ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಗೂಟದ ಕಾರು!

Published 24 ಜನವರಿ 2024, 19:31 IST
Last Updated 24 ಜನವರಿ 2024, 19:31 IST
ಅಕ್ಷರ ಗಾತ್ರ

‘ನನ್‌ ಸೂಟ್‌ ಎಲ್ಲಿ ಇಟ್ಟಿದ್ದೀಯ? ಇಸ್ತ್ರಿ ಮಾಡಿಸಿದ್ದೀಯ ತಾನೆ?’ ಹೆಂಡತಿಗೆ ಕೇಳಿದೆ.

‘ಎಷ್ಟು ಸಲ ಇಸ್ತ್ರಿ ಮಾಡಿ ಇಡೋದು, ನನಗಂತೂ ಸಾಕಾಗಿ ಹೋಯ್ತು. ಎಲ್ಲ ಹೊಸದಾಗಿಯೇ ಇದೆ, ಅದನ್ನೇ ಹಾಕಿಕೊಂಡು ಹೋಗಿ’ ಸಿಟ್ಟಿನಲ್ಲಿಯೇ ಹೇಳಿದಳು ಮಡದಿ.

‘ಯಾಕ್‌ ಸಿಟ್‌ ಮಾಡ್ತೀಯ? ಎಲ್ಲದಕ್ಕೂ ಕಾಲ ಬರುತ್ತೆ’ ಸಮಾಧಾನದಿಂದ ಹೇಳಿದೆ. 

‘ಕಾಲ ಬರುತ್ತೆ, ಬೇರೆಯವರಿಗೆ ನಿಮಗಲ್ಲ’.

‘ಇಷ್ಟೇಕೆ ಬೇಸರ ಮಾಡಿಕೊಂಡಿದ್ದೀಯ?’ 

‘ನಿಮ್‌ ಸರ್ಕಾರ ಅಧಿಕಾರಕ್ಕೆ ಬಂದ ತಿಂಗಳೊಳಗೇ ನಿಮಗೆ ಗೂಟದ ಕಾರು ಸಿಗುತ್ತೆ ಅಂತ ಹೇಳಿದ್ರಿ, ಸಿಗಲಿಲ್ಲ. ಜನವರಿ 1 ಹೊಸ ವರ್ಷಕ್ಕೆ ಯಾವುದಾದರೂ ನಿಗಮದ ಅಧ್ಯಕ್ಷ ಆಗ್ತೀನಿ ಅಂದ್ರಿ, ಆಗಲಿಲ್ಲ. ಹೋಗಲಿ, ಸಂಕ್ರಾಂತಿಗೆ ಹೊಸ ಸೂಟ್‌ ಹಾಕ್ಕೊಂಡು ನಿಮ್‌ ಪಾರ್ಟಿ ಆಫೀಸ್‌ಗೆ ಹೋದ್ರಿ. ಆದರೂ, ಲಿಸ್ಟ್‌ನಲ್ಲಿ ಹೆಸರು ಬರಲಿಲ್ಲ’ ಮೂತಿಗೆ ತಿವಿದು ಕುಳಿತಳು ಹೆಂಡತಿ. 

‘ಅ‌ಣ್ಣ, ಅಣ್ಣ, ಲಿಸ್ಟ್‌ ಬಿಟ್ಟಿದ್ದಾರಂತೆ’ ಖುಷಿಯಿಂದ ಓಡಿ ಬಂದ ಮುದ್ದಣ್ಣ. 

‘ಹೌದಾ, ಪಾರ್ಟಿಯಿಂದ ನನಗಿನ್ನೂ ಲೆಟರ್‌ ಬಂದಿಲ್ವಲ್ಲ’ ಎನ್ನುತ್ತಲೇ ಟಿ.ವಿ ಆನ್ ಮಾಡಿದೆ. 

‘ಬ್ರೇಕಿಂಗ್‌ ನ್ಯೂಸ್. ನಿಗಮ, ಮಂಡಳಿಗಳ ಅಧ್ಯಕ್ಷರ ಪಟ್ಟಿ ಪ್ರಕಟ’ ನ್ಯೂಸ್ ಆ್ಯಂಕರ್‌ ಜೊತೆಗೆ ಹೆಂಡತಿಯೂ ದನಿಗೂಡಿಸಿ ಜೋರಾಗಿ ಹೇಳತೊಡಗಿದಳು. 

ಪಟ್ಟಿಯಲ್ಲಿ ನನ್ನ ಹೆಸರೇ ಕಾಣಲಿಲ್ಲ. ಸಿಟ್ಟಿನಲ್ಲಿಯೇ ನಾಯಕರಿಗೆ ಫೋನ್ ಮಾಡಿದೆ. 

‘ಅಣ್ಣಾ, ಏನಣ್ಣಾ ಇದು. ನಿಮ್ಮ ಬಲಗೈ ಆಗಿ ಅಷ್ಟೇ ಅಲ್ಲ, ಕೈ–ಕಾಲು ಎಲ್ಲ ಆಗಿ ಕೆಲಸ ಮಾಡಿದ್ದೀನಿ. ಪಟ್ಟಿಯಲ್ಲಿ ನನ್ನ ಹೆಸರೇ ಇಲ್ವಲ್ಲ ಅಣ್ಣ’ ಪಕ್ಷದ ಅಧ್ಯಕ್ಷರಿಗೆ ಕೇಳಿದೆ.

‘ಏಯ್‌ ಸುಮ್ನಿರಪ್ಪ. ಅದು ಫೈನಲ್‌ ಅಲ್ಲ’.

‘ನಿಮಗೆ ಗೊತ್ತಿಲ್ಲದೆ ಅದ್ಹೇಗೆ ಅವರ ಹೆಸರೆಲ್ಲ ಪಟ್ಟಿಯಲ್ಲಿ ಸೇರಿಕೊಳ್ಳುತ್ತಣ್ಣ?’ 

‘ಅದು ಹೇಗೆ ಬೇರೆಯವರ ಹೆಸರು ಸೇರಿಕೊಂಡಿದೆಯೋ ನನಗೂ ಗೊತ್ತಿಲ್ಲ’ ಎಂದು ಫೋನ್‌ ಕುಕ್ಕಿದರು ಅಧ್ಯಕ್ಷರು. 

‘ಅದೇ ಅಂದ್ಕೊಂಡೆ, ಈಗ ಬಸ್‌ನಲ್ಲಿ ಸೀಟ್‌ ಹಿಡಿಯೋಕೇ ಆಗಲ್ಲ ನಿಮ್ ಕೈಯಲ್ಲಿ, ಇನ್ನು ಗೂಟದ ಕಾರಿನಲ್ಲಿ ಹೇಗೆ ಸೀಟು ಸಿಗುತ್ತೆ ಅಂತ’ ಮೂದಲಿಸಿದಳು ಹೆಂಡತಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT