ಬುಧವಾರ, ನವೆಂಬರ್ 25, 2020
21 °C

ಚುರುಮುರಿ | ನಿತ್ಯ ಆಯುಧ ಪೂಜೆ!

ಬಿ.ಎನ್.ಮಲ್ಲೇಶ್ Updated:

ಅಕ್ಷರ ಗಾತ್ರ : | |

Prajavani

‘ಗುರೂ... ಎಲ್ಲ ದೇವರಿಗೂ ಒಂದೊಂದು ಆಯುಧ ಅದಾವಂತೆ. ನಮ್ಮ ರಾಜಕಾರಣಿಗಳ ಆಯುಧ ಯಾವುದು’ ತೆಪರೇಸಿ ಪ್ರಶ್ನೆಗೆ ನಕ್ಕ ಗುಡ್ಡೆ ‘ಮಂಗ್ಯಾ ಅದೂ ಗೊತ್ತಿಲ್ಲೇನ್ಲೆ, ‘ನಾಲಿಗೆ’ ಅಂದ.

‘ಬರೀ ನಾಲಿಗೆ ಅಲ್ಲ, ಎಲುಬಿಲ್ಲದ ನಾಲಿಗೆ ಅನ್ನು’ ದುಬ್ಬೀರ ತಿದ್ದಿದ.

‘ಯಾಕೆ ಕೇಳಿದೆ ಅಂದ್ರೆ ದಸರಾ ಬಂತಲ್ಲ, ಎಲ್ರೂ ತಮ್ಮ ತಮ್ಮ ಆಯುಧ ತಿಕ್ಕಿ ತೊಳ್ಕಳೋ ತರ ಈ ರಾಜಕಾರಣಿಗಳು ಗಬ್ಬು ನಾರೋ ತಮ್ಮ ನಾಲಿಗೆಗಳನ್ನ ಯಾಕೆ ತಿಕ್ಕಿ ತೊಳ್ಕಾಬಾರ್ದು ಅಂತ’ ತೆಪರೇಸಿಗೆ ಕೋಪ.

‘ಕರೆಕ್ಟ್ ಕಣಲೆ ತೆಪರ, ಈ ರಾಜಕಾರಣಿಗಳು ಏನ್ ಮಾತಾಡ್ತರಲೆ, ಹೆಣ್ಮಕ್ಕಳನ್ನ ‘ಐಟಂ’ ಅಂತಾರೆ. ತಮಗೆ ಆಗದೋರ‍್ನ ‘ಮೀರ್ ಸಾದಿಕ್’ ಅಂತಾರೆ. ಅಷ್ಟೆ ಯಾಕಪ ಮೊನ್ನೆ ನಮ್ಮ ‘ನಮೋ’ ಸಾಹೇಬ್ರನ್ನ ಯಾರೋ ತಿರುಪತಿ ತಿಮ್ಮಪ್ಪಂಗೆ ಹೋಲಿಸಿದ್ರು. ಯಾಕೆ?’ ದುಬ್ಬೀರ ಕೇಳಿದ.

‘ಯಾಕೇಂದ್ರೆ ತಿಮ್ಮಪ್ಪನ ಹುಂಡಿಗೆ ಬಿದ್ದ ಹಣ, ನಮೋ ಹುಂಡಿಗೆ ಬಿದ್ದ ಜಿಎಸ್‌ಟಿ ರೊಕ್ಕ ಎರಡೂ ವಾಪಸ್ ಬರಲ್ಲಲ್ಲ ಅದ್ಕೆ...’ ಗುಡ್ಡೆ ನಕ್ಕ.

‘ಅದಿರ‍್ಲಿ, ರಾಜಾಹುಲೀನ ಮನೆಗೆ, ಹುಲಿಯಾ ಸಾಹೇಬ್ರನ್ನ ಕಾಡಿಗೆ ಕಳಿಸ್ತೀವಿ ಅಂತ ಮೊನ್ನೆ ಯಾರೋ ಎಗರಾಡ್ತಿದ್ರು?’ ಕೊಟ್ರೇಶಿ ವಿಷಯ ಬದಲಾಯಿಸಲು ನೋಡಿದ.

‘ಯಾರು ಯಾರನ್ನ ಎಲ್ಲಿಗಾದ್ರೂ ಕಳಿಸ್ಲಿ ಬಿಡಲೆ, ಎಲ್ಲ ಸೇರಿ ಮತದಾರರನ್ನ ವನವಾಸಕ್ಕೆ ಕಳ್ಸೋದಂತೂ ಗ್ಯಾರಂಟಿ’ ಎಂದ ದುಬ್ಬೀರ, ‘ಲೇ ತೆಪರ, ಆಯುಧ ಪೂಜೆಗೆ ಎಲ್ಲ ರೆಡಿ ಮಾಡ್ಕಂಡೇನೋ?’ ಎಂದ.

‘ಅವನು ಪೂಜೆ ಮಾಡಲ್ಲ ಕಣಲೆ, ಮಾಡಿಸ್ಕಂತಾನೆ...’ ಗುಡ್ಡೆ ಕಿಸಕ್ಕೆಂದ.

‘ಲೇಯ್, ಏನೇನೋ ಪಿಂಕ್ಲಿ ಮಾತಾಡ್‍ಬ್ಯಾಡ, ನಮ್ಮನೇಲಿ ದಸರಾ-ಆಯುಧ ಪೂಜೆ ಎಲ್ಲ ಮಾಡಲ್ಲ...’ ತೆಪರೇಸಿಗೆ ಸಿಟ್ಟು ಬಂತು.

‘ನಾನೂ ಅದೇ ಹೇಳಿದ್ದು, ನಿನ್ ಹೆಂಡ್ತಿ ನಿಂಗೆ ದಿನಾ ಲಟ್ಟಣಿಗೆ ಪೂಜೆ ಮಾಡೋವಾಗ ಈ ಒಂದು ದಿನದ ಆಯುಧಪೂಜೆ ಯಾಕೆ ಬೇಕು?’ ಗುಡ್ಡೆ ಕೀಟಲೆಗೆ ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.