ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುರುಮುರಿ: ದೂಳು, ಇಲ್ಲ ಹೂಳು!

Published 4 ಜುಲೈ 2024, 19:30 IST
Last Updated 4 ಜುಲೈ 2024, 19:30 IST
ಅಕ್ಷರ ಗಾತ್ರ

‘ರೀ... ಈ ವಿಶ್ವ ಸುಂದರಿ, ಭುವನ ಸುಂದರಿ ಎರಡೂ ಒಂದೇ ಹೌದಿಲ್ಲೋ...’ ಮಡದಿ ಪಮ್ಮಿ ಪ್ರಶ್ನೆಗೆ ತೆಪರೇಸಿ ‘ಅಲ್ಲ, ಬೇರೆ ಬೇರೆ. ವಿಶ್ವ ಅಂದ್ರೆ ನಮ್ ಜಗತ್ತು, ಭೂಮಿ ಮ್ಯಾಗಿಂದು. ಭುವನ ಅಂದ್ರೆ ಯೂನಿವರ್ಸು, ಅದಕ್ಕೆ ಆಕಾಶ, ಪಾತಾಳ, ಅತಳ, ವಿತಳ, ತಳಾತಳ ಎಲ್ಲ ಬರ್ತಾವು’ ಎಂದ.

‘ಅಲ್ರೀ... ಕಾಂಪಿಟಿಷನ್‌ಗೆ ಆಕಾಶ, ಪಾತಾಳದಾಗಿನ ಸುಂದ್ರೀರೆಲ್ಲ ಬಂದಿರ್ತಾರೇನು?’

‘ಏನೋಪ್ಪ... ಯಾಕೆ, ನೀ ಏನರೆ ಟ್ರೈ ಮಾಡ್ತೀ ಏನು?’

‘ಒಲ್ಲೆಪಾ... ಆಮೇಲೆ ಅವ್ರು ನನ್ನೇ ಸೆಲೆಕ್ಟ್ ಮಾಡಿಬಿಟ್ರೆ?’ ಪಮ್ಮಿ ನಕ್ಕಳು.

‘ಇದು ಸ್ವಲ್ಪ ಜಾಸ್ತಿ ಆತು...’

‘ಯಾಕ್ರೀ? ನಾ ಚೆಂದಿಲ್ಲೇನು? ಮದುವಿಗೆ ಮುಂಚೆ ನನ್‌ಮ್ಯಾಲ ಕವನ ಬರೀತಿದ್ರಿ?’

‘ಅದು ಆಗ... ನಿಮ್ಮಪ್ಪ ರಾಜಕಾರಣಿಗಳ ತರ ಏನೇನೋ ಆಸಿ ತೋರ್ಸಿ ಮದುವಿ ಮಾಡಿದ’.

‘ನೀವೂ ಅಷ್ಟೆ, ಸೆಂಟ್ರಲ್‌ನೋರು ನಾನೂರು ಸೀಟು ಗೆಲ್ತೀವಿ ಅಂದಂಗೆ ನಂಗೆ ಮುಂದೆ ಲಕ್ಷ ಲಕ್ಷ ಸಂಬಳ ಬರ್ತತಿ ಅಂತ ಸುಳ್ಳು ಹೇಳಿದ್ರಿ...’

‘ಸಾವಿರ ಸುಳ್ಳು ಹೇಳಿ ಸರ್ಕಾರ ನಡೆಸೋ ಹಂಗ ನಾನೂ ಒಂದು ಸುಳ್ಳು ಹೇಳಿ ಮದುವಿ ಆದ್ನೆಪ, ಏನ್ ತಪ್ಪು? ನಾ ಟೀವಿ ರಿಪೋಟ್ರು, ಮೈಕ್ ಹಿಡಿದೆ ಅಂದ್ರೆ ಎಂತೆಂಥ ಮಂತ್ರಿಗಳು ನನ್ ಮುಂದೆ ಗಪ್ ಅಂತ ನಿಲ್ತಾರೆ, ಗೊತ್ತೇತಿಲ್ಲೋ?’

‘ಅದೆಲ್ಲ ಗೊತ್ತಿಲ್ಲ, ಒಟ್ಟಾ ನಾ ಚೆಂದಿಲ್ಲ ಅಂತ ಸತ್ಯ ಬಾಯಿ ಬಿಟ್ರೆಲ್ಲ.‌‌..’

‘ಸುಮ್ನೆ ತಮಾಷಿಗೆ ಹೇಳ್ದೆ ಕಣೆ, ಮತ್ತ ಇದಾ ನೆಪ ಇಟ್ಕೊಂಡು ತವರುಮನಿಗೆ ಹೊಂಡಬ್ಯಾಡ’.

‘ತವರುಮನಿಗೆ ಹೋಗಲ್ಲ, ಯಾವುದಾದ್ರು ಆಶ್ರಮಕ್ಕೆ ಹೋಗ್ತೇನಿ...’

‘ಯಾಕೆ? ಸತ್ಸಂಗ ಕೇಳಾಕ? ಅಲ್ಲೀಗ ಒಂದು ಬೋರ್ಡ್ ಹಾಕ್ಯಾರಂತೆ...’

‘ಏನಂತ?’

‘ಪಾದದೂಳಿ ಬೇಕಾ? ಮಣ್ಣಾ ಕೊಡ್ತೀವಿ ಬರ್‍ರೀ... ಅಂತ’

‘ಥೂ ನಿಮ್ಮ...’ ಎಂದಳು ಪಮ್ಮಿ. ಇಬ್ಬರೂ ಒಟ್ಟಿಗೇ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT