ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ವರ್ಚುವಲ್ ದರ್ಶನ

Last Updated 2 ಆಗಸ್ಟ್ 2020, 19:45 IST
ಅಕ್ಷರ ಗಾತ್ರ

ಸ್ವರ್ಗದಲ್ಲಿ ಲಕ್ಷ್ಮಣ ಹೊಸ ಸೂಟು ಹೊಲಿಯಲು ಕೊಟ್ಟಿದ್ದ ಸಂಗತಿ ತಿಳಿದು ರಾಮನಿಗೆ ಖಜೀಲೆನ್ನಿಸಿತು.

‘ಅಲ್ಲಪ್ಪಾ... ನಮ್ಮ ಅಯೋಧ್ಯಾ ಯೋಗಿರಾಜ್ಯದಾಗೆ ಲಕ್ಷಗಟ್ಟಲೆ ವಲಸೆ ಕೆಲಸದವರು ವಾಪಸು ಬಂದಾರಂತ. ಆ ಮಂದಿಗೆ ಏನೂ ಕೆಲಸಿಲ್ಲದೇ ಕೈ ಖಾಲಿಯಾಗಿ, ಮಾಸ್ಕ್ ಬಿಡು, ಎರಡು ಹೊತ್ತು ಉಣ್ಣಾಕೂ ಇಲ್ಲದೆ ವದ್ದಾಡತಾರಂತ. ಅಂತಾದ್ರಾಗ ನಿನಗೆದಕ್ಕಪ್ಪಾ ಈಗ ಸೂಟು?’ ರಾಮ ಸಿಟ್ಟಾದ.

‘ಇದೇ ಐದನೇ ತಾರೀಖು ರಾಮಮಂದಿರದ ಭೂಮಿಪೂಜೆ ಮಾಡ್ತಾರಂತ... ನೀಯೇನ್ ಇದೇ ನಾರುಮಡಿ ಉಟ್ಕಂಡು ಬರಾಂವೇನು ಅಲ್ಲಿಗೂ... ನಾ ನಿನಗೂ ಒಂದ್ ಹೊಲಿಯಾಕ ಹಾಕೀನಿ’ ಲಕ್ಷ್ಮಣ ನಿಸೂರಾಗಿ ಹೇಳಿದ.

‘ರಾಮನಿಲ್ಲದ ರಾಮರಥದಾಗೆ, ಇಡೀ ದೇಶ ಸುತ್ತಿ, ಇಟ್ಟಿಗೆ ಒಟ್ಟು ಮಾಡಿ, ಬಾಬರಿ ಮಸೀದಿ ಬೀಳಿಸಿ, ಅದೇ ಜಾಗದಲ್ಲೇ ರಾಮ ಹುಟ್ಯಾನ ಅಂತ ಸಾಧಿಸಾಕ ಅಷ್ಟೆಲ್ಲ ಮಾಡಿದ ಆ ಅಡ್ವಾಣಿಯವರ‍್ನ ಕರಿಯಾಕೇ ಮೀನಮೇಷ ಎಣ್ಸಿದ್ರು. ಇನ್ ನಮ್ಮನ್ನು ಕರೀತಾರೇನು ಅವ್ರು. ಆ ನೇಪಾಳದವ್ರು ಬೇರೆ ‘ರಾಮ ನಮ್ಮಲ್ಲಿ ಹುಟ್ಯಾನ, ನೇಪಾಳಿ ಅಂವ’ ಅಂತ ಹೇಳಾಕಹತ್ಯಾರ. ಆವಾಗೇ ನಮ್ಮವ್ವ, ನಮ್ಮಪ್ಪ ಬರ್ತ್ ಸರ್ಟಿಫಿಕೇಟ್ ಸರಿಯಾಗಿ ಮಾಡಿಸಿದ್ದರೆ ಜನ್ಮಭೂಮಿ ರಗಳೆನೇ ಇರ್ತಿರಲಿಲ್ಲ’ ರಾಮ ಸಿಡುಕಿದ.

‘ನೀ ಹುಟ್ಟಿದ್ದು ಕೌಸಲ್ಯಾ ದೊಡ್ಡಮ್ಮನ ಹೊಟ್ಟೆವಳಗ, ಬ್ಯಾರೆ ಎಲ್ಲೂ ಅಲ್ಲ ಅಂತ ಗೊತ್ತೇಳು. ಅದಕ್ಕೇ ಇವ್ರ ಗೋಜೇ ಬ್ಯಾಡ ಅಂತ ಅಮೆರಿಕದಾಗ ನಮ್ಮ ಮಂದಿ ಮಾಡೂ ವರ್ಚುವಲ್ ಪೂಜೆಗೆ ಹೋಕ್ಕೀನಿ’ ಅಂದ.

‘ವರ್ಚುವಲ್ ಪೂಜೆಗೆ ಖುದ್ದು ಎದಕ್ಕ ಹೋಕ್ಕೀ... ಮೊದಲೇ ಕೊರೊನಾ ಭಾಳೈತಿ ಅಲ್ಲಿ. ಜೂಮ್ ಕಾಲ್ ಅಟೆಂಡ್ ಮಾಡು...’ ರಾಮ ಕಾಳಜಿಯಿಂದ ಹೇಳಿದ.

‘ಜೂಮ್ ಕಾಲ್ ಅಂತ್ಹೇಳಿ ನಾರುಮಡಿ ಉಟ್ಕಂಡು ಮಾರಿ ತೋರಿಸ್ತಾರೇನ್? ಅದ್ ಅಮೆರಿಕ... ಗೊತ್ತೈತಿಲ್ಲೋ... ಟ್ರಂಪಣ್ಣ ಸಂಡಾಸಿಗೂ ಸೂಟ್ ಹಾಕ್ಕೊಂಡೇ ಹೋಗತಾನ... ನಾವಿಬ್ರೂ ಸೂಟ್ ಹಾಕ್ಕೊಂಡೇ ವರ್ಚುವಲ್ ದರ್ಶನ ಕೊಡೂಣು’ ಎಂದ ಲಕ್ಷ್ಮಣ ರಾಮನಿಗೊಂದು ಸೂಟು ಕೊಟ್ಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT