ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ | ಬಿವೈಸಿ ಮತ್ತು ಟೋಪಿ

Published 27 ನವೆಂಬರ್ 2023, 19:30 IST
Last Updated 27 ನವೆಂಬರ್ 2023, 19:30 IST
ಅಕ್ಷರ ಗಾತ್ರ

ಯಂಟಪ್ಪಣ್ಣ ಮನೆ ಮುಂದೆ ನಿಂತುಗಂಡು ‘ಕುರೊ ಕುರೋ...’ ಅಂತ ಕೂಗ್ತಿತ್ತು.

‘ಅದೇನು ಯಂಟಪ್ಪಣ್ಣ ಕೊರಗುಡ್ತಿತಿದ್ದೀರಿ!’ ಅಂತ ಕೇಳಿದೆ.

‘ಮೊಮ್ಮಗ ಎರಡಕ್ಕೋಗವ್ನೆ. ತೊಳಿಯದ್ಯಾಕೆ ಅಂತ ಬೀದಿನಾಯಿ ಕೂಗ್ತಾ ಇವ್ನಿ’ ಅಂತು ಯಂಟಪ್ಪಣ್ಣ.

ನಾವು ಸಣ್ಣ ಹುಡ್ಲಾಗಿದ್ದಾಗ ನಮ್ಮವ್ವದೀರು ಕುರೊ ಕುರೊ ಅಂತ ನಾಯಿ ಕರೆದೇಟಿಗೇ ಅದು ಪಟ್ಟಂತ ಬಂದು ಎಲ್ಲಾ ಸುದ್ದ ಮಾಡಿ ಹೊಂಟೊಯ್ತಿತ್ತು.

‘ಬೀದಿನಾಯಿಗಳು ಬಿಸ್ಕೆಟ್ ತಿಂದು ಸ್ಟ್ಯಾಂಡರ್ಡ್ ಆಗ್ಯವೆ ಯಂಟಪ್ಪಣ್ಣ. ಕುರೋ ಕುರೋ ಅಂದ್ರೆ ಅವುಕ್ಕೆ ಅರ್ಥಾಗಕುಲ್ಲ. ಮುದ್ದೆ-ಅನ್ನ ಹಾಕಿದ್ರೆ ಮೂಸಿ ಸೈತ ನೋಡಕುಲ್ಲ ಅಂತೀನಿ!’ ಅಂತಂದೆ.

‘ನಾಯಿಗಳೇನ್ಲಾ ಮನುಸ್ರೂ ಈಗ ಬಿಸ್ಕೆಟ್ಟಿಗೆ ಪಾಠಾಗ್ಯವ್ರೆ. ರಾಜಕೀಯದೋರು ನಮ್ಮ ದುಡ್ಡಲ್ಲಿ ನಮಗೇ ಆಶ್ವಾಸನೆಗಳ ಬಿಸ್ಕೆಟ್ಟಾಕಿ ಚಾಲುಗಲಿಸಿ ಬುಟ್ಟವ್ರೆ ಕಲಾ’ ತುರೇಮಣೆ ತಮ್ಮ ಕಡತ ಬಿಚ್ಚಿದರು.

‘ನಮ್ಮದೆಂಗೋ ಇರಲಿ! ನಿಗಮ, ಮಂಡಲಿ, ಮಂತ್ರಿ ಭಾಗ್ಯದ ಬಿಸ್ಕೆಟ್ಟಿಗೋಸ್ಕರ ಶಾಸಕರು, ನಾಯಕರೇ ಕ್ಯಾಣ ತಗೀತರಂತೆ! ‘ನಾವೇನು ಬೂವಕ್ಕೋಸ್ಕರ ನಿಮ್ಮ ಬಡ್ಡೆಗೆ ಬಂದಿದೀವಾ? ಪಕ್ಷಕ್ಕೋಸ್ಕರ ರಕ್ತ ಬಸಿದಿಲ್ವಾ. ಬಿಸ್ಕೆಟ್ಟಾಕದಾದ್ರೆ ಸರಿಯಾಗಿ ಹಾಕ್ರೀ!’ ಅಂತ ಸಿಟ್ಟುಗತರೆ!’ ಅಂತು ಯಂಟಪ್ಪಣ್ಣ.

‘ಅತೃಪ್ತರ ಯೇಗ್ತೆಗೆ ತಕ್ಕಂಗೆ ಬಿಸ್ಕೆಟ್ಟು ಹಾಕಲೇಬೇಕು! ಶಾಸಕರು ‘ನಾವೂ ನಾಕೈದು ಸಾರಿ ಗೆದ್ದುದವಿ. ನನ್ನೆಡ್ತಿಗೊಂದು ನನ್ನ ಮಗನಿಗೊಂದು ಲೋಕಸಭೆ ಬಿಸ್ಕೆಟ್ ಕೊಡಿ’ ಅಂತ ಮೂರೂ ಬುಟ್ಟು ಕೇಳ್ತರೆ. ಕಾರ್ಯಕರ್ತರಿಗೇನು ಸಿಕ್ತದೆ?’ ಚಂದ್ರು ಸಿಟ್ಟಾದ.

‘ಅಧಿಕಾರಿಗಳು ಬಿಸ್ಕೆಟ್ ಹಾಕೋಗಂಟ ಫೈಲೇ ಮುಟ್ಟಕುಲ್ಲ’ ಅಂತ ನಾನು ಬೆಂಕಿಗೆ ತುಪ್ಪ ಹಾಕಿದೆ.

‘ರಾಜಕಾರಣಿಗಳು ‘ನಾವು ಅಧಿಕಾರಕ್ಕೆ ಬಂದ್ರೆ ಭಾಳ ಕಿಸಿತೀವಿ, ನಮಗೇ ವೋಟಾಕಿ!’ ಅಂತ ಬಿಸ್ಕೆಟ್ ಹಿಡಕಂದು ಬಿಸ್ಕೆಟ್ ಯುವರ್ ಕಸ್ಟಮರ್ ಅಂದ್ರೆ ಬಿವೈಸಿ ಪಾಲೋ ಮಾಡ್ಕ್ಯಂದು ನಮಗೆ ಟೋಪಿ ಹಾಕದೇ ಕಸುಬು ಮಾಡಿಕ್ಯಂದವರೆ!’ ಯಂಟಪ್ಪಣ್ಣ ತಲೆ ಚಚ್ಚಿಕ್ಯತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT