ಗುರುವಾರ , ಸೆಪ್ಟೆಂಬರ್ 23, 2021
24 °C

ಚರ್ಚೆ: ಹೆಣ್ಣು ಅಧೀನಲಿಂಗಿ ಎಂಬ ವಿಕೃತ ಮನಸ್ಥಿತಿ

ಸಂಜ್ಯೋತಿ ವಿ.ಕೆ. Updated:

ಅಕ್ಷರ ಗಾತ್ರ : | |

ಅತ್ಯಾಚಾರ ನಡೆದಾಗ ಅದರಲ್ಲಿ ಅತ್ಯಾಚಾರಿಯ ದುಷ್ಕೃತ್ಯವನ್ನು ಖಂಡಿಸುವುದಕ್ಕಿಂತಲೂ ಹೆಚ್ಚಾಗಿ, ‘ಹಾಗೆ ನಡೆಯದಿರುವಂತೆ ತಡೆಯಬೇಕಾಗಿದ್ದುದು ಸಂತ್ರಸ್ತೆಯ ಜವಾಬ್ದಾರಿಯಾಗಿತ್ತು; ಅದರಲ್ಲಿ ಆಕೆ ಸೋತದ್ದರಿಂದಲೇ ಅತ್ಯಾಚಾರ ನಡೆಯಿತು, ಆಕೆಯ ‘ಆ’ ತಪ್ಪು ಸಹಜವಾಗಿಯೇ ಅತ್ಯಾಚಾರಕ್ಕೆ ಆಹ್ವಾನ’ ಎಂಬಂತೆ ವ್ಯಾಖ್ಯಾನಿಸಲಾಗುತ್ತದೆ.

***
ಅತ್ಯಾಚಾರಕ್ಕೆ ಕಾರಣವನ್ನು ಸಂತ್ರಸ್ತೆಯಲ್ಲಲ್ಲ, ಅತ್ಯಾಚಾರಿಯಲ್ಲಿ ಮತ್ತು ನಮ್ಮೊಳಗೆ ಹುಡುಕಬೇಕಿದೆ!

ಅಂದು ಆಕೆ ಅಲ್ಲಿಗೆ ಹೋದದ್ದಾಗಲೀ, ಸಂಜೆ 7.30ರ ಹೊತ್ತಲ್ಲಿ ಹೋದದ್ದಾಗಲೀ ಅಥವಾ ತನ್ನ ಗೆಳೆಯನೊಟ್ಟಿಗೆ ಹೋದದ್ದಾಗಲೀ
ಇದಾವುದೂ ಕ್ರಿಮಿನಲ್ ಅಪರಾಧಗಳಲ್ಲ. ಆದರೆ, ಅತ್ಯಾಚಾರ ಖಂಡಿತವಾಗಿಯೂ ಅತಿಹೀನವಾದ ಕ್ರಿಮಿನಲ್ ಅಪರಾಧ. ಇಂಥದ್ದೊಂದು ಅಪರಾಧ ನಡೆದಾಗ, ಕಾನೂನು ಸುವ್ಯವಸ್ಥೆ ಕಾಪಾಡುವ ಅತ್ಯುನ್ನತ ಹುದ್ದೆಯಲ್ಲಿರುವ ಗೃಹ ಸಚಿವರೊಬ್ಬರ ಮೊದಲ ಕರ್ತವ್ಯ ಅದನ್ನು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಖಂಡಿಸುವುದು ಮತ್ತು ಅಪರಾಧಿಗಳನ್ನು ಶೀಘ್ರವಾಗಿ ಬಂಧಿಸಿ, ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸಿ, ಸಂತ್ರಸ್ತೆಗೆ ತ್ವರಿತವಾಗಿ ನ್ಯಾಯ ಒದಗಿಸುವ ವ್ಯವಸ್ಥೆ ಮಾಡುವುದು. ಬದಲಿಗೆ ಅವರು ‘ಆಕೆ ಅಷ್ಟು ಹೊತ್ತಲ್ಲಿ ಅಲ್ಲಿಗೆ ಹೋಗಿದ್ದು ತಪ್ಪು’ ಎನ್ನುವಂಥ ಹೇಳಿಕೆ ನೀಡಿದ್ದಾರೆ. ಇದು ‘ಹೆಣ್ಣು ತನ್ನ ಮಿತಿಯಲ್ಲಿರಬೇಕು, ಅದನ್ನು ಮೀರಿದರೆ ಇಂತಹ ಅನಾಹುತಗಳು ನಡೆಯುವುದು ಸಹಜ’ ಎಂಬ ಅರ್ಥ ಹೊರಡಿಸುತ್ತದೆ.

ಕನಿಷ್ಠ ಪ್ರಜ್ಞೆಯೂ ಇಲ್ಲದ ಇಂತಹ ಹೇಳಿಕೆ ನೀಡುವುದು ಅಜ್ಞಾನ ಮಾತ್ರವಲ್ಲ, ಬದಲಿಗೆ ಇಡೀ ನ್ಯಾಯದಾನ ವ್ಯವಸ್ಥೆಗೆ, ನಾವು ಒಪ್ಪಿ ಅನುಷ್ಠಾನಗೊಳಿಸಿರುವ ಸಂವಿಧಾನಕ್ಕೆ, ಮನುಷ್ಯರು ಕಟ್ಟಿಕೊಂಡಿರುವ ನಾಗರಿಕ ವ್ಯವಸ್ಥೆಯೆಂಬ ಕಲ್ಪನೆಗೇ ಮಾಡುವ ಅಪಚಾರ. ಹಾಗಿದ್ದಾಗ ಇದಕ್ಕೆ ಅತಿ ದೊಡ್ಡ ಮಟ್ಟದ ಪ್ರತಿರೋಧ ಬರಬೇಕಿತ್ತು, ಗೃಹಮಂತ್ರಿಗಳು ರಾಜೀನಾಮೆ ಕೊಡಬೇಕಿತ್ತು ಮತ್ತು ಅವರು ಪ್ರತಿನಿಧಿಸುವ ಪಕ್ಷವೂ ಜನತೆಯ ಕ್ಷಮೆ ಯಾಚಿಸಬೇಕಿತ್ತು. ಆದರೆ ಅಂಥದ್ದೇನೂ ಆಗಲಿಲ್ಲ.

ಇದೇ ಚಾಳಿಯ ಮುಂದುವರಿಕೆಯಾಗಿ, ನಮ್ಮನ್ನು ಹೆಚ್ಚು ಮಾನವೀಯಗೊಳಿಸಬೇಕಾದ, ಸಮಾನತೆಯನ್ನು ಕಲಿಸಬೇಕಾದ ವಿದ್ಯೆಯನ್ನು ನೀಡುವ ಹೊಣೆಹೊತ್ತ ವಿಶ್ವವಿದ್ಯಾಲಯವೊಂದು ಸಂಜೆ ಆರೂವರೆಯ ನಂತರ ಕ್ಯಾಂಪಸ್ಸಿನಲ್ಲಿ ವಿದ್ಯಾರ್ಥಿನಿಯರ ಓಡಾಟವನ್ನು ನಿರ್ಬಂಧಿಸಿ ಸುತ್ತೋಲೆ ಹೊರಡಿಸುತ್ತದೆ! (ವ್ಯಾಪಕ ಖಂಡನೆಯ ನಂತರ ಅದನ್ನು ಹಿಂಪಡೆಯಲಾಯ್ತು) ವಿದ್ಯಾರ್ಥಿನಿಯರ ಸಹಜ ಓಡಾಟದ ಹಕ್ಕುಗಳ ಮಾತು ಆಮೇಲಾಗಲಿ, ಇಂತಹ ನಿರ್ಬಂಧಗಳಿಂದ ಅವರು ಗ್ರಂಥಾಲಯ ಬಳಸುವುದಕ್ಕೆ, ಓದಿನ ಸಂಬಂಧಿತ ಇತರ ಚಟುವಟಿಕೆಗಳಿಗೆ ಆಗುವ ತೊಂದರೆಯನ್ನು ಸಹಿಸಿಕೊಳ್ಳಬೇಕು.

ಏಕೆಂದರೆ ಅವರ ಸುರಕ್ಷತೆಯ ಹೊಣೆ ಅವರದೇ! ಅತ್ಯಾಚಾರವು ಸಂಜೆ ಏಳೂವರೆಗೆ ನಡೆದಿದ್ದರಿಂದ ನಿರ್ಬಂಧದ ಸಮಯ ಆರೂವರೆ ಎಂದಾಯ್ತು. ಮತ್ತೊಂದು ಅತ್ಯಾಚಾರ ಮಧ್ಯಾಹ್ನವೋ ಅಥವಾ ಬೆಳಿಗ್ಗೆಯೋ ನಡೆದರೆ ಇವರು ತೆಗೆದುಕೊಳ್ಳುವ ಸುರಕ್ಷತಾ ಕ್ರಮಗಳೇನು? ಗೃಹಮಂತ್ರಿಗಳು ಆಗ ‘ಹೆಣ್ಣುಮಕ್ಕಳು ಹೊರಗೇಕೆ ಓಡಾಡಬೇಕು’ ಎನ್ನುವರೇನು?

ಅತ್ಯಾಚಾರಿಗಳನ್ನು, ಅಪರಾಧಿಗಳನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ, ಹಾಗಾಗಿ ನೀವು ನಿಮ್ಮ ವಿದ್ಯೆ ಕಲಿಯುವ ಹಕ್ಕು, ಎಲ್ಲ
ಮನುಷ್ಯರಂತೆ ಬದುಕುವ ಹಕ್ಕನ್ನು ಮರೆತು ಗೂಡೊಳಗೆ ಸೇರಿಕೊಂಡು ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎನ್ನುತ್ತಿದ್ದಾರೆಯೇ? ಮೊದಲಿಗೆ ನಾವು ಸಂವಿಧಾನ, ಸರ್ಕಾರ ಇಂತಹ ಒಂದು ವ್ಯವಸ್ಥೆಯನ್ನು ರೂಪಿಸಿಕೊಂಡಿರುವುದರ ಮೂಲ ಉದ್ದೇಶವಾದರೂ ಏನು? ಬಲವಿದ್ದವರು ಕೊಂದು ತಿನ್ನುವ, ಇಲ್ಲದವರು ಅಸಹಾಯಕರಾಗಿ ಕೊಲ್ಲಲ್ಪಡುವ ವ್ಯವಸ್ಥೆಗೆ ಬದಲಾಗಿ ಎಲ್ಲರೂ ಸಮಾನವಾಗಿ ಬದುಕುವ ಅವಕಾಶ ರೂಪಿಸಿಕೊಂಡು, ಎಲ್ಲರ ಸುರಕ್ಷತೆಯ ಹೊಣೆಯನ್ನು ವ್ಯವಸ್ಥೆಗೆ ಒಪ್ಪಿಸಿ, ಅದನ್ನು ಸುಗಮವಾಗಿ ನಡೆಸಿಕೊಂಡು ಹೋಗುವ ಸಲುವಾಗಿಯೇ ಸರ್ಕಾರಕ್ಕೆ ತೆರಿಗೆ ಪಾವತಿಸಿ, ಸಂವಿಧಾನ ವಿಧಿಸಿದ ಕರ್ತವ್ಯಗಳನ್ನು ಪಾಲಿಸಿಕೊಂಡು ಹೋಗುತ್ತಿರುವುದು. ಸಂವಿಧಾನ ಎಲ್ಲ ಪ್ರಜೆಗಳಿಗೂ ಸಮಾನವಾಗಿ ನೀಡಿರುವ ಹಕ್ಕುಗಳನ್ನು ಅನುಭವಿಸದಂತೆ, ಸಂವಿಧಾನಕ್ಕೂ ಮೀರಿದ ಸಾಮಾಜಿಕ ನೈತಿಕ (?) ಮಿತಿಗಳನ್ನು ಹೆಣ್ಣಿನ ಮೇಲೆ ಮಾತ್ರ ಹೇರಿ, ಅವರನ್ನು ಹೀಗೆ ಮಿತಿಗೊಳಿಸುವ ಅಧಿಕಾರ ಇವರಿಗೆ ಕೊಟ್ಟವರು ಯಾರು? ಹಾಗಾದರೆ ಮಹಿಳೆಯರು ಈ ದೇಶದಲ್ಲಿ ಎರಡನೇ ದರ್ಜೆಯ ಪ್ರಜೆಗಳೇನು?

ಗೃಹಮಂತ್ರಿಗಳು ನನ್ನ ಹೇಳಿಕೆಗೆ ‘ಸಂತ್ರಸ್ತೆ ತಮ್ಮ ಮಗಳ ಸಮಾನ, ಕಾಳಜಿಯಿಂದಲೇ ಆ ಮಾತನ್ನು ಹೇಳಿದೆ’ ಎಂಬ ಸಮಜಾಯಿಷಿಯನ್ನೂ ನೀಡಿದ್ದಾರೆ. ಒಬ್ಬ ಗೃಹಮಂತ್ರಿಯಾಗಿ ತಮ್ಮ ಕೆಲಸವನ್ನು ಸರಿಯಾಗಿ ಮಾಡುವುದೇ ಆಕೆಗೆ ಮತ್ತು ರಾಜ್ಯದ ಎಲ್ಲ ಪ್ರಜೆಗಳಿಗೆ ತೋರಬಹುದಾದ ಅತಿ ದೊಡ್ಡ ಕಾಳಜಿಯಾಗಿದೆ ಮತ್ತು ಅದು ಅವರು ಸಾಂವಿಧಾನಿಕವಾಗಿ ಮಾಡಬೇಕಾದ ಕನಿಷ್ಠ ಕರ್ತವ್ಯವಾಗಿದೆ. ಕಾಳಜಿಯೆಂದು ಕರೆಯುತ್ತಿರುವ ಅವರ ಹೇಳಿಕೆಯು ಆಕೆಗೂ, ಜನತೆಗೂ ಮತ್ತು ಸಂವಿಧಾನಕ್ಕೂ ಬಗೆಯುವ ದ್ರೋಹವಾಗಿದೆ.

ಅತ್ಯಂತ ವಿಷಾದದ ಸಂಗತಿಯೆಂದರೆ, ಗೃಹಮಂತ್ರಿಗಳ ಹೇಳಿಕೆಗೆ ವ್ಯಕ್ತವಾದ ಖಂಡನೆಯ ಜೊತೆಗೇ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅದನ್ನು ಪುಷ್ಟೀಕರಿಸುವ ಮಾತುಗಳು ಸಹ ಬಂದವು. ಅತ್ಯಾಚಾರ ನಡೆದಾಗ ಅದರಲ್ಲಿ ಅತ್ಯಾಚಾರಿಯ ದುಷ್ಕೃತ್ಯವನ್ನು ಖಂಡಿಸುವುದಕ್ಕಿಂತಲೂ ಹೆಚ್ಚಾಗಿ, ‘ಹಾಗೆ ನಡೆಯದಿರುವಂತೆ ತಡೆಯಬೇಕಾಗಿದ್ದುದು ಸಂತ್ರಸ್ತೆಯ ಜವಾಬ್ದಾರಿಯಾಗಿತ್ತು; ಅದರಲ್ಲಿ ಆಕೆ ಸೋತದ್ದರಿಂದಲೇ ಅತ್ಯಾಚಾರ ನಡೆಯಿತು, ಆಕೆಯ ‘ಆ’ ತಪ್ಪು ಸಹಜವಾಗಿಯೇ ಅತ್ಯಾಚಾರಕ್ಕೆ ಆಹ್ವಾನ’ ಎಂಬಂತೆ ವ್ಯಾಖ್ಯಾನಿಸಲಾಗುತ್ತದೆ.

‘ಆ’ ತಪ್ಪಿನ ಪಟ್ಟಿ ಕೊನೆಯಿಲ್ಲದಷ್ಟು ಉದ್ದವಿದೆ; ತೊಡುವ ಬಟ್ಟೆಯ ಉದ್ದ, ಮುಕ್ತ ನಗು, ಸಮಾನತೆಗಾಗಿನ ತುಡಿತ, ಓದುವ ಹಂಬಲ, ಸಂಗಾತಿಯ ಆಯ್ಕೆ ಹೀಗೆ ಯಾವುದು ಬೇಕಾದರೂ ಪುರುಷಾಧಿಪತ್ಯದ ಮನಸನ್ನು ಅತ್ಯಾಚಾರಕ್ಕೆ ಪ್ರೇರೇಪಿಸಬಹುದು ಮತ್ತು ಅದು ಸಹಜ ಎಂದು ನಮಗೆ ನಿರಂತರವಾಗಿ ಹೇಳಿಕೊಡಲಾಗುತ್ತದೆ!

ಅತ್ಯಾಚಾರವೆಂಬುದು ಕ್ಷಣಿಕವಾಗಿ ನಡೆದುಬಿಡುವ ಅಚಾತುರ್ಯವಲ್ಲ, ಅದು ಹಂತಹಂತವಾಗಿ ಬೆಳೆಯುವ, ಬೆಳೆಸಲ್ಪಡುವ ಮನಸ್ಥಿತಿ. ಹೆಣ್ಣನ್ನು ಅಧೀನಲಿಂಗಿಯಾಗಿ ನೋಡುವ ಪಾಠ ಮನೆಯಂಗಳದಿಂದಲೇ ಆರಂಭವಾಗಿ, ನೆರೆಹೊರೆಯಲ್ಲಿ, ಶಾಲಾ ಪಠ್ಯಗಳಲ್ಲಿ, ಸಿನಿಮಾ– ಧಾರಾವಾಹಿಗಳಲ್ಲಿ, ಆರಾಧಿಸುವ ಹೀರೋಗಳ ನಡೆನುಡಿಯಲ್ಲಿ, ಮಾಧ್ಯಮಗಳಲ್ಲಿ, ರಾಜಕಾರಣಿಗಳ ಹೇಳಿಕೆಗಳಲ್ಲಿ ಕೊನೆಗೆ ಕೋರ್ಟುಗಳಲ್ಲಿ ಅತ್ಯಾಚಾರಿಯನ್ನೇ ಮದುವೆಯಾಗುವ ಪ್ರಸ್ತಾಪವಿಡುವ ನ್ಯಾಯಾಧೀಶರುಗಳವರೆಗೆ ಎಲ್ಲೆಲ್ಲೂ ನಿರಂತರವಾಗಿ ಸಾಗುತ್ತಲೇ ಇರುತ್ತದೆ. ಹೆಣ್ಣು ತಗ್ಗಿ-ಬಗ್ಗಿ ನಡೆಯಬೇಕು, ಹೆಚ್ಚು ಮಾತಾಡಬಾರದು, ಜೋರಾಗಿ ನಗಬಾರದು, ಎಲ್ಲೆಂದರಲ್ಲಿ ಓಡಾಡಬಾರದು, ಜೀನ್ಸ್ ತೊಡಬಾರದು, ಮೈತುಂಬ ಬಟ್ಟೆ ಹಾಕಬೇಕು, (ಎಷ್ಟು ತುಂಬ?) ಚೂಡಿದಾರದ ಮೇಲೆ ದುಪಟ್ಟಾ ಹೊದ್ದಿರಬೇಕು ಎಂದೆಲ್ಲಾ ಹೇಳುವವರು; ಹಾಗೂ ಅದೇ ಚೂಡಿದಾರನ್ನು ಒಬ್ಬ ಟೀಚರ್ ತೊಟ್ಟರೆ ಅದು ವಿದ್ಯಾರ್ಥಿಗಳಿಗೆ ಪ್ರಚೋದಕವೆನಿಸಬಹುದು ಎಂದು ಸುತ್ತೋಲೆ ಹೊರಡಿಸುವವರು ಇವರೆಲ್ಲರ ಪಾಲೂ ಇದೆ, ಈ ಅತ್ಯಾಚಾರಗಳಲ್ಲಿ.

ಹೀಗೆ ಸಂತ್ರಸ್ತೆಯಾದ ಹೆಣ್ಣನ್ನೇ ದೂಷಿಸುವ ಮನಸ್ಥಿತಿಯನ್ನು ಪಕ್ಷಾತೀತವಾಗಿ ಅನೇಕರು ಮೊದಲೂ ತೋರಿದ್ದಾರೆ. ಅವರೆಲ್ಲರೂ ಖಂಡನಾರ್ಹರೇ. ಆದರೆ ಬಿಜೆಪಿ ರಾಜಕೀಯ ಪಕ್ಷವಾಗಿ ಸ್ತ್ರೀ ಅಧೀನತೆಯನ್ನು ಅಧಿಕೃತವಾಗಿ ತನ್ನ ಸಿದ್ಧಾಂತವಾಗಿ ಪ್ರತಿಪಾದಿಸುವುದರಿಂದ ಅದು ಹೆಚ್ಚು ಅಪಾಯಕಾರಿ. ಸ್ತ್ರೀಯರಿಗೆ ಸಮಾನತೆಯ ಹಕ್ಕುಗಳನ್ನು ನೀಡುವ ಸಂವಿಧಾನಕ್ಕಿಂತ ಮಿಗಿಲಾಗಿ ಸ್ತ್ರೀಯರು ಸ್ವಾತಂತ್ರ್ಯಕ್ಕೆ ಅರ್ಹರೇ ಅಲ್ಲವೆನ್ನುವ ಮನುಧರ್ಮಶಾಸ್ತ್ರಕ್ಕೆ ತಮ್ಮ ನಿಷ್ಠೆ ಎಂದು ಹಲವಾರು ಬಾರಿ ಅಧಿಕೃತ ಹೇಳಿಕೆಗಳನ್ನೇ ನೀಡಿದ್ದಾರೆ. ಸಮಯ ಸರಿದಂತೆ ಧರ್ಮ, ಜಾತಿ, ಚರ್ಮದ ಬಣ್ಣ, ಲಿಂಗ ತರತಮಗಳೆಲ್ಲ ಕಳೆದು ಮನುಷ್ಯರೆಲ್ಲರೂ ಹೆಚ್ಚು ಸಮಾನರಾಗುವತ್ತ, ಹೆಚ್ಚು ಮಾನವೀಯವಾಗುವತ್ತ ಸಾಗಬೇಕಿತ್ತು. ಆದರೆ ನಮ್ಮನ್ನು ಆಳುವವರ ವಿಕೃತ ಮನಸ್ಥಿತಿಗಳು, ಅಧಿಕಾರ ಲಾಲಸೆಗಳು ಸಮಾಜವಾಗಿ ನಮ್ಮನ್ನು ಹಿಮ್ಮುಖವಾಗಿ ದೂಡುತ್ತ ಪ್ರಪಾತಕ್ಕೆ ತಳ್ಳಲು ಹೊರಟಿವೆ. ನಾವು ಎಚ್ಚೆತ್ತುಕೊಂಡು ದನಿ ಎತ್ತಲೇ ಬೇಕಿದೆ.


–ಸಂಜ್ಯೋತಿ ವಿ.ಕೆ, ನಟಿ, ನಿರ್ದೇಶಕಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು