ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಜಾವಾಣಿ ಚರ್ಚೆ| ಲಿಂಗಾಯತರಿಗೆ ಗೌರವ ತಂದುಕೊಟ್ಟಿದ್ದೇ ಬಿಜೆಪಿ: ಸಿ. ಸೋಮಶೇಖರ್‌

Published 1 ಮೇ 2023, 19:20 IST
Last Updated 1 ಮೇ 2023, 19:20 IST
ಅಕ್ಷರ ಗಾತ್ರ

ಸಿ. ಸೋಮಶೇಖರ್‌

ಲಿಂಗಾಯತ ಸಮುದಾಯ, ನಾಯಕರನ್ನು ಗೌರವಿಸುವ ಬಿಜೆಪಿ ಯಾವುದೇ ಜಾತಿ ಆಧಾರದ ಮೇಲೆ ಪಕ್ಷವನ್ನು ಮುನ್ನಡೆಸದೇ ಅಭಿವೃದ್ದಿ ಮತ್ತು ರಾಷ್ಟ ಹಿತವನ್ನು ಪ್ರಧಾನವಾಗಿಟ್ಟುಕೊಂಡು ಆಡಳಿತ ನಡೆಸುತ್ತ ಬಂದಿದೆ. ಅದೇ ಕಾರಣಕ್ಕೆ ಸದಾ ಅಭಿವೃದ್ದಿ ಪರ ವಿಚಾರಗಳಿಗೆ ಲಿಂಗಾಯತ ಸಮುದಾಯ ಬಿಜೆಪಿಗೆ ತನ್ನ ಬೆಂಬಲವನ್ನು ನಿರಂತರ ನೀಡುತ್ತ ಬಂದಿರುವುದನ್ನು ಅಲ್ಲಗಳೆಯುವಂತಿಲ್ಲ

‘ಕರ್ನಾಟಕದ ಬಗ್ಗೆ ನನಗೆ ಅಪಾರ ಹೆಮ್ಮೆ ಇದೆ. ಇಡೀ ದೇಶದಲ್ಲಿ ನನಗೆ ಅತ್ಯಂತ ಇಷ್ಟವಾಗುವ ರಾಜ್ಯ ಇದು. ಈ ನಾಡಿನಲ್ಲಿ ಜನ್ಮತಳೆದು ವಿಶ್ವಕ್ಕೆ ಜ್ಞಾನದ ಬೆಳಕು ಚೆಲ್ಲಿದ ಬಸವಣ್ಣನವರು ಸಮಾನತೆ ಸಾರಿದ ನೆಲವಿದು. ಅಂತಹ ಬಸವಣ್ಣನವರ ಕಾಯಕ, ದಾಸೋಹ ಆಶಯಗಳನ್ನು ಈಡೇರಿಸಲು ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಆದ್ಯತೆ ನೀಡಿದೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್‌’ ಎನ್ನುವ ಬಿಜೆಪಿ ಉಕ್ತಿಗೆ ಬಸವಣ್ಣನವರ ಆಶಯವೇ ಆಧಾರವಾಗಿದೆ...’

ವಿಶ್ವವೇ ಮೆಚ್ಚುವಂತಹ ವ್ಯಕ್ತಿತ್ವದ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಜಗಜ್ಯೋತಿ ಬಸವಣ್ಣನವರ ಪ್ರೇರಣೆ ಬಗ್ಗೆ ಹೇಳಿದ ಮಾತಿದು. ಕೇಂದ್ರ ಮತ್ತು ರಾಜ್ಯದಲ್ಲಿರುವ ಡಬಲ್ ಎಂಜಿನ್ ಸರ್ಕಾರಗಳು ಅಣ್ಣ ಬಸವಣ್ಣನವರು ತೋರಿಸಿಕೊಟ್ಟ ಹಾದಿಯಲ್ಲೇ ಸಾಗುತ್ತಿವೆ ಎಂಬುದಕ್ಕೆ ಬೇರೆ ನಿದರ್ಶನವೇ ಬೇಕಿಲ್ಲ. ಆದರೆ, ಲಿಂಗಾಯತರಿಗೆ ಯಾರು ಅನ್ಯಾಯ ಮಾಡಿದ್ದಾರೆ, ಯಾರು ಆದ್ಯತೆ ಕೊಟ್ಟಿದ್ದಾರೆ ಎಂಬ ವಿಷಯವೇ ರಾಜ್ಯ ರಾಜಕಾರಣದ ಮುಖ್ಯಭೂಮಿಕೆಯಲ್ಲಿ ಹೆಚ್ಚು ಚರ್ಚಿತವಾಗುತ್ತಿದೆ.

ರಾಜ್ಯದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಆಡಳಿತ ಪಕ್ಷ ಬಿಜೆಪಿ ಅನ್ಯಾಯ ಮಾಡುತ್ತಿದೆ ಎಂಬ ವಾದವನ್ನು ಪ್ರತಿಪಕ್ಷ ಕಾಂಗ್ರೆಸ್ ಮಾಡುತ್ತಿರುವುದು ವಿಪರ್ಯಾಸದ ಸಂಗತಿ. ಸ್ವಾತಂತ್ರ್ಯ ಬಂದ ಈಚೆಗಿನ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಅತ್ಯಲ್ಪ ಅವಧಿ ಎಂದರೆ 9 ವರ್ಷವಷ್ಟೇ ಬಿಜೆಪಿ ಅಧಿಕಾರ ನಡೆಸಿದೆ. ಈ ಅವಧಿಯಲ್ಲಿ ಒಂದು ವರ್ಷ ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಅವಧಿ ಬಿಟ್ಟರೆ ಉಳಿದ ಅವಧಿಯಲ್ಲಿ ಲಿಂಗಾಯತರೇ ಮುಖ್ಯಮಂತ್ರಿಯಾಗಿದ್ದರು. ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್ ಹಾಗೂ ಬಸವರಾಜ ಬೊಮ್ಮಾಯಿ ಅಧಿಕಾರ ನಡೆಸಿದ್ದಾರೆ. ಬಿಜೆಪಿಯಿಂದ ಮುಖ್ಯಮಂತ್ರಿಯಾದವರು ಸಮುದಾಯದ ಹಿನ್ನೆಲೆಯಿಂದ ಲಿಂಗಾಯತರಾದರೂ, ತಾವು ಹುಟ್ಟಿದ ಸಮುದಾಯವನ್ನಷ್ಟೇ ಅವರು ಉದ್ಧಾರದತ್ತ ಕೊಂಡೊಯ್ದವರಲ್ಲ. ಬಸವಣ್ಣನವರ ಕಾಲದಲ್ಲಿ ಎಲ್ಲ ಕಾಯಕ ಸಮಾಜಗಳಿಗೆ ನ್ಯಾಯ ಕೊಟ್ಟಂತೆ, ಅನುಭವ ಮಂಟಪದಲ್ಲಿ ಎಲ್ಲರಿಗೂ ಸಮಾನವಾಗಿ ಅವಕಾಶ ಕಲ್ಪಿಸಿದಂತೆ ಎಲ್ಲ ಜನವರ್ಗಗಳ ಹಿತವನ್ನು ಬಯಸಿದವರು. ಅದಕ್ಕಾಗಿ ಅನುದಾನವನ್ನೂ ದೊಡ್ಡ ಮಟ್ಟದಲ್ಲಿ ನೀಡಿದವರು.

ಅನುಭವ ಮಂಟಪಕ್ಕೆ ವಿಶೇಷ ನೆರವು: ವೀರಶೈವ–ಲಿಂಗಾಯತ ಸಮುದಾಯದವರ ಅಭಿವೃದ್ಧಿಗೆ ಬಿಜೆಪಿ ಕೊಟ್ಟಷ್ಟು ಕೊಡುಗೆಯನ್ನು ಯಾವ ಪಕ್ಷವೂ ಕೊಟ್ಟಿಲ್ಲ.

ವೀರಶೈವ ಸಮುದಾಯದಲ್ಲಿಯೂ ಹಿಂದುಳಿದ ವರು ಇರುವುದನ್ನು ಗಮನಿಸಿದ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ವೀರಶೈವ ಲಿಂಗಾಯತ ಅಭಿವೃದ್ಧಿ ನಿ‌ಗಮ ಸ್ಥಾಪನೆ ಮಾಡಿ, ಸಮುದಾಯದ ಕಲ್ಯಾಣಕ್ಕೆ ಆದ್ಯತೆ ಕೊಟ್ಟರು. ಜಗತ್ತಿನ ಪ್ರಥಮ ಸಂಸತ್ತು ಎಂದು ಕರೆಯಲಾಗುವ ಜಗತ್ತಿಗೆ ಸಮಾನತೆಯ ಸಂದೇಶ ಸಾರಿದ್ದ ಅನುಭವ ಮಂಟಪ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಕ್ರಮ ವಹಿಸಿದೆ. ಬಸವಣ್ಣನವರ ಕರ್ಮಭೂಮಿಯನ್ನು ಜಾಗತಿಕ ಆಕರ್ಷಣೆಯ ಕೇಂದ್ರವಾಗಿ ಮರು ನಿರ್ಮಾಣ ಮಾಡಲು ಅಗತ್ಯ ಅನುದಾನವನ್ನೂ ಒದಗಿಸಿದೆ. 

ಬಸವಣ್ಣನವರ ಆದರ್ಶಗಳನ್ನು ಜಗತ್ತಿಗೆ ತಿಳಿಸಲು ವಿಧಾನಸೌಧದ ಮುಂದೆ ಬಸವಣ್ಣನವರ ಪ್ರತಿಮೆ ಸ್ಥಾಪಿಸುವ ಮೂಲಕ ಸಮಾನತೆಯ ಹರಿಕಾರ ಹಾಗೂ ಲಿಂಗಾಯತ ಸಮುದಾಯಕ್ಕೆ ಗೌರವ ಸಲ್ಲಿಸುವ ಕೆಲಸ ಮಾಡಿದೆ.

ಎಲ್ಲಾ ಸಮುದಾಯವನ್ನು ಸಮಾನವಾಗಿ ಕಾಣುವ ಬಿಜೆಪಿ, ಕೆಳಸ್ತರದ ಸಮುದಾಯಗಳ ಹಿತಾಸಕ್ತಿಗೆ ಧಕ್ಕೆ ಬಾರದಂತೆ ನಡೆದುಕೊಂಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರು ದಶಕಗಳಿಂದ ಮೀಸಲಾತಿ ಪ್ರಮಾಣದ ಹೆಚ್ಚಳಕ್ಕೆ ಆಗ್ರಹಿಸುತ್ತಲೇ ಬಂದಿದ್ದರು. ಒಳಮೀಸಲಾತಿಯ ಬೇಡಿಕೆಯನ್ನು ಪ್ರಬಲವಾಗಿಯೇ ಮಂಡಿಸಿದ್ದರು. ಯಾರೊಬ್ಬರೋ ಈ ಧೈರ್ಯ ಮಾಡಿರಲಿಲ್ಲ. ತಮ್ಮ ಸಚಿವ ಸಂಪುಟ ಸದಸ್ಯರನ್ನು ಒಪ್ಪಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಎರಡೂ ವಿಷಯದಲ್ಲಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡರು. ಲಿಂಗಾಯತ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಸಿಗುತ್ತಿರುವ ಮೀಸಲಾತಿ ಪ್ರಮಾಣ ಕಡಿಮೆ ಇದೆ ಎನ್ನುವುದನ್ನು ಗಮನಿಸಿದ ಬೊಮ್ಮಾಯಿಯವರು, ಲಿಂಗಾಯತರ ಮೀಸಲಾತಿ ಪ್ರಮಾಣವನ್ನು ಶೇ 5ರಿಂದ ಶೇ 7ಕ್ಕೆ ಹೆಚ್ಚಿಸುವ ಚಾರಿತ್ರಿಕ ತೀರ್ಮಾನ ತೆಗೆದುಕೊಂಡರು. ಆದರೆ, ಸಾಮಾಜಿಕ ನ್ಯಾಯ ಒದಗಿಸುವ ಈ ನಿರ್ಧಾರವನ್ನು ವಿರೋಧಿಸುತ್ತಿರುವ ಲಿಂಗಾಯತ ವಿರೋಧಿ ಕಾಂಗ್ರೆಸ್ ನಾಯಕರು, ಬೇರೆ ಸಮುದಾಯವನ್ನು ಪ್ರಚೋದಿಸುವ ಮೂಲಕ ಸುಪ್ರೀಂ ಕೋರ್ಟ್‌ನಲ್ಲಿ ಇದನ್ನು ಪ್ರಶ್ನಿಸಿ, ದೊರೆಯಬಹುದಾಗಿದ್ದ ಮೀಸಲಾತಿ ಅವಕಾಶವನ್ನು ತಪ್ಪಿಸುವ ಹುನ್ನಾರ ನಡೆಸಿದ್ದಾರೆ.

ವೀರೇಂದ್ರ ಪಾಟೀಲರಿಗೆ ಅವಮಾನ: ಕರ್ನಾಟಕದ ರಾಜಕೀಯ ಇತಿಹಾಸ ಲಿಂಗಾಯತ ಸಮುದಾಯ ದೊಂದಿಗೆ ಅಭಿನ್ನವೆಂಬಂತೆ ಬೆರೆತುಕೊಂಡು ಬಂದಿದೆ. ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರ ಎಸ್. ನಿಜಲಿಂಗಪ್ಪ, ಬಿ.ಡಿ‌. ಜತ್ತಿ, ಎಸ್.‌ಆರ್.‌ಕಂಠಿ, ವೀರೇಂದ್ರ ಪಾಟೀಲ ಅವರು ರಾಜ್ಯದ ಮುಖ್ಯಮಂತ್ರಿಗಳಾಗಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.‌ ಅಂತಹ ಮಹಾನ್ ನಾಯಕರನ್ನು ಕಾಂಗ್ರೆಸ್ ನಡೆಸಿಕೊಂಡ‌ ರೀತಿ ಮಾತ್ರ ಅತ್ಯಂತ ಅವಮಾನಕರ.

ಪ್ರಭಾವಿ ಲಿಂಗಾಯತ ನಾಯಕರಾಗಿದ್ದ ವೀರೇಂದ್ರ ಪಾಟೀಲರ ಪ್ರಯತ್ನದ ಫಲವಾಗಿ ಅತ್ಯಧಿಕ ಬಹುಮತ ಪಡೆದು ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಅನಾರೋಗ್ಯದ ನೆಪ ಒಡ್ಡಿದ ಕಾಂಗ್ರೆಸ್, ಆಸ್ಪತ್ರೆ
ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿತು. ನಿಜಲಿಂಗಪ್ಪ, ರಾಜಶೇಖರ ಮೂರ್ತಿ ಅವರಿಗೂ ಅವಮಾನ ಮಾಡಲಾಗಿತ್ತು. ಅಂದಿನಿಂದಲೇ ವೀರಶೈವ ಲಿಂಗಾಯತ ಸಮುದಾಯ ಕಾಂಗ್ರೆಸ್ಸಿನ ಈ ಕುಕೃತ್ಯವನ್ನು ಗ್ರಹಿಸುತ್ತ ಬಂದಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜಕೀಯ ಲಾಭಕ್ಕೋಸ್ಕರ ವೀರಶೈವರು ಮತ್ತು ಲಿಂಗಾಯತರನ್ನು ಪ್ರತ್ಯೇಕಿಸಿ ಧರ್ಮ ಒಡೆಯುವ ಕೆಲಸ ಮಾಡಿದರು. ಪರಿಣಾಮವಾಗಿ, ಕಾಂಗ್ರೆಸ್ 2018ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿತು. ಲಿಂಗಾಯತ ಸಮುದಾಯದ ಪರ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್ ಈಗಲೂ ತನ್ನ ಪಕ್ಷದಲ್ಲಿರುವ ಲಿಂಗಾಯತ ನಾಯಕರನ್ನು ನಡೆಸಿಕೊಳ್ಳುತ್ತಿರುವ ರೀತಿ ನೋಡಿದರೆ, ಕಾಂಗ್ರೆಸ್ ಆ ಸಮುದಾಯಕ್ಕೆ ಎಷ್ಟು ಗೌರವ ಕೊಡುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಹಿರಿಯ ನಾಯಕರಾಗಿರುವ ಎಸ್. ಆರ್. ಪಾಟೀಲರಿಗೆ ವಿಧಾನ ಪರಿಷತ್ತಿನ ಸಭಾಪತಿ ಸ್ಥಾನವನ್ನು ತಪ್ಪಿಸಿ ಅವರನ್ನು ಅವಮಾನಿಸಲಾಯಿತು.

ಅಷ್ಟೇ ಅಲ್ಲ; ಈಶ್ವರ ಖಂಡ್ರೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿಸಿ ಕಾರ್ಯಾಧ್ಯಕ್ಷರನ್ನಾಗಿ ಮಾಡಿ ಕಲ್ಯಾಣ ಕರ್ನಾಟಕ್ಕೆ ಮಾತ್ರ ಸೀಮಿತಗೊಳಿಸಲಾಯಿತು. ಶಾಮನೂರು ಶಿವಶಂಕರಪ್ಪ ಅವರನ್ನು ಪಕ್ಷ ಸಂಘಟನೆಗೆ ಎಟಿಎಂ ಥರ ಬಳಸಿಕೊಂಡು, ಪಕ್ಷ ಅಧಿಕಾರಕ್ಕೆ ಬಂದಾಗ ಯಾವುದೇ ಮಹತ್ವದ ಸಚಿವ ಸ್ಥಾನವನ್ನೂ ನೀಡದೇ, ಅವರಿಗೆ ಅನ್ಯಾಯ ಮಾಡಿರುವುದನ್ನು ರಾಜ್ಯದ ಜನತೆ ಕಂಡಿಲ್ಲವೇ ?

ಎಲ್ಲ ಅಧಿಕಾರ ಅನುಭವಿಸಿ ಈಗ ಕಾಂಗ್ರೆಸ್ ಪಡಸಾಲೆ ಸೇರಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರಿಗೆ ಕಾಂಗ್ರೆಸ್‌ನ ಲಿಂಗಾಯತ ವಿರೋಧಿ ಮನಸ್ಥಿತಿ ಅರಿತುಕೊಳ್ಳಲು ಬಹಳ ದಿನಗಳೇನು ಬೇಕಾಗುವುದಿಲ್ಲ.‌ ಈ ಇಬ್ಬರೂ ಬಿಜೆಪಿಯಲ್ಲಿ ದಶಕಗಳ ಕಾಲ ಇದ್ದರು ಮತ್ತು ಅವರು ಲಿಂಗಾಯತ ಸಮುದಾಯದವರು ಎನ್ನುವ ಕಾರಣಕ್ಕೆ ಉನ್ನತ ಸ್ಥಾನಗಳನ್ನು ನೀಡಲಾಗಿತ್ತು.

ಇದುವರೆವಿಗೂ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಮುಖ್ಯಮಂತ್ರಿಗಳಾದ ಲಿಂಗಾಯತ ಸಮುದಾಯದ ಎಲ್ಲರೂ ಜ್ಯಾತ್ಯತೀತ ನೆಲೆಯಲ್ಲಿ ಒಳ್ಳೆಯ ಆಡಳಿತ ನೀಡಿದ್ದಾರೆ. ಅದೇ ಹಾದಿಯಲ್ಲಿ ಸಾಗಿದ ಬೊಮ್ಮಾಯಿ, ಪಕ್ಷದ ವರಿಷ್ಠರ ಮೆಚ್ಚುಗೆ ಪಡೆಯುವ ಜತೆಗೆ, ಜನಪರ ಆಡಳಿತ ನೀಡುವ ಮೂಲಕ ‘ಸಿಎಂ’ ಎಂದರೆ ಕಾಮನ್ ಮ್ಯಾನ್ ಎಂದು ನಿರೂಪಿಸಿದ್ದಾರೆ. ಜತೆಗೆ, ತಮ್ಮ ನೇತೃತ್ವದ ಬಿಜೆಪಿ ಸರ್ಕಾರವು ಅನ್ಯ ಸಮುದಾಯಗಳಿಗೆ ಅನ್ಯಾಯ ಆಗದಂತೆ ಲಿಂಗಾಯತ ಸಮುದಾಯವನ್ನು ಗೌರವದಿಂದ ನಡೆಸಿಕೊಳ್ಳುತ್ತಿದೆ ಎಂಬುದನ್ನು ನಿರೂಪಿಸಿದ್ದಾರೆ.

ಲೇಖಕ: ಕನ್ನಡ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT