ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ವೀರನಾಲಿಗೆಗಳು

Last Updated 2 ಮೇ 2021, 19:18 IST
ಅಕ್ಷರ ಗಾತ್ರ

ಕೊರೊನಾ ಹೆಮ್ಮಾರಿಯ ಅಬ್ಬರದಲ್ಲಿ ಬಸವಳಿದ ಭರತಮಾತೆಗೆ ಕಳೆದ ವಾರ ಪಾಕಿಸ್ತಾನ, ಇದೀಗ ಚೀನಾ ಕೂಡ ಸಹಾಯಹಸ್ತ ಚಾಚಿದ್ದನ್ನು ಅರಗಿಸಿಕೊಳ್ಳಲಾರದೇ ವಿಶ್ವಗುರುಗಳು ಚಿಂತಾಕ್ರಾಂತರಾಗಿದ್ದರು.

ಆತ್ಮನಿರ್ಭರ ಭಾರತವು ಹೀಗೆ ವ್ಯಾಕ್ಸೀನು, ರೆಮ್‌ಡಿಸಿವಿರ್, ಆಮ್ಲಜನಕದ ಅಗಾಧ ಕೊರತೆಯಿಂದ ಬಳಲುತ್ತ
ಆತ್ಮಬರ್ಬರವಾಗುವುದೇ...

ಅಕಟಕಟಾ ಎನ್ನುತ್ತ ಗಡ್ಡವನ್ನು ನೀವಿಕೊಳ್ಳುತ್ತ ಕುಳಿತಿರಲಾಗಿ, ಈ ವರ್ಷದ ಪರಮ ವೀರನಾಲಿಗೆ ಚಕ್ರ ಪ್ರಶಸ್ತಿಗೆ
ನಾಮಕರಣಗೊಂಡವರ ಪಟ್ಟಿಯನ್ನು ಶಾಣಕ್ಯರು ವಿಶ್ವಗುರುಗಳ ಮುಂದಿಟ್ಟರು.

ಟಿ.ವಿಯಲ್ಲಿ ಲಂಗುಲಗಾಮಿಲ್ಲದೆ ವದರುವ ಪುಂಗಿ ಆ್ಯಂಕರ್‌ಗಳು, ಕೊರೊನಾ ಯಾರಿಂದ ಬಂತು, ಹೇಗೆ ಓಡಿಸುವುದೆಂದು ಬಾಯಿಗೆ ಬಂದಂತೆ ಗಳಹುವ ರಾಜಕಾರಣಿಗಳು, ವಾಟ್ಸ್‌ಆ್ಯಪ್‌ ವಿಶ್ವವಿದ್ಯಾಲಯದ ತಜ್ಞರು, ಹೀಗೆ ಹಲವು ಕ್ಷೇತ್ರಗಳಿಂದ ಆಯ್ದ ಹೆಸರುಗಳನ್ನು ಪರಿಶೀಲಿಸಿ, ಅಂತಿಮ ಸುತ್ತಿನಲ್ಲಿ ಇಬ್ಬರ ಹೆಸರುಗಳಿದ್ದವು.

ಎರಡೂ ಹೆಸರುಗಳು ಕರುನಾಡಿನಿಂದ. ಆಪರೇಷನ್ ಕಮಲದ ನಂತರ ಎಷ್ಟೆಲ್ಲ ಸರ್ವಾಂಗೀಣ ಅಭಿವೃದ್ಧಿಯಾಗಿದೆ ಎಂದು ಅಚ್ಚರಿಗೊಳ್ಳುತ್ತ, ವಿಶ್ವಗುರುಗಳು ಪಟ್ಟಿಯಲ್ಲಿದ್ದ ನಾಲಿಗೆನಾಮಗಳ ಸಾಧನೆಯನ್ನು ನೋಡಿದರು. ‘ಪಡಿತರ ಅಕ್ಕಿ ಸಾಲುವುದಿಲ್ಲ, ನಾವೇನು ಸಾಯುವುದೇ’ ಎಂದು ಅಳಲು ತೋಡಿಕೊಂಡ ಪ್ರಜೆಯೊಬ್ಬರಿಗೆ ಸಚಿವರ ನಾಲಿಗೆಯು ‘ಸತ್ತರೇ ಒಳ್ಳೆಯದು’ ಎಂದು ಫಟಾಫಟ್ ಉತ್ತರಿಸಿತ್ತು.

ಮಾಜಿ ಸಂಸದರೊಬ್ಬರ ನಾಲಿಗೆಯು ‘ಜನರಿಗೆ ಪಡಿತರ ಅಕ್ಕಿ ಕೊಡುವುದರಿಂದ, ಹರಾಮದ ಅಕ್ಕಿ ತಿನ್ನುತ್ತ ಕೆಲಸಕ್ಕೆ ಬರುತ್ತಿಲ್ಲ’ ಎಂಬ ಭಯಂಕರ ಹೇಳಿಕೆ ನೀಡಿ, ಸಚಿವರೊಂದಿಗೆ ಮೊದಲ ಸ್ಥಾನಕ್ಕೆ ಪೈಪೋಟಿ ಒಡ್ಡಿತ್ತು.

ಈ ಮಾಜಿ ಸಂಸದರಿಗೆ ಪರಮ ವೀರನಾಲಿಗೆ ಚಕ್ರ ಪ್ರಶಸ್ತಿ ಮತ್ತು ಸಚಿವರಿಗೆ ವೀರನಾಲಿಗೆ ಚಕ್ರ ಪ್ರಶಸ್ತಿಯನ್ನು ನೀಡುವಂತೆ ಆಜ್ಞಾಪಿಸಿದ ವಿಶ್ವಗುರುಗಳು, ನಾಲಿಗೆ ಜಾರಿದ ಮಾತುಗಳಿಗೆ ಬೇಸರ ವ್ಯಕ್ತಪಡಿಸಿ ಎಂದು ಮುಖ್ಯಮಂತ್ರಿಗೆ ಕಿವಿಮಾತು ಹೇಳಿದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT