ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ: ಪಠ್ಯಪುಸ್ತಕ– ಏಕಿಷ್ಟು ರಾದ್ಧಾಂತ?

ಹಿಂದಿನ ಸಮಿತಿ ಒಂದು ಪಂಥಕ್ಕೆ ಮಣೆಹಾಕಿತ್ತು ಎನ್ನುವ ಈ ಸಮಿತಿ ಮಾಡಿದ್ದೇನು?
Last Updated 2 ಜೂನ್ 2022, 19:31 IST
ಅಕ್ಷರ ಗಾತ್ರ

ಪಠ್ಯಪುಸ್ತಕ ಪರಿಷ್ಕರಣೆ ವಿಷಯದಲ್ಲಿ ಏಕೆ ಇಷ್ಟೊಂದು ರಾದ್ಧಾಂತ? ಏನಾದರೂ ಆಗಬಾರದ್ದು ಆಗಿಹೋಯಿತೇ? ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಪಠ್ಯಪುಸ್ತಕ ಪರಿಷ್ಕರಿಸಿದಾಗ ಮಹಾತ್ಮ ಗಾಂಧಿ, ವಿವೇಕಾನಂದ, ಕುವೆಂಪು ಅವರ ಚಿಂತನಾ ಬರಹಗಳನ್ನು ಕೈ ಬಿಟ್ಟಿತ್ತು. ಆಗ ಯಾರೂ ಗೊಂದಲಕ್ಕೆ ಒಳಗಾಗಲಿಲ್ಲ. ಇಂದು ಆಕಾಶವೇ ಕಳಚಿಬಿದ್ದಂತೆ ಚಡಪಡಿಸುತ್ತಿರುವುದು ಈ ಕಾರಣಗಳಿಗೆ: ಹೆಡಗೇವಾರ್, ಚಕ್ರವರ್ತಿ ಸೂಲಿಬೆಲೆ ಅವರ ಚಿಂತನಾ ಬರಹಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಿದ್ದಕ್ಕೆ. ಹೌದು, ಸೇರಿಸಿದರೆ ತಪ್ಪೇನು?

ಪಠ್ಯಪುಸ್ತಕಗಳಲ್ಲಿ ಎಡಪಂಥೀಯ ಚಿಂತನೆ ಇರಬಹುದಾದರೆ ಬಲಪಂಥೀಯ ಚಿಂತನೆ ಯಾಕೆ ಬೇಡ? ಚರಿತ್ರೆಯಲ್ಲಿ ನಮ್ಮ ಸೋಲಿನ ಕತೆಗಳನ್ನೇ ಕೇಳಿದ್ದೇವೆ. ನಮ್ಮ ಗೆಲುವಿನ ಕತೆಗಳು ಎಲ್ಲಿ? ಅಕ್ಬರ್ ಗ್ರೇಟ್, ಅಲೆಕ್ಸಾಂಡರ್ ಗ್ರೇಟ್ ಎಂದಿದ್ದೇವೆ. ಆದರೆ ಈ ನೆಲದಲ್ಲಿ ಅವರನ್ನು ಹಿಮ್ಮೆಟ್ಟಿಸಿದವರು ಎಷ್ಟು ಜನ ವೀರರಿಲ್ಲ. ನಮ್ಮೊಳಗಿನ ಕಿತ್ತಾಟ-ಹೊಟ್ಟೆ ಉರಿಯಿಂದ ಸೋಲುತ್ತಾ ಬಂದಿದ್ದೇವೆ ಅಷ್ಟೆ.

ಇದೀಗ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ನಮಗೆ ಗೊತ್ತಿರುವ ನಾಲ್ಕಾರು ಹೆಸರುಗಳೇ ಸ್ವಾತಂತ್ರ್ಯ ತಂದುಕೊಟ್ಟಿದ್ದು ಎಂಬ ನಂಬಿಕೆ ಇದೆ. ಗಾಂಧೀಜಿ ಅವರೇ ‘ಈ ಸ್ವಾತಂತ್ರ್ಯ ಅಸಂಖ್ಯ ದೇಶಭಕ್ತರ ತ್ಯಾಗ, ಬಲಿದಾನದಿಂದ ಬಂದಿದೆ’ ಎಂದಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಬೇಕಲ್ಲವೇ? ಜಿತಿನ್‍ದಾಸ್ ಎಂಬುವರು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಸೆರೆಮನೆಯಲ್ಲಿ 64 ದಿನಗಳ ಕಾಲ ಉಪವಾಸವಿದ್ದು ಪ್ರಾಣಬಿಟ್ಟರು. ಅತ್ಯಂತ ದೀರ್ಘ ಕಾಲ ಉಪವಾಸ ಇದ್ದವರು ಎಂಬ ದಾಖಲೆ ಇದೆ. ಎಷ್ಟು ಜನ ಇವರ ಹೆಸರು ಕೇಳಿದ್ದಾರೆ? ಇಂತಹ ಅಸಂಖ್ಯ ವೀರರು ಚರಿತ್ರೆಯ ಪುಟಗಳಲ್ಲಿ ಕಣ್ಮರೆಯಾಗಿದ್ದಾರೆ. ಕೆಲವೇ ಕೆಲವರನ್ನು ಮೆರೆಸುವ ಪ್ರಕ್ರಿಯೆ ಆಗಿಹೋಯಿತು. ಇದಕ್ಕೆ ಕಾರಣ ಹುಡುಕಬೇಕಿಲ್ಲ. ಅಧಿಕಾರಿಶಾಹಿ! ಓಲೈಕೆ ರಾಜಕಾರಣ!

ಹೆಡಗೇವಾರ್ ಚಿಂತಕರು, ಸುಶಿಕ್ಷಿತರು, ಸಜ್ಜನರು. ಇವರ ಚಿಂತನೆ ಯಾಕೆ ಪಠ್ಯವಾಗಬಾರದು? ನಟಿ ಜಯಮಾಲಾ ಅವರ ಚಿಂತನೆ ಪಠ್ಯವಾಗಬಹುದಾದರೆ, ಚಕ್ರವರ್ತಿ ಸೂಲಿಬೆಲೆ ಅವರದು ಯಾಕಾಗಬಾರದು?

ದೇವನೂರ ಮಹಾದೇವ ‘ಪಠ್ಯದಲ್ಲಿ ನನ್ನ ಬರಹ ಬೇಡ’ ಎಂದಿರುವುದು ಅವರ ಇಷ್ಟಕ್ಕೆ ಬಿಟ್ಟದ್ದು. ಆದರೆ ಅವರಿಗೂ ಒಂದು ಪಕ್ಷವಿದೆ, ಅವರದೂ ಒಂದು ಸಿದ್ಧಾಂತವಿದೆ. ತನ್ನ ಸಿದ್ಧಾಂತವೇ ಸರಿ, ಉಳಿದವರೆಲ್ಲರದೂ ತಪ್ಪು ಎಂದು ಅವರೇ ನಿರ್ಣಯಿಸಿದರೆ ಹೇಗೆ?

ಅಡ್ಡಂಡ ಸಿ. ಕಾರ್ಯಪ್ಪ, ನಿರ್ದೇಶಕ,
ರಂಗಾಯಣ, ಮೈಸೂರು

ವಿವೇಚನಾರಹಿತ ನಡೆ

ಪಠ್ಯಪುಸ್ತಕ ಪರಿಷ್ಕರಣೆ ಇಷ್ಟೊಂದು ವಿವಾದಕ್ಕೆ ಒಳಗಾಗಲು ಕಾಣದ ಕೈಗಳು ಕಾರಣವಾಗಿರಬಹುದು. ಯಾವ ಸಮಿತಿಯೇ ಆದರೂ ಸರ್ವಸಮ್ಮತ ರೀತಿಯಲ್ಲಿ ಪಠ್ಯಪುಸ್ತಕ ರೂಪಿಸುವುದು ತೀರಾ ಕಷ್ಟಸಾಧ್ಯ. ನಮ್ಮ ನಾಡಿನ ಬಹುದೊಡ್ಡ ಸಾಹಿತಿ ಮತ್ತು ವಿಚಾರವಂತ ಲೇಖಕ ಬರಗೂರರ ನೇತೃತ್ವದಲ್ಲಿ ಸಿದ್ಧಪಡಿಸಲಾದ ಪಠ್ಯಗಳು ಬಹುಮಟ್ಟಿಗೆ ಸರಿಯಿದ್ದವು ಎನಿಸುತ್ತದೆ. ಸರಿಯಿಲ್ಲವೆಂದು ತಗಾದೆ ತೆಗೆದವರಲ್ಲಿ ಈಗಿನ ಪರಿಷ್ಕರಣ ಸಮಿತಿಯ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಪ್ರಮುಖರಾಗಿದ್ದರು, ಒಂದು ಪಂಥದ ದೃಷ್ಟಿಕೋನಕ್ಕೆ ಅನುಗುಣವಾಗಿಯೇ ಕೆಲವು ಪಠ್ಯ ಸಿದ್ಧಪಡಿಸಲಾಗಿದೆ ಎಂಬುದು ಅವರ ದೂರಾಗಿತ್ತೆಂಬುದು ನನ್ನ ನೆನಪು. ಸರ್ಕಾರ ಅದರ ಪರಿಷ್ಕರಣೆಗೆ ಸಮಿತಿ ನೇಮಿಸುವಾಗ ವಿವೇಚನೆ ತೋರಲಿಲ್ಲವೆಂದೇ ತೋರುತ್ತದೆ. ಕಾರಣ, ಪರಿಷ್ಕರಣ ಸಮಿತಿಯ ಅಧ್ಯಕ್ಷರಾಗಿ ನೇಮಕವಾದ ವ್ಯಕ್ತಿ ಕನ್ನಡ ಸಾಹಿತ್ಯ, ಇತಿಹಾಸ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅನಾಮಧೇಯರು.

ಬರಗೂರರ ಹಾಗೆಯೇ ಸಾಹಿತ್ಯ, ಇತಿಹಾಸಗಳ ಜ್ಞಾನ ಹೊಂದಿರುವ, ಶಿಕ್ಷಣ ಕ್ಷೇತ್ರದಲ್ಲಿ ಅನುಭವವಿರುವ ಸಾಹಿತಿಯನ್ನೇ ಅಥವಾ ಕನ್ನಡದಲ್ಲಿ ನುರಿತ ಶಿಕ್ಷಣವೇತ್ತರನ್ನೇ ನೇಮಿಸಿದ್ದರೆ ವಿವಾದಗಳಿಗೆ ಆಸ್ಪದವಾಗದಂತೆ ಪಠ್ಯಪುಸ್ತಕಗಳು ತಯಾರಾಗುತ್ತಿದ್ದುವೆಂದು ಊಹಿಸಲು ಅವಕಾಶವಿದೆ. ಸಮಿತಿಗೆ ಒಂದೇ ಜಾತಿಗೆ ಸೇರಿದವರನ್ನು ಸದಸ್ಯರನ್ನಾಗಿ ನೇಮಿಸಿದ್ದಂತೂ ಸಾಮಾಜಿಕ ನ್ಯಾಯ ಮುನ್ನೆಲೆಯಲ್ಲಿರುವ ಪ್ರಸ್ತುತ ಸಂದರ್ಭದಲ್ಲಿ ಊಹಿಸಲೂ ಆಗದಂಥದ್ದು.

ಹಿಂದಿನ ಸಮಿತಿಯು ಒಂದು ಪಂಥಕ್ಕೆ ಮಣೆಹಾಕಿದ್ದು ತಪ್ಪೆಂದು ಹೇಳುವ ಈ ಸಮಿತಿ ಮಾಡಿದ್ದಿನ್ನೇನು? ಇದೂ ತಾನು ಒಪ್ಪುವ ಪಂಥಕ್ಕೆ, ತತ್ವಕ್ಕೆ ಆಪ್ಯಾಯಮಾನವೆನ್ನಿಸುವ ಪಠ್ಯಗಳನ್ನು ಆಯ್ಕೆ ಮಾಡುವಲ್ಲಿ ಅತ್ಯುತ್ಸಾಹ ತೋರಿಸಿದ್ದು. ಇದರಿಂದ ಯಾವುದೇ ಸರ್ಕಾರವಾದರೂ ಕಲಿಯಬೇಕಾದ ಸಂಗತಿ, ರಾಜಕೀಯೇತರ ಶೈಕ್ಷಣಿಕ ವ್ಯಕ್ತಿಗಳನ್ನೇ ಇಂಥ ಸಮಿತಿಗಳಿಗೆ ನೇಮಕ ಮಾಡಬೇಕು ಎಂಬುದು. ಮಕ್ಕಳಿಗೆ ಆಸಕ್ತಿ ಹುಟ್ಟಿಸುವಂತೆ, ಐತಿಹಾಸಿಕ ಸಾಮಾಜಿಕ ಸಂಗತಿಗಳನ್ನು ತಿರುಚದೆ ವಿಪರೀತ ವ್ಯಾಖ್ಯಾನಗಳನ್ನು ಮಾಡದಂಥ ಪಠ್ಯಭಾಗಗಳನ್ನು ಸೇರಿಸಿದರೆ ವಿವಾದಕ್ಕೆಡೆ ಇರುವುದಿಲ್ಲ.

ಇದರ ಜೊತೆಗೇ ತಳುಕುಹಾಕಲಾದ ಸಂಗತಿ, ಕುವೆಂಪು ರಚಿತ ನಾಡಗೀತೆಯನ್ನು ಗೇಲಿ ಮಾಡುವ ಅಣಕವಾಡನ್ನು ಅಧ್ಯಕ್ಷರು ಹಿಂದೆ ತಮ್ಮ ಫೇಸ್‌ಬುಕ್‍ ವಾಲ್‌ನಲ್ಲಿ ಹಾಕಿಕೊಂಡಿದ್ದರು ಎಂಬುದು. ಕನ್ನಡಿಗರೆಲ್ಲರಿಗೆ ಕುವೆಂಪು ಅತ್ಯಂತ ಆರಾಧ್ಯರೂ ಗೌರವಾಸ್ಪದರೂ ಆದ ಹಿಮಾಚಲ ಸದೃಶ ವ್ಯಕ್ತಿತ್ವದವರು. ಆ ಅಣಕವಾಡು ತಮ್ಮದಲ್ಲ ಎಂದು ಹೇಳಿದರೂ ಅದನ್ನು ಫೇಸ್‌ಬುಕ್‍ನಲ್ಲಿ ಹಾಕಿಕೊಂಡದ್ದು ಕಡೆಗಣಿಸಬಹುದಾದ ಸಂಗತಿಯಲ್ಲವೇ ಅಲ್ಲ. ಹೀಗಾಗಿ ಅವರು ಸ್ವತಃ ರಾಜೀನಾಮೆ ಕೊಟ್ಟರೆ ಇಲ್ಲವೆ ಸರ್ಕಾರವೇ ಅವರನ್ನು ತೆಗೆದುಹಾಕಿದರೆ ತಮ್ಮ ರಚನೆಯನ್ನು ಪಠ್ಯದಿಂದ ಕೈಬಿಡಿ ಎಂದಿರುವ ಲೇಖಕರು ಬಹುಶಃ ಅದಕ್ಕೆ ಪಟ್ಟು ಹಿಡಿಯಲಾರರು. ಅದರಿಂದ ಈಗಾಗಲೇ ತಡವಾಗಿರುವ ಪಠ್ಯಪುಸ್ತಕಗಳು ವಿದ್ಯಾರ್ಥಿಗಳ ಕೈಸೇರಲು ಅನುಕೂಲವಾಗುತ್ತದೆ.

– ಡಾ. ಆರ್.ಲಕ್ಷ್ಮೀನಾರಾಯಣ, ಕಾಲೇಜು ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT