ಚುರುಮುರಿ| ಸ್ಯಾಂಡಲ್‍ವುಡ್ ಸಂಕಟ

‘ಎಲ್ಲಾ ವ್ಯವಹಾರಗಳು ಶುರುವಾದರೂ ಸಿನಿಮಾ ಥಿಯೇಟರ್‌ಗಳ ಭಾಗ್ಯದ ಬಾಗಿಲು ತೆರೆಯಲಿಲ್ಲವಲ್ರೀ’ ಟಿ.ವಿ.ಯಲ್ಲಿ ಸಿನಿಮಾ ನೋಡುತ್ತಿದ್ದ ಸುಮಿ ಕೇಳಿದಳು.
‘ಕೊರೊನಾ ಇಂಟರ್‍ವಲ್ ಮುಗಿದು, ಮೇಲಿರುವ ದೊಡ್ಡ ಡೈರೆಕ್ಟರ್ ಆ್ಯಕ್ಷನ್ ಹೇಳಿದಾಗ ಸಿನಿಮಾ ಶುರುವಾಗುತ್ತದೆ’ ಎಂದ ಶಂಕ್ರಿ.
‘ಆ್ಯಕ್ಷನ್ ತಡವಾದ್ರೆ ಥಿಯೇಟರ್‌ಗಳು ವಾಣಿಜ್ಯ ಸಂಕೀರ್ಣ ಆಗಿಬಿಡ್ತವೆ ಕಣ್ರೀ... ಗಂಧದ ಗುಡಿಯಲ್ಲಿದ್ದ ಕಲಾರಾಧನೆಯ ಎಷ್ಟೋ ಗುಡಿ-ಗೋಪುರಗಳು ಉರುಳಿ ಮಾಲು, ಮಳಿಗೆ ಆಗಿಬಿಟ್ಟಿವೆ...’
‘ಹಾಗಂತ ಕೊರೊನಾ ಕಾಟದಲ್ಲಿ ಚಿತ್ರಮಂದಿರ ತೆರೆದರೆ ಅಭಿಮಾನಿ ಪ್ರೇಕ್ಷಕರಿಗೆ ಸೋಂಕು ಅಂಟುವುದಿಲ್ಲವೆ? ಜೊತೆಗೆ, ಆರು ತಿಂಗಳಿನಿಂದ ಪ್ರದರ್ಶನವಿಲ್ಲದೆ ಬೆಳ್ಳಿ ಪರದೆ ಕೊಳೆಯಾಗಿದೆಯಂತೆ, ಒಗೆದು ಒಪ್ಪ ಮಾಡಬೇಕಲ್ಲಾ?’
‘ಡಾ. ರಾಜ್‍ಕುಮಾರರ ಬಿಳಿ ಪಂಚೆಯಂತೆ ಶುಭ್ರವಾಗಿದ್ದ ಪರದೆಗೆ ಅದ್ಯಾವ ಹಟಮಾರಿ ಕೊಳೆ ಅಂಟಿಕೊಂಡಿದೆರೀ?’
‘ಡ್ರಗ್ಸ್ ಕೊಳೆ. ಇದು ಕೊರೊನಾಗಿಂತಾ ಅಪಾಯಕಾರಿಯಂತೆ. ಸಾಧಾರಣ ಡಿಟರ್ಜೆಂಟ್‍ನಿಂದ ಒಂದೇ ಒಗೆತದಲ್ಲಿ ಕೊಳೆ, ದುರ್ಗಂಧ ತೆಗೆಯುವುದು ಕಷ್ಟ ಅಂತ ಸಿಸಿಬಿಯವರು ಹೇಳುತ್ತಿದ್ದಾರೆ’.
‘ಶ್ರೀಗಂಧದ ಘಮಲಿಗೆ ಗಾಂಜಾ ಅಮಲು ಸೇರಿಕೊಂಡು ಬೆಳ್ಳಿಪರದೆ ಗಲೀಜಾಗಿರುವ ವಿಚಾರವೇನ್ರೀ?’
‘ಹೌದು, ಲಾಕ್‍ಡೌನ್ ಗ್ಯಾಪ್‍ನಲ್ಲಿ ಶ್ರೀಗಂಧದ ಇಳುವರಿ ಕುಸಿಯಿತು ಅಂತ ಕೆಲವರು ಶ್ರೀಗಂಧದ ಗಾರ್ಡನ್‍ನಲ್ಲಿ ಲಾಭದಾಯಕ ಗಾಂಜಾ ಬಿತ್ತನೆ ಮಾಡಲು ಹೋಗಿದ್ರಂತೆ’.
‘ಗಾಂಜಾವು ತುಳಿಸಿಯಷ್ಟೇ ಪವಿತ್ರ, ತುಳಿಸಿಕಟ್ಟೆ ರೀತಿ ಗಾಂಜಾಕಟ್ಟೆ ಕಟ್ಟಿ ಪೂಜಿಸಬಹುದು ಅಂದ್ರಂತೆ ಮೈಮೇಲೆ ಪ್ರಜ್ಞೆ ಇಲ್ಲದ ಪ್ರಜ್ಞಾವಂತರು!’
‘ಕೊರೊನಾಗೆ ಗಾಂಜಾ ಕಷಾಯ ರಾಮಬಾಣ ಅಂತನೂ ಹೇಳಿಬಿಡುತ್ತಿದ್ದರೇನೋ, ಸದ್ಯ, ಸಿಸಿಬಿಯವರು ಹಿಡಿದು ಅಮಲು ಇಳಿಸುತ್ತಿದ್ದಾರೆ...’ ಎಂದು ಸಿಟ್ಟಿನಿಂದ ಶಂಕ್ರಿ ಟಿ.ವಿ. ಆಫ್ ಮಾಡಿ ಎದ್ದ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.