ಭಾನುವಾರ, ಸೆಪ್ಟೆಂಬರ್ 27, 2020
21 °C
ಅಯ್ಯಪ್ಪ ಮೂರ್ತಿ ಶಿಲ್ಪ ನೆಲೆ– ಹಿನ್ನೆಲೆ

ಶಬರಿಮಲೆ ಶಾಸ್ತ: ಇಲ್ಲಿದೆ ಅಯ್ಯಪ್ಪನ ಸಮಗ್ರ ಇತಿ ವೃತ್ತಾಂತ

ಎಸ್.ಕೆ. ರಾಮಚಂದ್ರ ರಾವ್ Updated:

ಅಕ್ಷರ ಗಾತ್ರ : | |

ಬಹುಶ್ರುತ ವಿದ್ವಾಂಸ ಸಾ.ಕೃ.ರಾಮಚಂದ್ರರಾವ್ ಅವರ ‘ಮೂರ್ತಿಶಿಲ್ಪ ನೆಲೆ–ಹಿನ್ನೆಲೆ’ ಕೃತಿಯಲ್ಲಿರುವ ‘ಶಾಸ್ತ–ಅಯ್ಯಪ್ಪ’ ಅಧ್ಯಾಯವನ್ನು ಇಲ್ಲಿ ಪ್ರಕಟಿಸಿದ್ದೇವೆ. ಇಂದು ಅಯ್ಯಪ್ಪನೆಂದು ಜನಪ್ರಿಯವಾಗಿರುವ ದೇವತೆಯ ಬುಡಕಟ್ಟು, ಆಗಮ, ಇತಿಹಾಸ ಮತ್ತು ಶಾಸ್ತ್ರೀಯ ಹಿನ್ನೆಲೆ–ಆಚರಣೆಯ ಸಮಗ್ರ ಮಾಹಿತಿ ನೀಡುವ ಅಪರೂಪದ, ಸುಮಾರು 5500 ಪದಗಳ ಸುದೀರ್ಘ ಬರಹ ಇದು. ಈ ಬರಹ ಏಕೆ ಪ್ರಸ್ತುತ ಎಂದು ವಿವರಿಸಿದ್ದಾರೆ ಎಸ್.ಸೂರ್ಯಪ್ರಕಾಶ್ ಪಂಡಿತ್.

---

‘ಶಾಸ್ತ–ಅಯ್ಯಪ್ಪ’ ಈಗೇಕೆ ಪ್ರಸ್ತುತ?

ಶಬರಿಮಲೆಯ ಅಯ್ಯಪ್ಪನ ದೇವಸ್ಥಾನ ಈಗ ದೇಶದಾದ್ಯಂತ ಸುದ್ದಿಯಲ್ಲಿದೆ. ಮಹಿಳೆಯರಿಗೂ ಅಯ್ಯಪ್ಪನ ದರ್ಶನಕ್ಕೆ ಅವಕಾಶವನ್ನು ನೀಡಬೇಕೆಂದು ಸುಪ್ರೀಂ ಕೋರ್ಟ್‌ ತೀರ್ಪನ್ನು ನೀಡಿದ ಬಳಿಕ ಪರ–ವಿರೋಧಗಳ ಹೋರಾಟ ಹೆಚ್ಚಾಗಿದೆ. ಸ್ತ್ರೀಯರೂ ಪುರುಷರಂತೆ ಸಮಾನರು; ಹೀಗಾಗಿ ಅವರಿಗೂ ದೇವಾಲಯವನ್ನು ಪ್ರವೇಶಿಸುವ ಹಕ್ಕಿದೆ – ಎಂಬುದು ಕೋರ್ಟಿನ ತೀರ್ಪನ್ನು ಸ್ವಾಗತಿಸುವವರ ವಾದ. ಅಯ್ಯಪ್ಪನ ದೇವಾಲಯದಲ್ಲಿ ಮಹಿಳೆಯರಿಗೆ ಸಂಪೂರ್ಣ ನಿಷೇಧವಿಲ್ಲ; ನಿರ್ದಿಷ್ಟ ವಯೋಮಾನದವರಿಗೆ ಮಾತ್ರವೇ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ನಿರ್ಬಂಧಕ್ಕೂ ದೇವಾಲಯದ ಆಚರಣೆಗೂ ಸಂಬಂಧವಿದೆ. ಈ ನಿರ್ಬಂಧವನ್ನು ಮುರಿಯುವುದು ಎಂದರೆ ಅಲ್ಲಿಯ ಪೂಜಾಪದ್ಧತಿಗೇ ಅಪಚಾರ ಮಾಡಿದಂತೆ – ಎನ್ನುವುದು ತೀರ್ಪಿನ ವಿರೋಧಿಗಳ ವಾದ. ಈ ಎರಡು ವಾದಗಳಲ್ಲಿರುವ ಸತ್ಯಾಂಶವೆಷ್ಟು? ಇದನ್ನು ನಿರ್ಧರಿಸುವವರು ಯಾರು? ಈ ಹಿನ್ನೆಲೆಯಲ್ಲಿ ಪ್ರೊ.ಸಾ.ಕೃ. ರಾಮಚಂದ್ರರಾವ್‌ ಅವರ ಪ್ರಬಂಧವನ್ನು ಇಲ್ಲಿ ಪ್ರಕಟಿಸಲಾಗಿದೆ.


ಸಾ.ಕೃ.ರಾಮಚಂದ್ರರಾವ್

ಭಾರತದಲ್ಲಿ ಸಾವಿರಾರು ದೇವಾಲಯಗಳಿವೆ; ನೂರಾರು ದೇವತೆಗಳಿಗೆ ಪೂಜೆ ಸಲ್ಲುತ್ತಿವೆ. ಒಂದು ದೇವಾಲಯದಲ್ಲಿದ್ದಂತೆ ಇನ್ನೊಂದು ದೇವಾಲಯದಲ್ಲಿ ಪೂಜೆ ಇರಲೇಬೇಕೆಂಬ ವಿಧಿಯೇನಿಲ್ಲ; ಒಬ್ಬೊಬ್ಬ ದೇವರಿಗೂ ಒಂದೊಂದು ಬಗೆಯಲ್ಲಿ ಪೂಜೆ–ಆರಾಧನೆಗಳು ನಡೆಯುವುದುಂಟು. ದೇವಾಲಯಗಳಲ್ಲಿ ನಡೆಯುವ ಕಲಾಪಗಳಿಗೆ ಆಗಮ–ತಂತ್ರಶಾಸ್ತ್ರಗಳ ಹಿನ್ನೆಲೆಯಿರುತ್ತದೆ. ಇಷ್ಟು ಮಾತ್ರವಲ್ಲದೆ, ಸ್ಥಳೀಯ ಐತಿಹ್ಯವೂ ಪುರಾಣಗಳ ಕಥನಗಳೂ ಅಲ್ಲಿಯ ಆಚರಣೆಗಳನ್ನು ಪ್ರಭಾವಿಸಿರುತ್ತವೆ. ಹೀಗಾಗಿ ದೇಶದ ಉದ್ದಕ್ಕೂ ಎಲ್ಲ ಆಲಯಗಳಲ್ಲೂ ಒಂದೇ ವಿಧದ ಧಾರ್ಮಿಕ ಕಲಾಪಗಳು ನಡೆಯುತ್ತವೆ ಎನ್ನುವುದು ಸರಿಯಾಗದು. ಇಲ್ಲಿ ಇನ್ನೊಂದು ವಿಷಯವನ್ನೂ ಮರೆಯುವಂತಿಲ್ಲ. ಭಾರತದಲ್ಲಿ ದೇವಾಲಯಗಳ ಕಲ್ಪನೆಯಲ್ಲೂ ದೇವತೆಗಳ ಕಲ್ಪನೆಯಲ್ಲೂ ಹಲವು ಆಯಾಮಗಳ ಚಿಂತನೆಗಳು ಸೇರಿಕೊಂಡಿವೆ. ಇವುಗಳಲ್ಲಿ ವೇದಗಳು, ಆಗಮ–ತಂತ್ರಶಾಸ್ತ್ರಗಳು, ಪೌರಾಣಿಕ ಕಥನಗಳು, ಜಾನಪದೀಯ ನಂಬಿಕೆಗಳು ಪ್ರಧಾನವಾದವು. ಈ ಪ್ರಭಾವಗಳು ಕೇವಲ ಮೂರ್ತವಾದ ರೀತಿಯಲ್ಲಿ ಮಾತ್ರವಲ್ಲದೆ, ತಾತ್ವಿಕ ಆಯಾಮಗಳಲ್ಲೂ ಪ್ರಕಟವಾಗುತ್ತಿರುತ್ತವೆ. ಆದುದರಿಂದ ಏಕಸೂತ್ರವೊಂದರಿಂದ ಎಲ್ಲ ದೇವಾಲಯಗಳ ಆಚಾರ–ವಿಚಾರಗಳನ್ನು ವಿಶ್ಲೇಷಿಸಲಾಗದು. ಆಗಮಗಳೇ ಹತ್ತಾರಿವೆ; ತಂತ್ರಪ್ರಕ್ರಿಯೆಗಳು ಕೂಡ ಹಲವು. ದೇವತೆಗಳ ಕಲ್ಪನೆಯಲ್ಲೂ ಸಾವಿರಾರು ವಿವರಗಳು.

ಉದಾಹರಣೆಗೆ, ವಿನಾಯಕನನ್ನು ಬ್ರಹ್ಮಚಾರಿ ಎಂದೂ ಪೂಜಿಸಲಾಗುತ್ತದೆ; ಅವನಿಗೆ ಸಿದ್ಧಿ–ಬುದ್ಧಿ ಎಂಬ ಹೆಂಡತಿಯರು ಎಂದೂ ಹೇಳಲಾಗುತ್ತದೆ. ಒಂದೆಡೆ ಶಿವ–ಪಾರ್ವತಿಯರು ಒಂದಾಗಿ ಇದ್ದರೆ, ಇನ್ನೊಂದು ದೇವಾಲಯದಲ್ಲಿ ಗಂಡನಲ್ಲಿ ಕೋಪಗೊಂಡು ನೆಲೆನಿಂತ ಪಾರ್ವತಿಯನ್ನು ನೋಡುತ್ತೇವೆ. ಎಂದರೆ ಭಾರತೀಯ ದೇವತೆಗಳ ಕಲ್ಪನೆಯಲ್ಲೂ ಆಚರಣೆಗಳಲ್ಲೂ ಅನಂತ ವೈವಿಧ್ಯಗಳಿವೆ. ಈ ಎಲ್ಲ ಕಲ್ಪನೆ–ಆಚರಣೆಗಳೂ ಯಾವುದೋ ಒಂದು ಕಾಲದಲ್ಲಿಯೇ ಕಾಣಿಸಿಕೊಂಡವು ಎಂದೂ ಹೇಳಲಾಗದು. ಉದಾಹರಣೆಗೆ, ಇಂದು ತುಂಬ ಪ್ರಸಿದ್ಧವಾಗಿರುವ ಸತ್ಯನಾರಾಯಣಪೂಜಾವಿಧಿ ಪ್ರಾಚೀನ ವಿಧಿ–ವಿಧಾನವೇನಲ್ಲ; ಅದು ಇತ್ತೀಚೆಗೆ ಸೇರ್ಪಡೆಯಾಗಿರುವ ಪೂಜಾಪದ್ಧತಿ. ಆದರೆ ಅಲ್ಲಿ ಆಚರಿಸುವ ವಿಧಿ–ವಿಧಾನಗಳಿಗೆ ತಂತ್ರಾಗಮಗಳ ಬೆಂಬಲವಿರುತ್ತದೆ.

ಹೀಗೆಯೇ ಶಬರಿಮಲೆಯ ಅಯ್ಯಪ್ಪನ ಕಲ್ಪನೆಯಲ್ಲೂ, ಅವನ ಪೂಜಾ ವಿಧಿ–ವಿಧಾನಗಳಲ್ಲೂ ಹಲವು ವಿವರಗಳು ಬೆರೆತುಕೊಂಡಿವೆ. ಅದರಲ್ಲಿ ಪುರಾಣದ ಕಥೆಯಿದೆ, ಜಾನಪದೀಯ ನಂಬಿಕೆಗಳಿವೆ, ತಾತ್ವಿಕವಾದ ಆಯಾಮವೂ ಇದೆ. ತಂತ್ರಾಗಮಗಳ ಪ್ರಸಕ್ತಿಯೂ ಇದೆ. ಇವೆಲ್ಲ ಸೇರಿಕೊಂಡು ಒಂದು ಪೂಜಾಪದ್ಧತಿ ರೂಪುಗೊಳ್ಳುವ ಪ್ರಕ್ರಿಯೆಗೆ ಆ ಕಾಲದ ಆವಶ್ಯಕತೆಯ ಜೊತೆಗೆ ಪ್ರಾಚೀನ ಕಲ್ಪಗಳ ಆದರ್ಶ–ತತ್ತ್ವಗಳೂ ಕಾರಣವಾಗಿರುತ್ತವೆ ಎನ್ನುವುದನ್ನು ಮರೆಯುವಂತಿಲ್ಲ.

ಅಯ್ಯಪ್ಪನ ಆಚರಣೆಯಲ್ಲಿ ಯೋಗದ ಪರಿಕಲ್ಪನೆಯಿದೆ; ಬ್ರಹ್ಮಚರ್ಯದ ಆದರ್ಶವಿದೆ; ತಾಂತ್ರಿಕ ಪರಿಕಲ್ಪನೆಗಳಿವೆ; ದೈವ ಎನ್ನುವುದು ಸ್ತ್ರೀ–ಪುರುಷ ಎಂಬ ವಿಂಗಡಣೆಯನ್ನು ಮೀರಿದ ತತ್ತ್ವ ಎಂಬ ಸಂದೇಶವಿದೆ; ಸಾವಿರಾರು ವರ್ಷಗಳ ಶ್ರದ್ಧೆಗೂ ಸದ್ಯದ ಅನಿವಾರ್ಯಕ್ಕೂ ತಾತ್ವಿಕತೆಯ ಏಕಸೂತ್ರದ ಮಾನಸಿಕತೆಯಿದೆ. ಈ ಎಲ್ಲ ವಿವರಗಳನ್ನು ಗಮನಕ್ಕೆ ತೆಗೆದುಕೊಂಡಾಗ ಮಾತ್ರವೇ ಪೂಜಾಪದ್ಧತಿಯ ಹಿಂದಿರುವ ಕಾರಣಭೂಮಿಕೆಯನ್ನು ಗ್ರಹಿಸಲಾದೀತು. ಹದಿನೆಂಟು ಮೆಟ್ಟಿಲು, ಮಾಲೆಯನ್ನು ಧರಿಸುವುದು, ವ್ರತಾಚರಣೆ, ಇರುಮುಡಿ – ಹೀಗೆ ಎಲ್ಲದಕ್ಕೂ ಪ್ರಾಚೀನ ಪರಂಪರೆಯ ತಾತ್ವಿಕತೆಗೂ ಸದ್ಯದ ಶ್ರದ್ಧೆಗೂ ನಂಟಿರುವುದು ಸ್ಪಷ್ಟವಾಗುತ್ತದೆ. ವಿವಾದದ ಕೇಂದ್ರವಾದ ಮಹಿಳೆಯರಿಗೆ ಪ್ರವೇಶದ ನಿರ್ಬಂಧವನ್ನೇ ಇಲ್ಲಿ ಚರ್ಚಿಸಬಹುದು. ಶಬರಿಮಲೆಯ ಅಯ್ಯಪ್ಪನ ಆಲಯಕ್ಕೆ ಎಲ್ಲ ಮಹಿಳೆಯರಿಗೂ ನಿಷೇಧವಿದೆ – ಎಂದು ಹೇಳುತ್ತಿರುವುದೇ ಸತ್ಯವಲ್ಲ. ಅಲ್ಲದೆ, ಈ ನಿರ್ಬಂಧಕ್ಕೆ ಮಹಿಳೆಯರ ಋತುಚಕ್ರವೇ ಕಾರಣ ಎನ್ನುವುದೂ ಪೂರ್ಣಸತ್ಯವಲ್ಲ. ದೇಶದಲ್ಲಿರುವ ಅಯ್ಯಪ್ಪನ ಉಳಿದ ಗುಡಿಗಳಲ್ಲಿ ಇಂಥ ನಿಷೇಧ ಇಲ್ಲ ಎನ್ನುವುದನ್ನೂ ನಿರ್ಲಕ್ಷಿಸುವಂತಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ‘ಅಯ್ಯಪ್ಪ’ ಎಂಬ ದೈವವೂ ಅವನ ಪೂಜಾ ವಿಧಿ–ವಿಧಾನಗಳ ಹಿಂದಿರುವ ಸಿದ್ಧಾಂತವೂ ವಿಚಾರಾರ್ಹವಾಗುತ್ತದೆ. ಆದರೆ ಈಗ ಪರ–ವಿರೋಧಗಳಲ್ಲಿ ನಿರತರಾದವರಾರೂ ಈ ಸಮಗ್ರ ದೃಷ್ಟಿಯಿಂದ ವಿಶ್ಲೇಷಣೆ ಮಾಡುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಹೀಗಾಗಿ ಇಲ್ಲಿ ಪ್ರೊ.ಸಾ.ಕೃ. ರಾಮಚಂದ್ರರಾವ್‌ ಅವರ ಪ್ರಬಂಧವನ್ನು ನೀಡುತ್ತಿದ್ದೇವೆ.

ಪ್ರೊ.ಸಾ.ಕೃ. ರಾಮಚಂದ್ರರಾವ್‌ ನಮ್ಮ ನಾಡು ಕಂಡಿರುವ ಶ್ರೇಷ್ಠ ವಿದ್ವಾಂಸರಲ್ಲಿ ಒಬ್ಬರು. ವೇದ–ಆಗಮ–ತಂತ್ರ–ಬೌದ್ಧ–ಜೈನ–ವೇದಾಂತ–ಚಿತ್ರ–ಶಿಲ್ಪ – ಹೀಗೆ ಹಲವು ವಿಷಯಗಳಲ್ಲಿ ಮುನ್ನೂರಕ್ಕೂ ಹೆಚ್ಚು ಕೃತಿಗಳನ್ನು ಬರೆದವರು. ಪ್ರಸ್ತುತ ಪ್ರಬಂಧದಲ್ಲಿ ಅವರು ಅಯ್ಯಪ್ಪನ ಕಲ್ಪನೆಯಲ್ಲಿರುವ ಜಾನಪದೀಯ, ಪೌರಾಣಿಕ, ವೈದಿಕ, ತಾಂತ್ರಿಕ, ತಾತ್ವಿಕ ಆಯಾಮಗಳನ್ನು ಕುರಿತು ಚರ್ಚಿಸಿದ್ದಾರೆ. ಈ ವಿವರಗಳು ಶಬರಿಮಲೆಯ ಪ್ರಸ್ತುತ ವಿದ್ಯಮಾನವನ್ನು ಆರೋಗ್ಯಪೂರ್ಣವಾಗಿ ವಿಶ್ಲೇಷಿಸಲು ನೆರವಾಗುತ್ತದೆ ಎನ್ನುವುದು ನಮ್ಮ ಆಶಯ.

---

ಯಾರು ಈ ಅಯ್ಯಪ್ಪ?

ಸುಬ್ರಹ್ಮಣ್ಯನಂತೆ ಶಾಸ್ತನೂ ಶಿವನ ‍ಪರಿವಾರಕ್ಕೆ ಸೇರಿದ ದೇವತೆ. ಕೇರಳದಲ್ಲಿ ಸುಪ್ರಸಿದ್ಧನಾದ ಈ ದೇವತೆಯ ಪ್ರಸ್ತಾಪ ಅನುಬಂಧದಲ್ಲಿ ವಿವರವಾಗಿ ಬಂದಿದೆ. ತಮಿಳುದೇಶದಲ್ಲಿಯೂ ಕನ್ನಡನಾಡಿನಲ್ಲಿಯೂ ಈ ದೇವತೆಯ ಪೂಜೆ ನಡೆಯುತ್ತದೆ, ಇಲ್ಲೆಲ್ಲ ಇವನನ್ನು ಅಯ್ಯನ್, ಅಯ್ಯನಾರ್, ಅಯ್ಯಪ್ಪ, ಬೇಟೆ ಅಯ್ಯಪ್ಪ, ಮಲೆದೇವರು ಎಂದು ಕರೆಯುವುದು ವಾಡಿಕೆ. ಇವನು ಭೂತಗಳಿಗೆ ಒಡೆಯನೆಂದೂ, ಅವು ಜನರನ್ನು ಹಿಂಸಿಸದಂತೆ ತಡೆಯಲು ಇವನನ್ನು ಒಲಿಸಿಕೊಳ್ಳಬೇಕೆಂದೂ ಕಲ್ಪನೆಯಿದೆ. ಕಾಡಾನೆಯ ಮೇಲೆ ಅಥವಾ ಕುದುರೆಯ ಮೇಲೆ ಕುಳಿತು, ಕತ್ತಿಹಿಡಿದು ಬೆಟ್ಟಗುಡ್ಡಗಳಲ್ಲಿ, ಕಣಿವೆ ಕಂದಕಗಳಲ್ಲಿ ಸರಿರಾತ್ರಿಯ ವೇಳೆ ತನ್ನ ಗಣಗಳೊಡನೆ ಅಡ್ಡಾಡುತ್ತಿರುವ ಈ ದೇವತೆಯ ಬಗ್ಗೆ ಜನ ಭಕ್ತಿಯಿಂದಲೂ ಭಯದಿಂದಲೂ ನಡೆದು ಕೊಳ್ಳುತ್ತಾರೆ. ಅಯ್ಯಪ್ಪನ ಪರಿವಾರ ರಾತ್ರಿಯಲ್ಲಿ ಬರಿಯ ಪಂಜುಗಳನ್ನು ವೇಗವಾಗಿ ಸಾಗುತ್ತಿರುವಂತೆ ಕಾಣಿಸುವುದೆಂದೂ ಅದನ್ನು ಕಂಡವರು ಉಳಿಯುವುದಲ್ಲವೆಂದೂ ನಂಬಿಕೆ ಹರಡಿದೆ. ಇದನ್ನು ‘ಅಯ್ಯಪ್ಪನ ಕಾಣ್ಕೆ’ (ತಮಿಳಿನಲ್ಲಿ ಅಯ್ಯನ್ ಕಾಟ್ಜಿ) ಎಂದು ಕರೆಯುತ್ತಾರೆ. ಶತ್ರುನಾಶ, ಭೀತಿನಾಶ, ಅರ್ಥಲಾಭ, ಪುತ್ರಲಾಭ, ಗೌಳೀದೋಷ ಪರಿಹಾರ, ಸ್ತ್ರೀಮೋಹನ ಮೊದಲಾದ ಪ್ರಯೋಜನಗಳಿಗೆ ಅಯ್ಯಪ್ಪನ ಪೂಜೆ ನಡೆಯುತ್ತದೆ. ತುಂಬ ಕಾರಣಿಕವುಳ್ಳ ದೇವರು ಮಾತ್ರವಲ್ಲದೆ ಕರುಣೆಯನ್ನೂ ಉಳ್ಳ ದೇವತೆ.

ಭೂತನಾಥ ಸದಾನಂದ ಸರ್ವಭೂತದಯಾಪರ !

ರಕ್ಷ ರಕ್ಷ ಮಹಾಬಾಹೋ ಶಾಸ್ತ್ರೇ ತುಭ್ಯಂ ನಮೋ ನಮಃ !!

ಶಿವನ ಮತ್ತು ವಿಷ್ಣವಿನ ಮಗ (ಹರಿಹರಪುತ್ರ) ಎಂದು ಒಂದು ಕಲ್ಪನೆಯಾದರೆ, ಶಿವನ ಅವತಾರಗಳಲ್ಲಿ ಒಂದೆಂದು ಇನ್ನೊಂದು ಕಲ್ಪನೆ, ಇವನನ್ನು ಕ್ಷೇತ್ರಪಾಲನೆಂದೂ ಭೈರವನೆಂದೂ ಬಗೆದಿರುವುದುಂಟು. ಕೆಲವೆಡೆ ‘ಜಡೆಮುನಿ’, ‘ಮುನೀಶ್ವರ’ ದೈವಗಳನ್ನೂ ಅಯ್ಯಪ್ಪನೊಂದಿಗೆ ಸಮೀಕರಿಸಿರುವುದಿದೆ. ಊರಾಚೆ, ನದಿಯ ದಡದ ಮೇಲೆ ಅಥವಾ ಗುಡ್ಡದ ಮೇಲೆ, ಕಾಡಿನ ನಡುವೆ, ದೊಡ್ಡದೊಂದು ಮರದಡಿಯಲ್ಲಿ ಈ ದೇವತೆಯ ಗುಡಿಯಿರುವುದು ವಾಡಿಕೆ. ತಮಿಳಿನಲ್ಲಿ ಇವನನ್ನು ‘ಪುರ್ರಟ್ಟವನ್‘ (ಎಂದರೆ ಊರ ಹೊರಗೆ ವಾಸಿಸುವನು) ಎಂದೇ ಕರೆಯುತ್ತಾರೆ. ಇವನ ಗುಡಿ ಊರಿಗೆ ಸುಮಾರು ದೂರದಲ್ಲಿಯೇ ಇರುತ್ತದೆ.

ಊರವರು ದಿನವೂ ಇವನಿಗೆ ಎಡೆ ಒಪ್ಪಿಸುವ ಪದ್ಧತಿಯಿದೆ. ಹೆಂಡ, ಹಂದಿ, ಆಡು, ಕೋಳಿ ಇವನ್ನೂ ಬಲಿಯಾಗಿ ಇಡುವುದುಂಟು, ಸಾತ್ತ್ವಿಕಾಹಾರವನ್ನೂ ಅರ್ಪಿಸುವುದಿದೆ. ವರ್ಷಕ್ಕೊಮ್ಮೆ ಸುಗ್ಗಿಯ ಸುಮಾರಿಗೆ ಏಳುದಿನಗಳ ದೊಡ್ಡ ಉತ್ಸವವನ್ನೂ ವಿಜೃಂಭಣೆಯಿಂದ ನಡೆಸುತ್ತಾರೆ. ಆಗಾಗ ಹರಕೆ ಹೊತ್ತವರು ಮಣ್ಣಿನ ಆನೆ, ಕುದುರೆ, ಕೋಣ, ನಾಯಿಗಳ ಬೊಂಬೆಗಳನ್ನೂ ಮಾಡಿಸಿ ನಿಲ್ಲಿಸುತ್ತಾರೆ. ಮನೆಯಲ್ಲಿ ಅಥವಾ ಊರಿನಲ್ಲಿ ಏನಾದರೂ ಉಪದ್ರವವಿದ್ದರೆ, ಆತಂಕವಿದ್ದರೆ ಅಯ್ಯಪ್ಪನಿಗೆ ಹರಕೆ ಹೊರುತ್ತಾರೆ. ತಮಿಳಿನಾಡಿನ ಕಡೆ ಮಳೆ ಬೀಳದೆ ಬರಗಾಲ ಬರುವಂತಿದ್ದರೆ ಹಳ್ಳಿಯವರು ‘ಪರಿ ಅಡಪ್ಪು’ ಎಂಬ ಉತ್ಸವವನ್ನು ನಡೆಸುತ್ತಾರೆ. ಹಳ್ಳಿಯವರೆಲ್ಲ ಹಿರಿಯ ಹೆಂಗಳೆಯೊಬ್ಬಳನ್ನು ಮುಂದೆ ಮಾಡಿಕೊಂಡು ಕುಂಬಾರನ ಮನೆಯಲ್ಲಿ ಮಾಡಿದ ಮಣ್ಣಿನ ಆನೆ ಕುದುರೆಗಳನ್ನು ಮೆರವಣಿಗೆಯಲ್ಲೊಯ್ದು ಊರ ಹೊರಗಿನ ಅಯ್ಯಪ್ಪನ ಗುಡಿಗೆ ಹೋಗುತ್ತಾರೆ. ಹಿರಿಯ ಹೆಂಗಳೆ ತಲೆ ಮೇಲೆ ಹೆಂಡದ ಗಡಿಗೆಯನ್ನು (ಮದುಕ್ಕುಡಂ) ಹೊತ್ತು ಬರುವುದು ವಿಶೇಷ, ಅಯ್ಯಪ್ಪನಿಗೆ ಸಲ್ಲುವ ಕಾಣಿಕೆ ಇದು.

ಕಾಡುಜನರ ಬೆಟ್ಟದೈವವನ್ನು ಪುರಾಣಕಾರರೂ ಪರಿಗ್ರಹಿಸಬೇಕಾಯಿತು, ಜನರ ನಡುವೆ ಈ ದೈವದ ಪ್ರಭಾವ ಅಷ್ಟಿದ್ದಿತು. ಪಟ್ಟಣದ ಜನರೂ, ಇತರ ದೇಶಗಳವರೂ ಪುರಸ್ಕರಿಸುವ ದೇವತಾಗೋಷ್ಠಿಯಲ್ಲಿ ಇದಕ್ಕೂ ಒಂದು ಸ್ಥಾನವನ್ನು ಕಲ್ಪಿಸಬೇಕಾಯಿತು. ದ್ರಾವಿಡ ದೇವತೆಗಳಾದ ಗಣೇಶ, ಕಾರ್ತಿಕೇಯರಂತೆ ಇವನನ್ನೂ ಶಿವನ ಮಗನೆಂದು ಎಣಿಸುವುದು ಸುಲಭವೆನಿಸಿತು. ಗಣೇಶನು ಭೂತನಾಥ, ಭೂತಸಂಸೇವಿತ, ಶಾಸ್ತನು ಭೂತನಾತನೇ, ಭೂತಸಂಸೇವಿತನೇ, ಗಣೇಶನು ಭೂತಗಳ, ಶಿವಗಣಗಳ ಒಡೆಯನಾದಂತೆ ಕಾರ್ತಿಕೇಯನೂ ಸೇನಾಪತಿ, ಸೇನಾನಿ, ಶಾಸ್ತನೂ ಗಣನಾಥನೇ. ಶಿವನ ಪಡಿಯಚ್ಚಿನಲ್ಲೇ ಗಣೇಶನು ಸಿದ್ಧನಾದಂತೆ ಶಾಸ್ತನನ್ನೂ ಸಿದ್ಧಗೊಳಿಸಿದರು. ಅವನನ್ನೂ ‘ಶಂಭೋಸ್ಸುತ’ನೆಂದೂ ‘ಉಮಾಸುತ’ನೆಂದೂ ವ್ಯವಹರಿಸಿದರು.

ಗಣೇಶನ ಜನನದಲ್ಲಿಯೂ ಕಾರ್ತಿಕೇಯನ ಜನನದಲ್ಲಿಯೂ ರಹಸ್ಯವಿದ್ದಂತೆಯೇ ಶಾಸ್ತನ ಜನನವೂ ರಹಸ್ಯವಾಗಿ ಉಳಿಯಿತು. ಗಣೇಶನೇನು ಶಿವ–ಪಾರ್ವತಿಯರ ಸಂಭೋಗದ ಫಲವಲ್ಲವಷ್ಟೆ, ಕಾರ್ತಿಕೇಯನೂ ಹಾಗೆಯೇ. ಅವನ ಜನನದಲ್ಲಿ ಅಗ್ನಿ, ಸಪ್ತಮಾತೃಕೆಯರು, ಶರವಣ ಎಲ್ಲರ ಪಾತ್ರವೂ ಇದೆ. ಶಾಸ್ತನ ಹುಟ್ಟಿಗೂ ಪಾರ್ವತಿಯ ಅಗತ್ಯವಿಲ್ಲದೆ ಶಿವನೊಬ್ಬನೇ ಕಾರಣವೆಂಬ ಕಲ್ಪನೆ ಬಂದುದು ಸಹಜವೇ.

ಆದರೆ ಶಾಸ್ತನು ಆರ್ಯಸಂಸ್ಕೃತಿಯಲ್ಲಿ ಸ್ವೀಕೃತವಾದ ಸಮಯದಲ್ಲಿ ಶಿವ, ವಿಷ್ಣು ಈ ಎರಡು ದೇವತೆಗಳ ತಾದಾತ್ಮ್ಯವನ್ನು ಹೇಳಿ, ಶೈವ–ವೈಷ್ಣವ ಪಂಥಗಳ ಸಮನ್ವಯವನ್ನು ಸಾಧಿಸುವ ಪ್ರಯತ್ನ ನಡೆಯುತ್ತಿದ್ದಿತೆಂದು ಕಾಣುತ್ತದೆ. ಹರಿಹರ, ಶಂಕರನಾರಾಯಣ, ಶಿವವಿಷ್ಣು ಈ ಕಲ್ಪನೆ ಇಂಥ ಪ್ರಯತ್ನದ ಫಲವೇ. ಹೊಸದಾಗಿ ಪ್ರವೇಶ ಮಾಡಿದ ಶಾಸ್ತನನ್ನು ಇವರಿಬ್ಬರ ಮಗನೆಂದೂ ಪರಿಗಣಿಸುವುದು ಸಂದರ್ಭೋಚಿತವಾಯಿತು. ಶೈವ, ವೈಷ್ಣವ ಪಂಥಗಳೆರಡಕ್ಕೂ, ಗ್ರಾಹ್ಯವೆನಿಸಲೆಂದು ಶಾಸ್ತನನ್ನು ಹರಿಹರಪುತ್ರನೆಂದು ಕರೆದರು. ಇದಕ್ಕೆ ನೆರವಾಗುವ, ಇದನ್ನು ಸಮರ್ಥಿಸುವ ಕಥೆಗಳು ಮೂಡಿಬರಲು ಹೆಚ್ಚು ಸಮಯ ಬೇಕಾಗಲಿಲ್ಲ.

ಭಾಗವತ ಪುರಾಣ, ಬ್ರಹ್ಮಾಂಡಪುರಾಣ, ಸುಪ್ರಭೇದಾಗಮಗಳಲ್ಲಿ ಮೋಹಿನಿಭಸ್ಮಾಸುರ ಕಥೆಯಲ್ಲಿ ಶಾಸ್ತನನ್ನು ಅಳವಡಿಸಿದ್ದಾರೆ. ತಾನು ಕೈಯಿಟ್ಟಿದ್ದೆಲ್ಲವೂ ಬೂದಿಯಾಗಬೇಕೆಂದು ಶಿವನಿಂದ ವರ ಪಡೆದ ಭಸ್ಮಾಸುರ ಶಿವನನ್ನೇ ಪರೀಕ್ಷೆ ಮಾಡಲು ಹೊರಡಲು ಶಿವ ಅವನಿಂದ ತಪ್ಪಿಸಿಕೊಂಡು ಓಡಿ ಕೊಳವೊಂದರಲ್ಲಿ ಅಡಗಿಕೊಂಡು, ವಿಷ್ಣುವಿನಲ್ಲಿ ಮೊರೆಯಿಡುತ್ತಾನೆ. ವಿಷ್ಣು ಮೋಹಿನಿಯಂತೆ ಮೈಮರೆಸಿಕೊಂಡು ಬಂದು, ಭಸ್ಮಾಸುರನ ಕಾಮವನ್ನು ಕೆಣಕಿ, ತನ್ನನ್ನು ಆಲಂಗಿಸುವ ಮೊದಲು ಸಾಯಂಸಂಧ್ಯೆಯನ್ನು ಮುಗಿಸಿ ಬರುವಂತೆ ಹೇಳುತ್ತಾನೆ. ಸಾಯಂಸಂಧ್ಯೆಯ ಮುನ್ನ ಸ್ನಾನಮಾಡಲು ಆಸುರ ತಲೆಗೆ ಎಣ್ಣೆ ಬಳಿದುಕೊಳ್ಳಲು ಆರಂಭಿಸಿ, ತನ್ನ ಕೈಕೆಳಗೆ ತಾನೇ ಸಿಕ್ಕು ಬೂದಿಯಾಗುತ್ತಾನೆ. ವರದ ಫಲ ಹೀಗೆ ಅವನನ್ನು ಮುಗಿಸಿದ ಮೇಲೆ, ಕೊಳದಿಂದ ಮೇಲೆದ್ದು ಬಂದ ಶಿವ ಮೋಹಿನೀರೂಪದಲ್ಲಿದ್ದ ವಿಷ್ಣುವನ್ನು ನೋಡಿ ಕಾಮಾತುರನಾಗುತ್ತಾನೆ. ಅವರಿಬ್ಬರ ಸಂಭೋಗದ ಫಲವಾಗಿ ಶಾಸ್ತನ ಉದಯವಾಗುತ್ತದೆ.


ಬೆಂಗಳೂರಿನಲ್ಲಿ ಅಯ್ಯಪ್ಪಪೂಜೆ (ಚಿತ್ರ: ರಂಜು ಪಿ.)

ಮೋಹಿನಿಯನ್ನು ಅಮೃತಮಂಥನ ಸಂದರ್ಭದಲ್ಲಿ ಕಾಣಿಸುವ ಕಥೆಯೂ ಪುರಾಣಗಳಲ್ಲಿದೆ. ಕಾಲಕೂಟ ವಿಷವನ್ನು ಶಿವ ಕುಡಿದ ಮೇಲೆ ಸಮುದ್ರದಿಂದ ಅಮೃತ ಎದ್ದು ಬರಲು ಅದಕ್ಕಾಗಿ ದೇವ–ದಾನವರು ಸೆಣಸಾಡತೊಡಗಲು ವಿಷ್ಣು ಮೋಹಿನಿಯಂತೆ ಬಂದು ಅಮೃತ ಹಂಚಲು ಮೊದಲು ಮಾಡಿ ದಾನವರನ್ನು ವಂಚಿಸಿ ದೇವತೆಗಳನ್ನು ಅಮರರನ್ನಾಗಿ ಮಾಡಿದುದು ಈ ಕಥೆಯ ಮುಖ್ಯ ಘಟನೆ. ಪ್ರಾಸಂಗಿಕವಾಗಿ ಶಿವ–ಮೋಹಿನಿಯರ ಕೂಡಿಕೆಯೂ ಅಲ್ಲಿ ಬರುತ್ತದೆ.

ಇನ್ನೊಂದು ಕಥೆ ಮೋಹಿನೀ ಪ್ರಸಂಗದಷ್ಟು ಪ್ರಚಲಿತವಾಗಿಲ್ಲ. ದತ್ತಾತ್ರೇಯನು ಗಾಲವಋಷಿಯ ಮಗಳಾದ ಲೀಲೆಯನ್ನು ಮದುವೆಯಾದನು. ಲೀಲೆ ತುಂಬಾ ವಿಷಯಾಸಕ್ತೆ. ಯಾವಾಗಲೂ ರತಿಕ್ರೀಡೆ ಅವಳಿಗೆ ಬೇಕಾಗಿದ್ದಿತು. ಇದರಿಂದ ಬೇಸತ್ತ ದತ್ತಾತ್ರೇಯ ವಿರಕ್ತನಾಗಿ ಕಾಡಿಗ ಹೋಗುವ ಮನಸ್ಸು ಮಾಡಿದ, ಲೀಲೆ ತಡೆದಳು. ದತ್ತಾತ್ರೇಯನಿಗೆ ಸಿಟ್ಟುಬಂದು, ಎಮ್ಮೆಯಾಗೆಂದು ಶಪಿಸಿಬಿಟ್ಟ. ಮುಂದೆ ಲೀಲೆ ಕರಂಬವೆಂಬ ಎಮ್ಮೆ ರೂಪದ ರಾಕ್ಷಸನ ಮಗಳಾಗಿ ಹುಟ್ಟಿ ಮಹಿಷಿಯಾದಳು.

ದನುವೆಂಬ ದಾನವನಿಗೆ ರಂಬ, ಕರಂಬ ಎಂಬಿಬ್ಬರು ಮಕ್ಕಳು. ಅಣ್ಣ ರಂಬನ ಮಗ ಮಹಿಷಾಸುರ, ಅವನು ಹುಟ್ಟಿದ ಸಂದರ್ಭ ಹೀಗೆ. ಅಣ್ಣನು ಸುಡುವ ಬೆಂಕಿಯಲ್ಲಿಯೂ, ತಮ್ಮನು ಕತ್ತುದ್ದ ನೀರಿನಲ್ಲಿಯೂ ನಿಂತು ಅಗ್ನಿಯನ್ನು ಕುರಿತು ತಪಸ್ಸು ಮಾಡಿದರು. ಇವರ ತಪಸ್ಸಿಗೆ ಅಂಜಿ, ದೇವೇಂದ್ರನು ಮೊಸಳೆಯಂತೆ ಬಂದು ನೀರಿನಲ್ಲಿ ತಪಸ್ಸು ಮಾಡುತ್ತಿದ್ದ ಕರಂಬನನ್ನು ಕೊಂದು ಬಿಟ್ಟನು. ತಮ್ಮನು ತೀರಿಕೊಂಡುದಕ್ಕೆ ದುಃಖಪಟ್ಟ ರಂಬ ಆತ್ಮಹತ್ಯೆ ಮಾಡಿಕೊಳ್ಳಲು ತೊಡಗಿದ್ದಾಗ, ಅಗ್ನಿಯು ಪ್ರಸನ್ನನಾಗಿ ವರವನ್ನು ಬೇಡೆನ್ನಲು, ದೇವತೆಗಳಿಂದಲೂ ಮನುಷ್ಯರಿಂದಲೂ ದಾನವರಿಂದಲೂ ಕೊಲ್ಲಲ್ಪಡದಂಥ ಮಗನನ್ನು ಬೇಡುತ್ತಾನೆ.

ತಪಸ್ಸಿನಿಂದ ರಂಬ ಹಿಂದಿರುಗುತ್ತಿರುವಾಗ ತುಂಬ ಚೆನ್ನಾಗಿರುವ ಎಮ್ಮೆಯೊಂದನ್ನು ಕಂಡು ಮುಗ್ಧನಾಗಿ ತಾನು ಕೋಣದ ರೂಪವನ್ನು ಧರಿಸಿ ಎಮ್ಮೆಯೊಂದಿಗೆ ಕೂಡಿಕೊಂಡನು. ಇದನ್ನು ಕಂಡ ಒಂದು ಕಾಡುಕೋಣ ಸಿಟ್ಟಾಗಿ ರಂಬನ ಮೇಲೆರಗಿ ಕೊಂದಿತು. ಅಸುರನನ್ನು ಸುಡಲು ಸಿದ್ಧಪಡಿಸಿದ ಚಿತೆಗೇ ಈ ಎಮ್ಮೆಯೂ ಬಿದ್ದು ಪ್ರಾಣ ಕಳೆದುಕೊಂಡಿತು. ಈ ಚಿತೆಯಿಂದ ಹುಟ್ಟಿದವನೇ ಮಹಿಷಾಸುರ. ಮುಂದೆ ರಂಬನು ರಕ್ತಬೀಜನೆಂಬ ರಾಕ್ಷಸನಾಗಿ ಜನ್ಮ ತಳೆದನು. ಮಹಿಷಾಸುರನು ಬ್ರಹ್ಮನನ್ನು ಕುರಿತು ನೂರು ವರ್ಷ ತಪಸ್ಸು ಮಾಡಿ ತ್ರಿಮೂರ್ತಿಗಳಿಂದ ತನಗೆ ಸಾವು ಬರೆದಂತೆ ವರವನ್ನು ಪಡೆದು ಲೋಕಕಂಟಕನಾಗಲು ತ್ರಿಮೂರ್ತಿಗಳ ಸಮ್ಮಿಳಿತ ಶಕ್ತಿರೂಪಿಣಿಯಾಗಿ ದುರ್ಗೆ ಮಹಿಷಾಸುರನನ್ನು ಸೆಣಸಿ ಕೊಂದಳು.

ಕರಂಬನ ಮಗಳಾದ ಮಹಿಷಿ ತನ್ನ ದೊಡ್ಡಪ್ಪನ ಮಗ ಮಹಿಷಾಸುರನನ್ನು ದೇವತೆಗಳು ಕೂಡಿ ಕೊಂದರೆಂದು ಅವರ ಮೇಲೆ ಸೇಡು ತೀರಿಸಿಕೊಳ್ಳಲು ಬ್ರಹ್ಮನನ್ನು ಕುರಿತು ಉಗ್ರ ತಪಸ್ಸನ್ನು ಮಾಡಿದಳು. ಶಿವ ಮತ್ತು ವಿಷ್ಣು ಇವರಿಬ್ಬರೂ ಸಂಭೋಗಿಸಿದಾಗ ಹುಟ್ಟಿದ ಮಗನ ವಿನಾ, ಅವನು ಮನುಷ್ಯರಾಜನೊಬ್ಬನ ಬಳಿ ಹನ್ನೆರಡು ವರ್ಷ ಊಳಿಗ ಮಾಡಿದ ವಿನಾ ಯಾರಿಂದಲೂ ತನಗೆ ಸಾವು ಬರಬಾರದೆಂದು ಆಕೆ ಪಡೆದ ವರ. ಗಂಡಸರಾದ ಇವರಿಬ್ಬರ ಸಂಭೋಗ ಅಸಾಧ್ಯವೆಂದು ಆಕೆಯ ಎಣಿಕೆಯಿದ್ದಿತು, ಒಂದು ವೇಳೆ ಹೀಗೆ ಸಂತಾನವಾದರೂ ಇಷ್ಟು ಪ್ರಬಲ ದೇವತೆಗಳ ಮಗ ಮನುಷ್ಯನ ಬಳಿ ಊಳಿಗ ಮಾಡುವುದಂತೂ ಅಸಂಭವವಲ್ಲವೆ?

ಈ ಧೈರ್ಯದಿಂದ ಮಹಿಷಿ ಮೂರೂ ಲೋಕಗಳನ್ನು ಪೀಡಿಸತೊಡಗಿದಳು. ಆದರೆ ಅಮೃತಮಂಥನ ಸಂದರ್ಭದಲ್ಲಿ ಶಿವ–ಮೋಹಿನಿಯರು ಕೂಡಿಕೊಂಡು, ಮೋಹಿನಿಯ ಬಲತೊಡೆಯಿಂದ ಹುಟ್ಟಿದ ಶಾಸ್ತನು ಮಣಿಕಂಠನಾಗಿ ಪಂದಲಂರಾಜನ ಬಳಿ ಹನ್ನೆರಡು ವರ್ಷ ಊಳಿಗ ಮಾಡಿ ಮಹಿಷಿಯನ್ನು ಕೊಂದು ಲೋಕಕಲ್ಯಾಣಕ್ಕೆ ಕಾರಣನಾದನು. ಅವನು ಮಹಿಷಿಯನ್ನು ಕೊಂದು, ಕಳೇಬರವನ್ನು ಎಷುತ್ತ ಎಂಬ ಕಡೆ ಅಲಸಾ ನದಿಯ ದಡದ ಮೇಲೆ ಒಗೆದನಂತೆ. ಶಬರಿಮಲೆ ಯಾತ್ರಿಕರು ಇಲ್ಲಿಗೆ ಬಂದಾಗ ಎಷುತ್ತ ನದಿಯನ್ನು ಪೂಜಿಸುವ ವಾಡಿಕೆಯಿದೆ. ಎಮ್ಮೆಯ ಕಳೇಬರವನ್ನು ಸುಟ್ಟ ಸ್ಥಳ ಕಲ್ಲಿಡಂಕನ್ನು ಎಂದು ತೋರಿಸುತ್ತಾರೆ.

ಮಣಿಕಂಠನು ಮಹಿಷಿಯನ್ನು ಕೊಂದ ಬಳಿಕ, ಎಮ್ಮೆಯ ಮೈಯಿಂದ ಲೀಲೆ ತನ್ನ ಸ್ವರೂಪವನ್ನು ತಳೆದು ಹೊರಗೆ ಬಂದು ಮಣಿಕಂಠನನ್ನು ಮದುವೆಯಾಗೆಂದು ನಿರ್ಬಂಧಿಸಿದಳಂತೆ. ಶಬರಿಮಲೆ ಯಾತ್ರಿಕರಲ್ಲಿ ಯಾವುದಾದರೂ ವರ್ಷ ‘ಸರಂಕುಟ್ಟಿಯಲ್’ನಲ್ಲಿ ಆಲದ ಮರಕ್ಕೆ ಬಾಣ ಬಿಡುವ ‘ಕನ್ನಿ ಅಯ್ಯಪ್ಪ’ ಒಬ್ಬನೂ ಇರದಿದ್ದರೆ ಆ ವರ್ಷ ಲೀಲೆಯನ್ನು ಮದುವೆಯಾಗುವೆನೆಂದ ಮಣಿಕಂಠ ವಾಗ್ದಾನ ಮಾಡಿದನಂತೆ. ಆದರೆ ‘ಕನ್ನಿ ಅಯ್ಯ‍ಪ್ಪ’ಗಳ ಸಂಖ್ಯೆ ವರ್ಷವರ್ಷವೂ ಹೆಚ್ಚುತ್ತಲೇ ಬರುತ್ತಿದೆಯಾಗಿ ಲೀಲೆ ಇನ್ನೂ ಅವಿವಾಹಿತಳಾಗಿಯೇ ಇದ್ದಾಳೆಂದೂ, ‘ಸರಂಕುಟ್ಟಿಯಲ್’ ಎಂಬೆಡೆ ಆಕೆ ಕಾಯುತ್ತಿದ್ದಾಳೆಂದೂ ನಂಬಿಕೆ. ಮಣಿಕಂಠ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾನೆ! ಮಣಿಕಂಠನ ಪೇಚಾಟವನ್ನು ತಪ್ಪಿಸಲು ‘ಕನ್ನಿ ಅಯ್ಯಪ್ಪನ್‌’ಗಳು ‘ಸರಂಕುಟ್ಟಿಯಲ್’ನಲ್ಲಿ ಮರದೆಡೆ ಬಾಣಬಿಡುವ ಪದ್ಧತಿ ಉಳಿದುಬಂದಿದೆ.

ಹೀಗೆ ಶಾಸ್ತನಿಗೆ ಪುರಾಣಪ್ರಖ್ಯಾತಿ ಒದಗಿಬಂದಾಗ ಆಗಮಗಳೂ ಶಾಸ್ತನ ಕಲ್ಪನೆಯನ್ನು ಬರಮಾಡಿಕೊಂಡುವು. ಅಜಿತಾಗಮ, ಶಿಲ್ಪರತ್ನಶಾಸ್ತ್ರ, ಸರಸ್ಪತೀಯ ಚಿತ್ರಕರ್ಮಶಾಸ್ತ್ರ, ಈಶಾನಶಿವಾಚಾರ್ಯಪದ್ಧತಿ. ಸುಪ್ರಭೇದಾಗಮ, ಪೂರ್ವಕಾರಣಾಗಮಗಳಲ್ಲಿ ಪ್ರಾಸಂಗಿಕವಾಗಿ ಶಾಸ್ತನ ವರ್ಣನೆ, ಸ್ತುತಿಗಳು ಬರುತ್ತವೆ. ಶಾಸ್ತನನ್ನೇ ಕುರಿತ ಆಗಮಗ್ರಂಥಗಳೂ ಸಿದ್ಧವಾದುವು; ಕುಲಾಲಶಾಸ್ತ್ರಾಗಮ, ಶಾಸ್ತಾಪ್ರತಿಷ್ಠಾವಿಧಿ, ಶಾಸ್ತ, ಲಕ್ಷಣ. ಶಾಸ್ತ್ರವರ್ಣಸಹಸ್ರನಾಮಸ್ತ್ರೋತ್ರ ಮೊದಲಾದವು ನಿದರ್ಶನಗಳು. ಕುಲಾಲ ಶಾಸ್ತಾಗಮದಲ್ಲಿಯೂ ಈಶಾನಶಿವಾಚಾರ್ಯಪದ್ಧತಿಯ ಶಾಸ್ತಾಧ್ಯಾನಾನಿ ಎಂಬ ಪರಿಚ್ಛೇದದಲ್ಲಿಯೂ ಶಾಸ್ತನ ಉತ್ಪತ್ತಿಯ ವಿಚಾರವಾಗಿ ಕಥೆಗಳಿವೆ.

ಆಗಮಗಳಲ್ಲಿ ಶಾಸ್ತನನ್ನು ಹರಿಹರಪುತ್ರನೆಂದೇ ಬಗೆದಿದ್ದಾರೆ. ‘ಸುಯೌವನ’, ‘ಸುಲೀನಾಂಸ’, ‘ದಿವ್ಯರೂ‍ಪ’, ‘ಸರ್ವಾವಯವಸುಂದರ’, ‘ನಾಗಕೋಮಲವಿಸ್ತೀರ್ಣ’, ‘ಶೃಂಗಾರೋಚಿತವೇಶವಿಭ್ರಮಸುಖ’ ಮೊದಲಾದ ವಿಶೇಷಗಳು ಧ್ಯಾನಶ್ಲೋಕಗಳಲ್ಲಿ ಬರುತ್ತವೆ. ‘ಸರ್ವಕಾರುಣ್ಯಕರಣ’, ‘ಸಕಲವರದ’, ‘ಇಷ್ಟವರದ’ ಮೊದಲಾದ ಗುಣಗಳೂ ಉಲ್ಲೇಖಿಸಲ್ಪಟ್ಟಿವೆ. ಕುಲಾಲಶಾಸ್ತ್ರಾಗಮವು ‘ಸರ್ವಾಭೀಷ್ಟಫಲಪ್ರದಂ ಮಹಾ ಪಾತಕ ದೋಷಘ್ನಂ ಸರ್ವಕಾರ್ಯೇಷು ಸಿದ್ಧಿದಂ! ಆರೋಗ್ಯಂ ಚ ಫಲಂ ತತ್ರ ಪುತ್ರಶ್ರೀಕೀರ್ತಿವರ್ಧನಂ’ ಎಂದು ಫಲವನ್ನು ಹೇಳುತ್ತದೆ. ‘ಶಾಸ್ತಾರಂ ಶರಣಂ ವ್ರಜಾಮಿ ವರದಂ ತ್ರೈಲೋಕ್ಷರಕ್ಷಾರಕಂ’ ಎಂದೂ, ‘ಕಲಯೇ ಸದಾ ಹೃದಿ ಮಹಾಶಾಸ್ತಂ ತು ವಾಕ್‌ಸಿದ್ಧಯೇ’ ಎಂದೂ ‘ಶ್ರಿತಜನವರದಂ.... ಕ್ಲೇಶೋ ಧ್ಬ್ರಾಂತಿಪ್ರಣಾಶಂ.... ಸ್ವೌಮಿ ಶಾಸ್ತಾರಂ’ ಎಂದೂ ಶಾಸ್ತ್ರವರ್ಣಸಹಸ್ರನಾಮ ಸ್ತ್ರೋತ್ರದಲ್ಲಿ ಒಕ್ಕಣೆಗಳಿವೆ.

ತಮಿಳು ಭಾಷೆಯ ಪಿಂಗಳನಿಘಂಟುವಿನಲ್ಲಿ ಬರುವ ಶಾಸ್ತವರ್ಣನೆಯಲ್ಲಿ ‘ವೆಳ್ಳಾನೈಯ್ಯುಳ್ಳೋನ್’ (ಬಿಳಿಯಾನೆಯವನು), ‘ವೆಳ್ಳಾನೈವಾಹನನ್’ (ಶಾತವಾಹನ, ಶ್ವೇತಮಾತಂಗವಾಹನ), ‘ಚೆಂಡಾಯುದನ್’ (ಚೆಂಡು ಎನ್ನುವುದು ಬಾಗಿದ ಕೋಲು, ವಕ್ರದಂಡ) ಎಂಬ ವಿವರಗಳಿವೆ. ಚೂಡಾಮಣಿ ನಿಘಂಟು ‘ಚಾಟವಾಹನನ್’ (ಶಾತವಾಹನ), ‘ಚಂಟಿನ್‌ತೋನ್’ (ದಂಡವನ್ನು ಹಿಡಿದವ), ‘ಕೋಳಿಕ್ಕೊಟಿಯೋನ್’ (ರತ್ನಚೂಡಧ್ವಜ), ‘ಮಾಚ್ಚಾತನ್’, ‘ಪಚ್ಚೈಪ್ಪರಿಯುಳ್ಳೋನ್’ ಎಂದು ವರ್ಣಿಸುತ್ತದೆ. ಆಗಮಗಳಲ್ಲಿಯೂ ಮಂಡಲೀಭೂತದಂಡಾಗ್ರ ಅಥವಾ ‘ವಜ್ರದಂಡ’ವನ್ನು ಹಿಡಿದವನೆಂದೂ (ಪೂರ್ವಕಾರಣಾಗಮ), ವಕ್ರದಂಡವನ್ನೂ ಪುಷ್ಪಾಬ್ಜವನ್ನೂ, ಶಿಖಿಪೋತವನ್ನೂ ಹಿಡಿದವನೆಂದೂ (ಸರಸ್ಪತೀಯ ಚಿತ್ರಕರ್ಮಶಾಸ್ತ್ರ), ದಂಡವನ್ನು ಹಿಡಿದವನೆಂದೂ (ಅಜಿತಾಗಮ), ‘ಇಷು’ ಅಥವಾ ‘ಶರಾಸನ’ನೆಂದೂ (ಶಿಲ್ಪರತ್ನ), ಪುಷ್ಪ ದಂಡವನ್ನು ಹಿಡಿದವನೆಂದೂ (ಶಾಸ್ತೃಸ್ಥಾಪನ) ವರ್ಣನೆಗಳಿವೆ. ಖೇಟಕ, ಶಿಖಿದಂಡ, ಗದೆ, ಅಂಕುಶ, ಕುಠಾರ, ಧನಸ್ಸು, ನಿಸ್ತ್ರಿಂಶ, ಖಡ್ಗ, ಕ್ಷುರಿಕಾ (ಕತ್ತಿ), ಚಾಪ, ಶೂಲ, ಪಾಶ ಇವೂ ಶಾಸ್ತನ ಆಯುಧಗಳೇ.

ಶಾಸ್ತಧ್ಯಾನಶ್ಲೋಕದಲ್ಲಿ ಶಾಸ್ತನು ಶೂಲ, ಪುಷ್ಪ, ಶರ, ಕೃಪಾಣ, ಅಂಕುಶ, ಪಾಶ, ಖೇಟ, ಇಕ್ಷು ಕಾರ್ಮುಕ, ಮಾಣಿಕ್ಯ ‍ಪಾತ್ರಗಳನ್ನು ಹಿಡಿದಂತೆ ಕಲ್ಪನೆಯಿದೆ. ಮುದ್ರೆಗಳಲ್ಲಿ ವ್ಯಾಖ್ಯಾನ, ವರದ, ಸೂಚೀ, ಅಭಯ, ಇವು ಮುಖ್ಯವಾದುವು, ಅಕ್ಷರಮಾಲೆಯನ್ನು ಹಿಡಿದಿರುವುದೂ ಉಂಟು. ಸಾಮಾನ್ಯವಾಗಿ ಶಾಸ್ತ ದ್ವಿಭುಜ, ಕೆಲವೊಮ್ಮೆ ಚತುರ್ಭುಜನಾಗಿರುವುದೂ ಉಂಟು. ಅವನು ಧರಿಸಿರುವ ಬಟ್ಟೆ ಕರಿಯದು (ಕಾಲವಾಸನ್); ಈ ಕಾರಣದಿಂದಲೇ ಶಬರಿಮಲೆ ಯಾತ್ರಿಕರು ಕರಿಯ ಬಟ್ಟೆ ಧರಿಸುವುದು.

ಶಾಸ್ತನ ರೂಪ, ಆಕಾರ ಕಲ್ಪನೆ–ಚಿಂತನೆ

ಶಾಸ್ತನನ್ನು ಒಂಟಿಯಾಗಿಯೇ ನಿರ್ದೇಶಿಸುವುದು ವಾಡಿಕೆ. ಹನ್ನೆರಡು ವರ್ಷದ ಹುಡುಗನೆಂದೂ ಬ್ರಹ್ಮಚಾರಿಯೆಂದೂ ಕಲ್ಪನೆಯಿದೆ. ಶಿವನ ಇನ್ನಿಬ್ಬರು ಮಕ್ಕಳಾದ ಗಣೇಶ ಮತ್ತು ಸುಬ್ರಹ್ಮಣ್ಯ ಇವರನ್ನೂ ಹೀಗೆಯೇ ಕಲ್ಪಿಸಿಕೊಳ್ಳುವುದಿದೆಯಷ್ಟೆ. ಶಾಸ್ತನನ್ನು ಯೋಗಿಯೆಂದು ಪರಿಗಣಿಸುವುದೇ ವಿಶೇಷ. ಯೋಗಾಸನದಲ್ಲಿ ಕುಳಿತು, ಯೋಗಪಟ್ಟವನ್ನು ಹಾಕಿರುವ ಶಾಸ್ತಮೂರ್ತಿಗಳೇ ಹೆಚ್ಚು. ಶಬರಿಮಲೆಯ ಶಾಸ್ತನೂ ಹೀಗೆಯೇ ಇರುವುದು. ಹೀಗಲ್ಲದೆ ಸುಖಾಸನ, ವೀರಾಸನಗಳಲ್ಲಿದ್ದರೂ ಯೋಗಪಟ್ಟವಿರುತ್ತದೆ.

ಪಿಂಗಳನಿಘಂಟಿನಲ್ಲಿ ಶಾಸ್ತನನ್ನು ಯೋಗಿಯೆಂದು ನಿರ್ದೇಶಸಿದರೂ ಪೂರಣೈಕ್ಕೇಳ್ವನ್ (ಪೂರ್ಣೆಯೊಂದಿಗೆ ಮದುವೆಯಾದವನು), ಪುತಕ್ಕಲೈಮಣಾಳನ್ (ಪುಷ್ಕಲೆಯ ಅಥವಾ ಪುದ್ಗಲೆಯ ಗಂಡ) ಎಂಬ ವಿಶೇಷಣಗಳಿವೆ. ಪೂರ್ಣೆ, ಪುಷ್ಕಲೆಯೆಂಬಿಬ್ಬರು ದೇವಿಯರೊಡಗೂಡಿ ನಿಂತಿರುವ ಶಾಸ್ತನ ಪ್ರತಿಮೆಗಳು ಕೆಲವು ದೊರೆತಿವೆ. ಬ್ರಹ್ಮಚಾರಿಯಾದ ಗಣೇಶನಿಗೆ ಸಿದ್ಧಿ–ಬುದ್ಧಿಯೆಂಬಿಬ್ಬರು ದೇವಿಯರನ್ನೂ ಬಾಲವಟುವಾದ ಸುಬ್ರಹ್ಮಣ್ಯನಿಗೆ ವಲ್ಲೀ–ದೇವಸೇನೆಯರನ್ನೂ ಅಳವಡಿಸಿರುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಶಿವನನ್ನು ವರಿಸಲು ಕನ್ಯಾಕುಮಾರಿ ಕಾಯುತ್ತಿರುವಂತೆ ಲೀಲಾದೇವಿಯೂ ಶಾಸ್ತನನ್ನು ವರಿಸಲು ‘ಸರಂಕುಟ್ಟಿಯಲ್’ನಲ್ಲಿ ಕಾದಿದ್ದಾಳೆ. ಸುಪ್ರಭೇದಾಗಮದಲ್ಲಿ ಇಕ್ಕೆಲಗಳಲ್ಲಿ ಮದನಾ ಮತ್ತು ವರ್ಣನೀ ಎಂಬ ಶಕ್ತಿಯರನ್ನು ನಿಲ್ಲಿಸಬೇಕೆಂಬ ಸೂಚನೆಯಿದೆ.

ಶಾಸ್ತನ ಪ್ರಾಚೀನಶಿಲ್ಪಕೃತಿಗಳಲ್ಲಿ ಭೂತದಂತೆ ಯಕ್ಷರಂತೆ ಮೈಯಿರುತ್ತದೆ; ದಪ್ಪಹೊಟ್ಟೆ, ಸುಖಾಸನ, ಉಪವೀತ, ಹರಡಿದ ಕೇಶರಾಶಿ, ಕಿರೀಟಮುಕುಟ, ನಾಯಿಗಳೊಂದಿಗೆ ಮತ್ತು ಆಡುಗಳೊಂದಿಗೆ ಆಟವಾಡುತ್ತಿರುವಂತೆ ಚಿತ್ರಿಸುವುದೂ ಉಂಟು. ಅವನ ಬಳಿ ಕೋಳಿಯಿರುವುದನ್ನು ಕೆಲವು ಶಿಲ್ಪಗಳಲ್ಲಿ ಕಾಣಬಹುದು. ಅವನು ಕುಕ್ಕುಟಧ್ವಜನೆಂಬ (ರತ್ನಚೂಡಧ್ವಜ) ವರ್ಣನೆಯಿದೆ. ವಾಹನದ ಪ್ರಸ್ತಾಪ ಆಗಲೇ ಬಂದಿತು. ತಿರುವಾಂಕೂರಿನ ನೆರೆಯಲ್ಲಿ ಪಂಗೋಡೆಯ ಬಳಿ ವೆಟ್ಟವಿಲ ಎಂಬಲ್ಲಿ ಇರುವ ಶಾಸ್ತ ಕುದುರೆ ಸವಾರ. ಇದು ಉಚ್ಛಾಶ್ವ, ನೀಲಾಶ್ವ ಎಂಬ ವಿವರಗಳಿವೆ. ಆನೆ ವಾಹನವಾದರೆ ಅದು ಮದಗಜ, ಶ್ವೇತಮಾತಂಗ, ಮದಗಜಶಾಸ್ತ ಎಂದೇ ಮೂರ್ತಿಭೇದವುಂಟು. ವೃಷಭಾರೂಢನಾದ ಶಾಸ್ತನ ಮೂರ್ತಿಗಳೂ ಇವೆ. ಆದರೆ ಸಾಮಾನ್ಯವಾಗಿ ಪದ್ಮಪೀಠದ ಮೇಲೆ ಅಥವಾ ಸಿಂಹಾಸನದ ಮೇಲೆ ಸುಖಾಸನ, ವೀರಾಸನ ಅಥವಾ ಯೋಗಾಸನಗಳಲ್ಲಿ ಕುಳಿತಿರುವ ಮೂರ್ತಿಗಳೇ ಹೆಚ್ಚು. ‘ಚಿಂತಾಮಣಿಮಹಾಪೀಠಮಧ್ಯಗಾಯ ನಮೋ ನಮಃ’ ಎಂದು ಶಾಸ್ತನ ಧ್ಯಾನಶ್ಲೋಕದಲ್ಲಿ ಬರುವ ವಿವರ.

ಶಾಸ್ತನನ್ನು ಶಾಂತಮುಖಮುದ್ರೆಯಲ್ಲಿ ಚಿತ್ರಿಸುವುದು ಸಾಮಾನ್ಯ. ಅಂಶುಮದ್ಭೇದಾಗಮದಂತೆ ಶಾಸ್ತನಿಗೆ ಮೂರುಕಣ್ಣುಗಳು, ಶಿವನಂತೆ, ಕೋರೆದಾಡೆಗಳಿದ್ದು ಘೋರದಂಷ್ಟ್ರನೆನಿಸಿಕೊಂಡಿರುವುದೂ ಉಂಟು. ಶಿಲ್ಪರತ್ನದ ಪ್ರಕಾರ ಅವನ ಮೈಬಣ್ಣ ಕಪ್ಪು (ಶ್ಯಾಮ); ಅಂಶುಮದ್ಭೇದಾಗಮದಂತೆ ಬಂಗಾರದ ಬಣ್ಣ (ಹಿರಣ್ಯಸದೃಶ); ಶೈವಸಿದ್ಧಾಂತ ಸಂಗ್ರಹದ ಪ್ರಕಾರ ಹವಳದ ಬಣ್ಣ (ಪ್ರವಾಲವರ್ಣ). ಮೋಹಿನೀಶಾಸ್ತ  ‘ಶಾರದಚಂದ್ರಕಾಂತಿಧವಲ’, ಮೆದಗಜಶಾಸ್ತ, ಕನಕಶಿಖರವರ್ಣ, ತಲೆಯ ಮೇಲೆ ಕಿರೀಟಮುಕುಟ, ಕೇಶಬಂಧ ಅಥವಾ ಜಟಾಬಂಧ ಇರುವುದು ವಾಡಿಕೆ. ರತ್ನಮುಕುಟ, ಕರಂಡಮುಕುಟಗಳನ್ನೂ ಆಗಮ ಹೇಳುತ್ತದೆ. ‘ಪಿಂಗಜಟಾ’, ‘ಊರ್ಧ್ವಕೇಶ’, ‘ತುಂಗಭೃಂಗಸಮುಜ್ವಲ ಕುಂತಲ’ ‘ಉಜ್ಜ್ವಲ ಕೇಶಕ’, ‘ರತ್ನಜಾಲೋಲ್ಲಸನ್ಮೌಳಿ’ ಎಂಬ ವರ್ಣಗಳಿವೆ.

ಈಶಾನಶಿವಾಚಾರ್ಯಪದ್ಧತಿಯಲ್ಲಿ ಆದಿಶಾಸ್ತ, ಹರಿಶಾಸ್ತ, ಹರಶಾಸ್ತ, ಸೇನಾನಿಶಾಸ್ತ, ಭೂತವಲ್ಲಭಶಾಸ್ತ, ಭೋಗಿಶಾಸ್ತ, ಗಜಶಾಸ್ತ ಮತ್ತು ಏಕವೀರಶಾಸ್ತ ಎನ್ನುವ ಮೂರ್ತಿಭೇದಗಳನ್ನು ಹೇಳಿದೆ. ಮದಗಜಶಾಸ್ತ, ಮೋಹಿನಿಶಾಸ್ತ, ಅಮೃತಶಾಸ್ತ, ಗ್ರಾಮಶಾಸ್ತ, ಉಗ್ರಶಾಸ್ತ, ವೀರಶಾಸ್ತ, ಲಕ್ಷ್ಮೀಶಾಸ್ತ ಎನ್ನುವ ಭೇದಗಳೂ ಇವೆ. ಮಹಾಶಾಸ್ತ ಮತ್ತು ಮೋಹಿನೀಶಾಸ್ತರು ಚತುರ್ಭುಜ ಮೂರ್ತಿಗಳು. ಮಹಾಶಾಸ್ತನಿಗೆ ವ್ಯಾಖ್ಯಾನಮುದ್ರೆ, ವರದಮುದ್ರೆ, ನಾಗಯುಧ, ಅಕ್ಷಮಾಲೆಗಳೂ ಮೋಹಿನಿಶಾಸ್ತನಿಗೆ ವ್ಯಾಖ್ಯಾನಮುದ್ರೆ, ಪುಸ್ತಕ, ವೀಣಾ, ಅಕ್ಷಸೂತ್ರಗಳೂ ವಿಶಿಷ್ಟವಾದುವು. ಮದಗಜ ಶಾಸ್ತನಿಗೆ ದಂಡ ಕುಠಾರಗಳು, ಲಕ್ಷ್ಮೀಶಾಸ್ತನಿಗೆ ಅಭಯಮುದ್ರೆ, ವರದಮುದ್ರೆ.

ಶಾಸ್ತನ ಉಪಾಸನೆ ಹೇಗೆ?

ಶಾಸ್ತನ ಉಪಾಸನೆಯನ್ನೂ ಇತರ ಆರ್ಯದೇವತೆಗಳ ಉಪಾಸನೆಯಂತೆ ಅಳವಡಿಸಿದ್ದಾರೆ. ಉಪಾಸನಾ ಮಂತ್ರ‌ಕ್ಕೆ ಮಹಾಶಾಸ್ತನೇ ದೇವತೆ, ಅರ್ಧನಾರೀಶ್ವರನು ಋಷಿ, ಅನುಷ್ಟುಭ್ ಛಂದಸ್ಸು, ಶ್ರಂ ಬೀಜ, ಶ್ರೀಂ ಶಕ್ತಿ, ಶ್ರುಂ ಕೀಲಕ ಶಾಸ್ತನ ಮೂಲಮಂತ್ರ ಹೀಗೆ– ‘ಓಂ ಶ್ರಾಂ ಹರಿಹರಪುತ್ರ ಪುತ್ರಲಾಭ, ಶತ್ರುವಿನಾಶನ ಮದಗಜವಾಹನ, ಶ್ರೀಗುರು ಮಹಾಶಾಸ್ತ ಹುಂ ಫಟ್ ಸ್ವಾಹಾ’. ಯಂತ್ರವು ‘ಓಂ ಶ್ರೀಂ ಹ್ರೀಂ ಕ್ಲೀಂ ಓಂ ಕ್ರೋಂ ಕ್ಷೌಂ ಯರಲವಶಷಸಹೋಂ ಹಂಸಸ್ಸೋಹಂ’ ಶಾಸ್ತನ ಪ್ರತಿಷ್ಠಾವಿವಿಧಿಯಲ್ಲಿ ಸಾಂಪ್ರದಾಯಿಕವಾದ ಆಹ್ವಾನಸೂತ್ರದ ಕೊನೆಯಲ್ಲಿ ‘ಓಂ ಗ್ಲೌಂ ಸ್ತಂಭಯ ಸ್ತಂಭಯ’ ಎನ್ನುವ ಮಾತು ಬರುತ್ತದೆ.

‘ಓಂ ಹಾಂ ಹೌಂ ಶಿವಾಯ ನಮಃ’ ಎನ್ನುವ ಶಿವನ ಮೂಲಮಂತ್ರದ ಪಡಿಯಚ್ಚಿನಲ್ಲಿ ಶಾಸ್ತನ ಮೂಲಮಂತ್ರವನ್ನು ‘ಓಂ ಶ್ರಾಂ ಶ್ರೌಂ ಶಾಸ್ತಾಯ ನಮಃ’ ಎಂದು ಸಿದ್ಧಪಡಿಸಿರುವುದೂ ಉಂಟು. ಪೂರ್ವಕಾರಣಾಗಮದ ಪ್ರಕಾರ ಶಾಸ್ತನ ಪರಿವಾರ ದೇವತೆಗಳು ಮದನ, ಭೀಷಣ, ರೌದ್ರ, ಉನ್ಮತ್ತ, ಉಗ್ರಭಾಷಕ, ಆಶ್ಚರ್ಯ, ಸುಂದರ ಮತ್ತು ವೀರ್ಯ.

ಶಾಸ್ತಾಯಾಗವೆನ್ನುವ ಗ್ರಂಥದಲ್ಲಿ ಶಾಸ್ತನ ಪ್ರತಿಷ್ಠೆಯ ವಿಚಾರವಾಗಿ ವಿವರಗಳಿವೆ. ನದೀತೀರದಲ್ಲಿ, ತಟಾಕದಲ್ಲಿ, ಕಾಡಿನಲ್ಲಿ, ಬೆಟ್ಟದ ತುದಿಯಲ್ಲಿ, ಮರದ ಬುಡದಲ್ಲಿ ಅಥವಾ ಹಳ್ಳಿಯ ನಡುವೆ ಗುಡಿಯಲ್ಲಿ ಮಹಾಶಾಸ್ತನನ್ನು ಪ್ರತಿಷ್ಠೆ ಮಾಡಬೇಕು. ಬೆಟ್ಟದ ಮೇಲಿರುವ ಶಾಸ್ತನಿಗೆ ಹದಿನಾರು ಕೈಗಳು, ಕಾಡಿನ ನಡುವೆಯಿರುವ ಮೂರ್ತಿಗೆ ಹತ್ತುಕೈಗಳು, ಪಟ್ಟಣದಲ್ಲಿ ಎಂಟು ಅಥವಾ ನಾಲ್ಕು. ಹಳ್ಳಿಯಲ್ಲಿರುವ ಅಥವಾ ನದಿಯ ದಡದಲ್ಲಿ ಕೊಳದ ಪಕ್ಕದಲ್ಲಿರುವ ಶಾಸ್ತನಿಗೆ ಎರಡೇ ಕೈಗಳು. ಇದು ಕುಲಾಲಶಾಸ್ತಾಗಮದಲ್ಲಿ ಬರುವ ವಿವರ. ಹಳ್ಳಿಯಲ್ಲಿ ಶಾಸ್ತನ ಗುಡಿಯನ್ನು ಪಶ್ಚಿಮದಿಕ್ಕಿನಲ್ಲಿ ಅಥವಾ ನೈರುತ್ಯ ದಿಕ್ಕಿನಲ್ಲಿ ಕಟ್ಟಬೇಕೆಂದೂ, ಶಾಸ್ತನು ಹಳ್ಳಿಗೆ ಬೆನ್ನು ತಿರುಗಿಸಿಕೊಂಡಿರಬೇಕೆಂದೂ ಶಾಸ್ತ್ಯಸ್ಥಾಪನವೆನ್ನುವ ಆಗಮಗ್ರಂಥ ವಿಧಿಸುತ್ತದೆ.

ಹೀಗೆ ಆಗಮದಲ್ಲಿ ಶಾಸ್ತನನ್ನು ಅಳವಡಿಸಿಕೊಂಡಿದ್ದಾರೆ. ಆದರೂ ಪ್ರಾಚೀನ ದೇವತೆಯ ಲಕ್ಷಣಗಳನ್ನು ಕೈಬಿಡದಿರುವುದು ಸ್ವಾರಸ್ಯ. ಪ್ರಾಚೀನ ಕಲ್ಪನೆಗಳೂ ಬಹಳಮಟ್ಟಿಗೆ ಉಳಿದುಬಂದಿವೆ. ಶಾಸ್ತನಲ್ಲಿ ಶೈವ ಲಕ್ಷಣಗಳೂ ವೈಷ್ಣವಲಕ್ಷಣಗಳ ಎರಡೂ ಕಲೆತಿದ್ದರೂ ಶೈವಪ್ರಭಾವ ಕೊಂಚ ಹೆಚ್ಚಾಗಿದೆಯೆನ್ನಬಹುದು. ಅವನನ್ನು ಶಿವನ ಪರಿವಾರದಲ್ಲಿಯೇ ಸೇನಾನಿಯೆಂದು ಭೂತನಾಥನೆಂದು ಸೇರಿಸುವುದು ವಾಡಿಕೆ. ಗಣೇಶನಂತೆ ಸ್ಕಂದನಂತೆ ಪರಿವಾರ ದೇವತೆಯಾಗಿದ್ದ ಶಾಸ್ತ ಕಾಲಕ್ರಮದಲ್ಲಿ ಸ್ವಯಂಪ್ರಧಾನ ದೇವತೆಯೆಂದು ಆಗಮ ಪರಿಗಣಿಸಿತು. ಇದೂ ಪ್ರಾಚೀನ ಸಂಪ್ರದಾಯಕ್ಕೆ ಆರ್ಯಸಂಸ್ಕೃತಿ ಮಣಿಯಿತೆನ್ನಲು ನಿದರ್ಶನ.

ಶಬರಿಮಲೆಯ ಶಾಸ್ತ

ನಮ್ಮ ದೇಶದ ಒಂದೊಂದು ದೇವತೆಗೂ ವಿಶಿಷ್ಟವಾದ ಇತಿಹಾಸವುಂಟು, ವ್ಯಕ್ತಿತ್ವವುಂಟು, ಇತಿಹಾಸದಿಂದ ವ್ಯಕ್ತಿತ್ವ ಮೈದುಂಬಿ ಬರುತ್ತದೆ. ದೇವತೆಯ ಇತಿಹಾಸವು ಜನರ ಅನುಭವಗಳನ್ನೂ ಆಕಾಂಕ್ಷೆಗಳನ್ನೂ, ಜಾನಪದ ಪ್ರವೃತ್ತಿಗಳನ್ನೂ ಪ್ರಸಂಗಗಳನ್ನೂ ಪ್ರತಿಬಿಂಬಿಸುತ್ತದೆ. ದೇವತೆಯ ಸೃಷ್ಟಿ ಮನುಷ್ಯನಿಂದಲೇ ಆಗುತ್ತದೆ, ಆದರೆ ಈ ಸೃಷ್ಟಿಯಲ್ಲಿ ತಲೆಮಾರುಗಳ ವಿಕಾಸ ಕಾಣಬರುತ್ತದೆ. ಇಡೀ ಜನಾಂಗದ ಸುಪ್ತಚೇತನ ಹೊರಹೊಮ್ಮಿ ಪುತ್ಥಳಿಯಾಗುವುದು ಕಾಣಬರುತ್ತದೆ. ಮೇಲುನೋಟಕ್ಕೆ ಸಂದಿಗ್ಧವೆನಿಸಿದರೂ, ಆಕಸ್ಮಿಕವೆನಿಸಿದರೂ ಮೂಲಭೂತವಾದ ಪ್ರವೃತ್ತಿಗಳ ಅಗತ್ಯವನ್ನು ಗಮನಿಸುವುದು ಸಾಧ್ಯ. ಜನರ ಜೀವನ ವಿಧಾನ, ಪರಿಸರದ ಒತ್ತಡ, ಚರಿತ್ರೆಯ ಹೆಜ್ಜೆಗಳು, ಜನಾಂಗದ ಸ್ವಭಾವ ಇವೆಲ್ಲವೂ ದೇವತಾ ಕಲ್ಪನೆಯಲ್ಲಿ ಅಡಗಿರುತ್ತದೆ.

ಇದನ್ನು ಅರ್ಥ ಮಾಡಿಕೊಳ್ಳಲು ಶಬರಿಮಲೆಯ ಶಾಸ್ತ ಅಥವಾ ಅಯ್ಯಪ್ಪನನ್ನು ಪರಿಶೀಲಿಸಬಹುದು. ಮೊದಲಿಗೆ ಈ ದೇವತೆಯ ಪ್ರಸಿದ್ಧಿ ಕೇರಳ ಪ್ರಾಂತ್ಯಕ್ಕೆ ಸೀಮಿತವಾಗಿದ್ದಿತು. ನೆರೆಹೊರೆಯ ಅಂಚಿನ ಪ್ರಾಂತ್ಯಗಳಿಗೆ ಅಷ್ಟಿಷ್ಟು ಹರಡಿದ್ದಿತು. ತಮಿಳುನಾಡು, ಕೊಡಗುಸೀಮೆ ಇಲ್ಲಿ ಮಾತ್ರ ಕೇರಳದ ಶಾಸ್ತನ ಪ್ರಖ್ಯಾತಿಯಿದ್ದಿತು. ಇಷ್ಟು ಬಿಟ್ಟರೆ ಕರ್ಣಾಟಕದಲ್ಲಾಗಲೀ ಆಂಧ್ರ, ಮಹಾರಾಷ್ಟ್ರಗಳಲ್ಲಾಗಲೀ ಶಾಸ್ತನೆಂಬ ದೇವತೆಯ ಪರಿಚಯವಿದ್ದುದು ಕಡಮೆಯೇ. ಇನ್ನು ಉತ್ತರದ ಹಿಂದೂಸ್ತಾನದ ಮಾತು ಬಿಡಿ. ಆದರೆ ಇದು ಸುಮಾರು ಇಪ್ಪತ್ತು–ಮೂವತ್ತು ವರ್ಷಗಳ ಹಿಂದಿನ ಮಾತು. ಈಗ ಇಡೀ ದೇಶದಲೆಲ್ಲ ಆಯ್ಯಪ್ಪನ ಪೂಜೆ ನಡೆಯುತ್ತದೆ. ಮಲಯಾಳಿಗಳಲ್ಲದವರೂ ಶಬರಿಮಲೆಗೆ ಹೋಗಿ ಬರುತ್ತಾರೆ. ಈ ದೇವತೆಯ ಜನಪ್ರೀತಿ ಹೆಚ್ಚುತ್ತ ಬಂದಿದೆ. ಕೇರಳದಲ್ಲಿಯೂ ಹೀಗೆಯೇ ನಡೆಯಿತೆನ್ನಿ. ತುಂಬ ಹಿಂದಿನ ಕಾಲದಲ್ಲಿ ಅಯ್ಯಪ್ಪ ಕೇವಲ ಕಾಡು ಜನರ, ಬೇಟೆಗಾರರ, ಆದಿವಾಸಿಗಳ ದೇವತೆ. ಆರ್ಯಸಂಸ್ಕೃತಿಗೂ ಈ ದೇವತೆಗೂ ಯಾವ ಸಂಬಂಧವೂ ಇದ್ದ ಹಾಗಿರಲಿಲ್ಲ. ಆದರೆ ಬರಬರುತ್ತ ಕೇರಳದ ಎಲ್ಲ ಜನರೂ, ಎಲ್ಲ ಸಾಂಸ್ಕೃತಿಕ ಸ್ತರದವರೂ ಈ ದೇವತೆಯ ವಿಚಾರದಲ್ಲಿ ಭಯಭಕ್ತಿಗಳಿಂದ ನಡೆದುಕೊಳ್ಳತೊಡಗಿದರು. ಆರ್ಯಸಂಸ್ಕೃತಿಯ ಅಧ್ವರ್ಯಗಳೂ ಈ ದೇವತೆಯನ್ನು ಆದರದಿಂದ ತಮ್ಮೊಳಗೆ ಬರಮಾಡಿಕೊಂಡರು. ಇದೊಂದು ಸ್ವಾರಸ್ಯವಾದ ಇತಿಹಾಸ. ಜನರ ಅಗತ್ಯವೇ ನಿಮಿತ್ತವೋ, ದೇವತೆಯ ಸಾಮರ್ಥ್ಯವೇ ಕಾರಣವೋ ಹೇಳುವುದು ಕಷ್ಟ. ಅಂತೂ ಇಂದು ಶಾಸ್ತ ದೇಶದಲ್ಲೆಲ್ಲ ಪ್ರಸಿದ್ಧನಾದ ದೇವತೆಯಾಗಿದ್ದಾನೆ.

ಶಾಸ್ತ ಕ್ಷೇತ್ರಗಳಲ್ಲಿ ತುಂಬ ಪ್ರಖ್ಯಾತವಾದುದು ಶಬರಿಮಲೆ. ಕೇರಳ ಕ್ವಿಲಾನ್ ಜಿಲ್ಲೆಗೆ ಸೇರಿದಂತಿರುವ ಪಶ್ಚಿಮಘಟ್ಟ ಸಾಲಿನಲ್ಲಿ ತುಂಬ ಎತ್ತರದ, ನಿರ್ಜನವಾದ, ದಟ್ಟವಾದ ಕಾಡಿನಿಂದ ಕೂಡಿದ ಶಬರಿಮಲೆ ಸಾವಿರಾರು ವರ್ಷಗಳಿಂದಲೂ ಪ್ರಸಿದ್ಧವಾಗಿದ್ದ ಉಲ್ಲೇಖವಿದೆ. ಗುಡಿಯಿರುವ ಭಾಗವಂತೂ ಈಗಲೂ ದುರ್ಗಮವಾದುದೇ. ಮೈಲಿಗಳವರೆಗೆ ಯಾವ ಜನವಸತಿಯೂ ಇಲ್ಲ. ಹತ್ತಿರದ ಹಳ್ಳಿಯೆಂದರೆ ಸುಮಾರು ನಲವತ್ತು ಮೈಲಿ ದೂರವಿರುವ ಎರುವೇಲಿ. ಯಾತ್ರಿಕರು ಇಲ್ಲಿಂದಲೇ ಶಬರಿಮಲೆಗೆ ಹೋಗುವುದು. ಗುಡಿಯಿರುವ ಬೆಟ್ಟವನ್ನು ಮುಟ್ಟಲು ಐದಾರು ತೊರೆಗಳನ್ನು ದಾಟಿ, ಐದಾರು ಕಡಿದಾದ ಬೆಟ್ಟಗಳನ್ನು ಏರಿಳಿದು ನಡೆದೇ ಹೋಗಬೇಕು. ಹುಲಿ, ಚಿರತೆ, ಕರಡಿ, ಆನೆ, ಕಾಡೆಮ್ಮೆಗಳ ಹಾವಳಿ ಹೆಚ್ಚು. ಹೀಗಿದ್ದೂ ವರ್ಷಕ್ಕೆ ಎರಡು ತಿಂಗಳು ಲಕ್ಷಗಟ್ಟಲೆ ಯಾತ್ರಿಕರು ನಿರಾಯುಧವಾಗಿ ಈ ನಲವತ್ತು ಮೈಲಿಗಳನ್ನು ದಾಟಿ ಶಬರಿಮಲೆಗೆ ಹೋಗುತ್ತಾರೆ. ಎರುವೇಲಿಯಿಂದ ಹೊರಡುವಾಗ ಬಣ್ಣಬಣ್ಣದ ಬಿಲ್ಲುಬಾಣಗಳನ್ನೂ ಗದೆಯಂತೆ ದೊಣ್ಣೆಯನ್ನು ಕೊಂಡೊಯ್ಯುವ ವಾಡಿಕೆಯಿದೆ. ಮೊದಲ ಬಾರಿಗೆ ಹೋಗುವವರು ಮರದ ದೊಣ್ಣೆಯನ್ನು ಎರುವೇಲಿಯಲ್ಲಿ ಕೊಂಡುಕೊಳ್ಳುತ್ತಾರೆ. ಆದರೆ ಇದೇನು ಶಸ್ತ್ರವೆಂದಲ್ಲ. ಇದರಿಂದ ಯಾವ ಪ್ರಾಣಿಯನ್ನೂ ಹೆಸರಿಸಲಾಗದು. ಈ ಆಟಿಗೆ ಆಯುಧಗಳನ್ನು ಕೊಂಡೊಯ್ಯುವುದು ಒಂದು ಧಾರ್ಮಿಕ ವಿಧಿ ಅಷ್ಟೆ. ಶಬರಿಮಲೆಗೆ ಹೋದನಂತರ ಅಲ್ಲಿ ಗುಡಿಯ ಬಳಿಯಿರುವ ದೊಡ್ಡಮರವೊಂದರ ಬುಡದಲ್ಲಿ (ಶಬರಿಪೀಠ) ಈ ಆಯುಧಗಳನ್ನಿರಿಸಿ ಹಿಂದಿರುಗುತ್ತಾರೆ. ಜನರ ಶ್ರದ್ಧೆಯೇ ಅವರನ್ನು ಕಾಪಾಡುವ ಆಯುಧ, ರಕ್ಷೆ.


ಇರುಮುಡಿ ಹೊತ್ತು ಶಬರಿಮಲೆಯಲ್ಲಿ 18 ಮೆಟ್ಟಿಲು ಹತ್ತಿದ ಭಕ್ತರು (ಚಿತ್ರ: ಶಿವಕುಮಾರ ಬಿ.ಎಚ್.)

ತಿರುವಾಂಕೂರಿನ ನಡುವೆ ಹಾದು ಹೋಗುವ ಕೊಟ್ಟಾಯಂ–ಕಾಮಿಳಿ ರಸ್ತೆಯಲ್ಲಿ ಕೊಟ್ಟಾಯಂನಿಂದ ನಲವತ್ತು ಮೈಲಿ ದೂರದಲ್ಲಿ ಪಂಡಿಪ್ಪೆರಿಯಾರ್ ಎಸ್ಟೇಟ್ ಇದೆ. ಇಲ್ಲಿಂದ ದಟ್ಟವಾದ ಕಾಡಿನ ನಡುವೆ ಇಪ್ಪತ್ತು ಮೈಲಿಗಳಷ್ಟು ದೂರ ನಡೆದು ಹೋದರೆ ಶಬರಿಮಲೆಯನ್ನು ಮುಟ್ಟಬಹುದು. ಪ್ರತಿ ಮಲೆಯಾಳೀ ಮಾಸದಲ್ಲಿ ಸುಮಾರು ಎರಡು ವಾರಗಳ ಕಾಲ ಗುಡಿಯಲ್ಲಿ ಪೂಜೆ ನಡೆಯುತ್ತದೆ. ಸಾಮಾನ್ಯವಾಗಿ ದೂರದ ಚೆಂಗನ್ನೂರಿನಲ್ಲಿ ವಾಸ ಮಾಡುವ ಶಬರಿಮಲೆ ಗುಡಿಯ ಪೂಜಾರಿ ಈ ಎಸ್ಟೇಟಿನಿಂದಲೇ ನಡೆದು ಹೋಗುತ್ತಾನೆ. ಅವನೊಂದಿಗೆ ಸಶಸ್ತ್ರ ರಕ್ಷಕರೂ ಇರುತ್ತಾರೆ. ಈ ಪೂಜಾರಿಯನ್ನು ಕಡುವಾಪ್ಪೋಟ್ಟಿ (ಎಂದರೆ ಹುಲಿ ಪೂಜಾರಿ) ಎಂದು ಕರೆಯುತ್ತಾರೆ.

ಶಬರಿಮಲೆಯೆಂದರೆ ಶಬರಿಯ ಬೆಟ್ಟವೆಂದರ್ಥ. ಬೇಡರವಳಾದ ಶಬರಿಯು ರಾಮನನ್ನು ಕುರಿತು ತಪಸ್ಸುಮಾಡಿ, ಮೋಕ್ಷಕ್ಕೆ ಸಂದ ಸ್ಥಳವೆಂದು ಪ್ರತೀತಿ ಇದೆ. ಆದರ ಇದು ಈಚೆಗೆ ಆರ್ಯ ಸಂಸ್ಕೃತಿಗೆ ಅಳವಡಿಸಿಕೊಂಡ ಕಥೆಯೆಂದು ತೋರುತ್ತದೆ. ಶಾಸ್ತನ ಗುಡಿಗೆ ಹೋಗುವ ದಾರಿಯಲ್ಲಿ ಶಬರೀ ದೇವತೆಯ ಸನ್ನಿಧಿಯೂ ಒಂದಿದೆ. ಇದಕ್ಕೆ ಶಬರಿಪೀಠವೆಂದು ಹೆಸರು. ಆಕೆ ರಾಮಾಯಣದ ಶಬರಿ ಇರಲಾರಳು. ಕಾಡುಜನರ ಬೇಟೆಗಾರರ (ಶಬರರ) ಅಭಿಮಾನ ದೇವತೆಯಿರಬಹುದು. ಮುಂದೆ ಕ್ಷುದ್ರದೇವತೆಯಾಗಿ ಪರಿಣಮಿಸಿದ ಈಕೆ ಮೊದಲಿಗೆ ಪ್ರಮುಖಳಾದ ಮಾತೃದೇವತೆಯಾಗಿದ್ದಳೆಂದು ತೋರುತ್ತದೆ. ಇಡೀ ಬೆಟ್ಟಕ್ಕೆ ಅವಳ ಹೆಸರು ಬಂದುದೂ, ಅದೇ ಹೆಸರು ನಿಂತುದೂ ಆಕಸ್ಮಿಕವಲ್ಲ.

ಬೆಟ್ಟದ ಮೇಲೆ ಸುಮಾರು ಒಂದು ಚದರ ಮೈಲಿ ಆವರಣದಲ್ಲಿ ಗುಡಿಯಿದೆ. ಆವರಣದ ಸುತ್ತಲೂ ಅಗಲವಾದ, ಆಳವಾದ ಕಂದಕವಿದ್ದು ಕಾಡುಪ್ರಾಣಿಗಳು ಇಲ್ಲಿಗೆ ಬರದಂತೆ ತಡೆಯುತ್ತದೆ. ಗುಡಿಯಲ್ಲಿ ಸುಮಾರು ಹತ್ತು ಅಡಿ ಎತ್ತರದ ಕಟ್ಟೆಯಿದ್ದು, ಅದರ ಮೇಲೆ ಶಾಸ್ತನ ಲೋಹದ ಮೂರ್ತಿಯಿದೆ. ಅದೇ ಕಟ್ಟೆಯಮೇಲೆ ಶಾಸ್ತನ ಬಳಿಯೇ ‘ಮಲೆ’ಯೆನಿಕೊಳ್ಳುವ ಬೆಟ್ಟದೇವತೆಯ ಮೂರ್ತಿಯೂ ಇರುವುದು ಸ್ವಾರಸ್ಯ. ಬೆಟ್ಟವನ್ನೇ ದೇವತೆಯೆಂದು ಬಗೆದು ಪೂಜೆ ಮಾಡುವ ಪದ್ಧತಿ ಎಲ್ಲೆಲ್ಲಿಯೂ ಇದ್ದಂತೆ ಇಲ್ಲಿಯೂ ಇದ್ದಿತು. ಶಾಸ್ತನ ಒಕ್ಕಲಾದ ಮಲೆಯರಾಯನ್ ಆದಿವಾಸಿಗಳು ಮಣಿಮಲೆ ಬೆಟ್ಟಸಾಲಿನಲ್ಲಿ ತಲಪಾರ ಮಲೆ, ಆಳಮಲೆ, ಪ್ರತಿಯಮಲೆ, ಪೋತನ್‌ಮಲೆ ಮತ್ತು ಸವಂಪಾರಮಲೆ ಎನ್ನುವ ಐದು ಬೆಟ್ಟದ ಕೋಡುಗಳನ್ನು ದೇವತೆಗಳೆಂದು ಪೂಜಿಸಿ, ಈ ಐದೂ ದೇವತೆಗಳನ್ನು ಪ್ರತಿನಿಧಿಸಿ ಐದು ಸಣ್ಣ ಸಣ್ಣ ಕಲ್ಲು ಗುಂಡುಗಳನ್ನು ತಮ್ಮ ಗುಡಿಸಲ ಹೊರಗೆ ಇರಿಸಿಕೊಳ್ಳುತ್ತಾರೆ. ಇಂಥ ಪದ್ಧತಿಗಳು ಕೇರಳದ ಕಾಡುಜನರಲ್ಲಿ ಬಳಕೆಯಲ್ಲಿವೆ. ಶಾಸ್ತನ ಕಟ್ಟೆಯ ಮೇಲೆ ಈ ಮಲೆದೇವತೆಯಲ್ಲದೆ ಗಣಪತಿ ಮತ್ತು ಸುಬ್ರಹ್ಮಣ್ಯ ಇವರ ಮೂರ್ತಿಗಳೂ ಇವೆ. ಆದರೆ ಇವೆರಡೂ ಈಚೆಗೆ ಅಲ್ಲಿ ಮೂಡಿಕೊಂಡ ಮೂರ್ತಿಗಳೆನ್ನುವುದು ಸ್ಪಷ್ಟವಾಗಿದೆ. ಶಾಸ್ತನು ಶಿವನ ಮಗನೆಂದು ಕಲ್ಪನೆ ಬೇರೂರಿದಾಗ ಶಿವನ ಇತರ ಈ ಇಬ್ಬರು ಮಕ್ಕಳಿಗೂ ಅಲ್ಲಿ ಸ್ಥಾನವನ್ನು ಒದಗಿಸಿಕೊಟ್ಟರು.

ಕಟ್ಟೆಯ ಹೊರಗೆ ಆವರಣದಲ್ಲಿಯೇ ಕರುಪ್ಪನ್ (ಅಥವಾ ಕುರುಪ್ಪುಸ್ವಾಮಿ) ಮತ್ತು ಕೊಚು ಕಡುತ್ತ ಎಂಬೆರಡು ಗಂಡು ದೇವತೆಗಳೂ ಒಂದು ಸ್ತ್ರೀದೇವತೆಯೂ ಪೂಜೆಗೊಳ್ಳುತ್ತವೆ. ಕರುಪ್ಪನೆನ್ನುವುದು ಕರಿಭೂತ. ಈ ದೈವದ ಪೂಜೆ ತಮಿಳಿನಾಡಿನಲ್ಲಿಯೂ ಉಂಟು. ಕಡುತ್ತನೂ ಭಯಂಕರವಾದ ದೈವ, ರಕ್ತವನ್ನು ಬಯಸುವ ಬಂಟ. ಇವರಿಬ್ಬರೂ ಶಾಸ್ತನ ಬೇಟೆಯಲ್ಲಿ ನೆರವಾದವರೆಂದು ಅವರಿಗೆ ಅಲ್ಲಿ ಪೂಜೆ ನಡೆಯುವುದು. ಇವರೊಂದಿಗೆ ಅಲ್ಲಿ ಪೂಜೆಗೊಳ್ಳುವ ಹೆಣ್ಣು ದೇವತೆ ಎಮ್ಮೆಯ ರೂಪದಲ್ಲಿದ್ದು ರಾಕ್ಷಸಿ ಮಹಿಷಿಯನ್ನು ಶಾಸ್ತನು ಕೊಂದಾಗ ಎಮ್ಮೆಯ ಮೈಯಿಂದ ಹೊಸ ಹೊಮ್ಮಿದ ಭೂತವೆಂದು ಹೇಳುತ್ತಾರೆ. ಹೀಗೆ ಕರುಪ್ಪು, ಕಡುತ್ತ, ಮಹಿಷಿ ಮೂವರೂ ಭೂತಗಳೇ. ಅವರಿಗೆ ಒಡೆಯನಾದ ಶಾಸ್ತ ಭೂತನಾಥ. ಈ ದೇವತೆಗಳಲ್ಲದೆ ಆವರಣದೊಳಗೆ ಪೂಜೆಗೊಳ್ಳುವ ವಾವಾರ್ ಪ್ರತೀಕವೂ ಒಂದಿದೆ.


ಏರುಮಲೆ ವಾವಾರಸ್ವಾಮಿ ಮಸೀದಿ (ಚಿತ್ರಕೃಪೆ: ವಿಕಿಪಿಡಿಯಾ)

ವಾವಾರ್ (ಅಥವಾ ಬಾವಾ, ಬಾಬಾ) ಎನ್ನುವವನು ಮುಸಲ್ಮಾನ ಸಾಧುವೆಂದೂ, ಶಾಸ್ತನ ಸ್ನೇಹಿತನಾಗಿದ್ದನೆಂದೂ ಕಥೆಗಳಿವೆ. ಎರುವೇಲಿ ಹಳ್ಳಿಯಲ್ಲಿ ಮಸೀದಿಯೊಂದಿದ್ದು ಅಲ್ಲಿ ಇವನ ಚೇತನ ಉಳಿದಿದೆಯೆಂದು ಪ್ರತೀತಿಯಿದೆ. ಶಬರಿಮಲೆ ಯಾತ್ರಿಕರು ಮೊದಲು ಎರುವೇಲಿಯಲ್ಲಿಯೂ ಅನಂತರ ಶಬರಿಮಲೆಯಲ್ಲಿಯೂ ಈತನನ್ನು ಪೂಜಿಸುವ ಪದ್ಧತಿಯಿದೆ. ಅರಬ್ಬಿ ಜನಾಂಗದ ಹಡಗುಕಳ್ಳನೂ ಸಾಹಸಿಯೂ ಆಗಿದ್ದ ಈತನು ಶಾಸ್ತನ ಸಾಹಸಕೃತ್ಯಗಳಲ್ಲಿ ನೆರವಾದನೆಂದು ಅವನಿಗೆ ಪೂಜೆ ಸಲ್ಲುತ್ತದೆ. ಪಂದಲಂ ಪ್ರಾಂತ್ಯದಲ್ಲಿ ಉದಯನ್ ಎಂಬ ದರೋಡೆಗಾರನು ಜನರಿಗೆಲ್ಲ ಸಿಂಹಸ್ವಪ್ನನಾಗಿ, ಶಬರಿಮಲೆಯ ಮೇಲೆ ಅಡಗಿರುತ್ತ, ಹಳ್ಳಿಪಟ್ಟಣಗಳನ್ನು ಕೊಳ್ಳೆಹೊಡೆಯುತ್ತಿದ್ದನಂತೆ. ಆಗ ಶಾಸ್ತನು ಪಂದಲಂ ರಾಜನ ಸಾಕುಮಗನಾಗಿ ಮಣಿಕಂಠನೆಂಬ ಹೆಸರಿನಿಂದ ಬೆಳೆಯುತ್ತಿದ್ದನಂತೆ. ಮಣಿಕಂಠನು ವಾವಾರನ ಮೈತ್ರಿಯನ್ನು ಸಂಪಾದಿಸಿ ಅವರ ನೆರವಿನಿಂದ ಉದಯನನ್ನೂ ಅವನ ಸಂಗಡಿಗರನ್ನೂ ಎರುವೇಲಿಯಲ್ಲಿ ಹಿಡಿದು ಕೊಂದನಂತೆ. ಪಂದಲಂ ರಾಜನು ವಾವಾರನಿಗೆ ಭೂಮಿಕಾಣಿ ಕೊಟ್ಟು, ಎರುವೇಲಿಯಲ್ಲಿಯೇ ನೆಲಸುವಂತೆ ಕೇಳಿಕೊಂಡನಂತೆ. ಇದು ನಡೆದದ್ದು ಸುಮಾರು 900 ವರ್ಷಗಳ ಹಿಂದೆ ಎಂದು ಹೇಳುತ್ತಾರೆ.

ಶಬರಿಮಲೆ ದೇವಾಲಯದ ನಿರ್ವಹಣೆಯಲ್ಲಿ ವಾವಾರನ ಮನೆತನದವರಿಗೆ ಒಂದು ಹಕ್ಕಿದ್ದಿತು. ಮಕರವಿಳಕ್ಕು ಉತ್ಸವದಲ್ಲಿ ವಾವಾರನ ಸಂತತಿಯವರು ಪಾಲುಗೊಳ್ಳುವ ಪದ್ಧತಿಯಿದೆ. ಅಂತೂ ಎರುವೇಲಿಯಲ್ಲಿ ವಾವಾರನ ಸನ್ನಿಧಿಯಿದ್ದು ಅದು ಶಬರಿಮಲೆ ಯಾತ್ರಿಕರನ್ನು ಇಂದಿಗೂ ಆಕರ್ಷಿಸುತ್ತದೆ. ಪೆಟ್ಟತ್ತುಳ್ಳಲ್ ಎನಿಸಿಕೊಳ್ಳುವ ವಿಧಿಯಲ್ಲಿ ಯಾತ್ರಿಕರು ಮುಖಕ್ಕೆ ಮಸಿ ಬಳಿದುಕೊಂಡು ಪಟ್ಟಶಾಸ್ತನ ಗುಡಿಗೆ ಓಡಿ ಬಂದು ಅಲ್ಲಿ ಕಾಣಿಕೆ ಕೊಡುತ್ತಾರೆ. ಶಾಸ್ತನಿಗೆ ನೆರವಾದ ಕಿರಾತಕರನ್ನು ನೆನಪಿಗೆ ತರುವ ವಿಧಿಯಿದು.

ಒಂದು ನೂರು ವರ್ಷಗಳ ಹಿಂದೆ ಫ್ರಾನ್ಸಿನ ಡೇ ಎಂಬಾತನು ಬರೆದ ‘ದಿ ಲ್ಯಾಂಡ್ ಆಫ್ ಪೆರುಮಾಳ್ಸ್’ (ಮದ್ರಾಸು 1863) ಎಂಬ ಪುಸ್ತಕದಲ್ಲಿ ಶಾಸ್ತ ಮತ್ತು ವಾವಾರರಿಬ್ಬರಿಗೂ ಕ್ರೈಸ್ತಪಾದ್ರಿಯೊಬ್ಬ ನೆರವಾದ ಉಲ್ಲೇಖವಿದೆ. ಸಂತ ಆಂಡ್ರೂ ಎಂಬಾತನ ಸಮಾಧಿ ಸಮುದ್ರತೀರದ ಅಲೆಪ್ಪಿಯಲ್ಲಿದೆ. ಶಬರಿಮಲೆ ಯಾತ್ರಿಕರು ಇಲ್ಲಿಗೆ ಬಂದು ಸಮುದ್ರಸ್ನಾನ ಮಾಡಿ ಈ ಸಂತನ ಸಮಾಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಕ್ರಾಂಗನೂರಿಗೆ ಹೋಗುವ ಪದ್ಧತಿಯಿದ್ದತೆಂದು ಈ ಪುಸ್ತಕದಿಂದ ತಿಳಿದುಬರುತ್ತದೆ. ಈ ಸಂತನ ಬಾಳುವೆಯ ವಿವರಗಳಾಗಲೀ ಅವನಿಗೂ ಶಬರಿಗೂ ಒದಗಿಬಂದ ಸಂಬಂಧದ ವಿಚಾರವಾಗಲೀ ತಿಳಿದುಬರುವುದಿಲ್ಲ.

ಶಬರಿಮಲೆಯ ಮೇಲೆ ಶಾಸ್ತನ ಮೂರ್ತಿಯಿರುವ ಕಟ್ಟೆಗೆ ಪೂರ್ವದಿಕ್ಕಿನಲ್ಲಿ ಹದಿನೆಂಟು ಮೆಟ್ಟಲುಗಳಿವೆ, ಗುಡಿಯನ್ನು ಸೇರಲು ಈ ಮೆಟ್ಟಲುಗಳನ್ನು ಹತ್ತಿಹೋಗುವುದು ತುಂಬ ಶ್ರೇಯಸ್ಕರವೆಂದು ನಂಬಿಕೆ. ಇದಕ್ಕೆ ‘ಪದಿನೆಟ್ಟಂಪಡಿ’ ಎಂದು ಹೆಸರು. ಈ ಸೋಪಾನವನ್ನೇರುವಾಗ ಯಾತ್ರಿಕರು ತೆಂಗಿನಕಾಯಿ ಒಡೆಯುವ ಪದ್ಧತಿಯಿದೆ. ಉತ್ತರ ಮತ್ತು ಪಶ್ಚಿಮ ದಿಕ್ಕುಗಳಲ್ಲಿಯೂ ಮೆಟ್ಟಲುಗಳಿವೆ. ಆದರೆ ಇವು ಪದಿನೆಟ್ಟಂಪಡಿಯಷ್ಟು ಪವಿತ್ರವೆಂದು ಪರಿಗಣಿಸುವುದಿಲ್ಲ. ಈ ಹದಿನೆಂಟು ಮೆಟ್ಟಲುಗಳಿಗೆ ಆಧ್ಯಾತ್ಮಿಕ ಅರ್ಥವನ್ನೂ ಹೇಳುವುದಿದೆ.

ಹದಿನೆಂಟು ಪ್ರಬಲವಾದ ಸಂಖ್ಯೆ. ಅಷ್ಟಾದಶ ಪುರಾಣಗಳು, ಭಗವದ್ಗೀತೆಯ ಅಷ್ಟಾದಶ ಅಧ್ಯಾಯಗಳು, ಅಷ್ಟಾದಶ ಧಾನ್ಯಗಳು, ಅಷ್ಟಾದಶ ವಿವಾದಪದಗಳು, ಅಷ್ಟಾದಶ ಉಪಚಾರಗಳು ಇತ್ಯಾದಿ ಇತ್ಯಾದಿ. ಶಾಸ್ತನ ಗುಡಿಗಿರುವ ಹದಿನೆಂಟು ಮೆಟ್ಟಲುಗಳು ಜೀವದ ಹದಿನೆಂಟು ಆರೋಹಣ ಸ್ಥಾನಗಳು. ಶಾಸ್ತ ಪರಬ್ರಹ್ಮನಾದರೆ, ಯಾತ್ರಿಕ ಜೀವವಾದರೆ ಶಾಸ್ತನ ಬಲಗೈಯಲ್ಲಿರುವ ಚಿನ್ಮುದ್ರೆಯನ್ನು ಅನುಭವಿಸಿ, ಆನಂದನ್ನು ಪಡೆಯಲು ಈ ಹದಿನೆಂಟು ಮೆಟ್ಟಲುಗಳನ್ನು ಏರಿಹೋಗಬೇಕು. ಪೂರ್ವಭಾವಿಯಾಗಿ ಯಮ, ನಿಯಮಗಳನ್ನು ಅಭ್ಯಾಸಮಾಡಿ ಆನಂತರ ಪದಿನೆಟ್ಟಂಪಡಿಯನ್ನು ಮುಟ್ಟಬೇಕು. ಹದಿನೆಂಟು ಮೆಟ್ಟಲುಗಳ ಸಂಕೇತ ಹೀಗೆ– ಐದು ಇಂದ್ರಿಯಗಳು, ಎಂಟು ರಜಸ್ಸುಗಳು, ಮೂರು ಗುಣಗಳು, ವಿದ್ಯೆ ಮತ್ತು ಅವಿದ್ಯೆ. ಅದರೆ ಅದು ಸಭ್ಯತನದ ಮುಸುಕು ಬಲವಾದಾಗ ಮೂಡಿಬಂದ ವಿವರಗಳಷ್ಟೇ: ಪ್ರಾಚೀನ ಮನೋವೃತ್ತಿಯ ನೆಲೆಯವಲ್ಲ.

ಶಬರಿಮಲೆಯ ಮೇಲೆ ಶಾಸ್ತನ ಗುಡಿಯನ್ನು ಪರಶುರಾಮನ ಸೂಚನೆಯ ಮೇಲೆ ವಿಶ್ವಕರ್ಮನೇ ಕಟ್ಟಿದನೆಂದು ಸ್ಥಳಪುರಾಣ ಹೇಳುತ್ತದೆ. ಪರಶುರಾಮನು ಪಶ್ಚಿಮ ಘಟ್ಟಸಾಲಿನಲ್ಲಿ ಎಂಟು ಶಾಸ್ತ ದೇವಾಲಯಗಳನ್ನು ನಿರ್ಮಿಸಿದನೆಂದು ಪ್ರತೀತಿ. ಇವುಗಳಲ್ಲಿ ಶಬರಿಮಲೆ, ಅಚ್ಚೆನ್‌ಕೋಯಿಲ್, ಕುಲತ್ತುಪುಷ, ಅರಯನ್‌ಕಾವು ಇವು ಪ್ರಸಿದ್ಧವಾದುವು. ಮಧುರೆಯಿಂದ ತಿರುವಾಂಕೂರಿನ ಪಂದಲಂ ಪ್ರಾಂತ್ಯಕ್ಕೆ ಬಂದು ಅಲ್ಲಿ ಕ್ರಿಸ್ತಾಬ್ದ 904 ರಲ್ಲಿ ಅರಸೊತ್ತಿಗೆಯೊಂದನ್ನು ಆರಂಭಿಸಿದ ಪಾಂಡ್ಯ ರಾಜರಿಗೂ ಶಬರಿಮಲೆ ಗುಡಿಗೂ ಮೊದಲಿನಿಂದ ನೆಂಟು ಉಳಿದುಬಂದಿದೆ. ಶಬರಿಮಲೆಯಿಂದ ನೇರವಾಗಿ ಬರುವುದಾದರೆ ಪಂದಲಂ ಕೇವಲ ಇಪ್ಪತ್ತೈದು ಮೈಲಿದೂರದಲ್ಲಿದೆ. ಶಾಸ್ತನು ಮಣಿಕಂಠನಾಗಿ ಅವತರಿಸಿದಾಗ ಈ ರಾಜಮನೆತನದಲ್ಲಿಯೇ ಬೆಳೆದು ಈ ಪರಿಸರದಲ್ಲಿಯೇ ತನ್ನ ಸಾಹಸಕೃತ್ಯಗಳಿಂದ ಪ್ರಸಿದ್ಧನಾದುದು. ಶಬರಿಮಲೆಯ ಗುಡಿಯನ್ನು ಪಂದಲಂ ರಾಜರೇ ಕಟ್ಟಿಸಿದುದೆಂದು ತಿಳಿದುಬರುತ್ತದೆ. ಸುಮಾರು ಇನ್ನೂರು ವರ್ಷಗಳ ಹಿಂದೆ ತಿರುವಾಂಕೂರಿನ ಅರಸರು ಪಂದಲಂ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವವರೆಗೂ ಈ ಗುಡಿಯು ಪಂದಲಂ ಅರಸರ ವಶದಲ್ಲಿಯೇ ಇದ್ದಿತು. ಅನಂತರವೂ ದೇವರ ವಿಶೇಷ ಆಭರಣಗಳನ್ನು ಪಂದಲಂ ಅರಮನೆಯಲ್ಲಿಯೇ ಇರಿಸಿ ವರ್ಷಕ್ಕೊಮ್ಮೆ ಮಕರವಿಳಕ್ಕು ಸಂದರ್ಭದಲ್ಲಿ ಉತ್ಸವದಿಂದ ಬೆಟ್ಟದ ಮೇಲೆ ಗುಡಿಗೆ ಪಹರೆಯೊಡನೆ ಕೊಂಡೊಯ್ಯುವ ಪದ್ಧತಿ ಉಳಿದುಬಂದಿದೆ. ಗುಡಿಯಿರುವುದು ಕಾಡಿನ ನಡುವೆ ಆದುದರಿಂದ ಬೆಲೆ ಬಾಳುವ ಅಲಂಕರಣ ಸಾಮಗ್ರಿಗಳನ್ನೂ ವಸ್ತ್ರಾಭರಣಗಳನ್ನೂ ಗುಡಿಯಲ್ಲಿ ಇರಿಸಿಕೊಳ್ಳುವುದಿಲ್ಲ, ಪಂದಲಂ ಅರಮನೆಯಲ್ಲಿರುತ್ತದೆ.

ಪಂದಲಂ ಅರಸರು ಬರುವ ಮೊದಲೇ ಬೆಟ್ಟದ ಮೇಲೆ ಸಣ್ಣದೊಂದು ಗುಡಿ ಇದ್ದಿತೆಂಬುದು ದಿಟ. ಋಷಿಗಳು ನೀಲಮಲೆಯ ಮೇಲೆ ‘ಪೊನ್ನಂಬಲಮೇಡು’ (ಬಂಗಾರದ ಗುಡಿ)ಯನ್ನು ಕಟ್ಟಿಸಿದ್ದ ಉಲ್ಲೇಖವಿದೆ. ಇದು ಈಗ ಕಾಣುವುದಿಲ್ಲ. ಮೊದಲಿಗೆ ಶಬರಿಮಲೆ ಈಗಿನ ಹಾಗೆ ನಿರ್ಜನ, ವನ್ಯ ಪ್ರದೇಶವಾಗಿರಲಿಲ್ಲ. 1816–1820ರಲ್ಲಿ ಈ ಪ್ರಾಂತ್ಯವನ್ನು ಸರ್ವೇಕ್ಷಣ ಮಾಡಿ ಮತ್ತು ಕಾನ್ವರ್ ಇವರ ವರದಿಯ ಪ್ರಕಾರ ಈ ಬೆಟ್ಟದ ಮೇಲೂ ಆಸುಪಾಸಿನಲ್ಲೂ ಜನವಸತಿಯಿದ್ದಿತು. ಅಷ್ಟು ಮಾತ್ರವಲ್ಲದೆ ಪೂರ್ವದ ತಮಿಳುನಾಡಿನಿಂದ ಪಶ್ವಿಮದ ಮಲಯಾಳನಾಡಿಗೆ ಹೋಗುವ ವ್ಯಾಪಾರ ಮಾರ್ಗದಲ್ಲಿಯೇ ಈ ‍ಪ್ರದೇಶವಿದ್ದಿತು. ಕಾರಣಾಂತರದಿಂದ ಕಾಡು ದಟ್ಟವಾಗಿ ಬೆಳೆದು ಶಾಸ್ತನ ಗುಡಿ ದುರ್ಗಮವಾಗಿಬಿಟ್ಟಿತು, ಶಬರಿಮಲೆ ಯಾತ್ರೆ ಕಷ್ಟಸಾಧ್ಯವಾಗಿ ಪರಿಣಮಿಸಿತು.

ಪಶ್ಚಿಮ ಕರಾವಳಿಯ ಪ್ರಾಚೀನ ಗುಡಿಗಳಂತೆ ಶಬರಿಮಲೆಯ ಗುಡಿಯೂ ದಾರುಮಯವಾಗಿದ್ದು ಎರಡು ಬಾರಿ ಬೆಂಕಿಗೆ ತುತ್ತಾಯಿತು. ಮೂರ್ತಿಯೂ ಸೇರಿ ಇಡೀ ದೇವಾಲಯ ಸುಟ್ಟು ಬೂದಿಯಾದಂತೆ ತಿಳಿದುಬಂದಿದೆ. ಮಲಯಾಳ ಶಕೆ 1085ರಲ್ಲಿ ಎಂದರೆ ಕ್ರಿಸ್ತಾಬ್ದ 1910ರಲ್ಲಿ ಶಾಸ್ತನ ಮೂರ್ತಿಯನ್ನು ಪ್ರತಿಷ್ಠೆ ಮಾಡಿದರೆನ್ನುವ ವಿವರ ಗುಡಿಯಲ್ಲಿರುವ ಸಂಸ್ಕೃತ ಶಾಸನವೊಂದರಿಂದ ಸ್ಪಷ್ಟವಾಗುತ್ತದೆ. ಇದನ್ನು ಹೇಳುವ ಶ್ಲೋಕ ಇದು–

ಸ ಮೀನಭಾಸ್ವನ್ನಯನಃ ಪ್ರಿಯಾದಿನಾ

ಪ್ರಭಾಪತಿರ್ಭಾಗ್ಯವಶಾನವಾಲಯೇ !

ಪ್ರಭಾಕರಾಚಾರ್ಯಕರಪ್ರತಿಷ್ಠಿ ತೋ

ಮಹಾನಯಂ ವರ್ಷತು ಭೂರಿ ಮಂಗಳಂ !!

ಇಲ್ಲಿ ‘ಮೀನ’  ‘ಪ್ರಿಯ’ ಮೊದಲಾದ ಕೆಲವು ಪದಗಳು ಪ್ರತಿಷ್ಠೆಯ ವರ್ಷವನ್ನು ಸೂಚಿಸುತ್ತವೆ. ಗುಡಿಯನ್ನು ಹೊಸದಾಗಿ ಕಟ್ಟಿಸಿದರೆನ್ನುವುದು ‘ನವಾಲಯ’ ಎಂಬ ಮಾತಿನಿಂದ ತಿಳಿದು ಬರುತ್ತದೆ. ಮೂರ್ತಿಯನ್ನು ಪ್ರತಿಷ್ಠೆ ಮಾಡಿದ ಪ್ರಭಾಕರಾಚಾರ್ಯನು ಯಾರೆಂಬುದು ಸ್ಪಷ್ಟವಾಗುವುದಿಲ್ಲ. 1950ರಲ್ಲಿ ಮೂರ್ತಿಯನ್ನು ಪುನಃ ಪ್ರತಿಷ್ಠೆ ಮಾಡುವ ಸಂದರ್ಭವೊದಗಿತು. ಇದೇ ಈಗಿರುವ ಮೂರ್ತಿ, ಲೋಹದ್ದು.


ಮಂಗಳೂರಿನಲ್ಲಿ ಅಯ್ಯಪ್ಪ ಭಕ್ತರು (ಚಿತ್ರ: ಗೋವಿಂದರಾಜ ಜವಳಿ)

ಶಬರಿಮಲೆಯಿಂದಾಚೆಗೆ ಶಾಸ್ತ

ಕೇರಳದಲ್ಲಿ ಶಬರಿಮಲೆಯಲ್ಲದೆ, ಇನ್ನೂ ಮೂರು ಶಾಸ್ತ ಕ್ಷೇತ್ರಗಳೂ ಪ್ರಸಿದ್ಧಿವಾಗಿವೆ– ಅಚ್ಚೆನ್ ಕೋಯಿಲ್, ಕುಲತ್ತುಪುಷ, ಆರ್ಯನ್‌ಕಾವು. ಶಾಸ್ತನು ತನ್ನ ಬಾಲ್ಯವನ್ನು ಅಚ್ಚನ್‌ಕೋಯಿಲ್‌ನಲ್ಲೂ, ಕೌಮಾರವನ್ನು ಆರ್ಯನ್‌ಕಾವಿನಲ್ಲೂ ಕಳೆದು ಕುಲತ್ತುಪುಷದಲ್ಲಿ ಪೂರ್ಣಾ ಮತ್ತು ಪುಷ್ಕಳೆಯರನ್ನು ಮದುವೆಯಾಗಿ, ಶಬರಿಮಲೆಯಲ್ಲಿ ಸಂನ್ಯಾಸಾಶ್ರಮವನ್ನು ಸ್ವೀಕರಿಸಿದನೆಂದೂ ಹೇಳುತ್ತಾರೆ. ಇವೆಲ್ಲವೂ ಬೆಟ್ಟಗುಡ್ಡಗಳೇ. ದಟ್ಟವಾದ ಕಾಡಿನ ನಡುವೆಯೇ ಶಾಸ್ತನ ಗುಡಿಯಿರುವುದು ಸ್ವಾರಸ್ಯ. ಹಳ್ಳಿಗಳಲ್ಲಿ ಶಾಸ್ತನ ಗುಡಿಯಿದ್ದಾಗಲೂ ಅದರ ಸುತ್ತಲೂ ಗಿಡಮರಗಳನ್ನು ಕಾಡಾಗಿ ಬೆಳೆಸುತ್ತಾರೆ. ಇದಕ್ಕೆ ‘ಕಾವು’ ಎಂದು ಹೆಸರು. ಶಂಕೊಟ್ಟೆಯ ಬಳಿಯಿರುವ ‘ಆರ್ಯನ್‌ಕಾವು’ ಇದಕ್ಕೆ ಒಂದು ನಿದರ್ಶನ. ಪೆರಿಯಾರ್ ನದೀ ಶಾಖೆಯೊಂದು ಮಾಡ್‌ನಲ್ಲಿ ಜಲಪಾತವಾಗಿ ಮಾರ್ಪಟ್ಟ ಕಡೆ ಒಂದು ಶಾಸ್ತನ ಗುಡಿಯಿದೆ, ಇದು ‘ಮೆಟ್ಟಿಂಗಳ್ ಶಾಸ್ತ’ ಎಂದು ಪ್ರಸಿದ್ಧವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೂಡ ಶಾಸ್ತನ ಪೂಜೆ ವಿಶೇಷವಾಗಿ ನಡೆಯುತ್ತದೆ. ಅಲ್ಲಿನ ದೈವಸ್ಥಾನಗಳಲ್ಲಿ ಕುಕ್ಷಿಶಾಸ್ತನನ್ನೂ (ಕುಟ್ಟಿಚಾತ್ತ) ‘ಶಾಸ್ತವು’ ಕಲ್ಲುಗಳನ್ನೂ ಕಾಣಬಹುದು. ದೇಶಮಂಗಲದಲ್ಲಿ ಕುಕ್ಷಿ ಶಾಸ್ತನಿಗೇ ಗುಡಿಯಿದೆ. ಧ‌ರ್ಮಸ್ಥಳದ ಗುಡಿಯಲ್ಲಿಯೂ ಶಾಸ್ತನಿಗೆ ಆಲಯವಿದೆ. ಕೊಡಗು ಸೀಮೆಯಲ್ಲಿ ಶಾಸ್ತನನ್ನು ಅಯ್ಯಪ್ಪನೆಂದೇ ಕರೆದು ಅವನನ್ನು ಕೇರಿ ಕೇರಿಗಳಲ್ಲಿಯೂ ಆರಾಧಿಸುತ್ತಾರೆ. ಇಲ್ಲಿನ ಬಲ್ಮಾವತಿ ಬಳಿಯಿರುವ ಪೊನಿಕಾಡು ಎಂಬ ಕಾಡಿನಲ್ಲಿರುವ ಅಯ್ಯಪ್ಪನ ಗುಡಿ ಪ್ರಸಿದ್ಧವಾದುದು. ತಮಿಳುನಾಡಿನಲ್ಲಿ ಅಯ್ಯಪ್ಪನನ್ನು ‘ಅಯ್ಯನಾರ್’ ಎಂಬ ಹೆಸರಿನಿಂದ ಕರೆಯುತ್ತಾರೆ. ಪ್ರತಿ ಹಳ್ಳಿಯಲ್ಲಿಯೂ ಅಯ್ಯನಾರ್ ಕೋವಿಲ್ ಇರುತ್ತದೆ. ಗ್ರಾಮದೇವತೆ ಅವನು.

ಶಾಸ್ತ ಎನ್ನುವುದು ಸಂಸ್ಕೃತಪದ, ‘ಶಾಸ್ತ’ ಎನ್ನುವ ಮಾತಿಗೆ ಒಡೆಯ, ಗುರು, ಸ್ವಾಮಿ, ನಿಯಮಗಳನ್ನು ವಿಧಿಸುವಾತ ಎಂದರ್ಥ. ಬೌದ್ಧ ಪಂಥದಲ್ಲಿ ಬುದ್ಧನನ್ನು ಶಾಸ್ತನೆಂದು ಕರೆಯುತ್ತಾರೆ. ಪಾಳಿಯಲ್ಲಿ ’ಸತ್ಥಾ’ ಎಂದಾಗುತ್ತದೆ. ಅಮರಕೋಶವು ಬುದ್ಧನ ಹೆಸರುಗಳನ್ನು ಹೇಳುತ್ತ ‘ಮುನೀಂದ್ರ, ಶ್ರೀಘನಃ ಶಾಸ್ತಾ ಶಾಕ್ಯಮುನಿಸ್ತು ಯಃ’ ಎನ್ನುತ್ತದೆ. ಶಬರಿಮಲೆಯು ಮೊದಲಿಗೆ ಬೌದ್ಧವಿಹಾರವಾಗಿ ಇದ್ದಿತೆಂದೂ, ಅಲ್ಲಿನ ಧರ್ಮಶಾಸ್ತನು ಬುದ್ಧನೇ ಎಂದೂ ಒಂದು ವಾದವಿದೆ. ‘ಸ್ವಾಮಿಯೇ ಶರಣಂ, ಶರಣಂ ಅಯ್ಯಪ್ಪ’ ಎಂದು ಯಾತ್ರಿಕರು ಅಡಿಗಡಿಗೆ ಹೇಳುವ ಶರಣಾಗತಿ ಮಂತ್ರವು ಬೌದ್ಧರ ತ್ರಿಶರಣದಿಂದ ಪ್ರಭಾವಿತವಾದುದೆಂದೂ, ಶಾಸ್ತನಿಗೆ ನೆರವಾದನೆಂದು ಕಥೆಯಿರುವ ವಾವಾರ್ ದಿಟವಾಗಿ ದ್ವಾಪರನೆನ್ನುವ ಬೌದ್ಧಸಂತನೆಂದೂ, ಯಾತ್ರಿಕರು ಕೈಗೊಳ್ಳುವ ಅಹಿಂಸಾವಾದಿ ವ್ರತಗಳು ಬೌದ್ಧ ಧರ್ಮದಿಂದ ಆಯ್ದುಕೊಂಡವೇ ಎಂದೂ ಈ ವಾದ ಸಮರ್ಥಿಸಿಕೊಳ್ಳುತ್ತದೆ. ಶಾಸ್ತನ ಇನ್ನೊಂದು ಹೆಸರಾದ ಅಯ್ಯಪ್ಪನಲ್ಲಿರುವ ‘ಅಯ್ಯ’ ಎನ್ನುವುದು (ಸಂಸ್ಕೃತದ ‘ಆರ್ಯ’) ಬುದ್ಧನಿಗೆ ಹೆಸರೆಂದೂ ಇದೇ ವಾದದ ವಿವರಗಳು, ಈ ವಾದವನ್ನು ಎತ್ತಿಹಿಡಿಯುವುದು ಕಷ್ಟ. ಸ್ಥೂಲ ಸಾದೃಶ್ಯಗಳಿಂದ ಏನನ್ನೂ ಸ್ಥಾಪಿಸುವುದೂ ಸಲ್ಲದು. ಇದು ಹೇಗಾದರೂ ಇರಲಿ, ಶಾಸ್ತ ಮತ್ತು ಅಯ್ಯಪ್ಪ ಎರಡೂ ಪದಗಳು ಸಂಸ್ಕೃತದಿಂದಲೇ ಬಂದಿವೆ ಎನ್ನುವುದೂ ಜಿಜ್ಞಾಸೆಯೇ. ಅಯ್ಯಪ್ಪ ಎನ್ನುವುದು ಗೌಡದ್ರಾವಿಡ ಪದ, ದ್ರಾವಿಡ ಆಯ್ಯ ಸಂಸ್ಕೃತ ಆರ್ಯದಿಂದ ಬಂದುದಲ್ಲವೆಂದು ಭಾಷಾಶಾಸ್ತ್ರಜ್ಞರು ಸ್ಪಷ್ಟಪಡಿಸಿದ್ದಾರೆ. ಸಂಸ್ಕೃತದ ‘ಆರ್ಯ ಪ್ರಾಕೃತದಲ್ಲಿ ‘ಅಜ್ಜ’ ‘ಅಯ್ಯ’ ಎಂದಿರುವುದು ದಿಟ. ಆದರೆ ಅಯ್ಯವೇ ಮೊದಲಿನ ರೂಪವೆಂದೂ ಅದರ ಸಂಸ್ಕೃತೀಕರಣ ‘ಆರ್ಯ’ವಾಯಿತೆಂದೂ ತಿಳಿದುಬಂದಿದೆ.

ಅಯ್ಯ, ಅಪ್ಪ ಎರಡೂ ತಂದೆಗೆ ಬಳಸುವ ಸಂಬೋಧನ ಪದಗಳು, ತಮಿಳುನಾಡಿನಲ್ಲಿ ಶಾಸ್ತನನ್ನು ಅಯ್ಯನ್, ಅಯ್ಯನಾರ್ ಎಂದು ಕರೆಯುತ್ತಾರೆ, ಇದು ಗೌರವಾರ್ಥದ ಪ್ರಯೋಗ. ತಮಿಳ್ ಅಕಾರಾದಿ ನಿಘಂಟಿನಲ್ಲಿ ‘ಅಯ್ಯನ್ ಎನ್ಬದು ಮುತ್ತೋನ್ ಚಾತ್ತನ್ ಅಪ್ಪನ್ ಚುವಾಯಿ ಎನುಂ ಪೆಯರ್’ ಎಂದಿದೆ. ಅಯ್ಯನ್ ಎನ್ನುವುದಕ್ಕೆ ಅಪ್ಪನ್ ಮತ್ತು ಚುಬಾಮಿ (ಸ್ವಾಮಿ) ಎರಡೂ ಪರ್ಯಾಯ ಪದಗಳೇ. ‘ಸ್ವಾಮಿಯೇ ಶರಣಂ, ಶರಣಂ ಅಯ್ಯಪ್ಪ’ ಎನ್ನುವ ಮಂತ್ರದಲ್ಲಿ ಸ್ವಾಮಿ, ಅಯ್ಯಪ್ಪ ಎರಡೂ ಪದಗಳು ಜನರಿಗೆ ಜನಾಂಗಕ್ಕೆ, ಜಗತ್ತಿಗೆ ತಂದೆಯಾದವನನ್ನು ನಿರ್ದೇಶಿಸುತ್ತದೆ. ಶಾಸ್ತ ಎನ್ನುವ ಮಾತು ಇಷ್ಟು ಸ್ಪಷ್ಟವಾಗಿಲ್ಲ. ಮೇಲೆ ತಿಳಿಸಿದ ವಾದಕ್ಕೆ ಇಂಬು ಕೊಡುವಂತೆ ಮಧುರೈ ತಮಿಳ ಸಂಗಂನವರ ನಿಘಂಟಿನಲ್ಲಿ ‘ಚಾತ್ತನ್ ಎನ್ಬದುವೇ ಅರಹನುಂ ಬುದ್ಧನುಂ ಹರಿಹರ ಪುತ್ತಿನರನುಡಂ ಮುಪ್ಪೆಯರೇ’ ಎಂದಿದೆ. ಎಂದರೆ ಅರ್ಹನ್ (ಜಿನ), ಬುದ್ಧ ಮತ್ತು ಹರಿಹರಪುತ್ರ ಮೂವರಿಗೂ ಶಾಸ್ತನೆಂದೇ ಹೆಸರು. ಈ ನಿಘಂಟು ಸಿದ್ಧವಾಗುವ ಕಾಲಕ್ಕೆ ಸಂಸ್ಕೃತದ ಶಾಸ್ಯನಿಂದ ದ್ರಾವಿಡ ‘ಚಾತ್ತನ್’ ಮೈದಳೆಯಿತೆನ್ನುವ ನಂಬಿಕೆಯಿದ್ದಿತು. ಆದರೆ ಈಗ ಈ ನಂಬಿಕೆ ಶಿಥಿಲವಾಗಿದೆ. ಚಾತ್ತನೇ ಶಾಸ್ತನ ಮೂಲರೂಪವೋ ಎಂಬ ಸಂಶಯವಿದೆ.

ಈ ವಿವಾದ ಇಲ್ಲಿ ಪ್ರಸಕ್ತವಲ್ಲ, ದಕ್ಷಿಣ ದೇಶದಲ್ಲಿ ದ್ರಾವಿಡ ಧರ್ಮದ ನೆಲೆಯಲ್ಲಿ ಚಾತ್ತನ್ ಎಂಬ ದೇವತೆಯ ಆರಾಧನೆ ತುಂಬಾ ಪ್ರಾಚೀನವಾದುದು ಎನ್ನುವುದು ಮುಖ್ಯ ವಿಚಾರ. ಆರ್ಯ ಸಂಸ್ಕೃತಿ ಇಲ್ಲಿ ತನ್ನ ಪ್ರಭಾವವನ್ನು ಬೇರೂರಿಸುವ ಮೊದಲೇ ಚಾತ್ತನ್ ಪ್ರಬಲನಾದ ದೇವತೆಯಾಗಿದ್ದ. ಆರ್ಯ ದೇವತೆಗಳು ಇಲ್ಲಿಗೆ ಬಂದಿಳಿದು ಬೇರು ಬಿಟ್ಟು ನಿಂತಾಗಲೂ ಈ ಚಾತ್ತನ್ ಕಳೆಗುಂದಲಿಲ್ಲ. ಸಂಪರ್ಕದ ಫಲವಾಗಿ ಈ ಚಾತ್ತನಿಗೂ ಪುರಾಣಪ್ರಸಕ್ತಿ ಒದಗಿತು. ಆಗಮಶುದ್ಧಿ ದೊರೆಯಿತು. ದೇವತೆಯ ಸ್ಥಾನ ‍ಪ್ರಾಪ್ತವಾಯಿತು. ಶಿವನೊಂದಿಗೆ ವಿಷ್ಣುವಿನೊಂದಿಗೆ ಹತ್ತಿರದ ನೆಂಟೂ ಬೆಳೆಯಿತು.

ದಕ್ಷಿಣ ದೇಶದ ತೀರ ದಕ್ಷಿಣದಭಾಗ ಪ್ರಾಚೀನ ದ್ರಾವಿಡ ಸಂಸ್ಖೃತಿಯ ನೆಲವೀಡು. ಇಲ್ಲಿ ಚಾತ್ತನ್ ಗ್ರಾಮದೇವತೆ, ಬೇಟೆಗಾರರನ್ನು ಕಾಪಿಡುವ ದೈವ, ಆದಿವಾಸಿಗಳ, ಕಾಡು ಜನರ, ಕಿರಾತರ ಆರಾಧ್ಯ ದೇವತೆ. ಬೆಟ್ಟಗುಡ್ಡಗಳಲ್ಲಿ ವಾಸಿಸುವ ಜನರಿಗೆ ಇವನು ಬೇಟೆಯಲ್ಲಿ ನೆರವಾಗುವ ದೈವ. ಬಯಲು ದೇಶದಲ್ಲಿರುವ ಆದಿವಾಸಿಗಳಿಗೆ ದುಷ್ಟಭೂತ, ತುಂಬ ಕಾರಣಿಕವುಳ್ಳ ಕ್ರೂರದೇವತೆ. ಕೇರಳ ದೇಶದಲ್ಲಿ ಪುಲಯನ್, ವೇಲನ್, ಕನನ್, ಕಣಿಯನ್, ಮಲಯರಾಯನ್, ಊರಾಳಿ, ಮನ್ನಾನ್, ಕಾನಿಕರನ್, ವಿಷುವನ್, ಮಲಪಂಡಾರಂ ಮೊದಲಾದ ಆದಿವಾಸಿ ಜನಾಂಗಗಳಿಗೆ ಚಾತ್ತನೆಂದರೆ ಭಯ ಭಕ್ತಿ. ಅವನನ್ನು ಕಾಡಿ ಬೇಡಿ ಒಲಿಸಿಕೊಳ್ಳುವ ಕಾತರ ಅವರಲ್ಲುಂಟು. ಆ ಜನಾಂಗಗಳ ಮಂತ್ರವಾದಿಗಳು ಚಾತ್ತನನ್ನು ಪೂಜೆಮಾಡಿ ವಶೀಕರಣ, ಸಮ್ಮೋಹನ, ಅಭಿಚಾರ, ಅಪಸ್ಮಾರ, ಭೇದನ, ವೇದನಗಳಿಗೆ ಅವನನ್ನು ಬೇಡುತ್ತಾರೆ. ಸೇಡು ತೀರಿಸಿಕೊಳ್ಳುವವರಿಗೆ ಚಾತ್ತನಿಗಿಂತ ಹೆಚ್ಚು ಸಮರ್ಥದೈವವಿಲ್ಲ. ಯಾರ ಕೈವಾಡವೂ ಕಾಣದೆ ಮನೆಯ ಮೇಲೆ ಕಲ್ಲು ಬೀಳುವುದು. ಊಟದಲ್ಲಿ ಹುಳು ಕಾಣಿಸುವುದು, ಅಮೇಧ್ಯ ಸಿಗುವುದು, ಕಾರಣ ಇಲ್ಲದೆ ರೋಗಕ್ಕೆ ಪಕ್ಕಾಗುವುದು ಇಂಥ ನೂರೆಂಟು ಉಪದ್ರವಗಳಿಗೆ ಚಾತ್ತನೇ ನಿಮಿತ್ತ. ಅವನಿಗೆ ಅಸಾಧ್ಯವಾದುದೇ ಇಲ್ಲ, ತಂಟೆ ತಕರಾರೆಂದರೆ ಅವನಿಗೆ ಪ್ರೀತಿ. ಅವನನ್ನು ಒಲಿಸಿಕೊಳ್ಳಲು ಶರಣಾಗತಿಯೊಂದೇ ದಾರಿ. ಅವರ ನೆರವನ್ನು ಪಡೆದವರು ಅವನಿಗೆ ಕೋಳಿ, ಆಡು, ಹೆಂಡ, ಗಾಂಜಾ ಇವನ್ನು ಸಮರ್ಪಿಸುತ್ತಾರೆ. ಆದಿವಾಸಿ ಜನರಂತೆ ಅವರ ದೇವರಾದ ಚಾತ್ತನೂ ಮಾಂಸಾಹಾರಿ, ಮದ್ಯಪ್ರಿಯ.

ಅವರು ಸಾಮಾನ್ಯವಾಗಿ ಚಾತ್ತನನ್ನು ಹನ್ನೆರಡು ವರ್ಷದ ಹುಡುಗನೆಂದು ಚಿತ್ರಿಸಿಕೊಳ್ಳುತ್ತಾರೆ. ಅವರಿಗೆ ಅವನು ‘ಕುಟ್ಟಿಚಾತ್ತ’ ಎಂದರೆ ಹುಡುಗಶಾಸ್ತ. ಕೈಯಲ್ಲಿ ಕತ್ತಿ ಹಿಡಿದು, ಎಮ್ಮೆಯ ಮೇಲೆ ಕುಳಿತ ಕುಟ್ಟಿಚಾತ್ತ ಯಮನಂತೆಯೇ ಕಾಣುತ್ತಾನೆ. ಕೇರಳದಲ್ಲೆಲ್ಲ ಅವನಿಗೆ ಪೂಜಾಸ್ಥಾನಗಳಿವೆ, ಇವಕ್ಕೆ ಕೊಟ್ಟಿಲುಗಳೆಂದು ಹೆಸರು. ಹಳ್ಳಿಗೆ ಹೋಗುವ ಮೊದಲೇ ಬಾಗಿಲಲ್ಲಿ ಇಂಥ ಗುಡಿಗಳನ್ನು ಕಾಣಬಹುದು. ಮಧ್ಯ ಕೇರಳದ ಅವನಂಗೋಡೆ ಎಂಬ ಹಳ್ಳಿಯಲ್ಲಿ ಕುಟ್ಟಿಚಾತ್ತನ ಮುಖ್ಯ ದೇವಾಲಯವಿದೆ. ಬಾಲಗ್ರಹ, ಪಿಶಾಚ ಬಾಧೆ, ಅಪಮೃತ್ಯು, ಉನ್ಮಾದ ಮೊದಲಾದ ವೈಪರೀತ್ಯಗಳು ಕುಟ್ಟಿಚಾತ್ತನು ಸಿಟ್ಟಿಗೆದ್ದನೆನ್ನುವ ಸೂಚನೆ. ಅವನನ್ನು ಶಾಂತಗೊಳಿಸಲು ಜನ ಅವನಂಗೋಡೆಯಲ್ಲಿ ಸೇರುತ್ತಾರೆ. ತ್ರಿಚೂರಿನ ಬಳಿ ತ್ರಿಪ್ರಯರ್ ಎಂಬಲ್ಲಿ ಚಾತ್ತಸೇವಾಮಠವೊಂದಿದೆ. ಚಾತ್ತಸೇವೆಯೆನ್ನುವುದು ಆದಿವಾಸಿಗಳಲ್ಲಿ ವಿಶೇಷವಾಗಿ ಹರಡಿರುವ ಧಾರ್ಮಿಕ ಕಲ್ಪನೆ.


ಶಬರಿಮಲೆಯಲ್ಲಿ ಬಾಲೆಯೊಬ್ಬಳ ಘೋಷಣೆ (ಚಿತ್ರ: ಶಿವಕುಮಾರ್ ಬಿ.ಎಚ್.)

ಮುಖ್ಯವಾಗಿ ಚಾತ್ತ ಬೇಟೆಗಾರರ ದೇವತೆ, ಕಿರಾತಶಾಸ್ತನೆಂದೇ ವ್ಯವಹಾರವಿದೆ. ಕಾನಿಕ್ಕನ್ ಮೊದಲಾದ ಕಾಡುಜನರ ಬೇಟೆಯ ದೇವತೆಗಳಿಗೆ ‘ಮುತ್ತನ್’ಗಳೆಂಬ ಹೆಸರಿದೆ. ಮುತ್ತನ್ ಅಥವಾ ಮುತ್ತೋನ್ ಎನ್ನುವುದು ಚಾತ್ತನ ಹೆಸರುಗಳಲ್ಲಿ ಒಂದು ಎಂದ ಮೇಲೆ ಉಲ್ಲೇಖಿಸಿದ ತಮಿಳು ಆಕಾರಾದಿ ನಿಘಂಟು ಹೇಳುತ್ತದೆ. ಈ ದೇವತೆಗಳಿಗೆ ಹೆಂಡ, ಅವಲಕ್ಕಿ, ಕೋಳಿಗಳ ನೈವೇದ್ಯ ನಡೆಯುತ್ತದೆ. ಪೂಜಾರಿಯಾದವನು ವಿಶೇಷಪೂಜೆಯ ಸಂದರ್ಭದಲ್ಲಿ ಮೂರು ದಿವಸ ಮುನ್ನ ಸ್ತ್ರೀಸಂಪರ್ಕವಿಲ್ಲದೆ ನಿಯಮದಿಂದ ಇರಬೇಕು, ಈ ದೇವತೆಗಳಿಗೆ ಎಡೆಯಿಡುವ ಸ್ಥಳಕ್ಕೆ ಹೆಂಗಸರು ಬರಬಾರದು.

ಬೆಟ್ಟದ ಕೋಡುಗಳು ಚಾತ್ತನ ನೆಲೆಯೆನ್ನುವ ನಂಬಿಕೆಯೂ ಆದಿವಾಸಿಗಳಲ್ಲಿದೆ. ಕಡಿದಾಗಿದ್ದು ಏರಲು ಕಷ್ಟವೆನಿಸಿದಷ್ಟೂ ಅದರ ಬಗ್ಗೆ ಭಯ ಭಕ್ತಿಗಳು ಹೆಚ್ಚುತ್ತವೆ. ತಮ್ಮ ಪರಿಸರದಲ್ಲಿರುವ ಬೆಟ್ಟವನ್ನು ಅವರು ಚಾತ್ತನ ರೂಪಗಳೆಂದೇ ಬಗೆದು ಅವುಗಳ ಪ್ರತೀಕಗಳೆಂದು ಸಣ್ಣ ಸಣ್ಣ ಕಲ್ಲುಗಳನ್ನು ತಮ್ಮ ಗುಡಿಸಲ ಹೊರಗೆ ಇರಿಸಿಕೊಳ್ಳುತ್ತಾರೆ, ಅವುಗಳಿಗೆ ಪೂಜೆಯೂ ಉಂಟು. ಬೆಟ್ಟವು ಚಾತ್ತನ ನೆಲೆ ಮಾತ್ರವಲ್ಲ, ಚಾತ್ತನು ಬೆಟ್ಟದ ಜೀವವೇ ಎಂದು ಅವರ ಕಲ್ಪನೆ. ಶಬರಿಮಲೆಯ ಯಾತ್ರಿಕರು ಪೆರುಂತೊಡೆಯ ಕಲ್ಲುಬಂಡೆಗಳನ್ನು ಪೂಜಿಸುವುದೂ, ಕಲ್ಲೆಂಡಕುನ್ನುವಿನಲ್ಲಿ ಬೆಟ್ಟದ ತುದಿಗೆ ಕಲ್ಲನ್ನು ಎಸೆಯುವುದೂ ಕೊಟ್ಟಪಾಡಿಯಿಂದ ಮುಂದಕ್ಕೆ ಹೋಗುವಾಗ ಶಬರಿಮಲೆವರೆಗೂ ಸಿಗುವ ಎಲ್ಲ ಕಲ್ಲಬಂಡೆಗಳನ್ನು ಪೂಜಿಸುವುದೂ ಈ ಕಲ್ಪನೆಯನ್ನು ‍ಪ್ರತಿಬಿಂಬಿಸುತ್ತದೆ. ಶಬರಿಮಲೆಯ ಗುಡಿಯಲ್ಲಿ ಕಲ್ಲುಕಟ್ಟೆಯ ಮೇಲೆ ಶಾಸ್ತನ ಮೂರ್ತಿಯೊಂದಿದೆ ಮಲೆ ದೇವತೆಯ ಪ್ರತೀಕವನ್ನೂ ಇರಿಸಿ ಪೂಜಿಸುವುದನ್ನು ಇಲ್ಲಿ ನೆನೆಸಿಕೊಳ್ಳಬೇಕು.

ಶಾಸ್ತನ ಹಿನ್ನೆಲೆ ಇದು. ಆದಿವಾಸಿಗಳ, ಕಾಡುಜನರ ಪ್ರಾಚೀನ ಕಲ್ಪನೆಯಾದ ಪ್ರಪಂಡ ಮಲೆದೈವ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತು ಜನರ ಭಯಕ್ಕೂ, ಆತಂಕಕ್ಕೂ, ಸಂತೋಷಕ್ಕೂ, ಸಮಾಧಾನಕ್ಕೂ, ಕಾರಣವಾಗಿ, ಬೆಟ್ಟವಾಗಿ, ನದಿಯ ನೀರಾಗಿ, ಕಲ್ಲುಬಂಡೆಯಾಗಿ, ಮರವಾಗಿ, ಮೃಗವಾಗಿ ಕಾಣಿಸಿಕೊಂಡಿರುವುದು ಪ್ರಾಚೀನಮನೋವೃತ್ತಿಯ ನೆಲೆಯಲ್ಲಿ. ಇರುವುದೆಲ್ಲ ಚಾತ್ತನೇ, ಓಡಿಯಾಡುವುದೆಲ್ಲ ಚಾತ್ತನೇ. ಬೆಳೆಯುವುದೆಲ್ಲಾ ಚಾತ್ತನೇ, ‘ಸರ್ವಂ ಶಾಸ್ತಮಯಂ’ ಎನ್ನುವ ಕಲ್ಪನೆ. ಶಬರಿಮಲೆ ಯಾತ್ರಿಕರು ತಮ್ಮ ತಮ್ಮೊಳಗೆ ವ್ಯವಹಾರ ಮಾಡುವಾಗ ಅಯ್ಯಪ್ಪನೆಂದೇ ಕರೆದುಕೊಳ್ಳುತ್ತಾರೆ. ಒಬ್ಬೊಬ್ಬ ಯಾತ್ರಿಕನೂ ಅಯ್ಯಪ್ಪನೇ, ಅಷ್ಟು ಮಾತ್ರವಲ್ಲ, ಎದುರಿಗೆ ಬಂದ ಆನೆಯೂ ಅಯ್ಯಪ್ಪನ ರೂಪವೇ. ಅದು ‘ಆನೆಸ್ವಾಮಿ’, ಅದು ಹಾಕಿದ ಲದ್ದಿಯೂ ಅಯ್ಯಪ್ಪನೇ, ಅದು ‘ಪೀ ಸ್ವಾಮಿ’, ಕಣ್ಣಿಗೆ ಕಂಡ ಕಲ್ಲು ‘ಕಲ್ಲು ಸ್ವಾಮಿ’ ಅವರ ಮಂತ್ರದಲ್ಲಿ ಮಾತ್ರ ಸ್ವಾಮಿ ಅಯ್ಯಪ್ಪನಿಗೆ ಸ್ಥಾನವಲ್ಲ, ಅವರ ಎಲ್ಲ ನಡೆಯಲ್ಲೂ ನುಡಿಯಲ್ಲೂ ಆಲೋಚನೆಯಲ್ಲೂ ಸ್ವಾಮಿ ಅಯ್ಯಪ್ಪ ಎಡೆಬಿಡದೆ ಪ್ರವೇಶಿಸುತ್ತಾನೆ. ಅವರ ಕಣ್ಣಿಗೆ ಕಾಣುವುದೆಲ್ಲ ಅಯ್ಯಪ್ಪನೆ, ಅವರ ಮನಸ್ಸೆಲ್ಲ ಅಯ್ಯಪ್ಪನಲ್ಲೇ. ಇದು ಶಬರಿಮಲೆಯ ಯಾತ್ರೆಯ ವೈಶಿಷ್ಟ್ಯ.

ಶಬರಿಮಲೆಯ ಶಾಸ್ತನು ಆದಿವಾಸಿಗಳ ಚಾತ್ತನೇ ಎನ್ನುವುದು ನಿರ್ವಿವಾದ. ಯಾತ್ರಿಕರು ಕೈಗೊಳ್ಳುವ ವ್ರತಗಳೂ, ಧರಿಸುವ ಬಿಲ್ಲು ಬಾಣಗಳೂ, ಪೆಟ್ಟುತ್ತುಳನ್ ವಿಧಿಯೂ ಇದನ್ನು ಸಮರ್ಥಿಸುತ್ತವೆ. ಬರಿಯ ಗ್ರಾಮದೇವತೆಯಾಗಿದ್ದು, ಬೇಟೆರಾಯನಾಗಿದ್ದ, ಪ್ರಭಾವಶಾಲಿ ಭೂತನಾಗಿದ್ದ ಚಾತ್ತನು ಆರ್ಯಸಂಸ್ಕೃತಿಯ ಪದರದಲ್ಲಿ ಸೇರಿಕೊಂಡು ಪುರಾತ್ವರ ದೈವ, ಪರಬ್ರಹ್ಮಸ್ವರೂಪವಾದ ಶಾಸ್ತನಾದುದು ಸೋಜಿಗ, ಸ್ವಾರಸ್ಯ. ಈ ಮಾರ್ಪಾಡಿಗೆ ಎಡೆಮಾಡಿಕೊಡುವಂತೆ ಹಲವಾರು ಪುರಾಣ ಕಥೆಗಳು ಹುಟ್ಟಿಕೊಂಡವು.


ಶಬರಿಮಲೆಯಲ್ಲಿ ಅಯ್ಯಪ್ಪ ದರ್ಶನಕ್ಕೆ ಸರದಿಯಲ್ಲಿ ನಿಂತಿರುವ ಭಕ್ತರು (ಚಿತ್ರ: ಶಿವಕುಮಾರ್ ಬಿ.ಎಚ್.)

ಕಲ್ಪನೆ, ಪುರಾಣಕಥೆಗಳಿಗೆ ಅರೆಐತಿಹಾಸಿಕ ವಿವರದ ಸೇತುಬಂಧ

ಪ್ರಾಚೀನ ಕಲ್ಪನೆಗಳಿಗೂ ಪುರಾಣ ಕಥೆಗಳಿಗೂ ಸೇತುಬಂಧವಾಗಿ ಒಂದು ಅರೆ ಐತಿಹಾಸಿಕ ವಿವರವಿದೆ. ಅದಕ್ಕೆ ಒಂದು ಸಂಪ್ರದಾಯಿಕ ಪೀಠಿಕೆಯನ್ನೂ ಅಳವಡಿಸಿಕೊಂಡಿದ್ದಾರೆ. ಶಬರಿ ಈಗಿನ ಶಬರಿಮಲೆಯಲ್ಲೇ ತಪಸ್ಸು ಮಾಡುತ್ತಿದ್ದಾಗ ಪಾಂಡ್ಯರಾಜ್ಯದಲ್ಲಿ ವಿಜಯನೆಂಬ ಬ್ರಾಹ್ಮಣ ಮಕ್ಕಳಿಲ್ಲದೆ ಕೊರಗುತ್ತಿದ್ದ. ಅವನು ಶಬರಿಯನ್ನು ಕೇಳಲು ಆಕೆ ಶಬರೀತೀರ್ಥದಲ್ಲಿ ಸ್ನಾನಮಾಡೆಂದು ಸೂಚಿಸಿದಳು. ಆಗಲೆಂದು ಬ್ರಾಹ್ಮಣ ಸ್ನಾನ ಮಾಡಲು ಅವನ ಪಾಪಗಳೆಲ್ಲ ಕರಿಯ ಕಾಗೆಗಳಂತೆ ಹೊರಗೆ ಬಂದು ನೀರಿನಲ್ಲಿ ತೊಳೆದು ಹೋದುವು. ಒಡನೆಯೇ ಧರ್ಮಶಾಸ್ತ ಕಾಣಿಸಿಕೊಂಡು ಮುಂದಿನ ಜನ್ಮದಲ್ಲಿ ಬ್ರಾಹ್ಮಣನಿಗೆ ತಾನು ಮಗನಾಗಿ ಬರುವುದಾಗಿ ಭರವಸೆ ಕೊಟ್ಟು ಮರೆಯಾದನು.

ಇಷ್ಟು ಪೀಠಿಕೆ. ಪಾಂಡ್ಯದೇಶದ ರಾಜಕುಮಾರನೊಬ್ಬ ಕೇರಳದ ಪಂದಲಂಗೆ ಬಂದು ಅಲ್ಲಿ ಅರಸೊತ್ತಿಗೆಯನ್ನು ಆರಂಭಿಸಿದುದು ದಿಟ, ಅದು ಮೊನ್ನೆ ಮೊನ್ನೆಯವರೆಗೂ ಉಳಿದು ಬಂದಿದ್ದಿತು. ಇದಾದುದು ಕ್ರಿಸ್ತಾಬ್ಧ 908 ರಲ್ಲಿ ಎಂದೂ ಊಹೆಯಿದೆ. ಈ ರಾಜಮನೆತನದಲ್ಲಿ ರಾಜಶೇಖರನೆಂಬ ಒಬ್ಬ ರಾಜನಿದ್ದನೆಂದೂ, ಅವನಿಗೆ ಪಂಪನದಿಯ ದಡದಲ್ಲಿ ಮಗುವೊಂದು ದೊರೆತು ಅದನ್ನು ಸಾಕು ಮಗನಾಗಿ ಬೆಳೆಸಿದನೆಂದೂ ಕಥೆಯಿದೆ. ರಾಜಶೇಖರನೇ ಹಿಂದಿನ ಜನ್ಮದಲ್ಲಿ ಬ್ರಾಹ್ಮಣ ವಿಜಯನಾಗಿದ್ದು ಅವನ ಸಾಕುಮಗನೇ ಧರ್ಮಶಾಸ್ತನೆಂದು ವಿವರಿಸುವುದು ಪೀಠಿಕೆಯ ಉದ್ದೇಶ. ಪಂದಲಂ ಎನ್ನುವುದು ಶಬರಿಮಲೆಯಿಂದ ಇಪ್ಪತ್ತೈದು ಮೈಲಿ ದೂರವಿರುವ ಊರು. ಮಗು ದೊರೆತ ಪಂಬನದಿಯ ದಂಡೆಯನ್ನು ಈಗಲೂ ಗುರುತಿಸುತ್ತಾರೆ. ಈ ನದಿ ಶಬರಿಮಲೆ ಬೆಟ್ಟಸಾಲಿನಲ್ಲಿಯೇ ಹುಟ್ಟುತ್ತದೆ. ದ್ರಾವಿಡ ಪಂಬವನ್ನು ಸಂಸ್ಕೃತ ಮಾಡಿ ಪಂಪಾ ಎಂದು ಕರೆಯುವುದುಂಟು. ಮಣಿಮಲೆಯೆಂದು ಅಲ್ಲಿನ ಬೆಟ್ಟಸಾಲಿಗೆ ಹೆಸರಿದೆ. ಈ ಬೆಟ್ಟಸಾಲಿನ ಐದು ಕೋಡುಗಳನ್ನು (ತಲಪಾರ ಮೇಲೆ ಇತ್ಯಾದಿ) ಮಲಯ ರಾಯನ್ ಆದಿವಾಸಿಗಳ ದೈವಗಳೆಂದು ಪೂಜಿಸುತ್ತಾರೆ. ರಾಜಶೇಖರನ ಸಾಕುಮಗನ ಹೆಸರು ಮಣಿಕಂಠ ಎನ್ನುವುದನ್ನು ಈ ಹಿನ್ನೆಲೆಯಲ್ಲಿ ಗಮನಿಸಬೇಕು. ಅವನು ಮಣಿಮಲೆಯ ಕೊಡುಗೆಯೇ ಎಂದು ಜನರು ಬಗೆದಿದ್ದರೆ ಆಶ್ಚರ್ಯವಿಲ್ಲ. ಮಲೆದೈವವೇ ಜೀವತಳೆದು ಬಂದಿತೆನ್ನುವ ಕಲ್ಪನೆ ಪ್ರಾಚೀನ ಮನೋವೃತ್ತಿಯಲ್ಲಿ ಸಹಜವೇ.

ಅಂತೂ ಮಣಿಕಂಠ ರಾಜನ ಸಾಕುಮಗನಾದರೂ ಬೇಟೆಗಾರರಲ್ಲಿ ಬೇಟೆಗಾರನಾಗಿ, ಬಿಲ್ಲಾಳಾಗಿ, ಸಾಹಸಿಯಾಗಿ, ಶೂರನಾಗಿ ಬೆಳೆದ. ಹನ್ನೆರಡು ವರ್ಷದ ಹರೆಯದಲ್ಲೇ ಅಲ್ಲಿನ ಆದಿವಾಸಿಗಳಿಗೆ ನಾಯಕನಾದ. ಅವನೊಂದಿಗೆ ಕಿರಾತರೂ ಕಾಡುಜನರೂ ಬೆಟ್ಟಗುಡ್ಡಗಳಲ್ಲಿ ಕಾಡುಮೇಡುಗಳಲ್ಲಿ ಸಂಚರಿಸಿ ದುಷ್ಟಪ್ರಾಣಿಗಳನ್ನೂ ದರೋಡೆಕೋರರನ್ನು ಹಡಗುಕಳ್ಳರನ್ನೂ ಸದೆಬಡಿಯುತ್ತಿದ್ದರು. ಉದಯನೆಂಬ ಕಳ್ಳನನ್ನು ಮಣಿಕಂಠ ಎರುವೇಲಿಯಲ್ಲಿ ಹಿಡಿದು ಕೊಂದ ಪ್ರಸ್ತಾ‍ಪ ಹಿಂದೆಯೇ ಬಂದಿತಷ್ಟೆ. ಈ ಕೆಲಸದಲ್ಲಿ ಅವನಿಗೆ ನೆರವಾದ ವಾವಾರನ ಪ್ರಸ್ತಾಪವೂ ಬಂದಿತು. ಮಣಿಕಂಠ ದೊರೆತಾಗ ರಾಜಶೇಖರನಿಗೆ ಮಕ್ಕಳಿರಲಿಲ್ಲ. ಅವನೇ ತನ್ನ ಉತ್ತರಾಧಿಯಾಗತಕ್ಕವನೆಂದು ರಾಜ ನಿರ್ಧರಿಸಿದ್ದ. ಆದರೆ ಹತ್ತು ಹನ್ನೆರಡು ವರ್ಷಗಳ ನಂತರ ರಾಣಿಗೆ ಗಂಡುಮಗನೊಬ್ಬ ಹುಟ್ಟಿದ. ರಾಜನು ಮಾತ್ರ ಮಣಿಕಂಠನನ್ನೇ ಹಿರಿಯ ಮಗನೆಂದು ಬಗೆದಿದ್ದ. ಇದರಿಂದ ರಾಣಿಗೆ ತನ್ನ ಮಗನ ವಿಚಾರವಾಗಿ ಕಾತರ ಮೂಡಿತು. ಮಣಿಕಂಠನಿರುವವರೆಗೆ ತನ್ನ ಮಗ ರಾಜನಾಗುವ ಸಂಭವವಿಲ್ಲವೆಂದು ಆಕೆಗೆ ಖಚಿತವಾಯಿತು. ಹೇಗಾದರೂ ಮಣಿಕಂಠನನ್ನು ಮುಗಿಸುವ ಸನ್ನಾಹ ಮಾಡಿದಳು. ಮಂತ್ರಿಯ ಮತ್ತಿತರ ಅಧಿಕಾರಿಗಳ ನೆರವನ್ನು ಪಡೆದು ತನಗೆ ದುಸ್ಸಹವಾದ ಹೊಟ್ಟೆಬೇನೆಯೆಂದೂ, ಹುಲಿಯ ಹಾಲಿನಿಂದ ಮಾತ್ರ ಈ ವ್ಯಾಧಿ ಗುಣವಾಗುವುದೆಂದೂ ವದಂತಿ ಹರಡಿಸಿದಳು. ಬೇಟೆಯಲ್ಲಿ ಗುರಿತಪ್ಪದ ಬಿಲ್ಲಾಳಾದ ಮಣಿಕಂಠನೇ ಹುಲಿಯ ಹಾಲನ್ನು ತರಲು ತಕ್ಕವನೆಂದು ಮಂತ್ರಿ ಸೂಚಿಸಿದನು. ರಾಜ ಹಿಂಜರಿದರೂ ಮಣಿಕಂಠ ತರಲೊಪ್ಪಿದ. ಇರುಮುಡಿಯನ್ನು ತಲೆಯ ಮೇಲೆ ಹೊತ್ತು ತಾನೊಬ್ಬನೇ ಹೊರಟ.

ಇರುಮುಡಿಯೆಂದರೆ ಎರಡು ಬಾಯಿರುವ ಗಂಟು, ಒಂದರಲ್ಲಿ ತನಗೆ ಬೇಕಾದ ಆಹಾರ, ಇನ್ನೊಂದರಲ್ಲಿ ತ್ರಿಣೇತ್ರಶಿವನ ಶಕ್ತಿಯನ್ನು ಆಹ್ವಾನಿಸಿದ ತೆಂಗಿನಕಾಯಿ. ಈಗಲೂ ಶಬರಿಮಲೆಯ ಯಾತ್ರಿಕರು ಎರುವೇಲಿಯಿಂದ ಹೊರಡುವಾಗ ಇರುಮುಡಿಯನ್ನು ಹೊತ್ತು ಹೊರಡುತ್ತಾರೆ. ಈ ಗಂಟನ್ನು ಕಟ್ಟುವ ವಿಧಿ ‘ಕಟ್ಟುಮುರುಕ್ಕು’ ಎನಿಸಿಕೊಳ್ಳುತ್ತದೆ. ಶಾಸ್ತ ಪ್ರಸ್ಥಾನವನ್ನು ನೆನೆಸಿಕೊಳ್ಳುವ ವಿಧಿಯಿದು, ಮಣಿಕಂಠನು ಎರುವೇಲಿಯಿಂದ ಹೊರಟು ಕಾಡಿನ ಒಳಹೊಕ್ಕು ಹುಲಿಯನ್ನು ಹಿಡಿದು ಅದರ ಬೆನ್ನೇರಿ ಪಂದಲು ರಾಜಧಾನಿಗೆ ಬಂದನೆಂದು ಕಥೆ. ದೇವತೆಗಳೆಲ್ಲ ಚಿರತೆಗಳಾಗಿ, ದೇವೆಂದ್ರನೇ ಹುಲಿಯಾಗಿ ಶಾಸ್ತನ ಬರವನ್ನು ಎದುರು ನೋಡುತ್ತಿದ್ದರೆಂದು ಉಪಕಥೆ. ಮಣಿಕಂಠನು ಹುಲಿಯನ್ನೇರಿ ಹಿಂದಿರುಗಿ ಬಂದಾಗ ಕಾಡಿನ ಚಿರತೆಗಳೆಲ್ಲ ಅವನನ್ನು ಹಿಂಬಾಲಿಸಿದುವಂತೆ. ಇದನ್ನು ನೋಡಿ ದಿಗಿಲುಬಿದ್ದ ರಾಣಿಗೆ ಒಮ್ಮಗೇ ಗುಣವಾಗಿ ಬಿಟ್ಟಿತಂತೆ. ರಾಜನು ಮಣಿಕಂಠನ ಸಾಹಸಕ್ಕೆ ಮೆಚ್ಚಿ ಅವನೇ ರಾಜನಾಗಬೇಕೆಂದು ಬೇಡಿಕೊಂಡ. ಆದರೆ ಮಣಿಕಂಠ ಒಪ್ಪದೆ ಕಾಡಿನೊಳಗೆ ಮರೆಯಾದ. ಮರೆಯಾಗುವ ಮೊದಲು ದೂರದಲ್ಲಿದ್ದ ಆಲದಮರಕ್ಕೆ ಬಾಣವೊಂದನ್ನು ಬಿಟ್ಟು ಅಲ್ಲಿ ತನಗೆ ಗುಡಿಯೊಂದನ್ನು ಕಟ್ಟುವಂತೆ ಸೂಚಿಸಿದೆ. ಇದು ಸರಂಕುಟ್ಟಿಯಲ್ ಎಂದು ಪ್ರಸಿದ್ಧವಾಗಿದೆ. ಈಗಲೂ ಮೊದಲ ಬಾರಿ ಶಬರಿಮಲೆಗೆ ಯಾತ್ರೆ ಹೋದವರು ಈ ಮರದೆಡೆಗೆ ಬಾಣ ಬಿಡುವ ಪದ್ಧತಿಯಿದೆ. ತನ್ನ ಪೂಜೆಯನ್ನು ನಡೆಸುವ ವಿಧಾನವನ್ನೂ, ಅದಕ್ಕೆ ಯಾತ್ರಿಕರು ಕೈಗೊಳ್ಳಬೇಕಾದ ನಿಯಮಗಳನ್ನೂ ಮಣಿಕಂಠನೇ ಸೂಚಿಸಿದನಂತೆ.

ಹೀಗೆ ಮರೆಯಾದ ಮಣಿಕಂಠ ಜನರಿಗೆ ದೈವವಾದ. ವೀರರು ತೀರಿಕೊಂಡು ಭೂತಗಳಾಗುವುದು, ಪಿತೃದೇವತೆಗಳಾಗಿ ಪೂಜೆಗೊಳ್ಳುವುದು ಎಲ್ಲ ಪ್ರಾಚೀನ ಜನಾಂಗಗಳಲ್ಲಿಯೂ ಕಂಡುಬರುವ ವಿವರ. ಅದ್ಭುತ ಕೆಲಸಗಳನ್ನು ಮಾಡಿ ಜನರಿಗೆ ಆಶ್ವರ್ಯವನ್ನೂ ಸುಖವನ್ನೂ ಒದಗಿಸಿದ ಮಣಿಕಂಠ ಅವರ ದೈವವಾದ ಚಾತ್ತನಲ್ಲಿ ಬೆರೆತು ಹೋದುದು ಸಹಜವೇ. ಚಾತ್ತನ ಅಸ್ಪಷ್ಟ, ಅನಿರ್ದಿಷ್ಟ ವ್ಯಕ್ತಿತ್ವಕ್ಕೆ ಮಣಿಕಂಠನ ಮಾನವ ವ ್ಯಕ್ತಿತ್ವವು ಕೂಡಿಕೊಂಡು ಶಾಸ್ತನ ಕಲ್ಪನೆ ಮೂಡಿತೆನ್ನಬಹುದು. ಆದರೆ ಈ ನೆಲೆಯಲ್ಲಿ ಶಾಸ್ತನಿಗೂ ಶಿವ–ವಿಷ್ಣು–ಶಕ್ತಿಯರಿಗೂ ಯಾವ ಸಂಬಂಧವೂ ಕಾಣಬರುವುದಿಲ್ಲ. ಮುಂದೆ ಶಿವನೂ ವಿಷ್ಣುವೂ ನಾಡಿನಲೆಲ್ಲ ವಿಶಿಷ್ಟ, ದೇವತೆಗಳಾಗಿ ಜನಪ್ರಿಯರಾಗತೊಡಗಿದಾಗ ಶಾಸ್ತನ ಭಕ್ತರು ಇವರಿಬ್ಬರಿಗೂ ಶಾಸ್ತನ ನೆಂಟನ್ನು ಒದಗಿಸಲೆತ್ನಿಸುತ್ತಿದುದು ಸಹಜವೇ. ಈ ಪ್ರಯತ್ನದ ಫಲವಾಗಿ ಶಾಸ್ತ ಹರಿಹರ ಪುತ್ರನಾದ. ಭಾಗವತ ಪುರಾಣ, ಸುಪ್ರಭೇದಾಗಮಗಳಲ್ಲಿ ಶಾಸ್ತನ ಬಗ್ಗೆ ಕಥೆಗಳು ತಲೆದೋರಿದವು. ಮಣಿಕಂಠನಿಗೂ ಹರಿಹರ ಪುತ್ರನಿಗೂ ತಾದಾತ್ಮ್ಯವನ್ನು ಕಲ್ಪಿಸಿದರು. ಮಹಿಷಾಸುರ ವಧೆ, ಅಮೃತ ಮಂಥನ, ದತ್ತಾತ್ರೇಯ ಚರಿತ್ರೆ, ಭಸ್ಮಾಸುರ ಪ್ರಸಂಗ ಇವೆಲ್ಲವನ್ನೂ ಶಾಸ್ತನಿಗೆ ಅಳವಡಿಸಿದರು. ಹೀಗಾಗಿ ಇತರ ದೇವತೆಗಳಂತೆ ಶಾಸ್ತನೂ ಪುರಾಣ ಪ್ರಸಿದ್ಧನಾಗಿ, ಆಗಮಸಿದ್ಧನಾಗಿ ಮೈದೆಳೆದು ನಿಲ್ಲುವುದು ಸಾಧ್ಯವಾಯಿತು.

ಮಲೆಯಾಳ ಪಂಚಾಂಗದಲ್ಲಿ ವೃಶ್ಚಿಕ ಮಾಸದ ಮೊದಲ ದಿನದಿಂದ (ಎಂದರೆ ಸಾಮಾನ್ಯವಾಗಿ ನವೆಂಬರ್ ತಿಂಗಳ ನಡುವೆ) ಆರಂಭವಾಗಿ ಮಕರ ಸಂಕ್ರಾಂತಿಯಂದು (ಎಂದರೆ ಜನವರಿ 14ನೆಯ ತಾರೀಖಿನ ಸುಮಾರು) ಮುಗಿಯುವ ಎರಡು ತಿಂಗಳ ಕಾಲ ಶಬರಿಮಲೆಯಲ್ಲಿ ಮಂಡಲಪೂಜೆ ನಡೆಯುತ್ತದೆ. ಈ ಪೂಜೆ ಮತ್ತು ಉತ್ಸವಕ್ಕಾಗಿ ಕೇರಳದ ಎಲ್ಲ ಭಾಗಗಳಿಂದಲೂ, ದಕ್ಷಿಣ ದೇಶದ ನಾನಾ ಕಡೆಗಳಿಂದಲೂ ಲಕ್ಷಾಂತರ ಜನರು ಗುಂಪು ಗುಂಪಾಗಿ ಬಂದು ನೆರೆಯುತ್ತಾರೆ. ಹೀಗೆ ಶಬರಿಮಲೆಗೆ ಬರುವ ಯಾತ್ರಿಕರು ಕೆಲವು ನಿಯಮಗಳನ್ನು ಅನುಸರಿಸಿ, ಮೂವತ್ತು ನಲವತ್ತು ಮೈಲಿ ಕಾಡಿನೊಳಗೆ ನಡೆದೇ ಬರಬೇಕು. ಕಷ್ಟಸಾಧ್ಯವಾದ ಯಾತ್ರೆಯಾದರೂ ಜನ ಉತ್ಸಾಹದಿಂದ, ಶ್ರದ್ಧೆಯಿಂದ ಕೃತಕೃತ್ಯತೆಯಿಂದ ಅದನ್ನು ಕೈಕೊಳ್ಳುವುದು ಸೋಜಿಗವೆನಿಸುತ್ತದೆ.

‘ಶಾಸ್ತನ ವಿಚಾರವಾಗಿ ಇವರಲ್ಲಿ ಹೆಂಗಸರಿಗೆ ನಿರ್ಬಂಧ ಹೆಚ್ಚು’

ಯಾತ್ರಿಕರಲ್ಲಿ ಗಂಡಸರೇ ಹೆಚ್ಚು ಮಂದಿ ಇರುತ್ತಾರೆ. ಮೈನರೆಯದ ಹೆಣ್ಣು ಮಕ್ಕಳೂ, ಮುಟ್ಟು ನಿಂತ ಹೆಂಗಸರೂ ಶಬರಿಮಲೆಗೆ ಹೋಗಿ ಬರಬಹುದು. ಇತರರು ಹೋಗುವ ಹಾಗಿಲ್ಲ. ಮಲೆಯರಾಯನ್ ಎನಿಸಿಕೊಳ್ಳುವ ಆದಿವಾಸಿಗಳು ಶಬರಿಮಲೆಯಾತ್ರೆ ನಡೆಸುವ ಪದ್ಧತಿಯನ್ನೇ ಹೆಚ್ಚು ಕಡಿಮೆ ಎಲ್ಲರೂ ಅನುಸರಿಸುತ್ತಾರೆ. ಈ ಅದಿವಾಸಿಗಳು ಕೊಟ್ಟಾಯಂ ಜಿಲ್ಲೆಯ ತೊಡುಪುಷ, ಮಿನಚಿಲ್, ಚಂಗನಚ್ಚೇರಿ ತಾಲ್ಲೂಕುಗಳಲ್ಲಿ ಬಹುಮಟ್ಟಿಗೆ ವಾಸ ಮಾಡುವ ಕಾಡುಜನ. ಕಾಡುಪ್ರಾಣಿಗಳನ್ನು ಕೊಂದು ಹೊಟ್ಟೆ ಹೊರೆದುಕೊಳ್ಳುತ್ತಾರೆ, ಬೇಸಾಯವನ್ನೂ ಆಗಾಗ ನಡೆಸುವ ಅಲೆಮಾರಿ ಜನ ಇವರು. ಇವರ ಸಾಂಸ್ಕೃತಿಕ ನೆಲೆ ತುಂಬ ಪ್ರಾಚೀನವಾದುದು. ಇವರು ಬೆಟ್ಟಗಳೇ ದೈವಗಳೆಂದು ಪೂಜಿಸುತ್ತಾರೆ, ಶಬರಿಮಲೆಯ ಶಾಸ್ತನಿಗೆ ವಿಶೇಷವಾಗಿ ನಡೆದುಕೊಳ್ಳುತ್ತಾರೆ.

ಶಾಸ್ತನ ವಿಚಾರವಾಗಿ ಇವರಲ್ಲಿ ಹೆಂಗಸರಿಗೆ ನಿರ್ಬಂಧ ಹೆಚ್ಚು. ಎಲ್ಲ ಆದಿವಾಸಿಗಳೂ ತಮ್ಮ ಧಾರ್ಮಿಕ ವಿಧಗಳಿಂದ ಹೆಂಗಸರನ್ನು ದೂರವಿಡುವುದು ವಾಡಿಕೆಯೇ, ಕೆಲವು ದೇವತೆಗಳ ಬಗ್ಗೆ ಈ ನಿರ್ಬಂಧ ಕಠಿಣವಾಗುತ್ತದೆ. ಶಬರಿಮಲೆಯ ಯಾತ್ರೆಗೆ ಹೊರಟ ಮಲಯ ರಾಯನ್ ಆದಿವಾಸಿ ಹದಿನಾಲ್ಕು ದಿನಗಳಿಗೆ ಮುಂಚೆ ಸ್ತ್ರೀ ಸಂಪರ್ಕವನ್ನು ಬಿಟ್ಟಿರುತ್ತಾನೆ. ಮಾಂಸಾಹಾರವನ್ನೂ ಬಿಟ್ಟಿರುತ್ತಾನೆ. ಮನ್ನಾನ್ ಆದಿವಾಸಿಗಳೂ ಬೇಸಾಯದ ವಿಧಿಗೆ ಮೊದಲು ಐದು ದಿನ ಹೆಂಗಸರೊಂದಿಗೆ ಕೂಡುವುದಿಲ್ಲ. ಕಾನಿಕ್ಕಾರನ್ ಆದಿವಾಸಿಗಳಲ್ಲಿ ದೇವರಿಗೆ ಎಡೆಯಿಡುವ ಸ್ಥಳಕ್ಕೆ ಹೆಂಗಸರು ಬರುವುದಿಲ್ಲ. ನಾಗಬನಗಳಿಗೆ, ಕಾವುಗಳಿಗೆ, ದೈವಗಳು ನೆಲೆಸಿರುವ ಬೀಡುಗಳಿಗೆ ಹೆಂಗಸರ ಪ್ರವೇಶವಿಲ್ಲ. ರಜಸ್ವಲೆಯಾಗುವುದು, ಯೋನಿನಿಂದ ರಕ್ತಸ್ರಾವವಾಗುವುದು ಹೆಂಗಸಿನ ದೋಷಗಳೆಂದು ಬಗೆದು, ಧಾರ್ಮಿಕ ವಿಧಿಯಿಂದ ಅಂಥ ಹೆಂಗಸರನ್ನು ಬಹಿಷ್ಕೃತೆಯೆಂದು ನಿಶ್ಚಯಿಸುವುದು ಪ್ರಾಚೀನ ಮನೋಧರ್ಮ. ಪ್ರಪಂಚದ ಎಲ್ಲ ಆದಿವಾಸಿಗಳಲ್ಲಿಯೂ ಇದನ್ನು ಗಮನಿಸಬಹುದು. ಸಂದರ್ಭ ಇಲ್ಲದಿದ್ದರೂ ಸಂಭವವೇ ಸಾಕಾಗುತ್ತದೆ. ಸಾಮಾನ್ಯವಾಗಿ ಆದಿವಾಸಿಗಳ ಗಂಡು ದೈವಗಳು ವೀರಾಳುಗಳು, ಬಹಿಷ್ಠೆಯಾಗುವ, ಅಬಲೆಯಾದ ಹೆಂಗಸೆಂದರೆ ಅವರಿಗೆ ಸಹನೆಯಿಲ್ಲ. ಸುಸಂಸ್ಕೃತ ಜನಾಂಗಗಳಲ್ಲಿ ಧಾರ್ಮಿಕ ವ್ರತಗಳಲ್ಲಿ ಬ್ರಹ್ಮಚರ್ಯಕ್ಕೆ ಕೊಟ್ಟಿರುವ ಪ್ರಾಶಸ್ತ್ಯ ಗಮನಾರ್ಹವಾದುದು. ಈ ಸ್ತ್ರೀದ್ವೇಷಕ್ಕೆ ಪ್ರತೀಕಾರವೆಂಬಂತೆ ಕೆಲವು ವಿಧಿಗಳಿರುವುದೂ ಸ್ವಾರಸ್ಯ.

ನಿದರ್ಶನಕ್ಕೆ ಕೊಡಗುಸೀಮೆಯ ಬಲ್ಮಾವತಿಯಲ್ಲಿ ಅಯ್ಯಪ್ಪನ ಪೂಜೆಗೆ ಪೂರ್ವಭಾವಿಯಾಗಿ ನಡೆಯುವ ವಿಧಿಯನ್ನು ನೋಡಿ. ಇಲ್ಲಿನ ಪೊನಿಕಾಡಿನಲ್ಲಿ ಅಯ್ಯಪ್ಪನ ಗುಡಿಯೊಂದಿದೆ. ಅಯ್ಯಪ್ಪ ಅವಿವಾಹಿತ, ಬ್ರಹ್ಮಚಾರಿ, ಪೂಜೆಯ ದಿನ ಮುಂಜಾನೆ ಹೆಂಗಸರೆಲ್ಲ ಕಲೆತು ಗುಡಿಯ ಬಳಿಯಿರುವ ಕೊಳಕ್ಕೆ ಮೀಯಲು ಹೋಗುತ್ತಾರೆ. ಮಿಂದು ಬರಿಬೆತ್ತಲೆಯಿರುವಾಗ ಒಬ್ಬೊಬ್ಬಳೂ ಒಂದೊಂದು ಒಲೆ ಹೊತ್ತಿಸಿ, ಅರಿಶಿನ ಕೂಡಿದ ಅಕ್ಕಿಹಿಟ್ಟಿನ ರೊಟ್ಟಿಯನ್ನು ಬೇಯಿಸಿ ಅಯ್ಯಪ್ಪನಿಗೆ ಎಡೆಯಿಡುತ್ತಾಳೆ. ರೊಟ್ಟಿ ಆಗುತ್ತಿರುವಾಗ, ಬೆತ್ತಲೆ ಹೆಂಗಸರು ಕೂಡಿಕೊಂಡು ಆಶ್ಲೀಲವೆನಿಸುವ ಮಾತುಕತೆಯಲ್ಲಿ ತೊಡಗುತ್ತಾರೆ. ಎಡೆಯಿಟ್ಟ ನಂತರ, ಅವರೆಲ್ಲ ಅಯ್ಯಪ್ಪ ಕೊಡಗು ಸೀಮೆಗೆ ಬಂದ ಕತೆಯನ್ನು ಹಾಡಿನಲ್ಲಿ ಹಾಡಿ, ಕುಣಿಯುತ್ತಾರೆ. ಇದರ ಮನೋವೈಜ್ಞಾನಿಕ ಇಂಗಿತ ಪ್ರಬಲವಾದುದು. ಜನರ ಪ್ರಸುಪ್ತ ಚೇತನದ ಆಳದಲ್ಲಿ ಅಡಗಿರುವ ಕಾಮುಕತೆ ಮತ್ತು ಮೇಲಿನ ಸ್ತರದಲ್ಲಿ ಮೂಡಿ ಬರುವ ಸಾಂಘಿಕ ಸಮನ್ವಯ ದೃಷ್ಟಿ ಇವುಗಳ ತುಯ್ದಾಟ ಇಲ್ಲಿ ಕಾಣಬರುತ್ತದೆ.

ಇದು ಹೇಗಾದರೂ ಇರಲಿ, ಮಲಯರಾಯನ್ ಆದಿವಾಸಿಗಳು ಹದಿನಾಲ್ಕು ದಿನಗಳ ಸಂಯಮವನ್ನು ನಡೆಸಿದ ನಂತರ ಶಬರಿಮಲೆಗೆ ಹೊರಡುವ ಹಿಂದಿನ ದಿನ ಎಲ್ಲ ಯಾತ್ರಿಕರೂ ಕಲೆತು ಪ್ರಯಾಣದಲ್ಲಿ ಬೇಕಾಗುವ ಪಾಥೇಯವನ್ನು ಕಟ್ಟಿಕೊಳ್ಳುತ್ತಾರೆ. ಅನಂತರ ಬೆಂಕಿಯ ಸುತ್ತ ಕುಣಿದಾಡುತ್ತಿದ್ದಾಗ ಒಬ್ಬನಿಗೆ ಆವೇಶ ಬರುತ್ತದೆ. ಅವನು ಆ ಸ್ಥಿತಿಯಲ್ಲಿ ಆಡುವ ಮಾತು ಅಯ್ಯಪ್ಪನೇ ನುಡಿಸಿದನೆಂದು ನಂಬಿಕೆ. ಹೀಗೆ ಅವಿಷ್ಟನಾದ ‘ಅಯ್ಯಪ್ಪ’ ಬೆಂಕಿಯ ಮೇಲೆ ನಡೆಯುತ್ತಾನೆ. ಜನರ ಶ್ರದ್ಧೆ ಬಲವಾಗುತ್ತದೆ. ಈ ಮನೋವೃತ್ತಿಯಿಂದ ಹೊರಟು ಎರುವೇಲಿಯಲ್ಲಿ ಮಲೆಯಾಳ ಧನುರ್ಮಾಸದ ಇಪ್ಪತ್ತೇಳನೆಯ ದಿನ (ಎಂದರೆ ಜನವರಿ ಹತ್ತರ ಸುಮಾರಿಗೆ) ಪೆಟ್ಟುತ್ತುಳಲ್ ವಿಧಿಯನ್ನು ಆಚರಿಸುತ್ತಾರೆ.

ಅಯ್ಯಪ್ಪನ ದೀಕ್ಷೆ ಮತ್ತು ಶಬರಿಮಲೆಯಾತ್ರೆ

ಆದಿವಾಸಿಗಳು ಮಾತ್ರವಲ್ಲದೆ ಸುಸಂಸ್ಕೃತರೂ ಯಾತ್ರೆಗೆ ಪೂರ್ವಭಾವಿಯಾಗಿ ನಲವತ್ತೊಂದು ದಿನಗಳ ಸಂಯಮವನ್ನು ನಡೆಸುತ್ತಾರೆ. ಈ ಅವಧಿಯಲ್ಲಿ ಲೈಂಗಿಕ ವ್ಯಾಪಾರ, ಮದ್ಯಪಾನ, ಮಾಂಸಾಹಾರ ಎಲ್ಲವೂ ವರ್ಜ್ಯ. ತಲೆಗೂದಲನ್ನು ಕತ್ತರಿಸದೇ, ಮುಖಕ್ಷೌರ ಮಾಡಿಸದೆ ದೀಕ್ಷೆ ತೊಡುತ್ತಾರೆ. ನೀಲಿಗಪ್ಪು ಬಣ್ಣದ ಬೆಟ್ಟಯುಟ್ಟು, ತುಲಸೀಮಾಲೆಯನ್ನೋ ರುದ್ರಾಕ್ಷಿಯನ್ನೋ ಧರಿಸುತ್ತಾರೆ. ಕಪ್ಪ ಬಟ್ಟೆಯ ಉದರ ಬಂಧವನ್ನು ಕಟ್ಟಿಕೊಳ್ಳುವುದು ವಾಡಿಕೆ, ಅದನ್ನು ತುಂಬ ಜಾಗರೂಕತೆಯಿಂದ ನೋಡಿಕೊಳ್ಳುತ್ತಾರೆ. ಯಾವ ಕೆಲಸವನ್ನು ಮಾಡಬೇಕಾದರೂ ಅಯ್ಯಪ್ಪನ ಹೆಸರನ್ನು ಮುಂದೆ ಮಾಡಿಕೊಂಡು ಅಡಿಗಡಿಗೆ ‘ಸ್ವಾಮಿಯೇ ಶರಣಂ–ಶರಣಂ ಅಯ್ಯಪ್ಪ’ ಎಂಬ ಸೂತ್ರವನ್ನು ಪುರಶ್ಚರಣ ಮಾಡುತ್ತಿರುತ್ತಾರೆ.

ಈ ಯಾತ್ರಿಕರ ಗುಂಪಿನಲ್ಲಿ ಎಲ್ಲರೂ ಸ್ವಾಮಿಗಳೇ, ಅಯ್ಯಪ್ಪಗಳೇ. ಅವರ ವ್ಯಕ್ತಿತ್ವ ಯಾತ್ರೆಯ ಅವಧಿಯಲ್ಲೇ ಮರೆಯಾಗಿರುತ್ತದೆ. ಪರಸ್ಪರ ಮರ್ಯಾದೆ, ಸೌಹಾರ್ದ, ಸಹಕಾರ ಇವು ಈ ಗುಂಪಿನಲ್ಲಿ ಕಾಣಬರುತ್ತವೆ. ಹೆಚ್ಚು ಬಾರಿ ಶಬರಿಮಲೆಗೆ ಹೋಗಿ ಬಂದವನು ‘ಪೆರಿಯಸ್ವಾಮಿ’ ಅವನೇ ಗುಂಪಿನ ನಾಯಕ. ಅವನ ಅಪ್ಪಣೆಯನ್ನು ಚಾಚು ಮೀರದೆ, ಅವನಿಗೆ ವಿಧೇಯರಾಗಿ ಎಲ್ಲರೂ ನಡೆದುಕೊಳ್ಳುತ್ತಾರೆ. ಬೆಳ್ಳಿಕಟ್ಟಿನ ಬಿದಿರು ಬೆತ್ತವನ್ನು ಹಿಡಿದು ಬಗಲಿಗೆ ವಿಭೂತಿ ಚೀಲವನ್ನು ಆತ ಕಟ್ಟಿಕೊಂಡಿರುತ್ತಾನೆ. ಈ ಗುಂಪಿನಲ್ಲಿ ಜಾತಿ, ಮತ, ಬಡವ, ಸಿರಿವಂತ ಎಂಬ ಬೇಧವಿಲ್ಲ, ಎಲ್ಲರೂ ಸಮಾನರೇ. ಪುಲಯ ಆದಿವಾಸಿ ಮಾಡುವ ಅಯ್ಯಪ್ಪನ ಪೂಜೆಯಲ್ಲಿ ನಂಬೂದ್ರಿ ಬ್ರಾಹ್ಮಣನೂ ಬಿಂಕವಿಲ್ಲದೆ ಪಾಲ್ಗೊಳ್ಳುತ್ತಾನೆ. ಯಾವ ಕಾರಣದಿಂದಲೂ ಅಶೌಚ ಇದ್ದವರು ಈ ಗುಂಪಿನ ಬಳಿಗೆ ಬರುವುದಿಲ್ಲ. ಯಾತ್ರೆಯ ದೀಕ್ಷೆಯನ್ನು ಕೈಕೊಂಡ ಪ್ರತಿಯೊಬ್ಬನೂ ಅಯ್ಯಪ್ಪ ದೇವರೇ. ಸಾಮಾನ್ಯವಾಗಿ ಯಾತ್ರೆಗೆ ಪೂರ್ವಭಾವಿಯಾದ ಪೂಜೆ ಶನಿವಾರ ರಾತ್ರಿ ಪೆರಿಯಸ್ವಾಮಿಯ ನೇತೃತ್ವದಲ್ಲಿ ನಡೆಯುತ್ತದೆ. ಮೊದಲ ಬಾರಿ ಯಾತ್ರೆಗೆ ಹೊರಡುವ ಕನ್ನಿ ಅಯ್ಯಪ್ಪನು ಈ ಪೂಜೆಯನ್ನು ವ್ಯವಸ್ಥೆ ಮಾಡುತ್ತಾನೆ. ರಾತ್ರಿಯೆಲ್ಲ ಭಜನೆ ನಡೆಯುತ್ತದೆ. ಸರಿರಾತ್ರಿಯಲ್ಲಿ ಆವೇಶದಿಂದ ಕೂಡಿದ ನರ್ತನ ಜರುಗಿ ಪೆರಿಯಸ್ವಾಮಿಗೆ ಅಯ್ಯಪ್ಪನ ಆವೇಶ ಒದಗಿಬರುತ್ತದೆ. ಇದು ಈ ರಾತ್ರಿಪೂಜೆಯ ವೈಶಿಷ್ಟ್ಯ. ಶನಿವಾರ ಅಯ್ಯಪ್ಪನ ಜನ್ಮದಿನವೆಂದು ಪ್ರತೀತಿ. ಅಂದು ಯಾತ್ರಿಕನು ರುದ್ರಾಕ್ಷಿ ಅಥವಾ ತುಲಸೀಮಾಲೆಯನ್ನು ವಿಧ್ಯುಕ್ತವಾಗಿ ಧರಿಸುವುದೇ ದೀಕ್ಷೆ. ಅಲ್ಲಿಂದ ಮುಂದೆ ಯಾತ್ರೆ ಮುಗಿಯುವವರೆಗೂ ಅವನು ಪ್ರಾಪಂಚಿಕ ವ್ಯವಹಾರಗಳಿಂದ ವಿಮುಖನಾಗಿರುವನೆಂದು ಸಂಕೇತ; ಮನೆಯಲ್ಲಿ ಹುಟ್ಟು– ಸಾವುಗಳು, ರೋಗ–ರುಜಿನಗಳು ಆದರೂ ಅವನನ್ನು ಮಾತ್ರ ಬಾಧಿಸುವಂತಿಲ್ಲ.

ತಾನು ಯಾತ್ರೆಯಲ್ಲಿ ಪರಾಧೀನವಾಗದೆ ಸರ್ವಸ್ವತಂತ್ರನಾಗಿರುವ ಉದ್ದೇಶದಿಂದ ತನಗೆ ಅಗತ್ಯವಾದ ಸಾಮಗ್ರಿಗಳನ್ನು ತಾನೇ ಗಂಟು ಕಟ್ಟಿಕೊಂಡು, ಅದನ್ನು ತಾನೇ ಹೊತ್ತು ಶಬರಿಮಲೆಯನ್ನು ಮುಟ್ಟಬೇಕೆಂಬ ವಿಧಿಯಿದೆ. ಮೂರು ನಾಲ್ಕು ದಿವಸಗಳಿಗೆ ಬೇಕಾಗುವ ಆಹಾರ ಸಾಮಗ್ರಿ, ಬಟ್ಟೆಬರೆ, ಪಾತ್ರಪಗಡ, ಪೂಜಾದಿಸಾಮಗ್ರಿ ಎಲ್ಲವೂ ಈ ಗಂಟಿನಲ್ಲಿರುತ್ತದೆ. ಇದೇ ‘ಇರುಮುಡಿಕಟ್ಟು’. ಈ ಗಂಟನ್ನು ಕಟ್ಟಿಕೊಳ್ಳುವ, ತಲೆಯ ಮೇಲೆ ಹೊತ್ತುಕೊಳ್ಳುವ ವಿಧಿಗೆ ‘ಕಟ್ಟುಮುರುಕ್ಕು’ ಎಂದು ಹೆಸರು. ಈ ಗಂಟಿನಲ್ಲಿರುವ ಮುಖ್ಯ ಪದಾರ್ಥವೆಂದರೆ ತುಪ್ಪ ತುಂಬಿದ ತೆಂಗಿನಕಾಯಿ. ಇದು ಶಾಸ್ತನ ಶಕ್ತಿಯನ್ನು ಸಂಕೇತಿಸುತ್ತದೆ.

ಡಿಸೆಂಬರ್ ತಿಂಗಳ ಕೊನೆಯ ಭಾಗದಲ್ಲಿ ಅಥವಾ ಜನವರಿಯ ಮೊದಲ ಭಾಗದಲ್ಲಿ ಯಾತ್ರಿಕರು ಎರುವೇಲಿಯನ್ನು ಮುಟ್ಟುತ್ತಾರೆ, ಇಲ್ಲಿಂದಲೇ ದಿಟವಾಗಿ ಯಾತ್ರೆ ಆರಂಭವಾಗುವುದು. ಇಲ್ಲಿ ಪೆಟ್ಟಶಾಸ್ತನ ಗುಡಿಯೂ ವಾವಾರ್ ಸನ್ನಿಧಿಯೂ ಇವೆ. ಎರುವೇಲಿಯಲ್ಲಿ ನಡೆಯುವ ವಿಧಿ ‘ಪೆಟ್ಟತ್ತುಳ್ಳಲ್’ ಎನಿಸಿಕೊಳ್ಳುತ್ತದೆ. ಯಾತ್ರಿಕರು ಮುಖಕ್ಕೆ ಮಸಿ ಬಳಿದುಕೊಂಡು ಕಟ್ಟಿಗೆಗಳನ್ನು ಹಿಡಿದು ಪೆಟ್ಟಶಾಸ್ತನ ಗುಡಿಯ ಕಡೆಗೆ ಓಡುವುದು ಇದರ ಮುಖ್ಯ ವಿವರ. ಆದಿವಾಸಿಗಳ ಬೇಟೆಯನ್ನು ನೆನಪಿಗೆ ತರುವ ಈ ವಿಧಿಯಲ್ಲಿ ಕಿರಾತರು ಮಣಿಕಂಠಶಾಸ್ತನಿಗೆ ನೆರವಾದ ಪ್ರಸಂಗ ಧ್ವನಿತವಾಗುತ್ತದೆ. ಎರುವೇಲಿಯಿಂದ ಹೊರಟವರು ಶಬರಿಮಲೆಯನ್ನು ಮುಟ್ಟಬೇಕಾದರೆ ಸುಮಾರು ನಲವತ್ತೈದು ಮೈಲಿಗಳು ಕಾಡುದಾರಿಯಲ್ಲಿ ನಡೆದು ಹೋಗಬೇಕು.

ಹೀಗೆ ಹೊರಟ ಯಾತ್ರಿಕರು ನಡೆಯುತ್ತ ಪೆರುಂತೊಡೆ ನದಿಯ ದಡವನ್ನು ಮುಟ್ಟಿ ಅಲ್ಲಿ ಶಾಸ್ತ ತಂಗಿದ್ದನೆಂಬ ಕಾರಣದಿಂದ ನದೀದಡದ ಬಂಡೆಗಳಿಗೆ ಹುರಿದಕ್ಕಿ–ಬೆಲ್ಲವನ್ನು ಸಮರ್ಪಿಸಿ, ರಾತ್ರಿ ಅಲ್ಲಿಯೇ ತಂಗಿದ್ದು ಮರುದಿನ ಬೆಳಿಗ್ಗೆ ಅಷುತ್ತ ಬೆಟ್ಟವನ್ನು ಏರುತ್ತಾರೆ. ಮುಳ್ಳುಪೊದೆಗಳು, ಕಡಿದಾದ ಬಂಡೆಗಳು ಇವನ್ನೆಲ್ಲ ದಾಟಿ ಆರು ಮೈಲಿಗಳಷ್ಟು ದೂರ ಹೋದನಂತರ ಅಷುತ್ತ ನದಿಯನ್ನು ಮುಟ್ಟಿ ಅದರ ದಡದ ಮೇಲೆ ಎರಡನೆಯ ರಾತ್ರಿ ಕಳೆಯುತ್ತಾರೆ. ಮುಂದೆ ಕಲ್ಲೆಡಂಕುನ್ನು ಎನ್ನುವ ಕಡೆ ಗುಡ್ಡದ ತುದಿಗೆ ಸಣ್ಣ ಕಲ್ಲೊಂದನ್ನು ಎಸೆಯುವ ವಾಡಿಕೆಯಿದೆ. ಇಲ್ಲಿ ಅಸುರನೊಬ್ಬನಿದ್ದಾನೆಂದು ಬಗೆದು, ಅವನು ಅಲ್ಲಿಂದ ಬಂದು ತಮಗೆ ತೊಂದರೆ ಮಾಡದಿರಲೆಂದು ಕಲ್ಲು ಎಸೆಯುವುದು. ಮಣಿಕಂಠನು ಮಹಿಷಿಯನ್ನು ಕೊಂದು ಕಳೇಬರವನ್ನು ಇಲ್ಲಿ ಎಸೆದಿದ್ದನೆಂದು ಕಥೆ.

ಕರಿಮಲೆಯೆಂಬ ಬೆಟ್ಟವನ್ನು ಏರಿಳಿದು ಪಂಬನದಿಯನ್ನು ಮುಟ್ಟುವುದು ಯಾತ್ರೆಯಲ್ಲಿ ಮುಖ್ಯಘಟ್ಟ. ಶಾಸ್ತನು ಯಾತ್ರೆಯ ಸಮಯದಲ್ಲಿ ಯಾರಿಗೂ ಕಾಣದಂತೆ ಅಯ್ಯಪ್ಪಗಳೊಂದಿಗೆ ಬರುತ್ತಿರುತ್ತಾನೆಂದೂ, ಈ ನದಿಯ ದಡದಲ್ಲಿ ಅವರೊಂದಿಗೇ ಅಡಿಗೆ ಮಾಡಿಕೊಂಡು ಊಟ ಮಾಡುತ್ತಾನೆಂದೂ ನಂಬಿಕೆಯಿದೆ. ಅವನು ವೇಷಮರೆಮಾಚಿಕೊಂಡು ಯಾರಿಗೂ ಅವನ ಸುಳಿವು ತಿಳಿಯುವುದಿಲ್ಲವಂತೆ, ಆದರೆ ಅವನು ತಮ್ಮೊಡನೆ ಇದ್ದಾನೆಂದು ಅವರಿಗೆ ದೃಢವಾದ ವಿಶ್ವಾಸ. ಅವನ ಪ್ರೀತ್ಯರ್ಥವಾಗಿ ನದಿಯ ಮೇಲೆ ದೀಪಗಳನ್ನು ತೇಲಿಬಿಡುತ್ತಾರೆ. ರಾತ್ರಿಯಲ್ಲಿ ಅಸಂಖ್ಯಾತ ದೀಪಗಳು ನದಿಯ ಮೇಲೆ ತೇಲುತ್ತ ಸಾಗುವುದು ತುಂಬ ರಮಣೀಯವಾದ ದೃಶ್ಯವಲ್ಲವೆ? ಇದಕ್ಕೆ ‘ಪಂಬವಿಳಕ್ಕು’ (ಪಂಬನದಿಯ ಬೆಳಕು) ಎಂದು ಹೆಸರು. ಇದು ಮಕರ ಸಂಕ್ರಮಣದ ಹಿಂದಿನ ದಿನ ನಡೆಯುವುದು ವಾಡಿಕೆ.

ಅಲ್ಲಿಂದ ಹೊರಟು ಯಾತ್ರಿಕರು ಮರುದಿನ ಬೆಳಿಗ್ಗೆ ಶಬರಿಮಲೆಯನ್ನು ಸೇರುತ್ತಾರೆ. ಪೂರ್ವಕ್ಕೆ ಮುಖ ಮಾಡಿ ನಿಂತ ಗುಡಿಯನ್ನು ಪತ್ತಿನೆಟ್ಟಂಪಡಿ (ಹದಿನೆಂಟು ಮೆಟ್ಟಲುಗಳು)ಯಿಂದ ಪ್ರವೇಶ ಮಾಡುತ್ತಾರೆ. ಪವಿತ್ರವಾದ ಈ ಮೆಟ್ಟಲುಗಳನ್ನು ಏರುವ ಮೊದಲು ತೆಂಗಿನಕಾಯಿಯನ್ನು ಒಡೆಯುತ್ತಾರೆ. ಯಾತ್ರಿಕರು ಎಷ್ಟು ಬಾರಿ ಶಬರಿಮಲೆಯಾತ್ರೆ ಮಾಡಿದ್ದರೋ ಅಷ್ಟನೆಯ ಮೆಟ್ಟಲಿನ ಮೇಲೆ ಕಾಯಿಒಡೆಯುವುದೂ ಉಂಟು. ಅನಂತರ ಪ್ರದಕ್ಷಿಣೆ ಮಾಡಿ ಶಾಸ್ತನಿಗೆ ತಾವು ಶಾಸ್ತನಿಗೆ ತಾವು ತೆಂಗಿನಕಾಯೊಳಗೆ ತಂದ ತುಪ್ಪವನ್ನು ಸಮರ್ಪಿಸುತ್ತಾರೆ. ಕೊಚುಕುಡುತ್ತ ಮತ್ತು ಕರುಪ್ಪುಸ್ವಾಮಿ ದೈವಗಳಿಗೂ ಪೂಜೆ ನಡೆಸುತ್ತಾರೆ.

ಮಕರ ಸಂಕ್ರಮಣದ ರಾತ್ರಿ ಮಕರವಿಳುಕ್ಕು ಉತ್ಸವ ಬರುತ್ತದೆ. ವೈಭವದಿಂದ ದೀಪಗಳೊಡಗೂಡಿ ಮಲೆಕಪ್ಪುರತಮ್ಮನ ಸನ್ನಿಧಿಯಿಂದ ಶಾಸ್ತನ ಗುಡಿಗೆ ಸಾಗುವ ಈ ಉತ್ಸವವನ್ನು ನೋಡುವುದು ಯಾತ್ರೆಯ ಪ್ರಮುಖ ಘಟ್ಟ. ಮಲೆಕಪ್ಪರಂ ಎನ್ನುವ ಸ್ಥಳ ಹತ್ತಿರದಲ್ಲಿಯೇ ಇದೆ. ಶಾಸ್ತನ ಶಕ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಿದ್ದಾರೆಂದು ಪ್ರತೀತಿ. ಆದರೆ ಮಲೆಕಪ್ಪುರತಮ್ಮ ಯಾರೆಂದು ಸ್ಪಷ್ಟವಾಗಿಲ್ಲ. ಶಾಸ್ತನ ಶಕ್ತಿಯೆಂದಷ್ಟೇ ಹೇಳುತ್ತಾರೆ. ಮರುದಿನ ಬೆಳಿಗ್ಗೆ ಒರಕುಷಿ ತೀರ್ಥದಲ್ಲಿ ಮಿಂದು ಸಂತರ್ಪಣೆ ನಡೆಸಿ ಹಿಂದಿರುಗುತ್ತಾರೆ. ಯಾತ್ರೆಯನ್ನು ಯಶಸ್ವಿಯಾಗಿ ನಡೆಸಿದ ಮೇಲೆ ದೀಕ್ಷೆಯೂ ಮುಗಿಯಿತೆಂದರ್ಥ. ಇನ್ನು ಮುಂದೆ ಯಾತ್ರಿಕ ನಿತ್ಯವ್ಯವಹಾರದಲ್ಲಿ ತೊಡಗಬಹುದು. ಅವನ ಆಹಾರ ವಿಹಾರಗಳಲ್ಲಿ ಯಾವ ನಿರ್ಬಂಧವೂ ಇಲ್ಲ. ಅವನ ಮೇಲೆ ಪೆರಿಯಸ್ವಾಮಿಯ ಅಧಿಕಾರವೂ ಇಲ್ಲಿಗೆ ಮುಗಿಯುತ್ತದೆ.


ಇರುಮುಡಿ ಹೊತ್ತು 18 ಮೆಟ್ಟಿಲು ಹತ್ತಿದ ಅಯ್ಯಪ್ಪ ಭಕ್ತರ ಮೊಗದಲ್ಲಿ ಆನಂದ (ಚಿತ್ರ: ಶಿವಕುಮಾರ್ ಬಿ.ಎಚ್.)

ಯಾತ್ರಾ ಪದ್ಧತಿ ರೂಪಿಸಿದವರು ಯಾರು?

ಈ ಯಾತ್ರಾ ಪದ್ಧತಿಯ ಮುಖ್ಯ ವಿವರಗಳೆಲ್ಲಾ ಮಲಯರಾಯನ್ ಆದಿವಾಸಿಗಳಿಂದಲೇ ನಿಶ್ಚಿತವಾದುವು. ಇತರರು ಅವರನ್ನು ಪರಿಗ್ರಹಿಸಿದ್ದಾರಷ್ಟೆ. ಆದುದರಿಂದ ಈ ವಿವರಗಳನ್ನೂ ಗುರುತಿಸಬಹುದು. ಈ ಆದಿವಾಸಿಗಳು ಶಬರಿಮಲೆಯಾತ್ರೆಯನ್ನು ಕೈಗೊಳ್ಳುವುದು ಕಾಡಿನಲ್ಲಿ ದುಷ್ಟಶಕ್ತಿಗಳು ತಮ್ಮನ್ನು ಬವಣಿಸದಿರಲೆಂದು, ಅನಿಷ್ಟದಿಂದ ತಮ್ಮನ್ನು ಕಾಪಾಡಿಕೊಳ್ಳುವುದು ಯಾತ್ರೆಯ ಮುಖ್ಯ ಉದ್ದೇಶ. ಈ ದೃಷ್ಟಿಯಿಂದ ಶಾಸ್ತನು ಪ್ರಬಲ. ಹೀಗೆ ಅವರು ಎಚ್ಚರದಿಂದ ನಡೆದುಕೊಳ್ಳುತ್ತಾರೆ. ಆದಿವಾಸಿಗಳಲ್ಲಿ ಶ್ರದ್ದೆಯೆಂದರೆ ಭಯದ ಪಾಲು ಹೆಚ್ಚು. ಧಾರ್ಮಿಕ ವಿಧಿಗಳಲ್ಲಿ ಭೀತಿ ಹಾಸುಹೊಕ್ಕಾಗಿ ಸೇರಿರುತ್ತದೆ.

ಶಾಸ್ತನು ಅವರ ದೃಷ್ಟಿಯಲ್ಲಿ ಭೂತನಾಥ, ಅಶರೀರವಾಗಿ ನಮ್ಮ ಸುತ್ತಲೂ ಸುಳಿದಾಡುವ ದೈವಗಳಿಗೆ ಒಡೆಯ. ಆನೆಯನ್ನೋ, ಕುದುರೆಯನ್ನೋ ಏರಿ, ಕೈಯಲ್ಲಿ ಕತ್ತಿ ಹಿಡಿದು, ನಡುರಾತ್ರಿಯಲ್ಲಿ ಎಲ್ಲೆಡೆಯೂ ಅಲೆದಾಡುತ್ತಾ ಶಾಸ್ತನು ಬೇಟೆಯಾಡುತ್ತಾನೆಂದು ಅವರ ಕಲ್ಪನೆ. ಅವನ ಬಂಟರಾಗಿ ಇತರ ದೈವಗಳು ಕಂದೀಲುಗಳನ್ನು ಹಿಡಿದು ಅವನಿಗೆ ದಾರಿ ತೋರಿಸುತ್ತ ಸಾಗುತ್ತಿರುತ್ತಾರೆ. ನಡುರಾತ್ರಿಯ ಈ ಬೇಟೆಗಾರರನ್ನು ಯಾವನಾದರು ಮನುಷ್ಯ ಕಂಡನೆಂದರೆ ಅವನಿಗೆ ಸಾವು ಸಿದ್ಧ. ಶಾಸ್ತನ ದಾರಿಯಲ್ಲಿ ಯಾರೂ ಅಡ್ಡಬರುವ ಹಾಗಿಲ್ಲ, ಶಾಸ್ತನನ್ನು ಬರಿಗಣ್ಣಿನಿಂದ ನೋಡುವ ಹಾಗಿಲ್ಲ. ಸಾವು ಹಿನ್ನಿತವಾಗಿದ್ದರೇ ಈ ಬೇಟೆಗಾರರ ತಂಡ ಕಾಣಿಸಿಕೊಳ್ಳುವುದು.

ಬೇಟೆಯಾಡದಿರುವಾಗ ಶಾಸ್ತನು ಯೋಗಿ. ಪದ್ಮಾಸನದಲ್ಲಿಯೋ ಸುಖಾಸನದಲ್ಲಿಯೋ ಪಟ್ಟಬಂಧದಲ್ಲಿಯೋ ಕುಳಿತು, ತಲೆಯ ಮೇಲೆ ಕಿರೀಟವನ್ನೂ, ಹಣೆಯಲ್ಲಿ ವಿಭೂತಿಯನ್ನೂ ಧರಿಸಿ, ಕೈಯಲ್ಲಿ ವಜ್ರದಂಡವನ್ನು ಹಿಡಿದು ಧ್ಯಾನದಲ್ಲಿ ಕುಳಿತಿರುವಂತೆ ಚಿತ್ರಿಸಿಕೊಳ್ಳುತ್ತಾರೆ. ಶಬರಿಮಲೆಯ ಮೇಲಿರುವ ಗುಡಿಯಲ್ಲಿ ಶಾಸ್ತನ ಮೂರ್ತಿ ಯೋಗಿಯಂತೆಯೇ ಇದೆ. ದಕ್ಷಿಣಾಮೂರ್ತಿಯಂತೆ ಯೋಗಪಟ್ಟದಲ್ಲಿ ಕುಳಿತ ಶಾಸ್ತನ ಬಲಗೈ ಚಿನ್ಮುದ್ರೆಯಲ್ಲಿದೆ. ಎಡಗೈ ಆನೆಯ ಸೊಂಡಿಲಿನಂತೆ ಹೊರಚಾಚಿದೆ. ತಲೆಯ ಮೇಲೆ ಕಿರೀಟಮುಕುಟ, ಮೈಯ್ಯಲ್ಲಿ ಉಪವೀತಗಳಿವೆ. ಸರ್ವಾಲಂಕಾರ ಭೂಷಿತವಾದ ಈ ಮೂರ್ತಿಯ ಕಲ್ಪನೆ ಆದಿವಾಸಿಗಳಿಗೆ ಹೊಸದೇ. ಅವರು ಶಾಸ್ತನನ್ನು ಕೊಚುಕೊಡುತ್ತ, ಕರುಪ್ಪನ್ ದೈವಗಳಂತೆಯೇ.

ಶಾಸ್ತನ ಈ ಮೂರ್ತಿ ನಿರ್ದೇಶನವನ್ನು ಮಾಡಿದವನು ಪರಶುರಾಮನೆಂದೇ ಪ್ರತೀತಿ. ಮೂರ್ತಿಯನ್ನು ಪರಶುರಾಮನೇ ಶಬರಿಮಲೆಯ ಕಟ್ಟೆಯ ಮೇಲೆ ಪ್ರತಿಷ್ಠೆ ಮಾಡಿದನಂತೆ. ಅವನ ಅಣತಿಯಂತೆ ದೇವತೆಗಳ ಶಿಲ್ಪಿಯಾದ ವಿಶ್ವಕರ್ಮನೇ ಗುಡಿಯನ್ನು ಕಟ್ಟಿದನೆಂದು ಪ್ರತೀತಿಯಿದೆ. ಕೇರಳದಲ್ಲಿಯೂ ತುಳುನಾಡಿನಲ್ಲಿಯೂ ಸಾಂಸ್ಕೃತಿಕ ನೆಲೆಗಳ ಪರಿವರ್ತನೆಗೆ ಪರಶುರಾಮನೇ ಕಾರಣನೆಂದು ಐತಿಹ್ಯ. ಆರ್ಯ ಸಂಸ್ಕೃತಿಯ ಹಿಡಿತಕ್ಕೆ ಒಳಪಟ್ಟ ಭಾಗವನ್ನು ಪರಶುರಾಮ ಕ್ಷೇತ್ರವೆಂದೇ ವ್ಯವಹರಿಸುತ್ತಾರೆ. ಮಲಯರಾಯನ್, ಮನ್ನಾನ್, ಕಾನಿಕ್ಕಾರನ್ ಮೊದಲಾದ ಆದಿವಾಸಿಗಳ ಶಾಸ್ತಕಲ್ಪನೆಯಲ್ಲಿ ಪರಶುರಾಮನ ಪಾತ್ರವಿಲ್ಲ. ಹೀಗೆ ತುಂಬ ಪ್ರಾಚೀನವಾದ ಕಾನನದೈವವೊಂದಕ್ಕೆ ವರ್ಧಿಷ್ಣುವಾದ ನಾಗರ ಸಂಸ್ಕೃತಿಯ ಸಂಪರ್ಕ ಒದಗಿಬಂದು ಪೂರ್ವಕಾರಣಾಗಮವು.

ವಕ್ಷ್ಯೇ ಶಾಸ್ತಾರ್ಚನಂ ದಿವ್ಯಂ

ಶುಭದಂ ಪಾಪನಾಶನಂ

ಸರ್ವಲೋಕಹಿತಂ ಪುಣ್ಯಂ

ಸರ್ವೋಪದ್ರವನಾಶನಂ

ಎನ್ನುವಂತಾಯಿತು.

–––

‘ಮೂರ್ತಿಶಿಲ್ಪ ನೆಲೆ–ಹಿನ್ನೆಲೆ’ ಪುಸ್ತಕದಲ್ಲಿರುವ ಈ ಬರಹವನ್ನು ‘ಪ್ರೊ. ಸಾ.ಕೃ. ರಾಮಚಂದ್ರರಾವ್ ಸ್ಮಾರಕ ಟ್ರಸ್ಟ್‌’ ಅನುಮತಿಯೊಂದಿಗೆ ಪ್ರಕಟಿಸಲಾಗಿದೆ. ಮರುಮುದ್ರಣ ಅಥವಾ ಬಳಕೆ ಮಾಡಲು ಟ್ರಸ್ಟ್‌ನ ಅನುಮತಿ ಪಡೆದುಕೊಳ್ಳುವುದು ಅಗತ್ಯ. ವಿಳಾಸ: The S.K. Ramachandra Rao Memorial Trust, No. 305, 6th Cross, 1st Block, Jayanagar, Bangalore – 650 011. Ph. 080 2656 3957, ಇಮೇಲ್–drsrsudarshan@gmail.com

‘ಶಾಸ್ತ–ಅಯ್ಯಪ್ಪ’ ಈಗೇಕೆ ಪ್ರಸ್ತುತ?’ ಬರಹ ಎಸ್. ಸೂರ್ಯಪ್ರಕಾಶ್ ಪಂಡಿತ್ ಅವರದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.