ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಗಿಫ್ಟ್

Last Updated 17 ಡಿಸೆಂಬರ್ 2019, 19:34 IST
ಅಕ್ಷರ ಗಾತ್ರ

ಮಹಿಳಾ ಸಮಾಜದ ಚುನಾವಣೆಯ ಕಾವು ಜೋರಾಗಿತ್ತು. ಸರೋಜಾ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದಳು.

‘ಮನೆಯಲ್ಲಿ ಶ್ರೀಮತಿಯ ಗೊಣಗಾಟ. ತಮ್ಮ ಟೀಮಿನವರಿಗೆ ಯಾರೂ ಮತ ಹಾಕೋಲ್ಲ ಅಂತ. ಪರಿಣಾಮ ನನ್ನ ಮೇಲೆ ಕಿಡಿ ಕಾರ್ತಾಳೆ’ ಕಂಠಿ ಅಲವತ್ತುಕೊಂಡ.

‘ನನಗರ್ಥವಾಗುತ್ತೆ, ನನ್ನ ಮನೇಲೂ ಪರಿಸ್ಥಿತಿ ಸರಿಸುಮಾರು ಅದೇ. ನನ್ನನ್ನೂ ಪುಟ್ಟಿಯನ್ನೂ ಕೇರ್ ಮಾಡ್ತಿಲ್ಲ. ಸರೋಜಾಳ ಗೆಲುವನ್ನು ತಡೆಯೋಕ್ಕೆ ಪರಿಪರಿ ಪ್ಲಾನ್ ಮಾಡ್ತಿದ್ದಾಳೆ’ ನಾನೂ ರೋದಿಸಿದೆ.

‘ಹೌದು, ನಮ್ಮ ಗೋಳು ಕೇಳುವವರ‍್ಯಾರು. ಕೆಲಸದವಳೂ ಉಪಚುನಾವಣೆಗೆ ಮತ ಹಾಕೋಕ್ಕೆ ಅಂತ ವಾರದ ಸ್ಪೆಷಲ್ ಲೀವ್ ತಗೊಂಡು ಹೋದವಳು ಇವತ್ತು ಬಂದಿದಾಳೆ. ಎಲ್ಲ ಅಭ್ಯರ್ಥಿಗಳಿಂದಲೂ ಧಾರಾಳ ಕೊಡುಗೆಗಳ ಆಶೀರ್ವಾದ’.

‘ಮತ್ತೆ ವೋಟು ಯಾರಿಗೆ ಹಾಕಿದ್ಲಂತೆ?’

‘ಮತವೊಂದಕ್ಕೆ ಕೆ.ಜಿ. ಈರುಳ್ಳಿ ಕೊಟ್ಟವರಿಗೆ ಹಾಕಿ ಋಣ ತೀರಿಸಿಕೊಂಡೆ ಅಂದ್ಲು’.

‘ಅಬ್ಬಾ, ಏನು ತಂತ್ರಗಾರಿಕೆ’ ಉದ್ಗರಿಸಿದೆ, ಈರುಳ್ಳಿ ನೆನೆದು ಬಾಯೂರಿ... ಅಷ್ಟರಲ್ಲೇ ನನ್ನವಳು ಎಂಟ್ರಿ ಹಾಕಿದಳು, ಕೈಯ್ಯಲ್ಲೆಂಥದ್ದೋ ಪೊಟ್ಟಣ ಹಿಡಿದು. ‘ಬೆಳಿಗ್ಗೆ ಮೀಟಿಂಗ್‌ಗೆ ಮೆನು ಚಿತ್ರಾನ್ನ. ಹೋಟೆಲಿಂದ ತರಿಸಿದ್ದು. ಎಕ್ಸ್‌ಟ್ರಾ ಇದ್ದದ್ದು ತಂದೆ, ಅದರಲ್ಲೂ ಈರುಳ್ಳಿ ಚಿತ್ರಾನ್ನ’.

‘ಅಯ್ಯೋ ಮರೆತಿದ್ದೆ, ನಿನ್ನೆ ನಾರ್ತ್ ಇಂಡಿಯನ್ ಥಾಲೀಲಿ ಈರುಳ್ಳಿ ತುಂಡುಗಳನ್ನ ನಾನು ಜೋಪಾನವಾಗಿ ತಂದು ಫ್ರಿಜ್‌ನಲ್ಲಿ ಇಟ್ಟಿದ್ದೀನಿ, ಕೆಡದಂತೆ’ ಪುಟ್ಟಿ ನೆನಪಿಸಿಕೊಂಡಳು.

‘ನಿಮ್ಮ ಪಾರ್ಟಿ ಗೆಲ್ಲೋಕೆ ನನ್ನಲ್ಲೊಂದು ಉಪಾಯ. ಮನೇಲಿ ಸಣ್ಣ ಪಾರ್ಟಿ ಮಾಡಿ ತಲಾ ಒಂದೊಂದು ಈರುಳ್ಳಿಯನ್ನು ರಿಟರ್ನ್ ಗಿಫ್ಟ್ ಆಗಿ ಕೊಟ್ಬಿಡಿ. ನಿಮ್ಮ ಪಾರ್ಟಿ ಗ್ಯಾರಂಟಿ ಗದ್ದುಗೆ ಹಿಡಿಯುತ್ತೆ’ ಕಂಠಿ ಸಲಹೆಯಿತ್ತ, ಚಿತ್ರಾನ್ನದ ಪೊಟ್ಟಣ ನೋಡುತ್ತ. ನಾನೂ ಗೋಣಾಡಿಸಿದೆ.

‘ಓಹ್, ಹಾಗೇನಾದರೂ ನಮ್ಮ ಪಾರ್ಟಿ ಗೆದ್ದರೆ ನಿಮಗೆ ಈರುಳ್ಳಿ ಪಕೋಡ ಟ್ರೀಟ್. ಸದ್ಯಕ್ಕೆ ಈ ಚಿತ್ರಾನ್ನ ತಗೊಳ್ಳಿ’ ನನ್ನವಳು ನಗೆ ಬೀರಿದಳು, ಗೆಲುವಿನ ನಿರೀಕ್ಷೆಯಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT