ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಹೀಗೂ ಉಂಟೆ!

Last Updated 25 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

‘ಪಾಪ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ!’ ಎಂದ ದುಬ್ಬೀರ.

‘ಏನಾತು? ಮತ್ತೆ ತೆಪರೇಸಿಗೆ ಪಮ್ಮಿ ಹಿಗ್ಗಾಮುಗ್ಗ ಏನಾದ್ರೂ...’ ಗುಡ್ಡೆ ಮಾತನ್ನ ಅರ್ಧಕ್ಕೇ ತಡೆದ ಕೊಟ್ರೇಶಿ ‘ಲೇಯ್, ಸದಾಶಿವಂಗೆ ಅದೇ ಧ್ಯಾನ... ದುಬ್ಬೀರ ಹೇಳಿದ್ದು ಉಕ್ರೇನ್ ಮೇಲೆ ರಷ್ಯಾ ದಾಳಿ ಬಗ್ಗೆ...’ ಎಂದ.

‘ರಷ್ಯಾ ಬ್ರಹ್ಮಾಸ್ತ್ರ ಬರೀ ಉಕ್ರೇನ್ ಮೇಲಲ್ಲಲೆ, ನಮ್ಮೇಲೂ ಬಿದ್ದೇತಿ. ಪೆಟ್ರೋಲ್ ರೇಟು ದುಬಾರಿ ಆಗ್ತತಂತೆ?’ ಪರ್ಮೇಶಿಗೆ ಬೇಸರ.

‘ಅದೊಂದೇ ಅಲ್ಲೋ, ಎಣ್ಣಿ ರೇಟೂ ಜಾಸ್ತಿ ಆಗ್ತತಂತೆ...’ ಗುಡ್ಡೆ ತಿದ್ದಿದ.

‘ಇದೊಳ್ಳೆ ಕತಿಯಾತಪ, ಅಲ್ಲೆಲ್ಲೋ ಮಳಿ ಆದ್ರೆ ನಾವಿಲ್ಲಿ ಛತ್ರಿ ಹಿಡ್ಕಾಬೇಕು. ಜಗಳ ಅವುರ್ದು, ಹೊಡ್ತ ನಮಗಾ?’ ಕೊಟ್ರೇಶಿ ಪ್ರಶ್ನೆ.

‘ಸಮಾಧಾನ ಮಾಡ್ಕಳಲೆ, ಎಣ್ಣಿ ರೇಟು ಜಾಸ್ತಿ ಮಾಡಲ್ಲ ಅಂತ ನಮ್ ಅಬ್ಕಾರಿ ಮಿನಿಸ್ಟ್ರು ಹೇಳಿದಾರೆ, ಪೇಪರ್ ಓದಿಲ್ವಾ?’ ದುಬ್ಬೀರ ಸಮಾಧಾನಿಸಿದ.

‘ಅದಿರ‍್ಲಿ, ನಮ್ ತೆಪರೇಸಿ ಮನೇಲೂ ವಾರ್ ಡಿಕ್ಲೇರ್ ಆಗೇತಂತೆ ಗೊತ್ತಾ? ಅದು ಬಗೆಹರೀಬೇಕಂದ್ರೆ ಸಾಕ್ಷಾತ್ ಮೋದಿ ಸಾಹೇಬ್ರೇ ಮಧ್ಯ ಪ್ರವೇಶಿಸ್ಬೇಕಂತೆ...’ ಗುಡ್ಡೆ ಮಾತಿಗೆ ನಕ್ಕ ದುಬ್ಬೀರ, ‘ಏನಪ್ಪ ಅಂಥಾದ್ದು?’ ಎಂದ.

‘ಏನಿಲ್ಲ, ಹೋದ ದೀಪಾವಳಿಗೆ ನೆಕ್ಲೇಸ್ ಕೊಡಿಸ್ತೀನಿ ಅಂತ ಪಮ್ಮಿಗೆ ತೆಪರ ಪ್ರಾಮಿಸ್ ಮಾಡಿದ್ನಂತೆ. ಅದು ನಮ್ ಸಂಪುಟ ವಿಸ್ತರಣೆ ಥರ ಹೊಸ ವರ್ಷಕ್ಕೆ, ಸಂಕ್ರಾಂತಿಗೆ ಅಂತ ಮುಂದ್ ಮುಂದುಕ್ಕೋತು. ಈ ಸಲ ತೆಲಿ ಮೇಲೆ ತೆಲಿ ಬೀಳ್ಲಿ, ಶಿವರಾತ್ರಿಗೆ ಮಿಸ್ ಮಾಡಲ್ಲ ಅಂದಿದ್ನಂತೆ. ಈಗ ರಷ್ಯಾ ಯುದ್ಧಕ್ಕೆ ಚಿನ್ನದ ರೇಟು ಯದ್ವಾತದ್ವಾ ಏರಿ ಕುಂತೈತಿ ಏನ್ಮಾಡ್ಲಿ ಅಂತ ಒದ್ದಾಡ್ತಿದ್ದ...’

‘ಅದಕ್ಕೆ ಮೋದಿ ಸಾಹೇಬ್ರು ಏನ್ ಮಾಡ್ಬೇಕಂತೆ?’

‘ಮೋದಿ ಸಾಹೇಬ್ರು ಅಲ್ಲಿ ರಷ್ಯಾಕ್ಕೆ ಬುದ್ಧಿ ಹೇಳಿ ಯುದ್ಧ ನಿಲ್ಲಿಸಿದ್ರೆ ಇಲ್ಲಿ ಚಿನ್ನದ ರೇಟು ಇಳೀತತಿ, ಪಮ್ಮಿ ಕೈಯಾಗೆ ತೆಪರ ಉಡೀಸ್ ಆಗೋದು ತಪ್ತತಿ ಅಂತ...’

‘ಓ...‌ ಹೀಗೂ ಉಂಟೆ!’ ಎಂದ ಪರ್ಮೇಶಿ. ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT