ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ | ಅತ್ಯಾಚಾರಿಗಳ ಬಿಡುಗಡೆಗೆ ಅವಕಾಶವೇ ಇಲ್ಲ

ಬಿಲ್ಕಿಸ್‌ ಬಾನು ಮತ್ತು ಇತರರ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗಳನ್ನು ‘ಸನ್ನಡತೆ’ ಆಧಾರದಲ್ಲಿ ಬಿಡುಗಡೆ ಮಾಡಿದ್ದು ಸರಿಯೇ?
Last Updated 19 ಆಗಸ್ಟ್ 2022, 21:54 IST
ಅಕ್ಷರ ಗಾತ್ರ

‘ಯತ್ರ ನಾರ್ಯೇಷು ಪೂಜ್ಯಂತೇ ರಮಂತೇ ತತ್ರ ದೇವತಾಃ’– ಎಲ್ಲಿ ಮಹಿಳೆಯರನ್ನು ಗೌರವಿಸಲಾಗುತ್ತದೆಯೋ ಅಲ್ಲಿ ದೇವತೆಗಳು ವಾಸಿಸುತ್ತಾರೆ! ಆದರೆ ಇಂದಿನ ವಾಸ್ತವ ಶೋಚನೀಯವಾಗಿದೆ. ಜನರಿರಲಿ, ಸಂವಿಧಾನಬದ್ಧ ಸರ್ಕಾರಗಳೇ ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಗಳು ಎಂದು ಪರಿಗಣಿಸುತ್ತಿವೆ!!. ಇದಕ್ಕೊಂದು ಜ್ವಲಂತ ನಿದರ್ಶನ ಬಿಲ್ಕಿಸ್ ಬಾನು ಪ್ರಕರಣ.

2002ರ ಫೆಬ್ರುವರಿ 27ರಂದು ಸಾಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಒಂದೇ ಕೋಚ್‌ನಲ್ಲಿದ್ದ 59 ಕರಸೇವಕರನ್ನು ಭೀಕರವಾಗಿ ದಹಿಸಿ ಕೊಂದ ಬಳಿಕ ಗುಜರಾತ್‌ ರಾಜ್ಯದಾದ್ಯಂತ ಹಿಂಸಾಚಾರ ಭುಗಿಲೆದ್ದಿತು. ಆ ಸಮಯದಲ್ಲಿ ಬುಡಕಟ್ಟು ಜನರೇ ಹೆಚ್ಚಾಗಿರುವ ದಹೋಡ್‌ ಜಿಲ್ಲೆಯ ರಾಧಿಕಾಪುರ ಗ್ರಾಮದಲ್ಲೂ ದೊಂಬಿ ಗಲಭೆಗಳು ಉಂಟಾಗಿದ್ದವು. ಈ ವೇಳೆ ಐದು ತಿಂಗಳ ಗರ್ಭಿಣಿ ಬಿಲ್ಕಿಸ್ ಬಾನು ತನ್ನ ಮಗಳು ಸಲೇಹಾ ಜೊತೆಗೆ ಮನೆಯನ್ನು ತೊರೆದಿದ್ದರು.

ದೋಷಾರೋಪ ಪಟ್ಟಿಯ ಅನುಸಾರ ಈ ಪ್ರಕರಣವನ್ನು ಅಧ್ಯಯನ ಮಾಡಿದಾಗ, ಛಪ್ಪರ್‌ವಾಡ್ ಬಳಿಯ ಹೊಲವೊಂದರಲ್ಲಿ ಆಶ್ರಯ ಪಡೆದಿದ್ದ ಬಿಲ್ಕಿಸ್‌ ಬಾನು ಮತ್ತು ಆಕೆಯ ಜೊತೆಗಿದ್ದವರ ಮೇಲೆ ಮಾರ್ಚ್ 3ರಂದು ಶಸ್ತ್ರಸಜ್ಜಿತ 20ಕ್ಕೂ ಹೆಚ್ಚು ಜನರ ಉದ್ರಿಕ್ತ ಗುಂಪೊಂದು ದಾಳಿ ನಡೆಸಿತ್ತು. ಆ ವೇಳೆ ಬಿಲ್ಕಿಸ್ ಬಾನು ಹಾಗೂ ಇತರ ಮೂವರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಘಟನೆಯಲ್ಲಿ ಎಂಟು ಜನ ಮುಸ್ಲಿಮರ ಹತ್ಯೆಯಾಗಿತ್ತು. ಬಿಲ್ಕಿಸ್‌, ಒಬ್ಬ ಪುರುಷ ಹಾಗೂ ಮೂರು ವರ್ಷದ ಮಗು ಮಾತ್ರ ಬಚಾವಾಗಿದ್ದರು. ಈ ಘಟನೆಯನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಸುಪ್ರೀಂ ಕೋರ್ಟ್‌ಗೆ ಒಯ್ದಿತ್ತು. ಸುಪ್ರೀಂ ಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿತ್ತು. ಪ್ರಕರಣದ ಆರೋಪಿಗಳನ್ನು 2004ರಲ್ಲಿ ಬಂಧಿಸಲಾಗಿತ್ತು. ಅಹಮದಾಬಾದ್‌ನಲ್ಲಿ ವಿಚಾರಣೆ ಆರಂಭವಾಯಿತು. ಆದರೆ, ಬಿಲ್ಕಿಸ್‌ ಬಾನುಗೆ ಜೀವಬೆದರಿಕೆಕರೆಗಳು ಬರಲಾರಂಭಿಸಿದ ನಂತರ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತು.

ಆರು ಜನ ಪೊಲೀಸರು ಹಾಗೂ ಸರ್ಕಾರಿ ವೈದ್ಯರೊಬ್ಬರು ಸೇರಿದಂತೆ 19 ಜನರ ವಿರುದ್ಧ ದೋಷಾರೋಪ ಹೊರಿಸಲಾಗಿದ್ದ ಈ ಪ್ರಕರಣವನ್ನು ಮುಂಬೈ ನ್ಯಾಯಾಲಯ ವಿಚಾರಣೆ ನಡೆಸಿತು. ಸಾಕ್ಷ್ಯಾಧಾರಗಳ ಕೊರತೆಯ ಕಾರಣ ಏಳು ಜನರನ್ನು ಬಿಡುಗಡೆ ಮಾಡಲಾಗಿತ್ತು. ಒಬ್ಬ ಆರೋಪಿ ವಿಚಾರಣಾ ಅವಧಿಯಲ್ಲಿ ಮೃತಪಟ್ಟಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ 2008ರ ಜನವರಿ 21ರಂದು 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ನಂತರ ಈ ಶಿಕ್ಷೆಯನ್ನು ಬಾಂಬೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ 2017ರಲ್ಲಿ ಎತ್ತಿ ಹಿಡಿದಿತ್ತು.

ಗರ್ಭಿಣಿಯ ಮೇಲೆ ಅತ್ಯಾಚಾರ, ಕೊಲೆ, ಕಾನೂನುಬಾಹಿರವಾಗಿ ಗುಂಪುಗೂಡಿದ ಮತ್ತು ಸಂಚು ರೂಪಿಸಿದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ವಿವಿಧ ಕಲಂಗಳ ಅಡಿಯಲ್ಲಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿತ್ತು. ಈ ಪ್ರಕರಣ ಎಲ್ಲ ಹಂತದ ಕೋರ್ಟುಗಳ ಮಜಲನ್ನೂ ದಾಟಿ ಬಂದಿತ್ತು. ಅಪರಾಧಿಗಳು ಜೀವಾವಧಿ ಶಿಕ್ಷೆಯಡಿಯಲ್ಲಿ 15 ವರ್ಷಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿರುವಂತಾಗಿತ್ತು. ನಂತರ ಇವರಲ್ಲಿ ಒಬ್ಬಾತ ತನ್ನ ಅವಧಿಪೂರ್ವ ಬಿಡುಗಡೆಗಾಗಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದ.

ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ‘ಅಪರಾಧ ‍ಪ್ರಕ್ರಿಯಾ ಸಂಹಿತೆ-1973ರ (ಸಿಆರ್‌ಪಿಸಿ) ಕಲಂ 432ರ ಪ್ರಕಾರ ಕೈದಿಗಳ ಮಾಫಿ ಮಾಡುವ ಹಕ್ಕು ರಾಜ್ಯ ಸರ್ಕಾರಕ್ಕೆ ಇದೆ. ಸದರಿ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿದೆ. ಆದ್ದರಿಂದ, ಸಹಜವಾಗಿಯೇ ದೆಹಲಿ ಪೊಲೀಸ್‌ ಎಸ್ಟಾಬ್ಲಿಷ್‌ಮೆಂಟ್‌ ಕಾಯ್ದೆ ಅನುಸಾರ ಮಾಫಿ ಮಾಡುವ ಮುನ್ನ ಕೇಂದ್ರ ಸರ್ಕಾರದ ಜೊತೆಗಿನ ಸಮಾಲೋಚನೆ ಕಡ್ಡಾಯ’ ಎಂದು ಹೇಳಿತ್ತು. ಸಾಮೂಹಿಕ ಅತ್ಯಾಚಾರದಂತಹ ಪ್ರಕರಣದಲ್ಲಿ ಸಿಆರ್‌ಪಿಸಿ ಕಲಂ 435 (2) ಅಡಿ ಕೇಂದ್ರದ ಒಪ್ಪಿಗೆ ಪಡೆಯದೆ ಮುಂದಡಿ ಇಡುವಂತೆಯೇ ಇಲ್ಲ. ಹೀಗಾಗಿ, 1992ರ ರಾಜ್ಯದ ಮಾಫಿ ನೀತಿ 2014ರ ನೀತಿಗೆ ಒಳಪಟ್ಟು ಸಾಧಕ–ಬಾಧಕ ಪರಿಶೀಲಿಸಿ ಬಿಡುಗಡೆಯ ನಿರ್ಧಾರ ಕೈಗೊಳ್ಳಬೇಕಿತ್ತು.

ಆದರೆ, ಗುಜರಾತ್‌ನಲ್ಲಿದ್ದ 1992ರ ಮಾಫಿ ನೀತಿ ಹಾಗೂ 2014ರಲ್ಲಿ ತಿದ್ದುಪಡಿ ಕಾರಣ ಬದಲಾಗಿದ್ದ ಇದರ ಸ್ವರೂಪವನ್ನು ರಾಜ್ಯ ಸರ್ಕಾರ ಅಂದು ಸುಪ್ರೀಂ ಕೋರ್ಟ್‌ ಗಮನಕ್ಕೆ ತರಬೇಕಿತ್ತು. ಆದರೆ, ತರದೇ ಹೋದ ಪರಿಣಾಮ 1992ರ ಸಮಾಲೋಚನೆ ಅನುಸಾರ ಮಾಫಿ ನೀತಿ ಅನುಸರಿಸಿ ಈಗ ಅಪರಾಧಿಗಳನ್ನು ಸ್ವತಂತ್ರಗೊಳಿಸಿರುವುದು ಸಿಆರ್‌ಪಿಸಿ ಕಲಂ 435 (2)ಕ್ಕೆ ಸ್ವಾಭಾವಿಕವಾಗಿಯೇ ವಿರುದ್ಧವಾಗಿದೆ. ವಾಸ್ತವದಲ್ಲಿ ಸಿಆರ್‌ಪಿಸಿ ಕಲಂ 435 (2)ರ ಪ್ರಕಾರ ಮಹಿಳೆಯರ ಮೇಲಿನ ಸಾಮೂಹಿಕ ಅತ್ಯಾಚಾರದಂತಹ ಘೋರ ಅಪರಾಧ ಎಸಗಿದ ಅಪರಾಧಿಗಳಿಗೆ ರಾಜ್ಯ ಸರ್ಕಾರ ಮಾಫಿ ಮಾಡಿರುವುದು ಕಾನೂನು ಬಾಹಿರ. ಇದು ಸಿಆರ್‌ಪಿಸಿ ಕಲಂ 432ರ ಮಾಫಿ ನೀತಿಯ ಉಲ್ಲಂಘನೆ. ಅಂತೆಯೇ, ಗುಜರಾತ್‌ ರಾಜ್ಯ ಸರ್ಕಾರ ಕೇಂದ್ರದ ಜೊತೆ ಚರ್ಚಿಸದೆಯೇ ತೀರ್ಮಾನ ತೆಗೆದುಕೊಂಡಿರುವುದು ಸಿಆರ್‌ಪಿಸಿ ಕಲಂ 435 (2)ಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದೆ.

ಹೆಣ್ಣಿನ ಮಾನಭಂಗ ಮತ್ತು ಬರ್ಬರ ಹತ್ಯೆಯ ಆರೋಪ ಸಾಬೀತಾಗಿ ಜೀವಾವಧಿ ಶಿಕ್ಷೆಗೊಳಗಾಗಿದ್ದ ಕೈದಿಗಳನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿ ‘ಸನ್ನಡತೆ' ಆಧಾರದ ಮೇಲೆ ಬಿಡುಗಡೆಗೊಳಿಸಿದ್ದು ಯಾರಿಗೇ ಆಗಲಿ ಅಚ್ಚರಿ ಮೂಡಿಸದೆ ಇರದು. ಬಿಲ್ಕಿಸ್ ಬಾನು ಎಂಬ ಗರ್ಭಿಣಿ ಮೇಲೆ ಅತ್ಯಾಚಾರ ನಡೆಸಿದ್ದು ಹೀನಾಯ ಕೃತ್ಯಗಳಲ್ಲಿ ಒಂದು. ಈ ಅಪರಾಧಕ್ಕೆ ಗಲ್ಲು ಶಿಕ್ಷೆಯೇ ಸೂಕ್ತ. ಆದರೆ, ವೈಯಕ್ತಿಕವಾಗಿ ನಾನು ಗಲ್ಲು ಶಿಕ್ಷೆಗೆ ವಿರುದ್ಧ ನಿಲುವು ಹೊಂದಿದ್ದೇನೆ. ಆದಾಗ್ಯೂ, ಈ ಘನಘೋರ ಪ್ರಕರಣದಲ್ಲಿ ಅಪರಾಧಿಗಳು ಜೀವಾವಧಿ ಶಿಕ್ಷೆಯನ್ನು ಪೂರ್ಣಗೊಳಿಸಬೇಕಿತ್ತು.

ಜೀವಾವಧಿ ಶಿಕ್ಷೆ ಮತ್ತಿತರ ಶಿಕ್ಷೆ ಅನುಭವಿಸು ತ್ತಿರುವ ಕೈದಿಗಳನ್ನುಸನ್ನಡತೆಯ ಆಧಾರದಲ್ಲಿ ನಮ್ಮ ಸರ್ಕಾರಗಳು ಬಿಡುಗಡೆಗೊಳಿಸುವುದು ಸ್ವಾತಂತ್ರ್ಯ ಬಂದಾಗಿನಿಂದಲೂಒಂದು ರಿವಾಜಿನಂತೆ ನಡೆದುಕೊಂಡು ಬಂದಿದೆ. ಆದರೆ, ಅದಕ್ಕೆ ತನ್ನದೇ ಆದಂತಹ ನಿಯಮ, ಷರತ್ತುಗಳಿವೆ. ಭಯೋತ್ಪಾದನೆ, ಡ್ರಗ್ಸ್, ಮಾನಭಂಗ ಮತ್ತು ಹತ್ಯೆ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಕೈದಿಗಳನ್ನು ಬಿಟ್ಟು ಇತರೆ ಅಪರಾಧ ಎಸಗಿದ ಸನ್ನಡತೆಯ ಕೈದಿಗಳನ್ನು ಮಾಫಿ ಮಾಡಿ ಬಿಡುಗಡೆ ಮಾಡಲಾಗುತ್ತದೆ. ಹೀನ ಕೃತ್ಯ ಮತ್ತು ಸಮಾಜ ಮನ್ನಿಸಲು ಸಾಧ್ಯವೇ ಇಲ್ಲದಂತಹ ಅಪರಾಧ ಹೊತ್ತ ಕೈದಿಗಳನ್ನು ಏಕೆ ಇದರಿಂದ ಹೊರತುಪಡಿಸಲಾಗಿದೆ ಎಂದರೆ; ಇವೆಲ್ಲಾ ಸಮಾಜದ ಆರೋಗ್ಯ ಹಾಗೂ ನೈತಿಕತೆಗೆ ವಿರುದ್ಧವಾದಂಥವು. ಇಂತಹ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಕೈದಿಗಳನ್ನು ಸನ್ನಡತೆಯ ಆಧಾರದ ಮೇಲೆ ಬಿಡುಗಡೆ ಮಾಡಲು ಅವಕಾಶವಿರುವುದಿಲ್ಲ.

ಗುಜರಾತ್ ಸರ್ಕಾರ ಬಿಲ್ಕಿಸ್ ಬಾನು ಪ್ರಕರಣದಲ್ಲಿ ಮೊದಲಿನಿಂದಲೂ ತನ್ನ ನೀತಿಯಿಂದಾಗಿ ಸುಪ್ರೀಂ ಕೋರ್ಟು, ಗುಜರಾತ್ ಹೈಕೋರ್ಟುಗಳಿಂದ ಛೀಮಾರಿಗೆ ಒಳಗಾಗುತ್ತಲೇ ಬಂದಿದೆ. ಈ ಪ್ರಕರಣ ಅತ್ಯಂತ ಹೇಯ ಕೃತ್ಯವೆಂದು ನ್ಯಾಯಾಲಯವೇ ಅನೇಕ ಬಾರಿ ಹೇಳಿದೆ. ಇಂತಹ ಅಪರಾಧಿಗಳನ್ನು ಬಿಡುಗಡೆ ಮಾಡಲು ಗುಜರಾತ್‌ ರಾಜ್ಯ ಸರ್ಕಾರದ ಸಚಿವ ಸಂಪುಟ ಕೈಗೊಂಡ ನಿರ್ಧಾರಕ್ಕೆ ಅಲ್ಲಿನ ರಾಜ್ಯಪಾಲರು ಅಂಕಿತ ಹಾಕಿದ್ದು ಸರ್ವಥಾ ಸಮರ್ಥನೀಯವಲ್ಲ. ರಾಜ್ಯಪಾಲರು ಸಂವಿಧಾನದ ಜವಾಬ್ದಾರಿ ಹೊತ್ತವರು. ಅಪರಾಧದ ತೀವ್ರತೆಯನ್ನು ಮರೆತು ಬಿಡುಗಡೆಗೆ ತಲೆಯಾಡಿಸಿ ಮುದ್ರೆ ಒತ್ತಿದ್ದು ಖಂಡಿತಾ ಅನ್ಯಾಯ. ಇದು ದೇಶದ ಸಂವಿಧಾನಕ್ಕೆ, ಕಾನೂನು ನಿಯಮಗಳಿಗೆ, ಸಮಾಜದ ಆರೋಗ್ಯಕ್ಕೆ ವಿರುದ್ಧವಾಗಿರುವಂಥದ್ದು. ಹೀಗಾಗಿ, ಇದು ಸರ್ಕಾರವೇ ಮಾಡಿರುವ ಅಪರಾಧ ಎನ್ನದೇ ವಿಧಿಯಿಲ್ಲ.

ಲೇಖಕ: ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

ನಿರೂಪಣೆ: ಬಿ.ಎಸ್‌. ಷಣ್ಮುಖಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT