‘ನೋಡಿ ಸಾ, ರಾಜ್ಯದೇಲಿ ಅಭಿವೃದ್ಧಿ ಸೂಚ್ಯಂಕ ಚೆನ್ನಾಗದಂತೆ. ಆದರೂ ಜನದ ಬಡತನ, ಅಪೌಷ್ಟಿಕತೆ ತಾರಾಮಾರ ಏರ್ತಾ ಅದಂತೆ!’ ಕಳವಳ ವ್ಯಕ್ತಪಡಿಸಿದೆ.
‘ದಿಟ ಕಲಾ, ಜನದ ಇತಪರ ಮರೆತು ರಾಜಕಾರಣಿಗಳು ಇಲಾಖೆ, ಮಾಡಾಳು- ನಿಗಮಗಳ ದಿವಾಳಿ ಎಬ್ಬಿಸಿ ಚೆನ್ನಾಗಿ ಸಿನ್‍ಕಂ ಮಾಡಿಕ್ಯಂಡು ಅಭಿವೃದ್ಧಿ ಆಯ್ತಿದ್ರೆ ಜನ ಇನ್ನೆಲ್ಲಿ ಉದ್ಧಾರಾದಾರು’ ಯಂಟಪ್ಪಣ್ಣ ಬೇಜಾರು ಮಾಡಿಕ್ಯತ್ತು.
‘ಎಲೆಕ್ಷನ್ ಗೆಲ್ಲಕೆ ಬಾಗಿನ, ಬಾಡು-ಹಿಟ್ಟು, ಸೀರೆ, ಟೀವಿ, ಫ್ರಿಜ್ಜು ಕೊಟ್ಕಂದು ಗಿಲೀಟು ಮಾತಾಡ್ತಾವ್ರೆ. ತಲಾ 10 ಕೆ.ಜಿ, 20 ಕೆ.ಜಿ ಫ್ರೀ ಅಕ್ಕಿ ಕೊಡ್ತೀವಿ ಅಂತ ರೈಸ್ ಪುಲ್ಲಿಂಗ್ ಆಟ ಸುರು ಮಾಡ್ಯವುರೆ!’ ಅಂತಂದೆ.
‘ಸರ್ಕಾರ ಕೊಡೋ ಫ್ರೀ ರೈಸಿಗೆ ಪಾಟಾಗಿ ಗಣುಸ್ರು ದುಡಿಯದ್ನೆ ಬುಟ್ಟವ್ರೆ. ಹಳ್ಳಿ ಕಡೆ ಹೆಣ್ಣುಮಕ್ಕಳು ದನ-ಕರ ಸಾಕಿ, ಹಾಲು ಕರೆದು ಡೈರಿಗೆ ಕೊಟ್ಟು ಕಷ್ಟ ಬೀಳೊ ವೊತ್ಗೆ ಸಂಸಾರ ನಡೀತಾದೆ’ ತುರೇಮಣೆ ಶಾಕ್ ಕೊಟ್ಟರು.
‘ಪುಗಸಟ್ಟೇ ಅಕ್ಕಿ ಕೊಟ್ರೆ ನೂರಕ್ಕೆ ಹತ್ತು ಜನಕ್ಕೆ ಮಾತ್ರ ಅನುಕೂಲಾಯ್ತದೆ ಕಪ್ಪಾ. ದುಡಿಯೋ ಶಕ್ತಿ ಇರೋ ತೊಂಬತ್ತು ಜನ ‘ಕೆಲಸಕ್ಕೆ ಮಾತ್ರ ಕರಿಬ್ಯಾಡಿ. ಪುಗಸಟ್ಟೆ ಅಕ್ಕಿ ಮರಿಬ್ಯಾಡಿ’ ಅನ್ನೋ ಚಂಗುಲಾಟಕ್ಕೆ ಬಿದ್ದವ್ರೆ’ ಯಂಟಪ್ಪಣ್ಣ ನೊಂದ್ಕತ್ತು.
‘ದುಡಿಯೋ ಜನಕ್ಕೆ ಬಾಡು-ಹಿಟ್ಟು, ಧ್ವನಿ, ಪಂಚೆ, ಸಂಕಲ್ಪ ಯಾತ್ರೆ ಅಂತ ಅಲಾಕ್ ಮಾಡಿ ದುಡೀದಂಗೆ ಮಾಡ್ಯವುರೆ ಅಂತೀರ?’ ಅಂತಂದೆ.
‘ಹ್ಞೂಂ ಕಲಾ, ವೋಟಿಗೋಸ್ಕರ ರೈಸ್ ಪುಲ್ಲಿಂಗು ಮಾಡಬ್ಯಾಡಿ, ದುಡಿಯೋ ಕೈಗೆ ಕೆಲಸ ಕೊಡಿ. ಗೆದ್ದಮ್ಯಾಲೆ ರೈಸು, ಸೈಟು, ಭಾಗ್ಯಗಳು, ಲಕ್ಷ್ಮಿಗಳು, ಕಲ್ಯಾಣಗಳು ಇತ್ಯಾದಿ ಫ್ರೀ ಭರವಸೆಗಳು ಏನೇನವೆ ನಿಮ್ಮ ನಿಮ್ಮ ಪಕ್ಸದ ದುಡ್ಡಲ್ಲಿ ಕೊಟ್ಟುಗಳಿ, ನಮ್ಮ ಕಾಸಿಗೆ ಕಯ್ಯಾಕಬ್ಯಾಡಿ ಅಂತ ಜನ ತಾಕೀತು ಮಾಡಬಕು’ ತುರೇಮಣೆ ಮಾತಿನ ಉರಿ ಎಲ್ಲರಿಗೂ ತಾಕ್ತಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.