ಸೋಮವಾರ, ಆಗಸ್ಟ್ 8, 2022
23 °C

ಪ್ರಜಾವಾಣಿ ಚರ್ಚೆ| ಜಿಎಸ್‌ಟಿ- ಗೋಜಲು ಬಿಡಿಸಲು ಸಕಾಲ

ಅನುಪಮ್ ಮಣೂರ್ Updated:

ಅಕ್ಷರ ಗಾತ್ರ : | |

ಜಿಎಸ್‌ಟಿಗೆ ಕೊಡಬೇಕಿದ್ದ ಶಹಬ್ಬಾಸ್‌ಗಿರಿಯನ್ನು ನಾವು ಕೊಡಲೇಬೇಕಿದೆ. ದೊಡ್ಡ, ಒಕ್ಕೂಟ ವ್ಯವಸ್ಥೆಯ ಮತ್ತು ಬೇರೆ ಬೇರೆ ರಾಜಕೀಯ ಪಕ್ಷಗಳ ಆಡಳಿತದ ಹಲವು ರಾಜ್ಯಗಳಿರುವ ದೇಶದಲ್ಲಿ ಸರಕು ಮತ್ತು ಸೇವೆಗಳಿಗೆ ಒಂದೇ ದರದ ತೆರಿಗೆ ವಿಧಿಸುವುದನ್ನು ಜಾರಿಗೆ ತಂದಿದ್ದು ದೊಡ್ಡ ಸಾಧನೆಯೇ ಸರಿ. ದೇಶದ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜತೆಗೆ ಒಕ್ಕೂಟ ಸರ್ಕಾರವು ಚೌಕಾಸಿ ನಡೆಸಿ ಮತ್ತು ಪೂರ್ಣ ಸಹಮತದೊಂದಿಗೆ 2017ರ ಜುಲೈ 1ರಂದು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಜಾರಿಗೆ ತರಲಾಯಿತು. ದೇಶೀಯ ತೆರಿಗೆಗಳನ್ನು ಸರಳ ಮತ್ತು ಏಕರೂಪಗೊಳಿಸುವ, ತೆರಿಗೆ ಆದಾಯವನ್ನು ಹೆಚ್ಚಿಸುವ ಮತ್ತು ಆರ್ಥಿಕತೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸುವ ಅತಿದೊಡ್ಡ ನಿರೀಕ್ಷೆಗಳೊಂದಿಗೆ ಜಿಎಸ್‌ಟಿಯನ್ನು ಜಾರಿಗೆ ತರಲಾಗಿತ್ತು.

ಒಕ್ಕೂಟ ಮತ್ತು ರಾಜ್ಯಗಳು ವಿಧಿಸುತ್ತಿದ್ದ ಒಂಬತ್ತು ಬೇರೆ ಬೇರೆ ತೆರಿಗೆಗಳನ್ನು ಒಗ್ಗೂಡಿಸಿದ್ದು ಜಿಎಸ್‌ಟಿಯ ಬಹುದೊಡ್ಡ ಸಾಧನೆ. ದೇಶದಾದ್ಯಂತ ಸರಕುಗಳ ಸರಾಗ ಸಾಗಣೆಗೆ ಅಡಚಣೆಯಾಗಿದ್ದ ಮತ್ತು ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಗಿದ್ದ ಚೆಕ್‌ಪೋಸ್ಟ್‌ ವ್ಯವಸ್ಥೆಯನ್ನು ಹೋಗಲಾಡಿಸಿದ್ದು ಜಿಎಸ್‌ಟಿಯ ಮತ್ತೊಂದು ಬಹುದೊಡ್ಡ ಸಾಧನೆ. 

ಆದರೆ, ಜಿಎಸ್‌ಟಿಯು ತನ್ನ ತೆರಿಗೆ ಸಂಗ್ರಹ ನಿರೀಕ್ಷೆಯನ್ನು ಮುಟ್ಟಿಲ್ಲ. ಆರಂಭಿಕ ದಿನಗಳಲ್ಲಿ ತೆರಿಗೆ ಸಂಗ್ರಹ ಇಳಿಕೆಯಾದರೂ, ನಂತರದ ದಿನಗಳಲ್ಲಿ ಈ ಹಿಂದಿನ ವ್ಯವಸ್ಥೆಗಿಂತ ಹೆಚ್ಚು ತೆರಿಗೆಯನ್ನು ಜಿಎಸ್‌ಟಿ ತಂದುಕೊಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದು ಸಾಧ್ಯವಾಗಿಲ್ಲ. 2017–18ರಲ್ಲಿ ತೆರಿಗೆ ಸಂಗ್ರಹವು ಶೇ 10ರಷ್ಟು ಇಳಿಕೆಯಾಗಿತ್ತು ಮತ್ತು ನಂತರದ ವರ್ಷಗಳಲ್ಲಿ ಅದು ಸಾಧಾರಣ ಮಟ್ಟದಲ್ಲಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ವಿಶ್ಲೇಷಿಸಿದೆ.

ಜಿಎಸ್‌ಟಿ ನೆಟ್‌ವರ್ಕ್‌ ಎಂಬ ಅತ್ಯಂತ ಪ್ರಬಲ ತಂತ್ರಜ್ಞಾನ ಪ್ಲಾಟ್‌ಫಾರ್ಮ್‌ನಲ್ಲಿ ಜಿಎಸ್‌ಟಿ ವ್ಯವಸ್ಥೆ ಕೆಲಸ ಮಾಡುತ್ತದೆ. ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ಅನ್ನು ಪರಿಶೀಲಿಸಲು ಜಿಎಸ್‌ಟಿಎನ್‌ ಬಳಕೆಯಾಗುತ್ತದೆ. ಆದರೆ, ಜಿಎಸ್‌ಟಿಎನ್‌ ಬಳಕೆಯು ತಾಂತ್ರಿಕ ಸಮಸ್ಯೆಗಳಿಂದ ಕೂಡಿತ್ತು. ಜಿಎಸ್‌ಟಿ ಫೈಲಿಂಗ್‌ನಲ್ಲಿ ಸಮಸ್ಯೆ ಇತ್ತು, ಜಿಎಸ್‌ಟಿ ಮರುಪಾವತಿ ಸ್ಥಗಿತವಾಗಿತ್ತು, ಅಸಮಂಜಸವಾದ ದಂಡ, ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಅನ್ನು ಗುರುತಿಸುವಲ್ಲಿ ವೈಫಲ್ಯ... ಈ ಎಲ್ಲಾ ಸಮಸ್ಯೆಗಳಿಂದ ಸಣ್ಣ–ಪುಟ್ಟ ಉದ್ಯಮಗಳು ಭಾರಿ ನಷ್ಟ ಅನುಭವಿಸಿದವು. 

ಜಿಎಸ್‌ಟಿ ವ್ಯವಸ್ಥೆ ಇನ್ನೇನು ಸರಿಹೋಗುತ್ತಿದೆ ಎನ್ನುವಾಗ ಕೋವಿಡ್‌ ಸಾಂಕ್ರಾಮಿಕ ಬಂದೆರಗಿತು. ಅದರ ಹಿಂದೆಯೇ ಒಂದರ ನಂತರ ಒಂದರಂತೆ ಬಂದ ಲಾಕ್‌ಡೌನ್‌ಗಳು ಆರ್ಥಿಕತೆಯನ್ನು ಹದಗೆಡಿಸಿದವು. ಸಹಜವಾಗಿಯೇ ತೆರಿಗೆ ಸಂಗ್ರಹಕ್ಕೆ ಹೊಡೆತ ಬಿತ್ತು. ಆದರೆ ಇದರ ಮಧ್ಯೆಯೇ, ಕೋವಿಡ್‌ ಎರಡನೇ ಅಲೆಯ ನಂತರ ತೆರಿಗೆ ಸಂಗ್ರಹ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ ಎಂಬ ಒಳ್ಳೆಯ ಸುದ್ದಿಯೂ ಇದೆ.

