ಶನಿವಾರ, ಅಕ್ಟೋಬರ್ 1, 2022
25 °C

ಚುರುಮುರಿ | ಬಿ ರಿಪೋರ್ಟ್ ಬ್ಯೂರೊ!

ತುರುವೇಕೆರೆ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

‘ಅಂತೂ ಎಸಿಬಿ ಠುಸ್ ಅಂದೋಯ್ತು’ ಸಿಬಿರು ಎಬ್ಬಿದ ಕಲ್ಲೇಶಿ. ‘ಬುಸ್ ಅಂದಿದ್ದೇ ಕಮ್ಮಿ, ಇನ್ನೇನಾಗುತ್ತೆ?’ ಎಂದ ಮೈಲಾರಿ.

‘ಬುಸ್ಸು, ಗುರ್‍ರು ಮುಖ್ಯ ಅಲ್ಲ. ಅದು ಎಷ್ಟು ಜನನ್ನ ಕಚ್ಚಿತು ಅನ್ನೋದು ಮುಖ್ಯ ಕಣ್ರಲೇ’ ಎಂದ ಈರಭದ್ರ.

‘ಅದೆಂಗ್ ಕಚ್ಚಕಾಯ್ತದೆ? ಯೋಳಿ ಕೇಳಿ ಈ ಎಸಿಬಿ ಪುಸ್ಸಿಕ್ಯಾಟು... ಲೋಕಾವುಲಿ ಬಾರಿ ಎಗರಾಡುತ್ತೆ, ನಮ್ ಕಂಟ್ರೋಲ್ಗೆ ಸಿಗಕಿಲ್ಲ ಅಂತ ಕೈನೋರು ಈ ಪುಸಿಕ್ಯಾಟ್‍ಗೆ ಪಟ್ಟೆ ಬಳಿದು ಗುರ್ ಅನ್ನೋಕೆ ಬುಟ್ಟಿದ್ದು ಕಣ್ಲಾ?’

‘ಎಂಗೋ ಲೋಕಾವುಲಿ ಇತ್ತಲ್ಲ, ಅದು ತನ್ ಪಾಡಿಗ್ ಬೇಟೆ ಆಡ್ಕಂಡ್ ಓಗಾದು. ಈ ಪುನುಗಿನ ಬೆಕ್ಕು ಯಾಕ್ ಬೇಕಿತ್ತು ಅಂತೀನಿ?’

‘ಅಲ್ಲೇ ಕಣ್ಲಾ ಮಸ್ಲತ್ ಇರಾದು... ಆಡಳಿತ, ಅಧಿಕಾರ ಕೈಲಿ ಮಡಿಕ್ಕಂಡು ಈ ಲೋಕಾವುಲಿ ಅನ್ನೋ ಗಳಗಂಟೆ ದಾಸಯ್ಯಂಗೆ ಎದರ್ಕಂಡು ಕೂರಕಾಯ್ತದೇನ್ಲಾ? ಅಂಗಂತ ಲೋಕಾವುಲಿ ಮೇಲೆ ಜಬರ್ದಸ್ತೂ ಮಾಡಂಗಿಲ್ಲ. ಅದಕ್ಕೇ ಆ ವುಲಿ ಮೀಸೆ ಕಿತ್ತು ಬೆಕ್ಕಿಗೆ ಅಂಟ್ಸಿ ಪಿಸ್ ಅನ್ನೋಕೆ ಕಲಿಸಿದ್ರು’.

‘ಈ ತಾರಾತಿಕಡಿ ಎಲ್ಲಾ ಬೇಕಿತ್ತಾ?’

‘ಅಲ್ಲಲೇ ಮಂಗ್ಯಾ, ಆಡಳಿತ ಅಂದ್‌ಮ್ಯಾಲೆ ಕೊಡಾದು, ತಕಳಾದು ಇದ್ದೇ ಇತ್ತದೆ. ಅದ್ಕೆ ಮಧ್ಯವರ್ತಿಗಳು ಯಾರು? ಆಡಳಿತ ಯಂತ್ರದಲ್ಲಿ ಕೆಲಸ ಮಾಡೋರು. ಅವರನ್ನೆಲ್ಲಾ ಈ ಲೋಕಾವುಲಿ ಅಟ್ಟಾಡಿಸಿ ಪರಪ್ಪನ್ ಜೈಲಿಗೆ ಓಡುಸ್ಬುಟ್ರೆ ಪರ್ಸಂಟೇಜ್ ಕಲೆಕ್ಸನ್ ಮಾಡೋರ್ ಯಾರ್‍ಲ? ಅದ್ಕೇ ಅವರನ್ ಕಾಯಕ್ಕೆ ಈ ಸೆಟಪ್ಪು. ಜನಗಳ ಕಣ್ಣಿಗೆ ‘ಓ ಹುಲಿ ಬಂತು ಹುಲಿ’ ಅನ್ನೋ ಅಂಗಾಗ್ಬೇಕು, ಇವರು ಪುಸ್ಸಿಕ್ಯಾಟ್‍ನ ಕಂಕಳಲ್ಲಿ ಮಡಿಕ್ಕಂಡು ತಲೆ ಸವರ್ಬೇಕು... ಎಂಗೆ?’

‘ಮುಂದೇನು ಕತೆ? ಎಸಿಬಿ ಬೆಕ್ಕು, ಲೋಕಾವುಲಿ ಒಳಗೆ ಲೀನ ಆಯ್ತದಲ್ಲ?’

‘ಅಯ್ಯೋ ಕಾಲ ಇಂಗೇ ಇದ್ದೀತಾ? ಇನ್ನೊಂದ್ಸಾರಿ ಅಧಿಕಾರ ಸಿಕ್ದಾಗ ಮತ್ತೆ ಎಸಿಬಿ ಮಾಡೋದು. ಅಂದ್ರೆ ಆ್ಯಂಟಿ ಚಾರ್ಜ್‌ಶೀಟ್ ಬ್ಯೂರೊ... ಹಾಗಂದ್ರೆ ಚಾರ್ಜ್‌ಶೀಟೇ ಹಾಕ್ದೇ ಇರೋದು. ಅದಕ್ಕೆ ಅವಕಾಶ ಆಗದಿದ್ರೆ ಬಿಆರ್‌ಬಿ, ಅಂದ್ರೆ ಬಿ ರಿಪೋರ್ಟ್ ಬ್ಯೂರೊ ಅಂತ ಮಾಡಿ ಕೈತೊಳ್ಕೊಳೋದು’ ಪರ್ಮೇಶಿ ಹುಬ್ಬು ಹಾರಿಸಿ ನಕ್ಕ,

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.