ಮಂಗಳವಾರ, ಡಿಸೆಂಬರ್ 7, 2021
20 °C
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮನಸ್ಥಿತಿಯಲ್ಲಿ ಬದಲಾವಣೆ ಆಗಿದೆಯೇ?

ಪ್ರಜಾವಾಣಿ ಚರ್ಚೆ: ಆರ್‌ಎಸ್‌ಎಸ್‌ ಐಷಾರಾಮಿ ಬದುಕಿನ ಆಗರ

ಎಚ್‌.ಡಿ.ಕುಮಾರಸ್ವಾಮಿ Updated:

ಅಕ್ಷರ ಗಾತ್ರ : | |

Prajavani

ಆರ್‌ಎಸ್‌ಎಸ್ ಈಗ ಒಂದು ಪರಿಶುದ್ಧ ಸೇವಾ ಸಂಸ್ಥೆಯಾಗಿ ಉಳಿದಿದೆಯೇ? ಉಳಿದಿದ್ದರೆ, ಪವರ್ ಸೆಂಟರ್ ಆಗುವ ತವಕ ಏಕೆ? ಮೋದಿ ನೇತೃತ್ವದ ಸರ್ಕಾರದ ಜುಟ್ಟು ನಾಗಪುರದ ಸಂಘದ ಕಚೇರಿಯಲ್ಲಿದೆ ಎನ್ನುವುದು ಸುಳ್ಳೇ? ಪ್ರಜಾತಂತ್ರ ತತ್ವದಲ್ಲಿ ಆಯ್ಕೆಯಾಗಿ ಮಂತ್ರಿಗಳಾದವರಿಗೆ ಆಡಳಿತದ ಅಧಿಕಾರ ನೀಡದೇ ಐಎಎಸ್ ಅಧಿಕಾರಿಗಳಿಗೆ ಕೊಟ್ಟಿರುವುದೇಕೆ? ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಅಂದರೆ ಇದೇನಾ? ಬಹುಶಃ ‘ಕನಿಷ್ಠ ಪ್ರಜಾಪ್ರಭುತ್ವ, ಗರಿಷ್ಠ ಸರ್ವಾಧಿಕಾರ’ದ ಪರಿಕಲ್ಪನೆಯೇ ಎಂಬುದು ಕಾಡುತ್ತಿರುವ ಆತಂಕಗಳು​

ಮೊದಲಿನಿಂದಲೂ ‘ಓದು’ ನನ್ನ ಇಷ್ಟದ ಹವ್ಯಾಸ. ತಂದೆಯವರಿಂದ ಬಂದ ಬಳುವಳಿ ಅದು. ದಿನೇಶ್ ನಾರಾಯಣ್ ಅವರು ಬರೆದ The RSS: And the Making of the Deep Nation ನಾನು ಇತ್ತೀಚೆಗೆ ಓದಿದ ಕೃತಿ. ಇದು ಆರ್‌ಎಸ್‌ಎಸ್‌ನ ಯಶೋಗಾಥೆ. ಪುಸ್ತಕ ಕೈಗೆತ್ತಿಕೊಂಡು ಉತ್ಕಟ ಕುತೂಹಲದಿಂದ ಓದತೊಡಗಿದೆ. 1925ರಿಂದ ಸಂಘ ಬೆಳೆದ ರೀತಿ, ದೇಶದುದ್ದಗಲಕ್ಕೂ ವ್ಯಾಪಿಸಿಕೊಂಡಿದ್ದು, ಬಿಜೆಪಿ ಹುಟ್ಟು, ಸ್ವಯಂಸೇವಕರನ್ನು ರೂಪಿಸುವ ವಿಧಾನ... ಹೀಗೆ ಅನೇಕ ಅಂಶಗಳು ಚಕಿತಗೊಳಿಸಿದವು.   

ಒಂದು ಪಕ್ಷದ ನಾಯಕನಾಗಿ ನನಗೆ ಬಿಜೆಪಿಯ ಸಂಘಟನಾ ಶಕ್ತಿ, ಬೆಳವಣಿಗೆ ಬಗ್ಗೆ ಖಂಡಿತಾ ಅಸೂಯೆ ಇಲ್ಲ. ಅದೇ ರೀತಿ ಆರ್‌ಎಸ್‌ಎಸ್ ಬಗ್ಗೆ ಮೊದಲು ನನಗೆ ಸಕಾರಾತ್ಮಕ ಅಭಿಪ್ರಾಯ ಇತ್ತಾದರೂ ಈ ಪುಸ್ತಕ ಓದಿದ ಮೇಲೆ ಅದು ಬದಲಾಯಿತು. ಓದುತ್ತಾ ಹೋದಂತೆಲ್ಲ ಅನೇಕ ಆಘಾತಕಾರಿ ಅಂಶಗಳೂ ಗೊತ್ತಾದವು.

ಏಕೆಂದರೆ, ದಿನೇಶ್ ನಾರಾಯಣ್ ಅವರು ಸಂಘವನ್ನು ಅತಿ ಸನಿಹದಿಂದ ನೋಡಿ, ಅನೇಕ ಪ್ರಚಾರಕರು, ಸ್ವಯಂಸೇವಕರನ್ನು ಖುದ್ದು ಕಂಡು ಸತ್ಯಸಂಗತಿಗಳನ್ನು ಹೆಕ್ಕಿ ಬರೆದಿದ್ದಾರೆ. ಹೀಗೆ ಅವರು ಉಲ್ಲೇಖಿಸಿದ ಬಹುಮುಖ್ಯ ಅಂಶವೆಂದರೆ ದೇಶದಲ್ಲಿ ಕೆಲಸ ಮಾಡುತ್ತಿರುವ 4 ಸಾವಿರಕ್ಕೂ ಹೆಚ್ಚು ಅಧಿಕಾರಿಗಳು ಸಂಘದಿಂದ ತರಬೇತಿ ಪಡೆದವರು ಎಂಬುದು. ಇದರಲ್ಲಿ ಐಎಎಸ್, ಐಪಿಎಸ್‌ ಅಧಿಕಾರಿಗಳೂ ಇದ್ದಾರೆ. ಇವರೆಲ್ಲ ಸಂಘದ ಕಾರ್ಯಕರ್ತರು ಎನ್ನುವುದಕ್ಕಿಂತ ಅದರ ಗರಡಿಯಿಂದ ಬಂದವರು. ಸಂಘದ ಕಾರ್ಯಸೂಚಿ ಜಾರಿಯ ಹೊಣೆಯನ್ನು ಇವರಿಗೇ ವಹಿಸಲಾಗಿದೆ ಎನ್ನುವುದು ನನ್ನ ಕಳವಳ ಹೆಚ್ಚಿಸಿದ ಅಂಶ. ಆ ಮಟ್ಟಿಗೆ ಇವರನ್ನು ಬ್ರೈನ್ ವಾಶ್ ಮಾಡಿ ಕಳಿಸಲಾಗಿದೆ ಎಂದು ದಿನೇಶ್ ನಾರಾಯಣ್ ವಿವರಿಸುತ್ತಾರೆ.

2016ರ ಒಂದೇ ವರ್ಷದಲ್ಲಿ 676 ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆ ಪಾಸಾಗುತ್ತಾರೆ. ಇಷ್ಟೂ ಜನ ಒಂದೇ ಸಂಸ್ಥೆಯಲ್ಲಿ ತರಬೇತಿ ಪಡೆದವರು, ಆ ಸಂಸ್ಥೆ ಆರ್‌ಎಸ್‌ಎಸ್ ಅಧೀನ ಸಂಸ್ಥೆ! ನನ್ನ ಅನುಮಾನವೆಂದರೆ ಇವರೆಲ್ಲರೂ ವಿಭಿನ್ನತೆಯಲ್ಲಿ ಏಕತೆಯೇ ತುಂಬಿರುವ ಭಾರತದಲ್ಲಿ ಎಲ್ಲರಿಗೂ ಸಲ್ಲುವಂತೆ ಕರ್ತವ್ಯ ನಿರ್ವಹಿಸಲು ಸಾಧ್ಯವೇ? ಐಎಎಸ್ ಪರೀಕ್ಷೆ, ಆಯ್ಕೆ ನಡೆಸುವ ಸಂಸ್ಥೆಯ ಪಾವಿತ್ರ್ಯದ ಕಥೆ ಏನು? ಬ್ರೈನ್‌ವಾಶ್ ಮಾಡಲ್ಪಟ್ಟ ಅಧಿಕಾರಿಗಳಿಂದ ಬಹುತ್ವ ಭಾರತವನ್ನು ಒಟ್ಟಿಗೆ ಇಟ್ಟುಕೊಳ್ಳಲು ಸಾಧ್ಯವೇ ಎಂಬ ಕಳವಳದ ಜತೆ ಆತಂಕವೂ ಸೇರಿಕೊಂಡಿತು.

ಆರ್‌ಎಸ್‌ಎಸ್ ಈಗ ಒಂದು ಪರಿಶುದ್ಧ ಸೇವಾ ಸಂಸ್ಥೆಯಾಗಿ ಉಳಿದಿದೆಯೇ? ಉಳಿದಿದ್ದರೆ, ಪವರ್ ಸೆಂಟರ್ ಆಗುವ ತವಕ ಏಕೆ? ಮೋದಿ ನೇತೃತ್ವದ ಸರ್ಕಾರದ ಜುಟ್ಟು ನಾಗಪುರದ ಸಂಘದ ಕಚೇರಿಯಲ್ಲಿದೆ ಎನ್ನುವುದು ಸುಳ್ಳೇ? ಪ್ರಜಾತಂತ್ರ ತತ್ವದಲ್ಲಿ ಆಯ್ಕೆಯಾಗಿ ಮಂತ್ರಿಗಳಾದವರಿಗೆ ಆಡಳಿತದ ಅಧಿಕಾರ ನೀಡದೇ ಐಎಎಸ್ ಅಧಿಕಾರಿಗಳಿಗೆ ಕೊಟ್ಟಿರುವುದೇಕೆ? ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಅಂದರೆ ಇದೇನಾ? ಬಹುಶಃ ‘ಕನಿಷ್ಠ ಪ್ರಜಾಪ್ರಭುತ್ವ, ಗರಿಷ್ಠ ಸರ್ವಾಧಿಕಾರ’ದ ಪರಿಕಲ್ಪನೆಯೇ ಎಂಬುದು ಕಾಡುತ್ತಿರುವ ಆತಂಕಗಳು.

ಸ್ವಾತಂತ್ರ್ಯಕ್ಕೂ ಮೊದಲು ಸಂಘ ಹೇಗಿತ್ತು? ಈಗ ಹೇಗಿದೆ? ಅಂದು ಸಂಘವೆಂದರೆ ಸರಳತೆ, ಸೇವಾ ಮನೋಭಾವ. ಸ್ವಯಂ ಸೇವಕರು, ಪ್ರಚಾರಕರು ಅಷ್ಟೇ ಸರಳತೆ, ಸಜ್ಜನಿಕೆಯಿಂದ ಇದ್ದರು. ಶಾಖೆಗಳಿಗೆ ಅವರು ಸೈಕಲ್‌ನಲ್ಲಿ ಬರುತ್ತಿದ್ದ ದೃಶ್ಯಗಳನ್ನು ನೋಡಿದ್ದೇನೆ. ಚಳಿ ಮಳೆ ಬಿಸಿಲೆನ್ನದೇ ಹಳ್ಳಿ, ಕಾಡು-ಮೇಡು ಅಲೆಯುತ್ತಾ ಅಲ್ಲೇ ಮಲಗಿ, ತಣ್ಣೀರು ಸ್ನಾನಕ್ಕೆ ಒಗ್ಗಿಕೊಂಡಿದ್ದ ಆ ಪ್ರಚಾರಕರ ಬಗ್ಗೆ ನನ್ನ ತಕರಾರು ಇಲ್ಲ.

ಈಗ! ಸಂಘವೆಂದರೆ ‘ಸದಾನಂದ’ದ ಪರಿವಾರ. ಐಷಾರಾಮಿ ಬದುಕಿನ ಆಗರ, ಬ್ಯುಸಿನೆಸ್‌ ಕ್ಲಾಸ್ ಪ್ರಯಾಣದ, ಲೋಲುಪತೆಯ ಖಯಾಲಿಗಳ ಆಡುಂಬೊಲ. ಸಂಘವು ಸೇವೆಯ ಪಾವಿತ್ರ್ಯ ಉಳಿಸಿಕೊಂಡಿಲ್ಲ. ಅದರ ಗುರಿ ಅಧಿಕಾರ ಮಾತ್ರ. ಅದಕ್ಕಾಗಿ ಅವರ ಬಳಿ ಇರುವ ಏಕೈಕ ಟೂಲ್‌ಕಿಟ್ ಹಿಂದುತ್ವ. ಆ ಮೂಲಕ ದೇಶವನ್ನು ಪುನಃ ಅಂಧಕಾರಕ್ಕೆ ತಳ್ಳುವ ಕೆಲಸ ಮಾಡುತ್ತಿದೆ. ಸಂವಿಧಾನದತ್ತವಾಗಿ ಪ್ರಮಾಣ ಸ್ವೀಕರಿಸಿದ ಪ್ರಧಾನಿ, ಮುಖ್ಯಮಂತ್ರಿ, ಮಂತ್ರಿಗಳನ್ನು ಕೀಲುಗೊಂಬೆಗಳನ್ನಾಗಿ ಮಾಡಿಕೊಳ್ಳುವ ಅಪ್ರಜಾಸತ್ತಾತ್ಮಕ ಕೂಟವೇ ಇವತ್ತಿನ ಸಂಘ.

ಸ್ವಾತಂತ್ರ್ಯದ ನಂತರ ಕಾಂಗ್ರೆಸ್ ಹೇಗೆ ಬದಲಾಗಿದೆಯೋ ಸಂಘವೂ ಹಾಗೆಯೇ ಬದಲಾಯಿತು. ಸಂಘಕ್ಕೆ ಈಗ ದೇಶಪ್ರೇಮ ಬೇಕಿಲ್ಲ, ಅಭಿವೃದ್ಧಿ ಅಗತ್ಯವಿಲ್ಲ. ಶಾಂತಿ-ನೆಮ್ಮದಿ ರುಚಿಸುವುದಿಲ್ಲ. ಎಲ್ಲ ಪವರ್ ಸೆಂಟರ್‌ಗಳನ್ನು ದುರ್ಬಲಗೊಳಿಸಿ ತಾನೇ ‘ಸೂಪರ್ ಪವರ್ ಸೆಂಟರ್’ ಆಗಿ ಭಾರತವನ್ನು ತನ್ನ ಮುಷ್ಠಿಯಲ್ಲಿ ಇಟ್ಟುಕೊಳ್ಳಬೇಕೆಂಬ ಮಹಾತ್ವಾಕಾಂಕ್ಷೆ ಅದಕ್ಕಿರುವುದನ್ನು ಗಮನಿಸಬಹುದು.

ಇನ್ನು, ಸಂಘದ ಗರ್ಭಗುಡಿಗೆ ಕೆಲವರಿಗಷ್ಟೇ ಪ್ರವೇಶ. ಹಿಂದುತ್ವ ಸಿದ್ಧಾಂತಕ್ಕೆ ಶರಣಾದವರಿಗಷ್ಟೇ ಅಲ್ಲಿ ಅವಕಾಶ. ಬಿಜೆಪಿಯಲ್ಲಿ ಇರುವ ಎಲ್ಲರಿಗೂ ಈ ಗರ್ಭಗುಡಿ ಮುಕ್ತವಾಗಿಲ್ಲ.

ಕೇವಲ ಎರಡೇ ಸೀಟಿನ ಪಕ್ಷವಾಗಿದ್ದ ಬಿಜೆಪಿಗೆ ರಕ್ತಮಾಂಸ ತುಂಬಿ ಅದಕ್ಕಾಗಿ ಬದುಕನ್ನೇ ಮುಡಿಪಿಟ್ಟ ಎಲ್.ಕೆ.ಆಡ್ವಾಣಿ ಅವರಿಗೆ ಬಂದ ಗತಿ ಏನು? ಜಿನ್ನಾ ಬಗ್ಗೆ ಮಾತನಾಡಿದರೆಂಬ ಒಂದೇ ಕಾರಣಕ್ಕೆ ಅವರ ರಾಜಕೀಯ ಜೀವನವನ್ನೇ ಮುಗಿಸಲಾಯಿತು. ಇದು ಸಂಘದ ನಿಜಸ್ವರೂಪ.

ಆಳಕ್ಕಿಳಿದು ಅಧ್ಯಯನ ಮಾಡಿದಂತೆಲ್ಲ ಸಂಘದ ವಿರಾಟ್ ರೂಪ ದರ್ಶನವಾಗುತ್ತಿದೆ. ಆರ್‌ಎಸ್‌ಎಸ್ ಎಲ್ಲಿ ನೋಂದಣಿಯಾಗಿದೆ? ಅದರ ಅಧಿಕೃತತೆಯ ಪುರಾವೆ ಏನು? ಅದು ಕಾರ್ಯನಿರ್ವಹಿಸುತ್ತಿರುವ ಕಟ್ಟಡಗಳೆಲ್ಲ ಅದರ ಸ್ವಂತದ್ದೇ ಅಥವಾ ಬೇನಾಮಿಯೇ? ಅದರ ಆಸ್ತಿ, ವಹಿವಾಟು ಇತ್ಯಾದಿಗಳ ಲೆಕ್ಕಪತ್ರ ಮಾಹಿತಿ ಎಲ್ಲಿದೆ? ಬರುತ್ತಿರುವ ಕೋಟ್ಯಂತರ ರೂಪಾಯಿ ಆದಾಯಕ್ಕೆ ಲೆಕ್ಕ ಕೊಡಲಾಗುತ್ತಿದೆಯೇ? ಬಿಜೆಪಿಯು ಪ್ರತಿ ಸದಸ್ಯನ ವಿವರ ಇಟ್ಟಿದೆ, ಅದೇ ರೀತಿ ಸಂಘ ಇಟ್ಟಿದೆಯೇ? ಸ್ವಯಂಸೇವಕರು ಕೊಟ್ಟ ಹಣದಿಂದ ಸ್ಥಾಪನೆ ಮಾಡಿದ ಶಾಲೆಗಳ ಕಥೆ ಏನಾಗಿದೆ? ರಾಷ್ಟ್ರೋತ್ಥಾನ ಶಿಕ್ಷಣ ಸಂಸ್ಥೆಗಳಲ್ಲಿ ಲಕ್ಷಗಳ ಲೆಕ್ಕದಲ್ಲಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಹಾಗಾದರೆ ಉಚಿತ ಶಿಕ್ಷಣ ಸೇವೆ ಎನ್ನುವುದು ಬರೀ ಪೊಳ್ಳೇ? ದೇಶಾದ್ಯಂತ ಬೇನಾಮಿ ಟ್ರಸ್ಟುಗಳು, ವ್ಯಕ್ತಿಗಳ ಹೆಸರಿನಲ್ಲಿ ಇರುವ ಆಸ್ತಿಗಳ ಬಗ್ಗೆ ತನಿಖೆ ನಡೆಯಲಿ.

ಆರ್‌ಎಸ್ಎಸ್ ನಮ್ಮ ರಾಷ್ಟ್ರಧ್ವಜವನ್ನು ಏನೆಂದು ಕರೆಯುತ್ತದೆ ಗೊತ್ತೇ? ಆ ಪದವನ್ನು ಇಲ್ಲಿ ಬರೆಯಲು ಬಯಸುವುದಿಲ್ಲ. ಸಂಘದ ಗೌರವ ಏನಿದ್ದರೂ ಭಗವಾಧ್ವಜಕ್ಕೆ ಮಾತ್ರ. ರಾಷ್ಟ್ರಗೀತೆಯನ್ನೂ ಅದು ಒಪ್ಪುವುದಿಲ್ಲ. ಜತೆಗೆ, ನಾವು ಬಂದಿರುವುದೇ ಸಂವಿಧಾನ ಬದಲಿಸಲಿಕ್ಕೆ ಎನ್ನುವ ದರ್ಪ ಬೇರೆ. ಇವರು ರಾಷ್ಟ್ರಭಕ್ತರೇ?

ಹಿಂದೂ ಮತ್ತು ಮುಸ್ಲಿಮರ ಪೂರ್ವಜರು ಒಂದೇ ಎನ್ನುವ ಸಂಘವು ಸಂಘಟನೆ, ಚುನಾವಣೆ ಬಂದ ಕೂಡಲೇ ಅವರ ವಿರುದ್ಧ ದ್ವೇಷ ಕಕ್ಕುತ್ತದೆ. ಮುಸ್ಲಿಮರ  ಆಕ್ರಮಣಗಳ ಕಥೆಗಳನ್ನೇ ಶಾಖೆಗಳಲ್ಲಿ ಅರೆದು ಕುಡಿಸುತ್ತಾ ಕೊನೆಗೆ ನಾವೆಲ್ಲ ಒಂದು, ನಾವೆಲ್ಲ ಹಿಂದೂ ಎನ್ನುತ್ತದೆ. ಇದಕ್ಕಿಂತ ದ್ವಿಮುಖ ಧೋರಣೆ ಏನಿದೆ? ಶಾಂತಿ-ಸಹನೆ ಎಂದು ಉಪನ್ಯಾಸ ಮಾಡುವುದು ಒಂದೆಡೆಯಾದರೆ, ಶಾಖೆಗಳಲ್ಲಿ ಕತ್ತಿ ಖಡ್ಗಗಳನ್ನು ಏಕೆ ಸಂಗ್ರಹಿಸಲಾಗುತ್ತದೆ. ಇದು ಕಾನೂನು ಬಾಹಿರ ಅಲ್ಲವೇ? 

ಆರ್‌ಎಸ್‌ಎಸ್ ಎಂದೂ ಸಂವಿಧಾನಕ್ಕೆ ಬದ್ಧವಾಗಿ ನಡೆದುಕೊಂಡಿಲ್ಲ, ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿದಿಲ್ಲ. ನೆಲದ ಕಾನೂನನ್ನು ಗೌರವಿಸಿಲ್ಲ. ಇಂಥ ಸಂಸ್ಥೆ ರಾಷ್ಟ್ರದ ವಿಪತ್ತು ಮಾತ್ರವಲ್ಲ, ದೇಶದ ಜಾತ್ಯತೀತ. ಧರ್ಮಾತೀತ ಮೂಲದ್ರವ್ಯಕ್ಕೆ ವಿಷವುಣಿಸುತ್ತಿರುವ ಕಾರ್ಕೋಟಕ ವಿಷಸರ್ಪ.

ಹೀಗಾಗಿ ಎಲ್ಲರೂ ದೇಶವನ್ನು ರಕ್ಷಿಸಿಕೊಂಡು ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಹೋರಾಡಬೇಕಿದೆ. ಈ ದಿಕ್ಕಿನಲ್ಲಿ ಭಾರತಕ್ಕೆ ಭಾರತವೇ ಒಂದಾಗಬೇಕಿದೆ.

ಲೇಖಕ: ಜೆಡಿಎಸ್‌ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು