ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಗ್ರಂಥಾಲಯ ಸುಧಾರಣೆ: ನಿರಾಸಕ್ತಿ ಏಕೆ?

ಹಲವು ರಾಜ್ಯಗಳು ಹೆಚ್ಚಿನ ಗ್ರಂಥಾಲಯಗಳನ್ನೇ ಹೊಂದಿಲ್ಲದಿರುವುದು, ದೇಶದ ಗ್ರಂಥಾಲಯ ಅಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದೆ
ಬಿ.ಆರ್.‌ಸತ್ಯನಾರಾಯಣ
Published 21 ನವೆಂಬರ್ 2023, 0:30 IST
Last Updated 21 ನವೆಂಬರ್ 2023, 0:30 IST
ಅಕ್ಷರ ಗಾತ್ರ

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ (ನ. 14– 21) ಅಂಗವಾಗಿ, ಗ್ರಂಥಾಲಯಗಳ ಮಹತ್ವದ ಬಗ್ಗೆ ಕಣ್ತೆರೆಸುವ ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವುದು ಸ್ತುತ್ಯರ್ಹ. ಬಹುತೇಕ ಅಭಿವೃದ್ಧಿಶೀಲ ದೇಶಗಳು ತಮ್ಮ ತಮ್ಮ ಅಭಿವೃದ್ಧಿ ಮಾನದಂಡದಲ್ಲಿ ಗ್ರಂಥಾಲಯಗಳ ಅಭಿವೃದ್ಧಿಯನ್ನು ಬಹುಮುಖ್ಯವಾಗಿ ಗಣನೆಗೆ ತೆಗೆದುಕೊಳ್ಳುತ್ತವೆ. ಆದರೆ ಭಾರತದಲ್ಲಿ ಅಂತಹ ಯಾವುದೇ ಪದ್ಧತಿ ಇದ್ದಂತಿಲ್ಲ. ಈ ಕಾರಣದಿಂದ, ದೇಶದ ಸಾರ್ವಜನಿಕ ಗ್ರಂಥಾಲಯಗಳ ಲಭ್ಯ ಅಂಕಿಸಂಖ್ಯೆಯನ್ನು ಆಧರಿಸಿ, ಗ್ರಂಥಾಲಯ ಕ್ಷೇತ್ರದ ಸ್ಥಿತಿಗತಿ, ನೀತಿ ನಿರೂಪಣೆ, ಪ್ರಾದೇಶಿಕ ಅಸಮತೋಲನದ ಬಗ್ಗೆ ಚರ್ಚಿಸಬಹುದಾಗಿದೆ.

ಇಡೀ ದೇಶಕ್ಕೆ ಏಕರೂಪದ ಗ್ರಂಥಾಲಯ ನೀತಿ ಇಲ್ಲ. 19 ರಾಜ್ಯಗಳು ತಮ್ಮದೇ ಆದ ಗ್ರಂಥಾಲಯ ನೀತಿಗಳನ್ನು ರೂಪಿಸಿಕೊಂಡಿವೆ. ಉಳಿದವುಗಳಲ್ಲಿ ಅದೂ ಇಲ್ಲ! ಉತ್ತರಪ್ರದೇಶ, ಬಿಹಾರ, ರಾಜಸ್ಥಾನ
ದಂತಹ ದೊಡ್ಡ ರಾಜ್ಯಗಳಲ್ಲಿ 2006ರವರೆಗೆ ಗ್ರಂಥಾಲಯ ನೀತಿಯೇ ಇರಲಿಲ್ಲ. ಮಧ್ಯಪ್ರದೇಶದಲ್ಲಿ ಈಗಲೂ ಇಲ್ಲ!

1661ರಿಂದಲೇ ದೇಶದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆದು ಬಂದಿದ್ದರೂ, ಗ್ರಂಥಾಲಯ ನೀತಿ ರೂಪುಗೊಳ್ಳಲು 20ನೇ ಶತಮಾನದ ಪ್ರಾರಂಭದವರೆಗೂ ಕಾಯಬೇಕಾಯಿತು. ಅದೂ ಬರೋಡಾದ ಮಹಾರಾಜ ಸಯ್ಯಾಜಿರಾವ್‌ ಗಾಯಕವಾಡ್‌ ಅವರು ತಮ್ಮ ರಾಜ್ಯಕ್ಕೆ ಸೀಮಿತವಾಗಿ ರೂಪಿಸಿದ್ದ ನೀತಿ. ನಂತರ 1948ರಿಂದ ಒಂದೊಂದೇ ರಾಜ್ಯವು ಸ್ವತಂತ್ರ ಗ್ರಂಥಾಲಯ ನೀತಿಯನ್ನು ರೂಪಿಸಿಕೊಂಡಿದ್ದರೂ ಇನ್ನೂ ಅತ್ತ ಗಮನವನ್ನೇ ಹರಿಸದಿರುವ ರಾಜ್ಯಗಳು ಸಹ ಇರುವುದು ವಿಷಾದದ ಸಂಗತಿ.

ಕೇಂದ್ರ ಸರ್ಕಾರದಲ್ಲಿ ಗ್ರಂಥಾಲಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಚಿವಾಲಯವೇನಿಲ್ಲ. ಅದಿರಲಿ, ಅದಕ್ಕೊಂದು ಪ್ರತ್ಯೇಕ ಇಲಾಖೆಯೂ ಇಲ್ಲ. ಅದನ್ನು ಸಂಸ್ಕೃತಿ ಸಚಿವಾಲಯದ ವ್ಯಾಪ್ತಿಗೆ ತರಲಾಗಿದೆ. ಈ ಸಚಿವಾಲಯದ ಅಡಿಯಲ್ಲಿ, ರಾಜಾರಾಮ್ ಮೋಹನರಾಯ್‌ ಗ್ರಂಥಾಲಯ ಪ್ರತಿಷ್ಠಾನವು ನೋಡಲ್‌ ಏಜೆನ್ಸಿಯಾಗಿ ಕೆಲಸ ಮಾಡುತ್ತಿದೆ. ಈ ಸಂಸ್ಥೆಯು ಪ್ರಕಟಿಸಿರುವ ಅಂಕಿ ಅಂಶಗಳ ಪ್ರಕಾರ, ದೇಶದಲ್ಲಿ 46,746 ಸಾರ್ವಜನಿಕ ಗ್ರಂಥಾಲಯಗಳಿವೆ. ಅವುಗಳಲ್ಲಿ, 19,075 ಗ್ರಂಥಾ
ಲಯಗಳನ್ನು ಸ್ವಯಂಸೇವಾ ಸಂಸ್ಥೆಗಳು ನೋಡಿಕೊಳ್ಳುತ್ತಿವೆ. ಅಂದರೆ, ಸರಾಸರಿ 28,000 ಜನರಿಗೆ ಒಂದು ಗ್ರಂಥಾಲಯ ಇದೆ ಎಂದಾಯಿತು! 130 ಕೋಟಿಗೂ ಹೆಚ್ಚು ಜನಸಂಖ್ಯೆಯ ದೇಶಕ್ಕೆ ಇಷ್ಟು ಸಾಕೆ? ನಗರ ಪ್ರದೇಶದಲ್ಲಿ 4,580 ಗ್ರಂಥಾಲಯಗಳು ಇವೆ ಎನ್ನಲಾಗಿದ್ದು, ಅವು ಸರಾಸರಿ 80,000 ಜನರಿಗೆ ಒಂದು!

ಗ್ರಂಥಾಲಯ ನೀತಿಯನ್ನು ರೂಪಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಭಾರತದ ರಾಜ್ಯಗಳು ಸಾರ್ವಜನಿಕ ಗ್ರಂಥಾಲಯಗಳ ಸಂಖ್ಯೆಯಲ್ಲಿ ಸಿಂಹ ಪಾಲು ಹೊಂದಿವೆ. ಕೇರಳ (8,415), ಕರ್ನಾಟಕ (6,798), ತಮಿಳುನಾಡು (4,622) ಮೊದಲ ಮೂರು ಸ್ಥಾನದಲ್ಲಿರುವ ರಾಜ್ಯಗಳು. ಮಹಾರಾಷ್ಟ್ರದಲ್ಲಿ
12,191 ಗ್ರಂಥಾಲಯಗಳು ಇದ್ದರೂ, ಹೆಚ್ಚಿನವು ಸಾರ್ವಜನಿಕ ಸಂಘಸಂಸ್ಥೆಗಳಿಗೇ ಸೇರಿವೆ. ಅಲ್ಲಿ ಸರ್ಕಾರಿ ಸ್ವಾಮ್ಯದ ಗ್ರಂಥಾಲಯಗಳ ಸಂಖ್ಯೆ ಬರೀ 43. ಸುಮಾರು 20 ಕೋಟಿಗೂ ಅಧಿಕ ಜನಸಂಖ್ಯೆಯುಳ್ಳ
ಉತ್ತರಪ್ರದೇಶದ ಗ್ರಂಥಾಲಯಗಳ ಸಂಖ್ಯೆ 573. ಬಿಹಾರ (192), ಮಧ್ಯಪ್ರದೇಶ (42), ರಾಜಸ್ಥಾನ (323) ಕಡಿಮೆ ಸಂಖ್ಯೆಯ ಗ್ರಂಥಾಲಯಗಳನ್ನು ಹೊಂದಿರುವುದು ಶೋಚನೀಯ.

ಕರ್ನಾಟಕದಲ್ಲಿ ಸರಾಸರಿ 9,000 ಜನರಿಗೆ ಒಂದು ಗ್ರಂಥಾಲಯವಿದ್ದರೆ, ಉತ್ತರಪ್ರದೇಶದಲ್ಲಿ 3.51 ಲಕ್ಷ ಜನರಿಗೆ ಒಂದು ಸಾರ್ವಜನಿಕ ಗ್ರಂಥಾಲಯ ಇದ್ದಂತಾಗಿದೆ! ಉತ್ತರ ಭಾರತದಲ್ಲಿ ಪಶ್ಚಿಮಬಂಗಾಳ (5,251) ಮತ್ತು ಗುಜರಾತ್‌ (3,464) ಬಿಟ್ಟರೆ ಇನ್ಯಾವುದೇ ರಾಜ್ಯವು ನಾಲ್ಕಂಕಿ ಸಂಖ್ಯೆಯ
ಗ್ರಂಥಾಲಯಗಳನ್ನು ಹೊಂದಿಲ್ಲ ಎಂಬುದು ಭಾರತದ ಗ್ರಂಥಾಲಯ ಅಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದೆ. ಇನ್ನು, ಅಸ್ತಿತ್ವದಲ್ಲಿರುವ ಸಾರ್ವಜನಿಕ ಗ್ರಂಥಾಲಯಗಳ ದುಃಸ್ಥಿತಿ ಮತ್ತು ಉಪಯೋಗದ ಪ್ರಮಾಣದ ಬಗ್ಗೆ ಬರೆದರೆ ಅದೇ ಒಂದು ಹೊತ್ತಿಗೆಯಾಗುತ್ತದೆ!

ರಾಷ್ಟ್ರೀಯ ಜ್ಞಾನ ಆಯೋಗವು 2006-09ರ ತನ್ನ ವರದಿಯಲ್ಲಿ ಮಾಡಿದ್ದ 10 ಶಿಫಾರಸುಗಳಲ್ಲಿ ‘ನ್ಯಾಷನಲ್‌ ಮಿಷನ್‌ ಆನ್‌ ಲೈಬ್ರರೀಸ್‌’ ಸ್ಥಾಪನೆಯಾಗಿ, 2014ರ ಮುಂಗಡಪತ್ರದಲ್ಲಿ ಸುಮಾರು ₹ 400 ಕೋಟಿ ತೆಗೆದಿರಿಸಲಾಗಿತ್ತು. ದೇಶದ ಸಾರ್ವಜನಿಕ ಗ್ರಂಥಾಲಯಗಳ ಸಂಖ್ಯೆಯನ್ನು 75,000ಕ್ಕೆ ಹೆಚ್ಚಿಸುವ ಯೋಜನೆಯೂ ಇತ್ತು. ಆದರೆ, ಸಂಪನ್ಮೂಲದ ಸದುಪಯೋಗವಾಗಿ, ಸಾರ್ವಜನಿಕ ಗ್ರಂಥಾಲಯಗಳ ಸಂಖ್ಯೆ ಹೆಚ್ಚಾಗಿರುವ ಬಗ್ಗೆ ಹತ್ತು ವರ್ಷಗಳ ನಂತರವೂ ಯಾವುದೇ ಮಾಹಿತಿ ಇಲ್ಲ!

ಪ್ರಾದೇಶಿಕ ಅಸಮಾನತೆ, ಜನಸಂಖ್ಯಾ ಬಾಹುಳ್ಯ, ಗ್ರಂಥಾಲಯದೆಡೆಗೆ ರಾಜ್ಯಗಳ ಅತೀವ ನಿರ್ಲಕ್ಷ್ಯ, ದೇಶದ ಜನಮಾನಸದಲ್ಲಿ ಎದ್ದು ಕಾಣುತ್ತಿರುವ ವಾಚನಾಭಿರುಚಿಯ ಕೊರತೆಯು ಭಾರತದ ಅಭಿವೃದ್ಧಿಯ ಹಾದಿಗೆ ತೊಡಕಾಗಿವೆ. ಈ ಕ್ಷೇತ್ರದ ಅಭಿವೃದ್ಧಿ, ಪರಿಣಾಮ, ಫಲಿತಾಂಶ ಎಲ್ಲವೂ ಅತ್ಯಂತ ದೀರ್ಘಕಾಲದ ಪ್ರಕ್ರಿಯೆಗಳಾಗಿರುವುದರಿಂದಲೋ ಏನೋ, ಆ ಕಡೆಗೆ ಜನರ ಹಾಗೂ ಆಡಳಿತದ ಆಸಕ್ತಿ ಕಡಿಮೆಯೇ ಇರುವುದು ಮಾತ್ರ ವಿಷಾದನೀಯ.

ಲೇಖಕ: ಮುಖ್ಯ ಗ್ರಂಥಪಾಲಕ, ಸುರಾನಾ ಕಾಲೇಜು, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT