ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಶತಕಗಳ ಕಾಲವಿದು!

Published 8 ಅಕ್ಟೋಬರ್ 2023, 23:35 IST
Last Updated 8 ಅಕ್ಟೋಬರ್ 2023, 23:35 IST
ಅಕ್ಷರ ಗಾತ್ರ

ಬೆಕ್ಕಣ್ಣ ‘ಹೇ… ನೋಡಿಲ್ಲಿ… ಶತಕ ದಾಟಿತು’ ಎಂದು ಕುಣಿಯುತ್ತ ಖುಷಿಯಿಂದ ಕೂಗಿತು.

‘ನಿನಗೆ ಯಾವಾಗಿಂದ ಕ್ರಿಕೆಟ್‌ ಹುಚ್ಚು ಹಿಡಿಯಿತಲೇ?’

‘ಯಾಕಮ್ಮಾ… ಕ್ರಿಕೆಟ್ಟಿನಾಗೆ ಮಾತ್ರ ನಮ್ಮವರು ಶತಕ ಬಾರಿಸೂದು ಅಂತ ಮಾಡೀಯೇನ್‌? ನೀವು ಭಾರತೀಯ ಶ್ರೀಸಾಮಾನ್ಯರು ಮದ್ಲು ಕ್ರಿಕೆಟ್‌ ಹುಚ್ಚಿನಿಂದ ಹೊರಗೆ ಬರ‍್ರಿ’ ಎಂದು ನನ್ನ ಮೂತಿಗೆ ತಿವಿದ ಬೆಕ್ಕಣ್ಣ, ‘ಏಷ್ಯನ್‌ ಗೇಮ್ಸ್‌ ನಡೆದಾವು, ಅದರ ಖಬರೈತೇನ್‌ ನಿನಗ? ಈ ಸಲ ನಮ್ಮವರು ತಗಂಡ ಒಟ್ಟು ಪದಕಗಳ ಸಂಖ್ಯೆ ಶತಕ ದಾಟಿತು’ ಎಂದಿತು.

‘ಹೌದು ಮತ್ತ… ನಮ್‌ ಮಧ್ಯಮವರ್ಗದ ತಂದಿತಾಯಿಗಳು ತಮ್ಮ ಮಕ್ಕಳು ಆಟ ಆಡತಾರ ಅಂದ್ರ ಜಿಂದಗಿ ವೇಸ್ಟ್‌ ಅಂತ ಕೊರಗತಾರ. ಅಂತಾದ್ರಾಗೆ ಇದ್‌ ಎಷ್ಟ್‌ ಸ್ಫೂರ್ತಿಯ ವಿಚಾರ ಹೌದಿಲ್ಲೋ’ ಎಂದೆ ನಾನೂ ಖುಷಿಯಿಂದ.

‘ಅದೇ ಮತ್ತ… ನಮ್ಮ ಮೋದಿಮಾಮಾರು ಆಟಗಾರರಿಗೆ ಎಷ್ಟ್ ಸ್ಫೂರ್ತಿ ತುಂಬ್ಯಾರ! ಅವರು ಪ್ರಧಾನಿಯಾದಾಗಿಂದ ವರ್ಸದಿಂದ ವರ್ಸಕ್ಕೆ ಪದಕಗಳ ಸಂಖ್ಯೆ ಏರಿಕೋತ ಹೋಗಿ, ಈಗ ಶತಕ ದಾಟಿತು’ ಎಂದು ಮೋದಿಮಾಮನೇ ಪದಕ ಗೆದ್ದಂತೆ ಸಂಭ್ರಮದಲ್ಲಿ ವದರಿತು.

‘ಶತಕ ದಾಟಿದ್ದು ಅದೊಂದೇ ಅಲ್ಲಲೇ... ತಮಗ ಬ್ಯಾಡಾದ ಪತ್ರಕರ್ತರ ಮ್ಯಾಗೆ ಇ.ಡಿ. ದಾಳಿ ನಡೆಸತಾರಲ್ಲ, ಅದೂ ಈಗ ಶತಕ ದಾಟಿರಬಕು’ ಎಂದೆ.

‘ನೀ ಎಲ್ಲಿಂದ ಎಲ್ಲಿಗಾರೆ ಸಂಬಂಧ ಕಲ್ಪಿಸಬ್ಯಾಡ. ಹೊಗೆ ಇಲ್ಲದೆ ಬೆಂಕಿ ಏಳಂಗಿಲ್ಲ. ಅನುಮಾನ ಇದ್ದವರ ಮ್ಯಾಗೆ ಇ.ಡಿ. ದಾಳಿ ಮಾಡತಾರ, ಅದರಾಗೆ ತಪ್ಪೇನ್‌ ಐತಿ?’ ಬೆಕ್ಕಣ್ಣ ಗುರುಗುಟ್ಟಿತು.

‘ಈ ಅನುಮಾನ ಯಾವಾಗಲೂ ಪ್ರಶ್ನೆ ಮಾಡೋವರ ಮ್ಯಾಗೆ, ವಿರೋಧ ಪಕ್ಷದವರ ಮ್ಯಾಗೆ ಎದಕ್ಕ ಏಳತೈತಿ?’

‘ಹೌದು ಮತ್ತ… ಆಡಳಿತ ಪಕ್ಷದವರು, ಗುಣಗಾನ ಮಾಡೋ ಮಾಧ್ಯಮಗಳು ಯಾವತ್ತಿದ್ದರೂ ಕಮಲಕ್ಕನ ಮನೆಯವರ ಕಣ್ಮಣಿಗಳೇ ಅಲ್ಲೇನು’ ಬೆಕ್ಕಣ್ಣ ಹ್ಹೆಹ್ಹೆಗುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT