ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಷ್ಟ ಎಂಬ ಹೇಳಿಕೆ ನಿಜವಲ್ಲ, ತಪ್ಪುಗ್ರಹಿಕೆ: ಇಷ್ಟವಾದರೆ ಕಷ್ಟವಾಗದು

ಕನ್ನಡ ಕಷ್ಟ ಎಂಬ ಹೇಳಿಕೆ ನಿಜವಲ್ಲ, ತಪ್ಪುಗ್ರಹಿಕೆ
Last Updated 24 ಫೆಬ್ರುವರಿ 2022, 19:31 IST
ಅಕ್ಷರ ಗಾತ್ರ

‘ಕನ್ನಡ ಇಷ್ಟ, ಆದರೆ... ಕಷ್ಟ!’ ಎಂಬ ರಾಹುಲ್‌ ಪುಟ್ಟಿ ಮತ್ತು ಪೃಥ್ವೀರಾಜ ಕವತ್ತಾರು ಅವರ ಲೇಖನ (ಸಂಗತ, ಫೆ. 22) ಆಂಶಿಕ ಸತ್ಯವನ್ನುಳ್ಳದ್ದಾಗಿ ಹಾಗೂ ಇನ್ನೂ ಹಲವು ವಾಸ್ತವ ಸಂಗತಿಗಳ ಅರಿವಿನ ಕೊರತೆಯನ್ನು ಉಳ್ಳದ್ದಾಗಿರುವುದರಿಂದ ಪೂರ್ಣವಾಗಿ ಒಪ್ಪುವುದು ಕಷ್ಟ. ಹಾಗೆ ನೋಡಿದರೆ ಎಲ್ಲ ಭಾಷೆಗಳ ಕಲಿಕೆಯೂ ಕಷ್ಟವೆ. ಯಾವುದೂ ಸುಲಭವಲ್ಲ.

ಕರ್ನಾಟಕದ ಪ್ರೌಢಶಾಲೆಗಳಲ್ಲಿ ಕಲಿಸುವ ಪ್ರಥಮ ಭಾಷೆ ಸಂಸ್ಕೃತ ಸುಲಭ ಅಂತ ಎಲ್ಲರೂ ಹೇಳುತ್ತಾರೆ. ನಿಜ. ಆದರೆ ಅಲ್ಲಿ ಭಾಷಾ ಕಲಿಕೆಯೇ ಆಗಿರುವುದಿಲ್ಲ. ಹೆಚ್ಚು ಅಂಕ ಗಳಿಕೆ ಮಾತ್ರ ಆಗಿರುತ್ತದೆ. ಈ ಸಂಸ್ಕೃತ ಪಠ್ಯವಾಗಲಿ, ಪರೀಕ್ಷೆಯ ಕ್ರಮವಾಗಲಿ, ಮೌಲ್ಯಮಾಪನ ವಿಧಾನವಾಗಲಿ ತೀರ ಬಾಲಿಶವಾಗಿರುತ್ತವೆ. ಅದೇ ಪ್ರೌಢಶಾಲಾ ಹಂತದ ಕನ್ನಡ ಪ್ರಥಮ ಭಾಷೆಯ ಪಠ್ಯ, ಪರೀಕ್ಷೆ, ಮೌಲ್ಯಮಾಪನಗಳೊಂದಿಗೆ ಸಂಸ್ಕೃತವನ್ನು ಇಟ್ಟುಕೊಂಡು ತುಲನೆ ಮಾಡಿದಾಗಲೇ ಈ ವಾಸ್ತವ ಅರ್ಥವಾಗುವುದು.

ಮೂರು ವರ್ಷ ಸಂಸ್ಕೃತವನ್ನು ಅಧ್ಯಯನ ಮಾಡಿ, ಉದ್ದಕ್ಕೂ ಗರಿಷ್ಠ ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡ ವಿದ್ಯಾರ್ಥಿಯೂ ನಾಲ್ಕು ಸಂಸ್ಕೃತ ವಾಕ್ಯಗಳನ್ನು ಆಡಲಾರ, ಬೇರೆಯವರು ಆಡಿದ್ದನ್ನು ಅರ್ಥಮಾಡಿಕೊಳ್ಳಲಾರ, ಸ್ವತಂತ್ರವಾಗಿ ವಾಕ್ಯಗಳನ್ನು ರಚಿಸುವುದಂತೂ ಕನಸಿನ ಮಾತು.

ಬಹುಮಂದಿ ಕನ್ನಡವನ್ನು ಮಾತನಾಡಲು ಮತ್ತು ಆಡಿದ್ದನ್ನು ಅರಿಯಲು ಬಲ್ಲವರಾದ್ದರಿಂದ ಒಂದು ರೀತಿಯ ಉದಾಸೀನದಿಂದ ಅದನ್ನು ಕಲಿಯತೊಡಗುತ್ತಾರೆ. ಹಾಗಾಗಿ ಉತ್ತೀರ್ಣರೇನೊ ಆಗುತ್ತಾರೆ. ಆದರೆ ಅಂಕ ಗಳಿಕೆ ಬಹುಪಾಲು ಗರಿಷ್ಠವಾಗಿರುವುದಿಲ್ಲ
ಅಷ್ಟೆ. ಈ ಹಿನ್ನೆಲೆಯ ವಾತಾವರಣದಿಂದಾಗಿ ಕನ್ನಡ ಕಷ್ಟ ಎಂಬ ಮಾತು ಸಲೀಸಾಗಿ ವ್ಯಕ್ತವಾಗುತ್ತದೆ.

‘ಕನ್ನಡ ಕಷ್ಟ’ ಎಂದು ಕೆಲವು (ಬಹುಶಃ ನಗರವಾಸಿಗಳು) ಪೋಷಕರು ಮತ್ತು ಮಕ್ಕಳು ಹೇಳುವ ಮಾತಿನ ಹಿಂದೆ ಇನ್ನೂ ಒಂದು ಸೂಕ್ಷ್ಮ ಅಡಗಿರುವುದನ್ನು ಮನಗಾಣಬೇಕಿದೆ. ಅದೇನೆಂದರೆ, ತಮ್ಮ ಭವಿಷ್ಯದ ಬದುಕಿಗೆ ಇಂಗ್ಲಿಷ್ ಮಾಧ್ಯಮ ಮತ್ತು ಭಾಷೆ ಅನಿವಾರ್ಯ ಎಂಬ ಭ್ರಮೆ ಅಥವಾ ಅರೆಬರೆ ವಾಸ್ತವದ ಸಂಗತಿ. ದ್ವಿತೀಯ ಭಾಷೆಯಾಗಿ ಮತ್ತು ಸ್ವಂತ ಪ್ರಯತ್ನದ ಮೂಲಕ ಕಲಿಯಬಹುದಾದ ಇಂಗ್ಲಿಷ್‌ನಿಂದ ಖಂಡಿತ ಅನ್ನದ ಬದುಕನ್ನು ರೂಪಿಸಿಕೊಳ್ಳಬಹುದೆಂಬ ವಾಸ್ತವದ ಅರಿವಿಲ್ಲದಿರುವುದು, ಜೊತೆಗೆ ಇಂಗ್ಲಿಷ್‌ನಿಂದ ಸಮಾಜದಲ್ಲಿ ಗೌರವ ಲಭ್ಯವಾಗುತ್ತದೆಂಬ ಭ್ರಮೆ ಹಾಗೂ ಗರಿಷ್ಠ ಅಂಕಗಳಿಂದ ದೊಡ್ಡ ಮೊತ್ತದ ಸಂಬಳ ತರುವ ಉದ್ಯೋಗ, ತನ್ಮೂಲಕ ಸ್ವಂತ ಮನೆ, ಕಾರು ಇತ್ಯಾದಿ ಅಂತರಂಗದ ಲೌಕಿಕ ಬಯಕೆಗಳು.

ಶಿಕ್ಷಣವೆಂದರೆ ಇದಷ್ಟೇ ಅಲ್ಲ ಇದಕ್ಕಿಂತಲೂ ಮುಖ್ಯವಾಗಿ ಸ್ವಾತಂತ್ರ್ಯ, ಸಮಾನತೆ, ಸೋದರತೆ ಮುಂತಾದ ಮೌಲ್ಯಗಳಿಂದ ಕೂಡಿದ ಸರಳ, ಸುಂದರ ಬದುಕನ್ನು ರೂಪಿಸಿಕೊಳ್ಳುವ ಹಾಗೂ ತನ್ನ ಅಂತಸ್ಸತ್ವವನ್ನು ಬೆಳಕಿಗೆ ತರುವಂತಹ ಮಹತ್ತರವಾದುದು ಎಂಬ ಪ್ರಜ್ಞೆಯ ಲೋಪವೂ ‘ಕನ್ನಡ ಕಷ್ಟ’ ಎಂಬ ಸಾಮಾನ್ಯ ಅನಿಸಿಕೆಗೆ ಕಾರಣ.

ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಮಂದಿ ಅನುತ್ತೀರ್ಣರಾಗುವುದು ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ, ಕನ್ನಡದಲ್ಲಲ್ಲ. ಇದೆಲ್ಲದರ ಜೊತೆಗೆ ಇಂಗ್ಲಿಷ್ ಮತ್ತು ಸಂಸ್ಕೃತವು ಕನ್ನಡಕ್ಕಿಂತ ಶ್ರೇಷ್ಠ ಎಂಬ ಮನಃಸ್ಥಿತಿಯೂ ಕಾರಣ. ‘ಐ ಡೋಂಟ್ ನೋ ಕನ್ನಡ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವುದು ಮತ್ತು ‘ನನಗೆ ಇಂಗ್ಲಿಷ್ ಬರುವುದಿಲ್ಲ’ ಎಂದು ಹೇಳಿದರೆ ಅದು ಅವಮಾನ ಎಂದು ಭಾವಿಸುವುದು ಈ ಕಾರಣದಿಂದಲೆ.

ಲೇಖಕರು ಹೇಳುವ ಹಾಗೆ ಇಂದು ಕನ್ನಡವೇ ಅಲ್ಲ ಯಾವ ಭಾಷಾ ಬೋಧನೆಯೂ ವೈಜ್ಞಾನಿಕವಾಗಿ ಆಗುತ್ತಿಲ್ಲ. ವಾಸ್ತವದಲ್ಲಿ ಭಾಷಾ ಬೋಧನೆಯು ಭಾಷಾ ಬೋಧನೆಯೇ ಆಗಿಲ್ಲ. ಆಯಾ ಭಾಷೆಗಳ ಮೂಲಕ ಒಂದಷ್ಟು ಆಯಾ ಗದ್ಯ ಪದ್ಯಗಳ ಅರ್ಥ ವಿವರಣೆ ಮತ್ತು ಒಂದಷ್ಟು ವ್ಯಾಕರಣಾಂಶಗಳನ್ನು ತಿಳಿಸುವುದಷ್ಟೇ ಆಗುತ್ತಿದೆ. ಮೂಲಾಕ್ಷರಗಳು, ಗುಣಿತಾಕ್ಷರಗಳು, ಒತ್ತಕ್ಷರಗಳ ಸ್ಪಷ್ಟ ಕಲ್ಪನೆಯ ಕಡೆಗೆ ಗಮನಹರಿಸುತ್ತಿಲ್ಲ. ಬರವಣಿಗೆಯ ಕೌಶಲದ ಬಗೆಗಂತೂ ಕಡು ನಿರ್ಲಕ್ಷ್ಯ! ವಾಕ್ಯರಚನೆಗಳಲ್ಲಿನ ನಾನಾ ವಿಧಗಳು, ಆಡು ಭಾಷೆಗೂ ಬರಹದ ಭಾಷೆಗೂ ಇರುವ ವ್ಯತ್ಯಾಸಗಳು, ಶಬ್ದನಿಷ್ಪತ್ತಿ, ಶಬ್ದಸಂಪತ್ತು, ನಿಘಂಟುಗಳ ಬಳಕೆ, ಸರಳ ಭಾಷಾಭಿವ್ಯಕ್ತಿ, ಸ್ಪಷ್ಟ ನಿರೂಪಣಾ ಕೌಶಲ- ಮಾತನಾಡುವ ಮತ್ತು ಬರಹದ ಮೂಲಕ ಮಾಡಬಹುದಾದ ಸಂವಹನ ಸಾಧ್ಯತೆಗಳ ಕುರಿತು ನಡೆಯುತ್ತಿರುವ ಅಧ್ಯಾಪನ ನಗಣ್ಯ ಎಂದೇ ಹೇಳಬಹುದು. ಈ ಹಿನ್ನೆಲೆಯಲ್ಲಿ ಪ್ರಬಂಧ ರಚನೆ, ಗಾದೆಗಳ ಅರ್ಥವಿಸ್ತರಣೆ, ಪತ್ರಲೇಖನ, ಮುಖ್ಯಾಂಶ
ಗಳನ್ನು ವಿಸ್ತರಿಸಿ ಬರೆಯುವುದು ಇತ್ಯಾದಿ ಅಂಶಗಳ ಬಗೆಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ.

ಆಶುಭಾಷಣ, ಚರ್ಚಾಸ್ಪರ್ಧೆ, ಭಾಷಣ, ಸಂವಾದ, ವಿಚಾರಸಂಕಿರಣ, ಏಕಪಾತ್ರಾಬಿನಯ, ಕಿರು ನಾಟಕ, ನಾಟಕ ಇತ್ಯಾದಿ ಪ್ರಯೋಗಗಳೂ ವಿದ್ಯಾರ್ಥಿಗಳ ಸಂಭಾಷಣಾ ಕೌಶಲಗಳನ್ನು ತನ್ಮೂಲಕ ಭಾಷಾ ಸಾಮರ್ಥ್ಯವನ್ನು ಸಾಧಿಸಬಹುದು. ಎಲ್ಲರೂ ಭಾಷಾ ಪ್ರವೀಣರಾಗುವ ಅಗತ್ಯವಿಲ್ಲ. ಯಾರಲ್ಲಿ ಭಾಷಾ ಕೌಶಲ ಅಥವಾ ಪ್ರತಿಭೆ ಇರುತ್ತದೋ ಅಂತಹವರು ಭಾಷಾ ಪ್ರಾವೀಣ್ಯ ಪಡೆದುಕೊಳ್ಳಬಹುದು.

ಈ ಹಿನ್ನೆಲೆಯಲ್ಲಿ ಯೋಚಿಸಿದರೆ ಕನ್ನಡ ಕಷ್ಟ ಎಂಬ ಹೇಳಿಕೆ ನಿಜವಲ್ಲ, ತಪ್ಪುಗ್ರಹಿಕೆ. ಅದರಲ್ಲೂ ಇಷ್ಟವಾದದ್ದೆಂದೂ ಕಷ್ಟವಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT