ಶನಿವಾರ, ಅಕ್ಟೋಬರ್ 16, 2021
29 °C

ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ: ಕಲ್ಯಾಣ ರಾಜ್ಯದಿಂದ ಕಂಪನಿ ರಾಜ್ಯದೆಡೆಗೆ

ಡಾ. ಸಿದ್ದನಗೌಡ ಪಾಟೀಲ Updated:

ಅಕ್ಷರ ಗಾತ್ರ : | |

ಭೋಗ್ಯದಾರ ಕಂಪನಿಗಳನ್ನು ಆಕರ್ಷಿಸಲು ಅತ್ಯಂತ ಕಡಿಮೆ ದರ ಸೂಚಿಸಲಾಗಿದೆ. ಕಡಿಮೆ ದರದಲ್ಲಿ ಇವುಗಳನ್ನು ಪಡೆದು ನಿರ್ವಹಣೆ ಮಾಡುವ ಖಾಸಗಿ ಕಂಪನಿಗಳು ಅನಿಯಮಿತ ಲಾಭ ಮಾಡಿಕೊಳ್ಳಲು ವಿದ್ಯುತ್‌, ಗ್ಯಾಸ್‌, ದೂರಸಂಪರ್ಕ ಮುಂತಾದ ಸೌಲಭ್ಯಗಳಿಗೆ ಅನಿಯಂತ್ರಿತವಾಗಿ ದರ ವಸೂಲಿ ಮಾಡುತ್ತವೆ. ಅಂತಿಮವಾಗಿ ಬಲಿಯಾಗುವುದು ಪ್ರಜೆಗಳು. ಈಗಿನ ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಸಿದಂತೆ ದಿನಕ್ಕೊಂದು ದರ ನಿಗದಿಯಾಗುತ್ತದೆ

***

ಭಾರತ ಭೋಗ್ಯಕ್ಕಿದೆ. ಭೋಗಿದಾರ ಫಲಾನುಭವಿ ಗಳು ಬೃಹತ್‌ ಕಾರ್ಪೊರೇಟ್‌ ಕಂಪನಿಗಳು. ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್‌ ಅವರು 2021ರ ಆಗಸ್ಟ್‌ 23ರಂದು ಈ ಯೋಜನೆ ಘೋಷಣೆ ಮಾಡಿದ್ದಾರೆ. ಅದಕ್ಕೆ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ‘ಆಸ್ತಿ ನಗದೀಕರಣ’ (ನ್ಯಾಶನಲ್‌ ಮಾನಿಟೈಸೇಶನ್‌ ಪೈಪ್‌ಲೈನ್‌) ಎಂಬ ಆಕರ್ಷಕ ಹೆಸರನ್ನೂ ಕೊಟ್ಟಿದ್ದಾರೆ. 2019ರ ನೀತಿ ಆಯೋಗದ ವರದಿ ಅನುಸಾರ 2021–22ರ ಆಯವ್ಯಯದಲ್ಲಿ ಈ ಕುರಿತು ಪ್ರಸ್ತಾಪವಿದೆ. ದೇಶದ ಸಾರ್ವಜನಿಕ ವಲಯದ, ಕಳೆದ 70 ವರ್ಷಗಳಲ್ಲಿ ಜನತೆಯ ತೆರಿಗೆಯ ಹಣದಿಂದ ಕಟ್ಟಲಾದ 250ಕ್ಕೂ ಹೆಚ್ಚು ಉದ್ದಿಮೆಗಳನ್ನು ಕಾರ್ಪೊರೇಟ್‌ ಕಂಪನಿಗಳಿಗೆ ಭೋಗ್ಯಕ್ಕೆ (ನಿರ್ವಹಣೆಗೆ) ಕೊಟ್ಟು, ಮುಂದಿನ ನಾಲ್ಕು ವರ್ಷಗಳಲ್ಲಿ ₹6 ಲಕ್ಷ ಕೋಟಿಯನ್ನು ಅವರಿಂದ ಪಡೆದು, ಆ ಹಣವನ್ನು ದೇಶದ ಮೂಲಭೂತ ಸೌಕರ್ಯಗಳಿಗಾಗಿ ಬಳಸಲಾಗುವುದು ಎಂದು ಹೇಳಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ‘ದೂರದೃಷ್ಟಿಯ ಕೊಡುಗೆ’ ಎಂದೂ ಹೇಳಿದ್ದಾರೆ.

ಆಸ್ತಿ ನಗದೀಕರಣ ಯೋಜನೆಯನ್ನು ಪರಿಶೀಲಿಸುವ ಮೊದಲು ಸ್ವಲ್ಪ ಇತಿಹಾಸದ ಮೇಲೆ ಕಣ್ಣಾಡಿಸಬೇಕು. ಸ್ವಾತಂತ್ರ್ಯಪೂರ್ವದಲ್ಲಿ ನಮ್ಮ ದೇಶಕ್ಕೆ ಔಷಧಿ ಮತ್ತು ಔಷಧಿ ದ್ರವ್ಯಗಳನ್ನು ಜರ್ಮನ್‌ ದೇಶದಿಂದ ಹೆಚ್ಚಾಗಿ ಆಮದು ಮಾಡಿಕೊಳ್ಳಲಾಗುತ್ತಿತ್ತು. ಎರಡನೇ ಜಾಗತಿಕ ಯುದ್ಧ ಆರಂಭವಾದ ಮೇಲೆ ಅದು ನಿಂತು ಹೋಯಿತು. ಆಗ 1938ರಲ್ಲಿ ಕಾಂಗ್ರೆಸ್‌ ರಚಿಸಿದ ರಾಷ್ಟ್ರೀಯ ಯೋಜನಾ ಸಮಿತಿಯ ಅಧ್ಯಕ್ಷರಾಗಿದ್ದ ಜವಾಹರಲಾಲ್‌ ನೆಹರೂ ಅವರು ಅಂದಿನ ವೈಸ್‌ರಾಯ್‌ ಲಾರ್ಡ್ ಲಿನ್‌ಲಿತ್‌ಗೋ ಅವರಿಗೆ ಬ್ರಿಟಿಷ್‌ ಸರ್ಕಾರದಿಂದ ಭಾರತದಲ್ಲಿಯೇ ಔಷಧಿ ಉದ್ದಿಮೆಗಳನ್ನು ಆರಂಭಿಸಿದರೆ ಜನರಿಗೆ ಕಡಿಮೆ ದರದಲ್ಲಿ ಔಷಧಿ ಒದಗಿಸಬಹುದು ಎಂಬ ಸಲಹೆ ಕೊಟ್ಟರು. ಆಗ ವೈಸ್‌ರಾಯ್ ಲಿನ್‌ಲಿತ್‌ಗೋ ಅವರು ‘ಸರ್ಕಾರ ವ್ಯಾಪಾರಿ ಸಂಸ್ಥೆಯಲ್ಲ’ ಎಂಬ ಉತ್ತರ ಕೊಟ್ಟು ನೆಹರೂ ಅವರ ಸಲಹೆಯನ್ನು ತಿರಸ್ಕರಿಸಿದರು. ಇದಕ್ಕೆ ಕಾರಣ ಅವರು ಇಂಗ್ಲೆಂಡಿನ ಇಂಪೀರಿಯಲ್‌ ಕೆಮಿಕಲ್‌ ಇಂಡಸ್ಟ್ರೀಸ್‌ ಕಂಪನಿಯ ಜೊತೆ ಹೊಂದಿದ್ದ ನಂಟು. ಅದಕ್ಕೆ ಲಾಭ ಮಾಡಿಕೊಡುವ ಉದ್ದೇಶದಿಂದ ‘ಸರ್ಕಾರ ವ್ಯಾಪಾರಿ ಸಂಸ್ಥೆಯಲ್ಲ’ ಎಂದಿದ್ದರು. ಈಗ ಪ್ರಧಾನಿ ಮೋದಿಯವರು ‘ಉದ್ದಿಮೆ ನಡೆಸುವುದು ಸರ್ಕಾರದ ಕೆಲಸವಲ್ಲ’ ಎಂದು ಹೇಳಿದ್ದಾರೆ. ಇವರು ಹೊಸ ಉದ್ದಿಮೆಗಳನ್ನು ಸ್ಥಾಪಿಸುವುದಿರಲಿ, ಈಗಾಗಲೇ ಚಾಲನೆಯಲ್ಲಿರುವ, ಸುಸ್ಥಿತಿಯಲ್ಲಿ ಇರುವ, ದೇಶದ ಆರ್ಥಿಕತೆಗೆ ಅಪಾರ ಕೊಡುಗೆ ಕೊಡುತ್ತಿರುವ ಸರ್ಕಾರಿ ಸ್ವಾಮ್ಯದ ಆದಾಯ ಮತ್ತು ಆಸ್ತಿಯನ್ನು ಕಾರ್ಪೊರೇಟ್‌ ಕಂಪನಿಗಳಿಗೆ (ಪ್ರಧಾನವಾಗಿ ಅಂಬಾನಿ, ಅದಾನಿಗಳಿಗೆ) ನಿರ್ವಹಣೆ ಹೆಸರಿನಲ್ಲಿ ‘ಕಾಣಿಕೆ’ಯ ರೂಪದಲ್ಲಿ ಕೊಡುತ್ತಿದ್ದಾರೆ. 

ಈಗಾಗಲೇ ಸಾರ್ವಜನಿಕ ವಲಯದ ಕೈಗಾರಿಕೆ, ಬ್ಯಾಂಕ್‌ ಮತ್ತು ವಿಮಾ ವಲಯಗಳಲ್ಲಿ ಖಾಸಗೀಕರಣ ಪ್ರಕ್ರಿಯೆ ಆರಂಭವಾಗಿದೆ. ನಿರ್ಮಲಾ ಸೀತಾರಾಮನ್‌ ಅವರು ಈ ‘ಆಸ್ತಿ ನಗದೀಕರಣ’ ಯೋಜನೆಯನ್ನು ಖಾಸಗೀಕರಣವಲ್ಲ, ಆ ಆಸ್ತಿಗಳ ಒಡೆತನ ಸರ್ಕಾರಗಳ ಹೆಸರಿನಲ್ಲಿಯೇ ಇರುತ್ತದೆ. ನಿರ್ವಹಣೆ ಮಾತ್ರ ನಿಗದಿತ ಶುಲ್ಕ ಪಾವತಿಸಿದ ಕಂಪನಿಗಳದ್ದಾಗಿರುತ್ತದೆ ಎಂದು ಹೇಳಿದ್ದಾರೆ. ಈ ನಿರ್ವಹಣೆಯ ಅವಧಿ ಅಂದರೆ ಭೋಗ್ಯದ (ಲೀಸ್‌) ಅವಧಿ ವಿವಿಧ ಉದ್ದಿಮೆಗಳಿಗೆ ಭಿನ್ನವಾಗಿದೆ. ಅದು 25 ವರ್ಷಗಳಿಂದ 99 ವರ್ಷಗಳವರೆಗೂ ಇದೆ. ಸರ್ಕಾರಿ ಆಸ್ತಿಯನ್ನು ಅಷ್ಟು ವರ್ಷಗಳವರೆಗೆ ಭೋಗ್ಯಕ್ಕೆ ಕೊಡುವುದು ಎಷ್ಟು ನ್ಯಾಯಯುತ, ನೈತಿಕವಾಗಿ ಸರಿಯೇ ಎಂಬ ಪ್ರಶ್ನೆ ಮುಖ್ಯವಾದದ್ದು.

ನಾನು ಸ್ವಾತಂತ್ರ್ಯ ಸಂಗ್ರಾಮವನ್ನು ಮೂರು ಧಾರೆಗಳಲ್ಲಿ ಗುರುತಿಸುತ್ತೇನೆ. ಕಾಂಗ್ರೆಸ್‌ ನಾಯಕತ್ವವು ರಾಜಕೀಯ ಸ್ವಾತಂತ್ರ್ಯದ ಗುರಿ ಹೊಂದಿತ್ತು. ಭಗತ್‌ಸಿಂಗ್‌, ಸುಭಾಶ್‌ ಚಂದ್ರ ಬೋಸ್‌ ಅವರಂಥ ತೀವ್ರವಾದಿಗಳು, ಎಡಪಂಥೀಯರು ಕೇವಲ ರಾಜಕೀಯ ಮಾತ್ರವಲ್ಲ, ಅದರ ಜೊತೆ ಆರ್ಥಿಕ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯವೂ ಆದ್ಯತೆ ಪಡೆಯಬೇಕು ಎಂಬ ಆಶಯ ಹೊಂದಿದ್ದರು. ಸ್ವಾತಂತ್ರ್ಯ ಬಂದ ಮೇಲೆ ರಾಜಕೀಯ ಸ್ವಾತಂತ್ರ್ಯವೇ ಆದ್ಯತೆ ಪಡೆದರೂ ಅಂದಿನ ಪ್ರಧಾನಿ  ನೆಹರೂ ದೇಶದ ಅವಶ್ಯಕತೆ, ಮೂಲಭೂತ ಸೌಕರ್ಯ ನಿರ್ಮಾಣ, ಅಭಿವೃದ್ಧಿಗಾಗಿ ಸಾರ್ವಜನಿಕ ವಲಯದ ಕೈಗಾರಿಕೆಗಳನ್ನು ಸ್ಥಾಪಿಸಿದರು. ಆ ಕಾಲದಲ್ಲಿ ಖಾಸಗಿ ವಲಯದಲ್ಲಿ ಜೆಮ್‌ಷೆಡ್‌ಪುರದಲ್ಲಿ ಟಾಟಾ ಉಕ್ಕು ಕಬ್ಬಿಣ ಕಾರ್ಖಾನೆ ಮಾತ್ರವಿತ್ತು. ಅದು ಅಂದಿನ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಪಡೆದಿರಲಿಲ್ಲ. ಆ ಸಂದರ್ಭದಲ್ಲಿ ನೆಹರೂ ಅವರ ಸರ್ಕಾರ ಆರಂಭಿಸಿದ್ದ ಬೃಹತ್‌ ಉದ್ದಿಮೆಗಳು, ನಂತರ ಇಂದಿರಾ ಗಾಂಧಿಯವರ ಕಾಲದಲ್ಲಿ ಬ್ಯಾಂಕ್‌ ಮತ್ತಿತರ ಆರ್ಥಿಕ ವಲಯದ ಉದ್ದಿಮೆಗಳ ರಾಷ್ಟ್ರೀಕರಣ ದೇಶದ ಆರ್ಥಿಕ ಬೆಳವಣಿಗೆಗಳಿಗೆ ಬೆನ್ನೆಲುಬಾಗಿದ್ದವು ಎಂಬುದು ಕಳೆದ 70 ವರ್ಷಗಳಲ್ಲಿ ಸಾಬೀತಾಗಿದೆ. ಸಾರ್ವಜನಿಕ ಉದ್ದಿಮೆಯು ಆದಾಯ–ಸಂಪತ್ತಿನ ಸಾಮಾಜೀಕರಣದ ಸಂಕೇತ ಮಾತ್ರವಲ್ಲ ‘ಮೀಸಲಾತಿ’ಯ ಮೂಲಕ ಅದು ಸಾಮಾಜಿಕ ನ್ಯಾಯದ ತತ್ವವನ್ನೂ ಹೊಂದಿದೆ. ನಮ್ಮ ಸಂವಿಧಾನದ ರಾಜ್ಯ ನಿರ್ದೇಶನ ತತ್ವಗಳ ಆಶಯದಂತೆ ಕಲ್ಯಾಣ ರಾಜ್ಯದ ಗುರಿ ಹೊಂದಿರದಿದ್ದರೂ ಮಿಶ್ರ ಆರ್ಥಿಕ ವ್ಯವಸ್ಥೆಯಲ್ಲಿಯೇ ಆ ಅಂಶಗಳಿದ್ದವು.

ಅಂದಿನ ಪ್ರಧಾನಿ ನೆಹರೂ ಅವರ ಸಚಿವ ಸಂಪುಟದಲ್ಲಿ ತಾರಕೇಶ್ವರಿ ಸಿನ್ಹಾ ಎಂಬ ಮಹಿಳೆ ಡೆಪ್ಯುಟಿ ಹಣಕಾಸು ಮಂತ್ರಿಯಾಗಿದ್ದರು. ಅವರು ಸಾರ್ವಜನಿಕ ಉದ್ದಿಮೆಗಳನ್ನು ಸ್ವಾಗತಿಸಿದ ರೀತಿ ಗಮನಾರ್ಹ. ‘ಈಗ ಖಾಸಗಿ ಕಂಪನಿಗಳಿಗೆ ಬೃಹತ್‌ ಕೈಗಾರಿಕೆ ಸ್ಥಾಪಿಸುವಷ್ಟು ಆರ್ಥಿಕ ಶಕ್ತಿ ಇಲ್ಲ. ಈಗ ಸರ್ಕಾರ ಸ್ಥಾಪಿಸಿದ ಕೈಗಾರಿಕೆಗಳನ್ನು ಮುಂದೆ ಖಾಸಗಿಯವರೇ ಕೈಗೆತ್ತಿಕೊಳ್ಳುತ್ತಾರೆ’ ಎಂದು ಹೇಳಿ ವ್ಯಾಪಕ ಟೀಕೆಗೊಳಗಾಗಿದ್ದರು. ತಾರಕೇಶ್ವರಿ ಸಿನ್ಹಾ ಎಂಬ ಬಲಪಂಥೀಯ ಚಿಂತನೆಯ ಸಚಿವೆಯ ಮಾತುಗಳನ್ನು ಮೋದಿಯವರ ಸರ್ಕಾರ ಮತ್ತು ಅವರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್‌ ಜಾರಿಗೆ ತರುತ್ತಿದ್ದಾರೆ.

ಪ್ರಸ್ತುತ ಕೇಂದ್ರ ಸರ್ಕಾರ ನಗದೀಕರಣ ಯೋಜನೆಯಲ್ಲಿ ಖಾಸಗಿಯವರಿಗೆ ವಹಿಸುತ್ತಿರುವ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಪಟ್ಟಿಯನ್ನು ನೋಡಿದರೆ ಆತಂಕವಾಗುತ್ತದೆ. ಖಾಸಗಿ ಕಂಪನಿಗಳ ಭೋಗ್ಯಕ್ಕೆ ಸದ್ಯಕ್ಕೆ ಬಲಿಯಾಗುವ ಉದ್ಯಮಗಳು: 26,700 ಕಿಮೀ ಹೆದ್ದಾರಿ, 400 ರೈಲು ನಿಲ್ದಾಣಗಳು, 150 ರೈಲುಗಳು, ರೈಲು ಟ್ರಕ್‌ಗಳು, 42,300 ಕಿ.ಮೀ ವಿದ್ಯುತ್‌ಕಂಬ– ತಂತಿಗಳು, 5,000 ಮೆಗಾವ್ಯಾಟ್‌ ಜಲ, ಸೌರ ಮತ್ತು ವಾಯುವಿದ್ಯುತ್‌ ಉತ್ಪಾದನಾ ಘಟಕಗಳು, 4,000 ಕಿ.ಮೀ ಅನಿಲ ಪೈಪ್‌ಲೈನ್‌ಗಳು, ದೂರಸಂಪರ್ಕ ಸಂಸ್ಥೆಯ 16,700 ಕಿ.ಮೀ ಆಪ್ಟಿಕಲ್‌ ಫೈಬರ್‌ ಕೇಬಲ್‌, 17,000 ಗೋಪುರಗಳು, 21 ವಿಮಾನ ನಿಲ್ದಾಣ, 31 ಬಂದರು, 160 ಕಲ್ಲಿದ್ದಲು ಗಣಿಗಾರಿಕೆ ಯೋಜನೆಗಳು. ಇವಲ್ಲದೆ ಕೈಗಾರಿಕೆಗಳಿಗೆ ಸೇರಿದ ಕಟ್ಟಡ, ಜಮೀನು, ಮೈದಾನಗಳು ಈ ಒತ್ತೆ ಪ್ರಕ್ರಿಯೆಯಲ್ಲಿ ಸೇರಿವೆ. ಇವುಗಳನ್ನು ಲೀಸ್‌ಗೆ ಹಾಕಿ ₹6 ಲಕ್ಷ ಕೋಟಿ ಸಂಗ್ರಹಿಸುವ ಯೋಜನೆ ಹೊಂದಿದ್ದಾರೆ. ಭೋಗ್ಯದಾರ ಕಂಪನಿಗಳನ್ನು ಆಕರ್ಷಿಸಲು ಅತ್ಯಂತ ಕಡಿಮೆ ದರ ಸೂಚಿಸಲಾಗಿದೆ. ಕಡಿಮೆ ದರದಲ್ಲಿ ಇವುಗಳನ್ನು ಪಡೆದು ನಿರ್ವಹಣೆ ಮಾಡುವ ಖಾಸಗಿ ಕಂಪನಿಗಳು ಅನಿಯಮಿತ ಲಾಭ ಮಾಡಿಕೊಳ್ಳಲು ವಿದ್ಯುತ್‌, ಗ್ಯಾಸ್‌, ದೂರಸಂಪರ್ಕ ಮುಂತಾದ ಸೌಲಭ್ಯಗಳಿಗೆ ಅನಿಯಂತ್ರಿತವಾಗಿ ದರ ವಸೂಲಿ ಮಾಡುತ್ತವೆ. ಅಂತಿಮವಾಗಿ ಬಲಿಯಾಗುವುದು ಪ್ರಜೆಗಳು. ಈಗಿನ ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಸಿದಂತೆ ದಿನಕ್ಕೊಂದು ದರ ನಿಗದಿಯಾಗುತ್ತದೆ.

ಈ ಸರ್ಕಾರ ಪ್ರಜೆಗಳನ್ನು ಗ್ರಾಹಕರನ್ನಾಗಿ ಪರಿವರ್ತಿಸಿ, ಆ ಗ್ರಾಹಕರನ್ನು ಖಾಸಗಿ ಕಂಪನಿಗಳ ಕಪಿಮುಷ್ಠಿಗೆ ಒಪ್ಪಿಸುತ್ತಿದೆ. ಆಸ್ತಿ ನಗದೀಕರಣ ಯೋಜನೆಯನ್ನು ಜಾರಿಗೆ ತಂದ ಸಿಂಗಪುರ, ಆಸ್ಟ್ರೇಲಿಯ ಸರ್ಕಾರಗಳು ಜನರಿಂದ ತೀವ್ರ ವಿರೋಧ ಎದುರಿಸುತ್ತಿವೆ. ಸರ್ಕಾರ ‘ಸೇವಾ ವಲಯ’ವನ್ನು ನಿರ್ನಾಮ ಮಾಡಿ ಎಲ್ಲ ಕ್ಷೇತ್ರಗಳಲ್ಲಿ ‘ವ್ಯಾಪಾರ ವಲಯ’ವನ್ನು ನಿರ್ಮಿಸುತ್ತಿದೆ. ಕಲ್ಯಾಣ ರಾಜ್ಯ ಮಾಯವಾಗಿ ಕಂಪನಿ ರಾಜ್ಯ ಬರುತ್ತದೆ. 1757ರಲ್ಲಿ ಈಸ್ಟ್‌ ಇಂಡಿಯಾ ಕಂಪನಿ ವಿರುದ್ಧ ಆರಂಭವಾದ ಸಿರಾಜುದ್ದೌಲನ ಪ್ಲಾಸಿ ಕದನದಿಂದ ಆರಂಭಗೊಂಡು ‘ಕ್ವಿಟ್‌ ಇಂಡಿಯಾ’ ವರೆಗಿನ ಹೋರಾಟ ‘ಕಂಪನಿ ರಾಜ್ಯ’ದ ವಿರುದ್ಧವೇ. ಈಗ ಜನತೆ ಮತ್ತೆ ಎಚ್ಚೆತ್ತುಕೊಳ್ಳಬೇಕು. 1998ರಲ್ಲಿ ಚುನಾವಣಾ ಸುಧಾರಣೆಗೆ ಸಂಬಂಧಿಸಿದ ಇಂದ್ರಜಿತ್‌ ಗುಪ್ತಾ ಸಮಿತಿ ವರದಿಯಲ್ಲಿ ಗುಪ್ತಾ ಅವರು ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್‌ ಕಂಪನಿಗಳು ಕೊಡುವ ದೇಣಿಗೆಯನ್ನು ನಿಷೇಧಿಸಬೇಕು ಎಂದು ಸೂಚಿಸಿದ್ದರು. ಎಡಪಕ್ಷಗಳ ಹೊರತಾಗಿ ಸಮಿತಿಯಲ್ಲಿನ ಯಾವ ಪಕ್ಷದ ಸದಸ್ಯರೂ ಆ ಸೂಚನೆಯನ್ನು ಬೆಂಬಲಿಸಲಿಲ್ಲ. ರಾಜಕೀಯ ಪಕ್ಷಗಳಿಗೆ ದೇಣಿಗೆ ಕೊಡುವುದರ ಮೂಲಕ ಕಾರ್ಪೊರೇಟ್‌ ಕಂಪನಿಗಳು ಆಳುವ ವರ್ಗವನ್ನು ನಿಯಂತ್ರಿಸುತ್ತವೆ ಎಂದು ಹೇಳಿದ ಗುಪ್ತಾ ಅವರ ಮಾತು ಇಂದು ನಿತ್ಯಸತ್ಯವಾಗುತ್ತಿದೆ. ಅಂತಿಮವಾಗಿ ಖಾಸಗೀಕರಣ ನೀತಿಗಳಿಗೆ, ಅದರ ಮುಂದುವರಿದ ಭಾಗವಾದ ಸರ್ಕಾರಿ ಸ್ವಾಮ್ಯದ ಸ್ವತ್ತಿನ ನಗದೀಕರಣಗಳಂಥ ಯೋಜನೆಗಳಿಗೆ ಬಲಿಯಾಗುವ ಪ್ರಜೆಗಳು ಜಾಗೃತವಾಗಬೇಕು. ಮತಹಾಕಿ ಅಧಿಕಾರಕ್ಕೆ ತಂದ ಪ್ರಜೆಗಳನ್ನು ಗ್ರಾಹಕರಂತೆ ಕಾಣುವ ಸರ್ಕಾರಗಳಿಗೆ ಪಾಠ ಕಲಿಸಬೇಕು.

ಲೇಖಕ: ಸಿಪಿಐ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು