ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ | ಅತಿಥಿ ಮೇಷ್ಟ್ರು

Published 5 ಸೆಪ್ಟೆಂಬರ್ 2023, 21:45 IST
Last Updated 5 ಸೆಪ್ಟೆಂಬರ್ 2023, 21:45 IST
ಅಕ್ಷರ ಗಾತ್ರ

ಹಾರ, ಶಾಲು ಹಿಡಿದು ವಿದ್ಯಾರ್ಥಿಗಳ ಗುಂಪು ಶಂಕ್ರಿ ಮೇಷ್ಟ್ರ ಮನೆಗೆ ಬಂತು.

‘ಶಿಕ್ಷಕರ ದಿನದ ಪ್ರಯುಕ್ತ ನಿಮ್ಮನ್ನು ಗೌರವಿಸಲು ಬಂದಿದ್ದೇವೆ’ ಎಂದ ಒಬ್ಬ.

‘ಸಾರ್... ಶರ್ಟ್, ಪ್ಯಾಂಟ್ ಹಾಕ್ಕೊಳ್ಳಿ, ಸನ್ಮಾನದ ಫೋಟೊ, ವಿಡಿಯೊವನ್ನು ಫೇಸ್‍ಬುಕ್, ವಾಟ್ಸ್‌ಆ್ಯಪ್‍ಗೆ ಹಾಕ್ಬೇಕು’ ಅಂದ ಇನ್ನೊಬ್ಬ.

ಪತ್ನಿ ಸುಮಿ ಮೇಷ್ಟ್ರನ್ನು ರೂಮಿಗೆ ಕರೆದೊಯ್ದರು.

‘ಯುಗಾದಿ ಹಬ್ಬದ ಶರ್ಟ್ ಹಾಕ್ಕೊಳ್ತೀನಿ’ ಅಂದ್ರು ಶಂಕ್ರಿ. ‘ಅದನ್ನು ಒಗೆದಿಲ್ಲಾರೀ, ಪಿಂಕ್ ಕಲರ್‍ದು ಹಾಕ್ಕೊಳ್ಳಿ’ ಸುಮಿ ಪಿಸುಗುಟ್ಟಿದರು.

‘ಅದರ ಹೊಲಿಗೆ ಬಿಚ್ಚಿಕೊಂಡಿದೆ, ಎರಡು ಗುಂಡಿ ಕಿತ್ತುಹೋಗಿವೆ. ಗ್ರೀನ್ ಕಲರ್‍ದು ಬಣ್ಣ ಬಿಳಿಚಿಕೊಂಡಿದೆ...’

ಸುಮಿ ಗೊಂದಲಕ್ಕೀಡಾದರು. ಎಂದೋ ಮಡಿಸಿಟ್ಟು ಮರೆತಿದ್ದ ಮದುವೆ ಕೋಟು ನೆನಪಾಯ್ತು. ಅದನ್ನು ತೆಗೆದು ದೂಳು ಒದರಿ ಗಂಡನಿಗೆ ತೊಡಿಸಿದರು.

ಶಂಕ್ರಿ ಮೇಷ್ಟ್ರು, ಸುಮಿ ಮೇಡಂಗೆ ಸನ್ಮಾನ ಮಾಡಿದ ವಿದ್ಯಾರ್ಥಿಗಳು ಫೋಟೊ, ವಿಡಿಯೊ ಮಾಡಿಕೊಂಡರು. ಅವರಲ್ಲೊಬ್ಬ ರೀಲ್ಸ್ ಮಾಡಿದ, ‘ನೋಡಿ ಫ್ರೆಂಡ್ಸ್, ಇವರು ನಮ್ಮ ಲೆಕ್ಚರರ್. ಒಳ್ಳೆ ಮೇಷ್ಟ್ರು... ಸನ್ಮಾನದ ಬಗ್ಗೆ ಶಂಕ್ರಿ ಮೇಷ್ಟ್ರು ಏನು ಹೇಳ್ತಾರೆ ಕೇಳೋಣ...’ ಮೇಷ್ಟ್ರ ಮುಖಕ್ಕೆ ಮೊಬೈಲ್ ಹಿಡಿದ.

‘ಶ್ರದ್ಧೆಯಿಂದ ಓದಿ, ಉನ್ನತ ಸ್ಥಾನಮಾನ ಪಡೆದು ಉತ್ತಮ ಪ್ರಜೆಗಳಾಗಿ ಬಾಳಿರಿ. ನಿಮ್ಮನ್ನು ಕೂರಿಸುವಷ್ಟು ಕುರ್ಚಿಗಳು ನಮ್ಮ ಚಿಕ್ಕ ಬಾಡಿಗೆ ಮನೆಯಲ್ಲಿ ಇಲ್ಲ. ಚಾಪೆ ಮೇಲೆ ಕೂರಲೂ ಜಾಗವಿಲ್ಲದೆ ಕೆಲವರು ನಿಂತೇ ಇದ್ದೀರಿ, ಅನನುಕೂಲಕ್ಕೆ ವಿಷಾದಿಸುತ್ತೇನೆ’ ಎಂದರು.

‘ಮೇಷ್ಟರ ಧರ್ಮಪತ್ನಿ ಸುಮಿ ಮೇಡಂ ಏನು ಹೇಳ್ತಾರೆ ಕೇಳೋಣ...’ ಸುಮಿಯವರಿಗೆ ಮೊಬೈಲ್ ಹಿಡಿದ. ‘ಅತಿಥಿ ಉಪನ್ಯಾಸಕರನ್ನು ಸರ್ಕಾರ, ಇಲಾಖೆ ಕಡೆಗಣಿಸಿದರೂ ನೀವು ಗೌರವ ಕೊಟ್ಟು ಬಂದು ಸನ್ಮಾನ ಮಾಡಿದ್ರಿ, ಥ್ಯಾಂಕ್ಸ್...’ ಎಂದರು.

ಸುಮಿ ಕೊಟ್ಟ ಕಾಫಿ, ಬಿಸ್ಕೆಟ್ ಸವಿದು ವಿದ್ಯಾರ್ಥಿಗಳು ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT