

‘ಮೊನ್ನೆ ನೀವು ಕಳಿಸಿಕೊಟ್ಟ ‘ಗುತ್ತಿಗೆ- ಕುತ್ತಿಗೆ’ ಪುಸ್ತಕದಲ್ಲಿ 40 ಪೇಜ್‌ಗಳೇ ಮಿಸ್ಸಿಂಗ್ ಸಾರ್?’

‘ಓಹ್! ಅದಕ್ಕೆ 40% ಡಿಸ್ಕೌಂಟ್ ಇತ್ತಲ್ಲಪ್ಪಾ’.

‘ಆರೋಗ್ಯಕ್ಕೆ ಸಂಬಂಧಿಸಿದ ಬುಕ್ಸ್ ಯಾವುದೂ ಬಂದಿಲ್ವಾ?’

‘ಬೇಕಾದಷ್ಟಿವೆ. ‘ಅಲೆ-ಮಾರಿ ನಾಲ್ಕನೇ ಬಾರಿ’ ಅಂತ 4 ಭಾಗಗಳ ಪುಸ್ತಕವೊಂದಿದೆ’.

‘ಇದಕ್ಕೂ ಉಚಿತ ಏನಾದರೂ?’

‘ಅಲೆ 1ಕ್ಕೆ ಮಾಸ್ಕ್‌, 2ಕ್ಕೆ ಸ್ಯಾನಿಟೈಸರ್, 3ಕ್ಕೆ ವ್ಯಾಕ್ಸಿನ್ ಕೂಪನ್, 4ಕ್ಕೆ ಬೂಸ್ಟರ್ ಡೋಸ್ ಕೂಪನ್ ಉಚಿತ’.

‘ಆನ್‌ಲೈನ್‌ನಲ್ಲಿ ಕಳಿಸ್ತೀರಾ ಸಾರ್?’

‘ನಿಮ್ಮದು ಯಾವ ಪತಿ ಅಂದ್ರೀ?’

‘ವಾಚಸ್ಪತಿ, ಬುಕ್ ರಾಯಪಟ್ಟಣ ಸಾರ್’.

‘ಬುಕ್ ರಾಯಪಟ್ಟಣಾನಾ? ನಿಮ್ಮ ಕಾಲೇಜ್ ಮೇಷ್ಟ್ರು ನಮ್ಮ ಪರ್ಮನೆಂಟ್ ಕಸ್ಟಮರ್‍ರು’.

‘ಯಾರ್ ಸಾರ್?’

‘ಅದೇ, ಪತ್ರಿಕೆಯಲ್ಲಿ ಬರೋ ಜಾಹೀರಾತುಗಳ ಬಗ್ಗೆ ಡಾಕ್ಟರೇಟ್ ಮಾಡಿ ‘ಜಗಜ್ಜಾಹೀರು’ ಅಂತ ದೊಡ್ಡ ಪುಸ್ತಕಾನೇ ಬರೆದಿದಾರಲ್ಲಪ್ಪ.

‘ಹ್ಞಾಂ... ಗೊತ್ತಾಯ್ತು ಸಾರ್‌’!

‘ಮೊನ್ನೆ ಅವ್ರಿಗೆ ಈ ಎಲ್ಲ ಬುಕ್ಸ್ ಪಾರ್ಸೆಲ್ ಕಳ್ಸಿದೀವಿ. ನಿಮಗೂ ಕಳ್ಸಿಕೊಡ್ತೀವಿ, ಆನ್‌ಲೈನ್‌ನಲ್ಲೇ ಪೇ ಮಾಡಿ, ಅಡ್ರೆಸ್‌ ಕೊಡಿ’.

‘ಅವರಿಗೆ ಕಳ್ಸಿದೀರಾ, ಸರಿ ಬಿಡಿ ಮತ್ತೆ, ಅವ್ರಹತ್ರಾನೆ ಈಸ್ಕೊಂಡು ಓದ್ತೀನಿ, ಇಡ್ಲ ಸಾರ್’.

‘ರೀ... ಯಾರ್‍ರೀ ನೀವು... ಬೆಳ್ಳಂಬೆಳಿಗ್ಗೆ! ಹಲೋ... ಹಲೋ... ಇಟ್ಟೇಬಿಟ್ನಲ್ಲಪ್ಪ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.