ಗುರುವಾರ , ಫೆಬ್ರವರಿ 25, 2021
23 °C

ವೃತ್ತಿಪರ ನಿರಾಶಾವಾದಿಗಳು

ಲಿಂಗರಾಜು ಡಿ.ಎಸ್. Updated:

ಅಕ್ಷರ ಗಾತ್ರ : | |

Prajavani

‘ಕ್ಷಿಪ್ರ ಕ್ರಾಂತಿಗೆ ಸರ್ಕಾರ ಗಡಗಡ ಅಂತ ಪೇಪರಲ್ಲಿ ಬಂದದಲ್ಲಾ ಸಾರ್’ ಅಂದೆ. ‘ಎರಡನೇ ಪದದ ಕಾಗುಣಿತವ ಪೇಪರ್‌ನೋರು ತಪ್ಪಾಗಿ ಹಾಕವರೆ ಕಣೋ. ಒತ್ತಕ್ಷರ, ದೀರ್ಘಾಕ್ಷರ ಸರಿಮಾಡ್ಕಬೆಕು’ ಅಂದರು ತುರೇಮಣೆ. ನನಗೆ ಅವರಂದ ಕಾಗೆಕುಣಿತ ಅರ್ಥವಾಯ್ತು. ಸುಮ್ಮಗಾದೆ.

‘ಹೋಗ್ಲಿ ಬುಡಿ ಸಾರ್. ಈ ದೇಶಭಕ್ತರ ರಾಜೀನಾಮೆ ನೋಡಿದರೆ ನಿಮಗೇನನ್ನಿಸತದೆ? ಇವ್ಯಾಕೆ ಮುನಿಸಿಕಂಡವೆ?’ ಅಂತ ಕೇಳಿದೆ ನಾನು.

‘ಮೋದಿಮಾರಾಜರು ಮತ್ತು ಗ್ರಹಮಂತ್ರಿಗಳ ಮಾತಿನ ಪ್ರಕಾರ ಡಾ.ಧವಳಪ್ಪನೋರು ಟೋಪಿಸೆಲ್ ಹೋಟಲಿಗೆ ಜೂನಿಯರ್ ಡಾಕ್ಟರುಗಳನ್ನ ಕಳಿಸವರೆ!’ ಅಂದರು ತುರೇಮಣೆ. ‘ಮೋದಿಮಾರಾಜರು ಏನಂದಿದ್ದರು’ ಅಂತ ಕೇಳಿದೆ.

‘ನೋಡ್ಲಾ ಮೋದಿಮಾರಾಜರು ಪಕ್ಷ ಎಲ್ಲರನ್ನೂ ತಲುಪಬೇಕು ಅಂತ ಹೇಳವರೋ ಇಲ್ಲವೋ? ಸುಮ್ಮನೆ ಕೂರಕ್ಕೆ ಧವಳಪ್ಪ
ನೋರೇನು ಸನ್ಯಾಸಿಯಾ? ಜಾಸ್ತಿ ಜನ ಶಾಸಕರನ್ನ ಪಕ್ಷಕ್ಕೆ ಸೇರಿಸಿ, ಸಿಎಂ ಆಗಿ 5 ಲಕ್ಷ ಕೋಟಿ ಡಾಲರ್ ಬಜೆಟ್ ಮಾಡತರಂತೆ. ಅದಕ್ಕೆ ನಮ್ಮ ವೃತ್ತಿಪರ ನಿರಾಶಾವಾದಿಗಳೆಲ್ಲಾ ಅಲ್ಲಿಗೆ ಹೋಗವೆ’ ಅಂದರು ತುರೇಮಣೆ.

‘ಏನ್ಸಾರ್ ನೀವು. ಮೋದಿಮಾರಾಜರು ಹೇಳಿರದು ಅವರ ಬಜೆಟ್ಟನ್ನ ಟೀಕಿಸಿದವರು ವೃತ್ತಿಪರ ನಿರಾಶಾವಾದಿಗಳು ಅಂತ’ ಅನ್ನೋ ಕ್ಲಾರಿಫಿಕೇಶನ್ ಕೊಟ್ಟೆ.

‘ಥೋ! ವೃತ್ತಿಪರ ನಿರಾಶಾವಾದಿಗಳು ಎಲ್ಲಾ ಕಡೆ ಎಲ್ಲಾ ಸಮಯದಲ್ಲೂ ಇರತರೆ ಕಣೋ. ಇಲ್ಲಿ ಪದವಿ ಅನ್ನೋ ವ್ಯಾಧಿ ತಗುಲಿ ಮುನಿಸಿಕಂಡು ಕೆಟ್ಟನಾತ ಶುರುವಾಗದೆ. ಇವುನ್ನೆಲ್ಲಾ ಬಿಜೆಪಿ ಸರ್ಕಾರದಲ್ಲಿ ಮಂತ್ರಿ ಮಾಡಿದ್ರೆ ಅಲ್ಲಿ ಹೊಸ ವೃತ್ತಿಪರ ನಿರಾಶಾವಾದಿಗಳು ರಾಜೀನಾಮೆ ಹಿಡಕಂಡು ನುಲಿತವೆ’ ಅಂದ್ರು.

‘ಹೌದು ಸಾರ್ ಅದಕ್ಕೆ ಕುಮಾರಣ್ಣನ ಮಂತ್ರಿಗಳೆಲ್ಲಾ ರಾಜೀನಾಮೆ ಕೊಟ್ಟು ವೃತ್ತಿಪರ ನಿರಾಶಾವಾದಿಗಳನ್ನ ಮಂತ್ರಿ ಮಾಡೋ ಸಿದ್ಧ ಸೂತ್ರ ತಯಾರಾಗದಂತೆ!’ ಅಂದೆ.

‘ದಡ್ಡಾ, ಆಗ ವೃತ್ತಿಪರ ನಿರಾಶಾವಾದಿಗಳ ಹೊಸಾ ಬ್ಯಾಚ್ ಶುರುವಾಯ್ತದೆ!’ ಅಂದ್ರು ತುರೇಮಣೆ. ಇದು ಬಗೆಹರಿಯುವ ವ್ಯಾಧಿ ಅಲ್ಲ ಅಂತ ಪೆಟ್ರೋಲ್ ರೇಟು, ತರಕಾರಿ ರೇಟು, ಪ್ರವಾಹ, ಬರ ಮರೆತು, ತಪ್ ನಮ್ದೇ ಅಂತ ಟೀವಿ ಮುಂದೆ ಕುತುಗಂಡೊ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು