ಭಾನುವಾರ, ಜುಲೈ 25, 2021
28 °C
ಚುರುಮುರಿ

ಚುರುಮುರಿ: ಆ್ಯನಿವರ್ಸರಿ ಆಶ್ವಾಸನೆ!

ಎಸ್.ಬಿ.ರಂಗನಾಥ್ Updated:

ಅಕ್ಷರ ಗಾತ್ರ : | |

Prajavani

ಚಿಕ್ಕೇಶಿಗೆ ತಾನು ಯಾವುದೋ ಜೋಶ್‍ನಲ್ಲಿ ಕೊಟ್ಟಿದ್ದ ಆಶ್ವಾಸನೆ ಪೀಕಲಾಟಕ್ಕೆ ಸಿಕ್ಕಿಸುತ್ತದೆ ಎಂಬ ಕಲ್ಪನೆ ಇರಲಿಲ್ಲ. ಕೊರೊನಾ ಆರ್ಭಟ ಕಡಿಮೆಯಾದ ಮೇಲೆ ಆ್ಯನಿವರ್ಸರೀನ ಹೊರಗೆ ಸೆಲೆಬ್ರೇಟ್ ಮಾಡೋಣ ಅಂದಿದ್ದನ್ನೇ ಮುಂದಿಟ್ಟು ಹೆಂಡತಿ ಚಿನ್ನಮ್ಮ ಬೆಳ್ಳಂಬೆಳಗ್ಗೆ ಕಾಫಿ ನಿರಾಕರಣೆ ಚಳವಳಿ ಪ್ರಾರಂಭಿಸಿಬಿಟ್ಟಿದ್ದಳು!

‘ಪೇಪರ್, ಟೀವಿ ನೋಡಿದೀಯಲ್ಲ. ಜನ ಮೈಮರೆತರೆ ಕೊರೊನಾ ಮೂರನೇ ಅಲೆ ಅಪ್ಪಳಿಸುತ್ತೇಂತ ಮೋದೀಜಿ ವಾರ್ನಿಂಗ್ ಕೊಟ್ಟಿಲ್ವೆ?’ ಎಂದ ಚಿಕ್ಕೇಶಿ.

‘ಅದೇ ಪೇಪರ್, ಟೀವೀಲಿ ಪುರಿ ಜಗನ್ನಾಥ ರಥೋತ್ಸವ ಶುರುವಾಗಿರೋದು, ಹೋಟೆಲ್-ಸಿನಿಮಾ-ಮಾರ್ಕೆಟ್‍ಗಳಲ್ಲಿ ಜನ ಜಮಾಯಿಸಿರೋದೂ ಬಂದಿತ್ತಲ್ಲ’ ಚಿನ್ನಮ್ಮನ ಉವಾಚ.

‘ಆಗ್ಲಿ, ನಾವು ಆ್ಯನಿವರ್ಸರೀನ ಆಕಾಶದಲ್ಲಿ ಮಾಡಿದ್ರೆ ಹೇಗೆ?’ ಎಂದ. ಸ್ವಲ್ಪ ಮೆತ್ತಗಾದ ಚಿನ್ನಮ್ಮ ‘ಅದೇನು ಬಿಡ್ಸಿ ಹೇಳ್ರೀ’ ಎಂದಳು.

‘ಮೆಕ್ಸಿಕೊದಲ್ಲಿ ಬಾಹ್ಯಾಕಾಶ ಪ್ರವಾಸೋದ್ಯಮ ಕಂಪನಿಯೋರು ಮೊನ್ನೆ ಪ್ರಯೋಗಾರ್ಥ ಬಾಹ್ಯಾಕಾಶ ಯಾತ್ರೆ ಮಾಡಿದಾರೆ. ಅದ್ರಲ್ಲಿ ಭಾರತ ಮೂಲದ ಶಿರೀಷಾ ಬಂಡ್ಲ ಕೂಡ ಇದ್ದರು. ಹಿಂದೆ ನಮ್ಮ ಕಲ್ಪನಾ ಚಾವ್ಲಾ, ಸುನೀತಾ ವಿಲಿಯಮ್ಸ್
ಈ ಯಾತ್ರೆ ಮಾಡಿದ್ರಲ್ಲಾ- ನಮ್ಮಿಬ್ಬರಿಗೆ ಎರಡು ಸೀಟ್‌ ಬುಕ್‌ ಮಾಡಿಸ್ತೀನಿ. ಆಗ ನೀನು ನಾಲ್ಕನೆಯವಳಾಗ್ತೀಯ!’

‘ಹೀಗೆ ಆಕಾಶ ತೋರಿಸಿ ಮಾತಿಗೆ ತಪ್ಪಿದರೆ ಅಡುಗೆ ಬಂದ್ ಮಾಡಿ ಉಪವಾಸ ಸತ್ಯಾಗ್ರಹ ಆರಂಭಿಸ್ತೀನಿ’.

‘ಮಹರಾಯ್ತಿ ಹಾಗೆಲ್ಲಾ ಮಾಡ್ಬೇಡ. ಆ್ಯನಿವರ್ಸರೀನ ಭೂಮಿ ಮೇಲೇ ಆಚರಿಸೋಣ, ರೈಲಲ್ಲಿ’.

‘ಹೀಗೆಲ್ಲಾ ರೈಲು ಬಿಟ್ರೆ ನಾನು ನಂಬೋಳಲ್ಲ...’

‘ಇಲ್ಕೇಳು, ನಿನ್ನ ತೌರು ಮನೆ ಮಂಗಳೂರಿನಿಂದ ಬೆಂಗಳೂರಿಗೆ ಹೋಗೋ ಸ್ಪೆಷಲ್ ಟ್ರೇನಿಗೆ ಮೊನ್ನೆಯಿಂದ ಎರಡು ವಿಸ್ಟಡೋಮ್ ಬೋಗಿಗಳನ್ನ ಜೋಡಿಸಿದಾರೆ. ಈ ಪಾರದರ್ಶಕ ಹೊದಿಕೆಯ ಬೋಗಿಗಳಲ್ಲಿ ಕುಳಿತು, ಮಳೆಗಾಲದ ಪಶ್ಚಿಮ ಘಟ್ಟದ ಸೊಬಗು ಸವಿಯುತ್ತಾ ಪ್ರಯಾಣಿಸುವುದು ಆಹಾ... ಸ್ವರ್ಗ ಸುಖ, ಗಗನಯಾನಕ್ಕಿಂತಲೂ ಮಿಗಿಲು!’

ಚಿನ್ನಮ್ಮ ಹೈಫೈ ಚಪ್ಪಾಳೆ ತಟ್ಟಿದಳು!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.