ಸೋಮವಾರ, ಜೂನ್ 21, 2021
27 °C

ಚುರುಮುರಿ: ರಕ್ತಮಾಂತ್ರಿಕ!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

‘ಗುರೂ... ಇವತ್ತೇನಾತು ಗೊತ್ತಾ?’ ಎಂದ ತೆಪರೇಸಿ.

‘ಹೇಳಿದ್ರೆ ತಾನೇ ಗೊತ್ತಾಗೋದು...’ ದುಬ್ಬೀರನ ಕೊಕ್ಕೆ.

‘ನಮ್ಮನೆ ಮುಂದೆ ಎರಡು ಸಣ್ಣ ಮಳಿಗೆ ಬಾಡಿಗೆಗೆ ಕೊಟ್ಟೀನಲ್ಲ, ಅದ್ರಲ್ಲಿ ಒಬ್ಬ ಕೇರಳದ ರಕ್ತಮಾಂತ್ರಿಕ, ಭವಿಷ್ಯ ಹೇಳೋನು...’‌

‘ಓ ಹೌದಾ? ನಿನ್ ಭವಿಷ್ಯ ಖರಾಬ್ ಐತೆ, ಶೀಘ್ರದಲ್ಲೇ ಪತ್ನಿಯಿಂದ ಪತಿಯ ಕೊಲೆ ಅಂತ ಹೇಳಿದ್ನಾ?’

‘ನಿನ್ತೆಲಿ, ಅದೂ... ಲಾಕ್‍ಡೌನ್ ಆಗೇತಲ್ಲ. ಒಂದು ತಿಂಗಳು ಬಾಡಿಗೆ ಮನ್ನಾ ಮಾಡಿ ಅಂತ ಬಂದಿದ್ದ...’

‘ಪಾಪ, ಗಿರಾಕಿ ಇಲ್ಲ ಅನ್ಸುತ್ತೆ, ಮನ್ನಾ ಮಾಡ್ಬೇಕಿತ್ತು?’

‘ತಡಿ ಹೇಳ್ತೀನಿ, ‘ಅಲ್ಲಯ್ಯಾ ನಿನ್ನ ಬೋರ್ಡಲ್ಲಿ ಸ್ತ್ರೀ ಪುರುಷ ವಶೀಕರಣ, ಶತ್ರು ಬಾಧೆ, ರೋಗ ನಿಗ್ರಹ, ದಾಂಪತ್ಯ ಕಲಹ... ಎಲ್ಲದಕ್ಕೂ ಶಾಶ್ವತ ಪರಿಹಾರ ಅಂತ ಹಾಕ್ಕಂಡಿದೀಯಲ್ಲ, ಈ ಕೊರೊನಾ ಯಾವಾಗ ನಿಗ್ರಹ ಆಗುತ್ತೆ ಹೇಳು ನೋಡಾಣ’ ಅಂದೆ. ಅದಕ್ಕವನು ‘ಹಳೇದು ನಿಗ್ರಹ ಆಗಿದೆ. ಈಗಿರೋದು ಹೊಸ ಕೊರೊನಾ. ಮುಂದೆ ಇನ್ನೊಂದು ಬರಬಹುದು... ಹಿಡಿಯೋದು ಕಷ್ಟ’ ಅಂದ’.

‘ಬುದ್ಧಿವಂತ ಅನ್ಸುತ್ತೆ, ಮುಂದೆ?’

‘ಹೋಗ್ಲಿ, ಸ್ತ್ರೀ ವಶೀಕರಣ ಅಂತ ಬೋರ್ಡ್ ಹಾಕಿದೀಯಲ್ಲ, ನಾ ತೋರಿಸಿದ ಹುಡುಗೀನ ವಶೀಕರಣ ಮಾಡಿಕೊಡು, ನಿನ್ನ ಬಾಡಿಗೆ ಮಾಫಿ ಮಾಡ್ತೀನಿ’ ಅಂದೆ. ಅದಕ್ಕವನು ‘ಏನ್ಸಾ, ನಿಮ್ಮೆಂಡ್ತಿ ಕೈಯಲ್ಲಿ ನಂಗೆ ಒದೆಸೋ ಪ್ರೋಗ್ರಾಂ ಏನಾದ್ರು ಇಟ್ಕಂಡಿದೀರಾ?’ ಅಂತ ಜಾರ್ಕಂಡ್ನಪ’.

‘ಸರಿ ಕೊನೆಗೇನಾತು?’

‘ಏನೂ ಬ್ಯಾಡಪ್ಪ, ರಕ್ತಮಾಂತ್ರಿಕ ಅಂತ ಕೊಚ್ಕೋತಿಯಲ್ಲ, ನಿನ್ನ ದಿವ್ಯ ಶಕ್ತಿ ಪ್ರಯೋಗಿಸಿ ಬೆಂಗಳೂರಲ್ಲಿ ಒಂದು ಆಕ್ಸಿಜನ್ ಬೆಡ್ ಕೊಡ್ಸೋಕಾಗುತ್ತಾ? ಅಂದೆ’.

‘ವೆರಿಗುಡ್, ಅದಕ್ಕೇನಂದ?’

‘ಸಾಯಂಕಾಲ ಬಾಡಿಗೆ ತಂದ್ಕೊಡ್ತೀನಿ ಅಂತ ಎದ್ದೋದ...’

ತೆಪರೇಸಿ ಮಾತಿಗೆ ದುಬ್ಬೀರನಿಗೆ ನಗು ತಡೆಯಲಾಗಲಿಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.