ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ: ಪ್ರಾಮಾಣಿಕರು ನೇಮಕವಾಗಲಿ

ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಕಾಯಕಲ್ಪದ ಅಗತ್ಯ ಇದೆಯೇ?
Last Updated 14 ಮೇ 2022, 2:35 IST
ಅಕ್ಷರ ಗಾತ್ರ

ಉತ್ತಮ ಆಳ್ವಿಕೆಯನ್ನು ಖಾತರಿಪಡಿಸಲು ಆಡಳಿತ ವ್ಯವಸ್ಥೆಯಲ್ಲಿ ಉತ್ತಮ ಗುಣಮಟ್ಟದ ಸಿಬ್ಬಂದಿ ಇರುವುದು ಬಹಳ ಮುಖ್ಯ. ಸರಿಯಾದ ಕೆಲಸಕ್ಕೆ ಸರಿಯಾದ ವ್ಯಕ್ತಿಗಳನ್ನು ಆಯ್ದು ನೇಮಕ ಮಾಡುವುದರ ಮೇಲೆಯೇ ಇದು ಮುಖ್ಯವಾಗಿ ಅವಲಂಬಿತ. ಸರ್ಕಾರದ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮಗಳು ಮತ್ತು ಹಗರಣಗಳಿಗೆ ಕರ್ನಾಟಕವು ಇತ್ತೀಚಿನ ವರ್ಷಗಳಲ್ಲಿ ಸಾಕ್ಷಿಯಾಗಿದೆ. 1998 ಮತ್ತು 2004ರ ಕೆ.ಎ.ಎಸ್‌ನ ಗಜೆಟೆಡ್‌ ಪ್ರೊಬೇಷನರ್‌ ಮತ್ತು ಇತರ ಸೇವೆಗಳಿಗೆ ನೇಮಕವೇ ಇರಲಿ ಈಗ ಭಾರಿ ಸದ್ದು ಮಾಡುತ್ತಿರುವ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಹುದ್ದೆಗಳ ನೇಮಕವೇ ಇರಲಿ ಗಂಭೀರವಾದ ವಿವಾದಗಳು ಸೃಷ್ಟಿಯಾಗಿವೆ.

ಶಿಕ್ಷಣ ಕ್ಷೇತ್ರದಲ್ಲಿ, ಸಹಾಯಕ ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸೋರಿಕೆ ಮಾಡಲು ಮತ್ತು ನಕಲಿ ಉತ್ತರ ಪತ್ರಿಕೆಗಳನ್ನು ಸೃಷ್ಟಿಸಲು ವಿನೂತನ ವಿಧಾನಗಳನ್ನು ಕಂಡುಕೊಳ್ಳಲಾಗಿದೆ. ಇಂತಹ ಘಟನೆಗಳುಪದೇ ಪದೇ ನಡೆಯಲು ಕಾರಣಗಳೇನು? ಮೊದಲನೆಯದಾಗಿ, ನೇಮಕಾತಿಯ ಹೊಣೆ ಹೊತ್ತಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳು ಪ್ರಾಮಾಣಿಕವಾಗಿ ಇರಬೇಕು. ದುರದೃಷ್ಟವಶಾತ್‌, ಕರ್ನಾಟಕದ ಮುಖ್ಯ ನೇಮಕಾತಿ ಸಂಸ್ಥೆಯಾದ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್‌ಸಿ) ಒಳ್ಳೆಯ ಹೆಸರು ಇಲ್ಲ.

ಎ.ರವೀಂದ್ರ
ಎ.ರವೀಂದ್ರ

ಬದ್ಧತೆಯು ಸಂಶಯಾಸ್ಪದವಾಗಿರುವ ಸದಸ್ಯರನ್ನು ಆಯೋಗಕ್ಕೆ ನೇಮಕ ಮಾಡಿರುವುದು ಇದಕ್ಕೆ ಒಂದು ಕಾರಣ. ನೇಮಕಗೊಂಡ ಸದಸ್ಯರಲ್ಲಿ ಹಲವರಿಗೆ ಈ ಕೆಲಸಕ್ಕೆ ಬೇಕಾದ ಸಾಮರ್ಥ್ಯವಾಗಲಿ ಅರ್ಹತೆಯಾಗಲಿ ಇಲ್ಲ. ಪ್ರತಿಭೆಯ ಬದಲು ಜಾತಿ ಮತ್ತು ರಾಜಕೀಯ ಪ್ರಭಾವದ ಆಧಾರದಲ್ಲಿಯೇ ಸದಸ್ಯರ ನೇಮಕ ಆಗುತ್ತಿದೆ. ಮುಖ್ಯಮಂತ್ರಿಯವರ ಆಪ್ತ ಕಾರ್ಯದರ್ಶಿಯಂತಹ ಹುದ್ದೆಗಳಲ್ಲಿದ್ದ ರಾಜಕೀಯಪ್ರೇರಿತವಾಗಿ ಕೆಲಸ ಮಾಡಿದ್ದ ಅಧಿಕಾರಿಗಳು ಕೂಡ ಸದಸ್ಯರಾಗಿ ನೇಮಕವಾದದ್ದು ಇದೆ.

ಎರಡನೆಯದಾಗಿ, ನೇಮಕಾತಿ ಪ್ರಕ್ರಿಯೆಯು ಭ್ರಷ್ಟಾಚಾರದ ಕಳಂಕಕ್ಕೆ ಒಳಗಾಗಿದೆ. ಸಹಾಯಕ ಜಿಲ್ಲಾಧಿಕಾರಿ, ಡಿವೈಎಸ್‌ಪಿ, ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತ ಮುಂತಾದ ಮಹತ್ವದ್ದು ಎಂದು ಪರಿಗಣಿಸಲಾದ ಹುದ್ದೆಗಳಿಗೆ ನೇಮಕ ಖಾತರಿಪಡಿಸಿಕೊಳ್ಳಲು ಭಾರಿ ಮೊತ್ತದ ಹಣವನ್ನು ಕೆಪಿಎಸ್‌ಸಿಯ ಕೆಲವು ಸದಸ್ಯರಿಗೆ ನೀಡಲಾಗಿತ್ತು ಎಂಬುದು ಮೂರು ವರ್ಷಗಳ ಹಿಂದೆ ಗಜೆಟೆಡ್‌ ಪ್ರೊಬೇಷನರ್‌ ಹುದ್ದೆಗಳಿಗೆ ನಡೆದ ಪರೀಕ್ಷೆಗೆ ಸಂಬಂಧಿಸಿದ ಸಿಐಡಿ ತನಿಖೆಯಲ್ಲಿ ಬಯಲಾಗಿದೆ. ಈ ತನಿಖಾ ವರದಿಯ ಆಧಾರದಲ್ಲಿ ಪರೀಕ್ಷೆಯನ್ನೇ ರದ್ದುಪಡಿಸಲಾಯಿತು. ನಿರ್ದಿಷ್ಟ ಹುದ್ದೆಗಳನ್ನು ಕೊಡಿಸುವುದಕ್ಕಾಗಿ ಕೆಪಿಎಸ್‌ಸಿ ಸದಸ್ಯರ ಜತೆ ಸಂ‍ಪರ್ಕ ಇರುವ ‘ಏಜೆಂಟರು’ ಇದ್ದಾರೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಯಿತು.

ಸರ್ಕಾರಿ ಅಧಿಕಾರಿಗಳ ವರ್ಗಾವಣೆಯಲ್ಲಿ ಇರುವಂತೆಯೇ ನೇಮಕಾತಿಗಳಲ್ಲಿಯೂ ರಾಜಕೀಯ ಹಸ್ತಕ್ಷೇಪ ಇರುವುದು ಈಗಿನ ವಿಷಾದನೀಯ ಪರಿಸ್ಥಿತಿಗೆ ಕಾರಣವಾಗಿರುವ ಮೂರನೇ ಅಂಶ. ಕಳೆದ ಕೆಲವು ದಶಕಗಳಲ್ಲಿ ರಾಜ್ಯದಲ್ಲಿ ಆಡಳಿತ ವ್ಯವಸ್ಥೆಯು ಕೆಟ್ಟು ಹೋಗಲು ಇದುವೇ ಮುಖ್ಯ ಕಾರಣ. ಒಂದೆಡೆ, ಇದು ಪ್ರಾಮಾಣಿಕ ಅಧಿಕಾರಿಗಳ ಸ್ಥೈರ್ಯಗೆಡಿಸುತ್ತದೆ. ಇನ್ನೊಂದೆಡೆ, ಅಪ್ರಾಮಾಣಿಕ ಮತ್ತು ಭ್ರಷ್ಟ ಅಧಿಕಾರಿಗಳಿಗೆ ಉತ್ತೇಜನ ನೀಡುತ್ತದೆ. ನೇಮಕಾತಿ ಮತ್ತು ವರ್ಗಾವಣೆಗಳಲ್ಲಿ ಅಧಿಕಾರಸ್ಥರ ನೆರವು ಪಡೆದುಕೊಳ್ಳುವ ಅಧಿಕಾರಿಗಳು, ನೆರವು ಕೊಟ್ಟವರಿಗೆ ವಿಧೇಯವಾಗಿ ಇರಬೇಕಾಗುತ್ತದೆ. ಇದು ರಾಜ್ಯದ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಇದಕ್ಕೆ ಪರಿಹಾರ ಏನು? ಹಲವು ಆಯೋಗಗಳು ಮತ್ತು ಸಮಿತಿಗಳು ಕಾಲ ಕಾಲಕ್ಕೆ ಈ ವಿಚಾರದ ಬಗ್ಗೆ ಪರಿಶೀಲನೆ ನಡೆಸಿ ಶಿಫಾರಸುಗಳನ್ನು ಮಾಡಿವೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್‌ ಹನುಮಂತಯ್ಯ ಮತ್ತು ವೀರಪ್ಪ ಮೊಯಿಲಿ ನೇತೃತ್ವದಲ್ಲಿ ಕೇಂದ್ರ ಆಡಳಿತ ಸುಧಾರಣಾ ಆಯೋಗಗಳು ಇದರಲ್ಲಿ ಸೇರಿವೆ. ಕರ್ನಾಟಕ ಸರ್ಕಾರವು ಮಾಜಿ ಕಾನೂನು ಸಚಿವ ಹಾರ್ನಹಳ್ಳಿ ರಾಮಸ್ವಾಮಿ ನೇತೃತ್ವದಲ್ಲಿ ಆಡಳಿತ ಸುಧಾರಣಾ ಆಯೋಗವನ್ನು‍ ರಚಿಸಿತ್ತು.

ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಾವುದೇ ಹುಳುಕುಗಳು ಇಲ್ಲದ ವ್ಯವಸ್ಥೆ ಬಹಳ ಮುಖ್ಯ ಎಂದು ಎಲ್ಲ ಆಯೋಗಗಳು ಹೇಳಿವೆ. ಕೇಂದ್ರ ಲೋಕಸೇವಾ ಆಯೋಗವು ಪ್ರತಿ ವರ್ಷವೂ ಯಾವುದೇ ದೂರು ಇಲ್ಲದ ರೀತಿಯಲ್ಲಿ ಐಎಎಸ್‌, ಐಪಿಎಸ್‌ ಮತ್ತು ಇತರ ಕೇಂದ್ರೀಯ ಸೇವೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ನ್ಯಾಯಯುತ ಮತ್ತು ನಿಷ್ಪಕ್ಷಪಾತವಾಗಿ ಮಾಡುತ್ತದೆ ಎಂಬುದನ್ನು ಇಲ್ಲಿ ಹೇಳಲೇಬೇಕು.

ಹೆಚ್ಚಿನ ರಾಜ್ಯಗಳ ಆಯೋಗಗಳು ಇಂತಹ ಖ್ಯಾತಿಯನ್ನು ಹೊಂದಿಲ್ಲ. ನೇಮಕಾತಿ ಸಂಸ್ಥೆಗಳು ಎಷ್ಟು ಕೆಳಮಟ್ಟಕ್ಕೆ ಕುಸಿದಿವೆ ಎಂಬುದಕ್ಕೆ ತಮಿಳುನಾಡಿನ ಒಂದು ಉದಾಹರಣೆ ಇದೆ. ತಮಿಳುನಾಡು ಲೋಕಸೇವಾ ಆಯೋಗದ ಸದಸ್ಯರಾಗಿ 11 ಮಂದಿಯ ನೇಮಕವನ್ನು ಯಾವುದೇ ಪ್ರಕ್ರಿಯೆ ಪಾಲಿಸಿಲ್ಲ ಎಂಬ ಕಾರಣಕ್ಕೆ ಮದ್ರಾಸ್‌ ಹೈಕೋರ್ಟ್‌ 2017ರಲ್ಲಿ ರದ್ದುಪಡಿಸಿತ್ತು.ರಾಜ್ಯ ಲೋಕಸೇವಾ ಆಯೋಗಗಳು ಮಾತ್ರವಲ್ಲ, ನೇಮಕಾತಿಗಾಗಿ ರಾಜ್ಯಗಳು ರಚಿಸಿದ ಇತರ ಸಂಸ್ಥೆಗಳು ಮತ್ತು ಸಮಿತಿಗಳು ಕೂಡ ಅಕ್ರಮ ಎಸಗಿವೆ ಎಂಬುದಕ್ಕೆ ಕರ್ನಾಟಕದ ಪಿಎಸ್‌ಐ ‍ನೇಮಕ ಪ್ರಕರಣ ಮತ್ತು ಮಧ್ಯಪ್ರದೇಶದ ವ್ಯಾಪಂ ಹಗರಣಗಳು ಸಾಕ್ಷಿಯಾಗಿವೆ.

ಈಗಿನ ಸನ್ನಿವೇಶದಲ್ಲಿ, ಕರ್ನಾಟಕದ ನೇಮಕಾತಿ ಪ್ರಕ್ರಿಯೆಯನ್ನು ದಕ್ಷಗೊಳಿಸುವುದು ಆಡಳಿತ ಸುಧಾರಣೆಗೆ ಅಗತ್ಯವಾಗಿ ಬೇಕಿರುವ ಕ್ರಮವಾಗಿದೆ. ಲೋಕಸೇವಾ ಆಯೋಗವನ್ನು ಶುದ್ಧೀಕರಿಸುವ ದಿಸೆಯಲ್ಲಿ ರಾಜ್ಯ ಸರ್ಕಾರವು ದೃಢವಾದ ಇಚ್ಛಾಶಕ್ತಿಯನ್ನು ತೋರಿದರೆ ಮಾತ್ರ ಇದು ಸಾಧ್ಯ. ಆಯೋಗದ ಅಧ್ಯಕ್ಷ ಮತ್ತು ಸದಸ್ಯ ಸ್ಥಾನಗಳಿಗೆ ಹಾಗೂ ಪರೀಕ್ಷೆ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಕಾರ್ಯದರ್ಶಿ ಮತ್ತು ಸಿಬ್ಬಂದಿ ಹುದ್ದೆಗಳಿಗೆ ಸೂಕ್ತವಾದ ವ್ಯಕ್ತಿಗಳನ್ನು ನೇಮಿಸಬೇಕು.

ಎರಡನೆಯದಾಗಿ, ಲೋಕಸೇವಾ ಆಯೋಗದ ವ್ಯಾಪ್ತಿಯಲ್ಲಿ ಇಲ್ಲದ ಹುದ್ದೆಗಳಿಗೆ ನೇಮಕಾತಿ ಮಾಡುವುದಕ್ಕಾಗಿ ಇರುವ ಇಲಾಖಾ ಸಮಿತಿಗಳನ್ನು ಬರ್ಖಾಸ್ತು ಮಾಡಿ ವೃತ್ತಿಪರರನ್ನು ಒಳಗೊಂಡ ಸ್ವತಂತ್ರ ಸಂಸ್ಥೆಯನ್ನು ಸ್ಥಾಪಿಸಬೇಕು. ದೊಡ್ಡ ಖಾಸಗಿ ಕಂಪನಿಗಳ ರೀತಿಯಲ್ಲಿ ವೃತ್ತಿಪರ ನೇಮಕಾತಿ ಸಂಸ್ಥೆಗಳಿಗೆ ನೇಮಕಾತಿಯ ಹೊಣೆಯನ್ನು ವಹಿಸಬಹುದು. ನೇಮಕಾತಿ ಪ್ರಕ್ರಿಯೆಯನ್ನು ಖಾಸಗೀಕರಣ ಮಾಡಬೇಕು ಎಂಬುದು ಇಲ್ಲಿನ ಸಲಹೆ ಅಲ್ಲ. ಬದಲಿಗೆ, ‘ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ’ ಎಂಬಸರ್ಕಾರದ್ದೇ ಘೋಷಣೆಗೆ ಈ ಮೂಲಕ ಅರ್ಥ ತುಂಬಬಹುದು.

ಕೊನೆಯದಾಗಿ, 1854ರಲ್ಲಿ ಭಾರತದಲ್ಲಿ ನಾಗರಿಕ ಸೇವೆಯ ಆರಂಭದ ಸಂದರ್ಭದಲ್ಲಿ ಮೆಕಾಲೆ ಸಮಿತಿಯ ವರದಿಯಲ್ಲಿ ಹೇಳಿದ್ದನ್ನು ಇಲ್ಲಿ ಉಲ್ಲೇಖಿಸಬಹುದು: ‘ಇನ್ನು ಮುಂದೆ ಕಂಪನಿಯ ನಾಗರಿಕ ಸೇವೆಯ ನೇಮಕಾತಿಯು ಪಕ್ಷಪಾತದ್ದಾಗಿ ಇರುವುದಿಲ್ಲ, ಬದಲಿಗೆ ಹಕ್ಕಿನ ರೂಪದಲ್ಲಿ ಇರುತ್ತದೆ. ನೇಮಕಾತಿಯು ನೇಮಕಗೊಳ್ಳುವ ವ್ಯಕ್ತಿಯ ಸ್ವಂತ ಸಾಮರ್ಥ್ಯ ಮತ್ತು ಉದ್ಯೋಗಶೀಲತೆಯನ್ನು ಮಾತ್ರ ಅವಲಂಬಿಸಿರುತ್ತದೆ’.

ವೈಯಕ್ತಿಕ ಹಕ್ಕುಗಳ ಬಗ್ಗೆ ನಾವುಇತ್ತೀಚಿನ ದಿನಗಳಲ್ಲಿ ಅಬ್ಬರಿಸಿ ಮಾತನಾಡುತ್ತಿದ್ದೇವೆ. ಶಿಕ್ಷಣದ ಹಕ್ಕು, ಮನೆ ಹೊಂದುವ ಹಕ್ಕು, ಮಾಹಿತಿ ಹಕ್ಕು ಮತ್ತು ಸ್ವಾತಂತ್ರ್ಯ ಹಾಗೂ ಸಮಾನತೆಯಂತಹ ಮೂಲಭೂತ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದೇವೆ. ಹಾಗಿರುವಾಗ, ಪ್ರತಿಭೆ ಮತ್ತು ಮೀಸಲಾತಿಯಂತಹ ವಿಚಾರಗಳ ಆಧಾರದಲ್ಲಿ ವ್ಯಕ್ತಿಯೊಬ್ಬರು ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗ ಪಡೆಯುವ ಹಕ್ಕನ್ನು ಏಕೆ ನಿರಾಕರಿಸಬೇಕು?

ರಾಜಕೀಯ ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಇದಕ್ಕೆ ಉತ್ತರ ಇದೆ. ಕರ್ನಾಟಕದ ಮುಖ್ಯಮಂತ್ರಿ ಇತ್ತ ಗಮನ ಹರಿಸಬೇಕು.

ಲೇಖಕ: ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT