ತೆಪರೇಸಿ ಟ್ರಿಕ್...

ಸಂಪುಟ ವಿಸ್ತರಣೆಯ ಕಸರತ್ತಿನಿಂದ ರಾಜಾಹುಲಿ ಹೈರಾಣಾಗಿ ಹೋಗಿದ್ದರು. ಸಚಿವ ಸ್ಥಾನ ವಂಚಿತರ ಫೋನ್ ಕರೆಗಳು ಬರುತ್ತಲೇ ಇದ್ದವು. ಸಾಹೇಬರ ಚಿಂತೆ ನೋಡಿದ ಅವರ ಕಾರು ಚಾಲಕ ತೆಪರೇಸಿ, ‘ಸರ್, ನೀವು ಪರ್ಮಿಶನ್ ಕೊಟ್ರೆ ನಿಮ್ಮ ಮೊಬೈಲ್ ಕಾಲ್‍ಗಳಿಗೆ ನಾನೇ ಉತ್ತರಿಸಿ ಎಲ್ಲ ಸರಿ ಮಾಡ್ತೀನಿ’ ಎಂದ. ಫಟ್ ಅಂತ ಮೊಬೈಲನ್ನು ಅವನ ಕೈಗಿತ್ತ ರಾಜಾಹುಲಿ ‘ಏನಾದ್ರು ಮಾಡ್ಕೊ’ ಎಂದು ನಿದ್ರೆಗೆ ಜಾರಿದರು.
ಮೊದಲನೇ ಕರೆ ಬಂತು ‘ಸರ್, ನಾನು ಮನಿರತ್ನ... ಯಾಕಿಂಗ್ ಮಾಡಿದ್ರಿ?’ ತೆಪರೇಸಿ ಉತ್ತರಿಸಿದ, ‘ಮುನಿಸಿಕೋಬೇಡ ಮನಿರತ್ನ, ಒಂದು ಮಂತ್ರಿ ಸ್ಥಾನ ಖಾಲಿ ಇಟ್ಟಿದೀನಲ್ಲ ಯಾರಿಗಂತ ತಿಳಿದಿ? ನಿನಗೇ... ಸ್ವಲ್ಪ ದಿನ ತಡ್ಕೋ...’
ಎರಡನೇ ಕರೆ ಬಂತು. ‘ನಮಸ್ಕಾರ್‍ರೀ ಸಾಹೇಬ್ರ, ನಾವು ಬೆತ್ನಾಳ್ ಕಡೆಯವ್ರು... ನೋಡ್ಕೋತೀವಿ ನಿಮ್ಮನ್ನ...’
‘ಈ ಧಮಕಿ ಎಲ್ಲ ಬಿಡ್ರಿ, ಈಗ ಒಂದು ಮಂತ್ರಿ ಸ್ಥಾನ ಖಾಲಿ ಬಿಟ್ಟಿಲ್ಲೇನು? ಅದು ನಿಮ್ ಸಾಹೇಬ್ರಿಗೇ... ಸ್ವಲ್ಪ ಮಾತು ಕಡಿಮೆ ಮಾಡೋಕೇಳ್ರಿ ಅವರಿಗೆ...’
ಮೂರನೇ ಕರೆ ಬಂತು, ‘ನಾನ್ಸಾರ್ ಪ್ಯಾಟೆಹಕ್ಕಿ...’
‘ನೀವು ಟಿ.ವಿ.ಯೋರ ಹತ್ರ ಛಲೋ ಮಾತಾಡ್ತೀರಿ. ಒಂದು ಮಂತ್ರಿ ಸ್ಥಾನ ನಿಮಗೇಂತ ಖಾಲಿ ಇಟ್ಟಿದ್ದೆ. ಮುಂದೆ ನಿಮ್ಮಿಷ್ಟ...’
ನಾಲ್ಕನೇ ಕರೆ ಬಂತು. ಆ ಕಡೆಯಿಂದ ಮಾತಿಲ್ಲ, ಬರೀ ಅಳೋ ಶಬ್ದ. ತೆಪರೇಸಿಗೆ ಗೊತ್ತಾಯಿತು. ‘ಏನಪ್ಪಾ ಹೊನ್ನಾಳಿ ಹುಲಿ... ಈಗ ಅಳೋ ಅಂಥದ್ದು ಏನಾತು... ಮಾತೆತ್ತಿದ್ರೆ ನನ್ನ ತಂದೆ ಸಮಾನ ಅಂತೀಯ? ಮತ್ತೆ ಮನಿ ಅಂದ್ಮೇಲೆ ಸುಧಾರಿಸ್ಕೋಬೇಕು. ಯಾರಿಗೂ ಹೇಳಬೇಡ, ಒಂದು ಮಂತ್ರಿ ಸ್ಥಾನ ಖಾಲಿ ಇಟ್ಟಿರೋದು ನಿನಗೋಸ್ಕರನೇ...’
ರಾಜಾಹುಲಿ ಎಚ್ಚರ ಆಗೋವಷ್ಟರಲ್ಲಿ ಎಲ್ಲ ಶಾಸಕರ ಮೂಗಿಗೂ ಇದೇ ತುಪ್ಪ ಹಚ್ಚಿದ ತೆಪರೇಸಿ. ಖೇಲ್ ಖತಂ, ಫೋನ್ ಬಂದ್!
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.