ಜಿಎಸ್‌ಟಿ ವ್ಯವಸ್ಥೆಯಲ್ಲಿ ಇರುವ ಅತ್ಯಂತ ದೊಡ್ಡ ನ್ಯೂನತೆಯಂದರೆ, ಅದರ ಸಂಕೀರ್ಣತೆ. ಮತ್ತು ಈ ನ್ಯೂನತೆಯನ್ನು ತಕ್ಷಣವೇ ಸರಿಪಡಿಸಬೇಕಾದ ಅಗತ್ಯವಿದೆ. ಜಿಎಸ್‌ಟಿಯಲ್ಲಿ ಈಗ ಶೇ 5, ಶೇ 12, ಶೇ 18 ಮತ್ತು ಶೇ 28ರ ನಾಲ್ಕು ಪ್ರತ್ಯೇಕ ಪ್ರಾಥಮಿಕ ದರಗಳಿವೆ. ಜತೆಗೆ ವಿನಾಯಿತಿ ಪಡೆದ ಸರಕುಗಳ ಮೇಲೆ (ಶೇ 0), ಅಮೂಲ್ಯ ಮುತ್ತು–ರತ್ನ ಮತ್ತು ಹವಳಗಳ ಮೇಲೆ ಶೇ 0.25ರ ವಿಶೇಷ ದರ, ಚಿನ್ನದ ಮೇಲೆ ಶೇ 3ರಷ್ಟು ತೆರಿಗೆಯ ಹೆಚ್ಚುವರಿ ದರಗಳೂ ಇವೆ. ಐಷಾರಾಮಿ ವಸ್ತುಗಳು ಎಂಬ ಒ‍ಪ್ಪತಕ್ಕದ್ದಲ್ಲದ ಶೇ 28ರಷ್ಟು ಭಾರಿ ದರದ ತೆರಿಗೆ ಕಟ್ಟಬೇಕಾದ ಮತ್ತೊಂದು ವರ್ಗವೂ ಇದೆ. ಜಿಎಸ್‌ಟಿಯು ಏಕರೂಪದ ಮತ್ತು ಸರಳ ತೆರಿಗೆ ವ್ಯವಸ್ಥೆಯಾಗಬೇಕಿತ್ತು. ಆದರೆ ಜಿಎಸ್‌ಟಿಯು ಸರಕು ಮತ್ತು ಸೇವೆಗಳ ವರ್ಗೀಕರಣ, ಮರುವರ್ಗೀಕರಣದಂತಹ ಸಂಕೀರ್ಣತೆಗಳ ಮಹಾ ಗೋಜಲಾಗಿದೆ. ಇನ್ನು ಸ್ವಲ್ಪವೇ ಚೌಕಾಸಿ ನಡೆಸಿದ್ದರೆ ಮತ್ತು ರಾಜಕೀಯ ಇಚ್ಛಾಶಕ್ತಿ ಇದ್ದಿದ್ದರೆ ನಮ್ಮ ಜಿಎಸ್‌ಟಿ ವ್ಯವಸ್ಥೆಯು ಒಂದು ಅಥವಾ ಎರಡು ತೆರಿಗೆ ದರದ ವ್ಯವಸ್ಥೆಯಾಗಿ ರೂಪುಗೊಳ್ಳುತ್ತಿತ್ತು.

ತೆರಿಗೆ ಹೊರೆ ಹಂಚಿಕೆಯಲ್ಲಿ ಸಮಾನತೆ ಸಾಧಿಸುವ ಸಲುವಾಗಿ ಕೆಲವು ಅತ್ಯಗತ್ಯ ವಸ್ತುಗಳನ್ನು ಜಿಎಸ್‌ಟಿಯಿಂದ ಹೊರಗೆ ಇಡಲಾಗಿದೆ ಇಲ್ಲವೇ ಅತ್ಯಂತ ಕಡಿಮೆ ದರದ ವರ್ಗಕ್ಕೆ ಸೇರಿಸಲಾಗಿದೆ. ಇಂತಹ ಸಮಾನತೆಯನ್ನು ತೆರಿಗೆ ಹೊರೆ ಹಂಚಿಕೆಗಿಂತ, ಸರ್ಕಾರವು ತನ್ನ ವೆಚ್ಚದ ಮೂಲಕ ಸಾಧಿಸುವುದು ಹೆಚ್ಚು ಸೂಕ್ತ ಎಂಬುದಕ್ಕೆ ನಿದರ್ಶನಗಳಿವೆ. ಬ್ರ್ಯಾಂಡ್‌ ಅಲ್ಲದ ಆಹಾರ ಪದಾರ್ಥಗಳನ್ನು ಜಿಎಸ್‌ಟಿಯಿಂದ ಹೊರಗೆ ಇಡಲಾಗಿದೆ. ಆದರೆ ಬ್ರ್ಯಾಂಡೆಡ್‌ ಆಹಾರ ಪದಾರ್ಥಗಳಿಗೆ ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಈ ರೀತಿಯ ಆಯ್ದ ಸ್ವರೂಪದ ತೆರಿಗೆ ಹೇರಿಕೆಯು ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ತೆರಿಗೆಯಲ್ಲಿನ ಭಾರಿ ಅಂತರದ ಕಾರಣ ಆಹಾರ ಪದಾರ್ಥದಲ್ಲಿನ ಉತ್ಪಾದನೆಯು ಅಸಂಘಟಿತ ವಲಯದತ್ತ ಹೊರಳುತ್ತಿದೆ.

ಜಿಎಸ್‌ಟಿ ವ್ಯವಸ್ಥೆಯ ಸಂಕೀರ್ಣತೆಯನ್ನು ಈ ನಿದರ್ಶನದ ಮೂಲಕ ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಪಿಜ್ಜಾಗಳನ್ನು ಹೇಗೆ ಮಾಡಲಾಗುತ್ತದೆ ಮತ್ತು ಹೇಗೆ ಮಾರಾಟ ಮಾಡಲಾಗುತ್ತದೆ ಎಂಬುದರ ಮೇಲೆ ಮೂರು ದರದ ಜಿಎಸ್‌ಟಿ ವಿಧಿಸಲಾಗುತ್ತದೆ. ರೆಸ್ಟೋರೆಂಟ್‌ನಲ್ಲಿ ಕೂತು ಪಿಜ್ಜಾ ತಿನ್ನುವುದಾದರೆ ಸರ್ಕಾರಕ್ಕೆ ಶೇ 5ರಷ್ಟು ಜಿಎಸ್‌ಟಿ ನೀಡಬೇಕು. ಅದೇ ಪಿಜ್ಜಾವನ್ನು ಮನೆಗೆ ತರಿಸಿಕೊಂಡರೆ ಅದಕ್ಕೆ ಶೇ 18ರಷ್ಟು ಜಿಎಸ್‌ಟಿ ಕಟ್ಟಬೇಕು. ಪಿಜ್ಜಾ ಬೇಸ್‌ಗೆ ಶೇ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಅದೇ ಪಿಜ್ಜಾ ಬೇಸ್‌ನ ಮೇಲೆ ಹಾಕುವ ಟಾಪಿಂಗ್ಸ್‌ಗಳಿಗೆ ಶೇ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ.

ಸಂಕೀರ್ಣ ಮತ್ತು ಭಾರಿ ದರದ ಜಿಎಸ್‌ಟಿಯು ಆರ್ಥಿಕತೆಗೆ ಮಾರಕವಾಗಿ ಪರಿಗಣಿಸುತ್ತದೆ. ಸಿಮೆಂಟ್‌, ಟೈಲ್ಸ್‌, ಮಾರ್ಬಲ್‌–ಗ್ರನೇಟ್‌, ಪೇಂಟ್‌ ಮತ್ತು ಪ್ಲೈವುಡ್‌ಗಳಂತಹ ನಿರ್ಮಾಣ ಕಾಮಗಾರಿಯ ಸರಕುಗಳನ್ನು ಐಷಾರಾಮಿ ವಸ್ತುಗಳು ಎಂದು ಪರಿಗಣಿಸಲಾಗಿದೆ. ಅವುಗಳ ಮೇಲೆ ಶೇ 28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ವಾಹನ ಮತ್ತು ಬಿಡಿಭಾಗಗಳ ಮೇಲಂತೂ ಶೇ 28ರಷ್ಟು ಜಿಎಸ್‌ಟಿ ಮತ್ತು ಕೆಲವು ಸಂದರ್ಭಗಳಲ್ಲಿ
ಶೇ 22ರಷ್ಟು ಪರಿಹಾರ ಸೆಸ್‌ ಅನ್ನು ಹೇರಲಾಗಿದೆ. ಒಟ್ಟಾರೆಯಾಗಿ ಇದು ಶೇ 50ರಷ್ಟು ತೆರಿಗೆಯಾಗುತ್ತದೆ. ಈ ಎರಡೂ ವಲಯಗಳು ಉದ್ಯೋಗ ಸೃಷ್ಟಿಯಲ್ಲಿ ಅತ್ಯಂತ ಮಹತ್ವದ್ದಾಗಿವೆ. ವಿಪರೀತ ತೆರಿಗೆಯು ಬೇಡಿಕೆಯನ್ನು ಕುಗ್ಗಿಸಬಹುದು. ಪರಿಣಾಮವಾಗಿ ಉದ್ಯೋಗ ನಷ್ಟವಾಗಬಹುದು.


ಅನುಪಮ್ ಮಣೂರ್

ಜಿಎಸ್‌ಟಿ ಜಾರಿಗೆ ಬಂದು ಐದು ವರ್ಷಗಳಾಗಿವೆ. ಜಿಎಸ್‌ಟಿ ವ್ಯವಸ್ಥೆಯೂ ಸರಿಯಾಗಿ ಕೆಲಸ ಮಾಡುತ್ತಿದೆ ಮತ್ತು ತೆರಿಗೆ ಸಂಗ್ರಹವೂ ಏರಿಕೆಯಾಗುತ್ತಿದೆ. ಜಿಎಸ್‌ಟಿ ಜಾರಿಯ ಮೂಲ ಉದ್ದೇಶವಾಗಿದ್ದ ಸರಳ ತೆರಿಗೆ ವ್ಯವಸ್ಥೆಯನ್ನು ಸಾಧಿಸುವ ಸುಧಾರಣೆಗೆ ಇದು ಸಕಾಲ. ಈ ಸುಧಾರಣೆಯಲ್ಲಿ ವಿವಿಧ ತೆರಿಗೆ ದರಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ಅಡಿಯಲ್ಲಿ ತರಬೇಕು. ‍ಪೆಟ್ರೋಲಿಯಂ ಉತ್ಪನ್ನಗಳನ್ನು ಉತ್ಪಾದನೆಗೆ ಬಳಸಿಕೊಳ್ಳುವ ಉದ್ಯಮಗಳ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ ಇದರಿಂದ ಸರಳವಾಗುತ್ತದೆ. ಜತೆಗೆ ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳು ದೊರೆಯುತ್ತವೆ. ಎರಡನೆಯದಾಗಿ, ಹಲವು ದರದ ತೆರಿಗೆಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು ಮತ್ತು ಪರಿಹಾರ ಸೆಸ್‌ ಅನ್ನು ಸಂಪೂರ್ಣವಾಗಿ ತೆಗೆದು ಹಾಕಬೇಕು. ಶೇ 15ರಷ್ಟು ತೆರಿಗೆಯ ಏಕ ದರದ ವ್ಯವಸ್ಥೆ ಜಾರಿಗೆ ತರಬೇಕು ಮತ್ತು ಅದನ್ನು 10 ವರ್ಷಗಳಲ್ಲಿ ಶೇ 12ಕ್ಕೆ ಇಳಿಸುವ ಗುರಿ ಹಾಕಿಕೊಳ್ಳಬೇಕು. ಮೂರನೆಯದಾಗಿ, ಜಿಎಸ್‌ಟಿ ಪಾಲನಾ ವೆಚ್ಚವನ್ನು ಕಡಿತಗೊಳಿಸಬೇಕು. ತೆರಿಗೆ ಸಂಬಂಧಿ ವ್ಯಾಜ್ಯ ಪರಿಹಾರ ವ್ಯವಸ್ಥೆಯಲ್ಲೂ ಸುಧಾರಣೆಗೆ ಹಲವು ಅವಕಾಶಗಳಿವೆ.

ಭಾರತವನ್ನು ಏಕ ಮಾರುಕಟ್ಟೆಯಾಗಿ ಮಾರ್ಪಡಿಸುವಲ್ಲಿ ಜಿಎಸ್‌ಟಿಯು ಅನಿವಾರ್ಯವಾದ ವ್ಯವಸ್ಥೆಯಾಗಿದೆ. ತನ್ನದೇ ಸಂಕೀರ್ಣತೆಗಳಿಂದ ಬಳಲುತ್ತಿರುವ ಜಿಎಸ್‌ಟಿಯನ್ನು ಸುಧಾರಿಸಿ, ಅದರ ನೈಜ ಸಾಮರ್ಥ್ಯವನ್ನು ಬಳಸಿಕೊಳ್ಳಲು ಈಗ ಕಾಲ ಒದಗಿಬಂದಿದೆ.

ಲೇಖಕ: ತಕ್ಷಶಿಲಾ ಸಂಸ್ಥೆಯಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕ

ಪೂರಕ ಮಾಹಿತಿ: ಎಂ.ಗೋವಿಂದ ರಾವ್, ತಕ್ಷಶಿಲಾ ಸಂಸ್ಥೆಯ ಕೌನ್ಸಿಲರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು