ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚೆ – ವೈವಾಹಿಕ ಅತ್ಯಾಚಾರಕ್ಕೆ ವಿನಾಯಿತಿ: ಹೆಣ್ಣಿನ ಹಕ್ಕಿನ ಉಲ್ಲಂಘನೆ

ವೈವಾಹಿಕ ಅತ್ಯಾಚಾರವನ್ನು ಶಿಕ್ಷಾರ್ಹಗೊಳಿಸುವುದು ಸರಿಯಾದ ಕ್ರಮವೇ?
Last Updated 8 ಏಪ್ರಿಲ್ 2022, 19:30 IST
ಅಕ್ಷರ ಗಾತ್ರ

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 375ರಲ್ಲಿ ವೈವಾಹಿಕ ಅತ್ಯಾಚಾರಕ್ಕೆ ಇರುವ ವಿನಾಯಿತಿಯನ್ನು ತೆಗೆದು ಹಾಕಬೇಕು ಎಂಬ ಚರ್ಚೆ ಇತ್ತೀಚಿನ ದಿನಗಳಲ್ಲಿ ಆರಂಭವಾಗಿದೆ. ಐಪಿಸಿಯಲ್ಲಿ ವೈವಾಹಿಕ ಅತ್ಯಾಚಾರಕ್ಕೆ ವಿನಾಯಿತಿ ನೀಡಿರುವುದರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ವಾದ ಪ್ರತಿವಾದಗಳು ದೆಹಲಿ ಹೈಕೋರ್ಟ್‌ನಲ್ಲಿ ಕೆಲವು ತಿಂಗಳಲ್ಲಿ ನಡೆದಿದೆ. ಈ ಅರ್ಜಿಗಳಿಗೆ ಸಂಬಂಧಿಸಿದ ತೀರ್ಪು ಇನ್ನಷ್ಟೇ ಬರಬೇಕಿದೆ.

ಈ ಮಧ್ಯೆ, ವೈವಾಹಿಕ ಅತ್ಯಾಚಾರಕ್ಕೆ ಇನ್ನು ಮುಂದೆ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಗಂಡನ ವಿರುದ್ಧ ಹೆಂಡತಿ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ಎತ್ತಿ ಹಿಡಿದು ಹೈಕೋರ್ಟ್‌ 2022ರ ಮಾರ್ಚ್‌ನಲ್ಲಿ ತೀರ್ಪು ನೀಡಿದೆ. ಪದೇ ಪದೇ ತಮ್ಮ ಮೇಲೆ ಆಗಿದ್ದ ಲೈಂಗಿಕ ದೌರ್ಜನ್ಯದ ವಿರುದ್ಧ ಹೆಂಡತಿಯು ಗಂಡನ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣದಲ್ಲಿ ಈ ತೀರ್ಪು ನೀಡಲಾಗಿದೆ. ಪೊಲೀಸರು ಐಪಿಸಿ ಸೆಕ್ಷನ್‌ 376ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಆರೋಪಪಟ್ಟಿ ದಾಖಲಿಸಿದ್ದರು. ಸೆಶನ್ಸ್‌ ನ್ಯಾಯಾಧೀಶರು ಅದೇ ಸೆಕ್ಷನ್‌ ಅಡಿಯಲ್ಲಿಯೇ ಆರೋಪ ನಿಗದಿ ಮಾಡಿದ್ದರು. ಸೆಕ್ಷನ್‌ 376ರ ಅಡಿಯಲ್ಲಿನ ಆರೋಪಗಳನ್ನು ಕೈಬಿಡಬೇಕು ಎಂದು ಗಂಡ ಅರ್ಜಿ ಸಲ್ಲಿಸಿದ್ದರು. ಆದರೆ, ಸೆಶನ್ಸ್‌ ನ್ಯಾಯಾಧೀಶರು ಅದನ್ನು ತಿರಸ್ಕರಿಸಿದ್ದರು. ಹಾಗಾಗಿ, ಗಂಡ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ತಮ್ಮ ವಿರುದ್ಧದ ಅಪರಾಧ ವಿಚಾರಣಾ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಕೋರಿದ್ದರು.

ಆದರೆ, ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಅರ್ಥಪೂರ್ಣ ಮತ್ತು ದೂರಗಾಮಿ ತೀರ್ಪು ನೀಡಿ, ಗಂಡನ ವಿರುದ್ಧದ ಅತ್ಯಾಚಾರ ಆರೋಪ ಕೈಬಿಡಲು ನಿರಾಕರಿಸಿದ್ದಾರೆ. ವ್ಯಕ್ತಿಯು ಗಂಡ ಎಂಬ ಕಾರಣಕ್ಕಾಗಿ ಲೈಂಗಿಕ ದೌರ್ಜನ್ಯದ ಕೃತ್ಯಕ್ಕೆ ವಿನಾಯಿತಿ ಕೊಟ್ಟರೆ, ಅದು ಹೆಣ್ಣಿನ ಸಮಾನತೆಯ ಹಕ್ಕನ್ನು ನಾಶ ಮಾಡುತ್ತದೆ. ಸಮಾನತೆ ಎಂಬುದು ನಮ್ಮ ಸಂವಿಧಾನದ ಆತ್ಮವೇ ಆಗಿದೆ. ಮಹಿಳೆಗೆ ಸಮಾನ ಸ್ಥಾನ ಇದೆ ಎಂಬುದನ್ನು ಸಂವಿಧಾನವು ಒಪ್ಪಿಕೊಂಡಿದೆ. ಆದರೆ, ವೈವಾಹಿಕ ಅತ್ಯಾಚಾರಕ್ಕೆ ಐಪಿಸಿಯು ವಿನಾಯಿತಿ ನೀಡಿರುವುದರಿಂದ ಹೆಂಡತಿಯನ್ನು ತಾರತಮ್ಯದಿಂದ ನೋಡಿದಂತಾಗುತ್ತದೆ ಮತ್ತು ಹೆಂಡತಿಯು ಗಂಡನ ಅಧೀನ ಎಂದು ಪರಿಗಣಿಸಿದಂತಾಗುತ್ತದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ. ಮದುವೆ ಎಂಬುದು ಸಮಾನರ ನಡುವಣ ಸಂಬಂಧ ಎಂದು ಸಂವಿಧಾನವು ಪರಿಗಣಿಸುತ್ತದೆ ಮತ್ತು ಮಹಿಳೆಯು ಪುರುಷನ ಅಧೀನದಲ್ಲಿ ಇರುವವಳು ಎಂದು ಯಾವ ರೀತಿಯಲ್ಲಿಯೂ ಬಿಂಬಿಸುವುದಿಲ್ಲ. ಸಂವಿಧಾನದ ವಿಧಿಗಳಾದ 14, 15, 19 ಮತ್ತು 21ರ ಅಡಿಯಲ್ಲಿ ಮಹಿಳೆಗೆ ಸಮಾನತೆ, ಘನತೆಯಿಂದ ಬದುಕುವುದು, ವೈಯಕ್ತಿಕ ಸ್ವಾತಂತ್ರ್ಯ, ದೇಹದ ಮೇಲೆ ಹಕ್ಕು, ಲೈಂಗಿಕ ಸ್ವಾಯತ್ತೆ, ಸಂತಾನೋತ್ಪತ್ತಿ ಆಯ್ಕೆಯ ಹಕ್ಕು, ಖಾಸಗಿತನದ ಹಕ್ಕು, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕುಗಳನ್ನು ನೀಡಿದೆ. ಗಂಡನು ಎಸಗುವ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರಕ್ಕೆ ಇರುವ ವಿನಾಯಿತಿಯು ಅಂತಹ ಕೃತ್ಯ ಎಸಗಲು ನೀಡಿದ ಪರವಾನಗಿಯಂತೆ ಆಗುತ್ತದೆ.‘ಗಂಡ ಎಂಬ ಗಂಡಸು ಹೆಂಡತಿ ಎಂಬ ಹೆಣ್ಣಿನ ಮೇಲೆ ಮಾಡುವ ಅತ್ಯಾಚಾರವು ಅತ್ಯಾಚಾರವೇ ಆಗುತ್ತದೆ’ ಎಂದು ನ್ಯಾಯಮೂರ್ತಿ ಅತ್ಯಂತ ಸ್ಪಷ್ಟವಾಗಿ ಹೇಳಿದ್ದು, ಪ್ರಕರಣವನ್ನು ವಜಾ ಮಾಡಲು ನಿರಾಕರಿಸಿದ್ದಾರೆ.

ಈ ಹಿಂದೆ ಬಂದಿರುವ ಹಲವು ತೀರ್ಪುಗಳು ಕೂಡ ಈ ವಿನಾಯಿತಿಯನ್ನು ರದ್ದುಪಡಿಸುವುದಕ್ಕೆ ಪೂರಕವಾಗಿ ಇವೆ. ಇಂಡಿಪೆಂಡೆಂಟ್‌ ಥಾಟ್‌ ಮತ್ತು ಭಾರತ ಸರ್ಕಾರ ಪ್ರಕರಣದಲ್ಲಿ, ಸೆಕ್ಷನ್‌ 375ರ ವಿನಾಯಿತಿಯನ್ನು ಸುಪ್ರೀಂ ಕೋರ್ಟ್ ಅಲ್ಪ ದುರ್ಬಲಗೊಳಿಸಿದೆ. 15 ವರ್ಷ ವಯಸ್ಸಿನ ಒಳಗಿನ ಹೆಂಡತಿಗೆ ಮಾತ್ರ ಅನ್ವಯವಾಗುತ್ತಿದ್ದ ವೈವಾಹಿಕ ಅತ್ಯಾಚಾರ ವಿನಾಯಿತಿ ರದ್ದತಿಯನ್ನು 18 ವರ್ಷದವರೆಗೆ ಕೋರ್ಟ್ ಏರಿಸಿತು. 18 ವರ್ಷ ದಾಟಿದ ವಿವಾಹಿತ ಮಹಿಳೆಯರಿಗೆ ಸಂಬಂಧಿಸಿ ಇದ್ದ ವೈವಾಹಿಕ ಅತ್ಯಾಚಾರ ವಿನಾಯಿತಿಯು ರದ್ದಾಗಿಲ್ಲ ಎಂದು ಕೋರ್ಟ್ ಹೇಳಿತ್ತು. ಆದರೆ, ‘ಅತ್ಯಾಚಾರವು ಅತ್ಯಾಚಾರವೇ... ನೈಜವಾಗಿ ನಡೆದ ಅತ್ಯಾಚಾರ ಕೃತ್ಯವನ್ನು ಶಾಸನದ ಮೂಲಕ ಇಲ್ಲವೇ ಇಲ್ಲ ಎಂದು ಮಾಡಲಾಗದು’ ಎಂದು ನ್ಯಾಯಮೂರ್ತಿ ಮದನ್‌ ಲೋಕೂರ್‌ ಹೇಳಿದ್ದರು. ತನ್ನ ದೇಹದ ಮೇಲೆ ಯಾವುದೇ ಹಕ್ಕು ಇಲ್ಲದ ಒಂದು ಸರಕು ಎಂದು ಹೆಣ್ಣನ್ನು ಪರಿಗಣಿಸಲಾಗದು ಅಥವಾ ತನ್ನ ಗಂಡನಿಗೆ ಲೈಂಗಿಕ ಸಂಪರ್ಕವನ್ನು ನಿರಾಕರಿಸುವ ಹಕ್ಕೇ ಇಲ್ಲದ ವ್ಯಕ್ತಿ ಎಂದೂ ಪರಿಗಣಿಸಲಾಗದು. ಮದುವೆ ಆಗಿರಲಿ, ಇಲ್ಲದಿರಲಿಹೆಣ್ಣು ಮಕ್ಕಳ ಮಾನವ ಹಕ್ಕುಗಳು ಸಜೀವವಾಗಿಯೇ ಇರುತ್ತವೆ ಎಂದೂ ಕೋರ್ಟ್ ಹೇಳಿತ್ತು. ಮುಖ್ಯ ನ್ಯಾಯಮೂರ್ತಿ ಮ್ಯಾಥ್ಯೂ ಹೇಲ್‌ ಅವರು 1736ರಲ್ಲಿ ನೀಡಿದ್ದ ಹೇಳಿಕೆಯೊಂದರ ಕಾರಣಕ್ಕೆ ವೈವಾಹಿಕ ಅತ್ಯಾಚಾರಕ್ಕೆ ವಿನಾಯಿತಿ ದೊರೆಯಿತು. ಹೇಲ್‌ ಹೀಗೆ ಹೇಳಿದ್ದರು: ‘ಕಾನೂನುಬದ್ಧವಾಗಿ ಮದುವೆಯಾದ ಹೆಂಡತಿಯ ಮೇಲೆ ಗಂಡನು ಅತ್ಯಾಚಾರ ಎಸಗಿದ್ದರೂ ಆತ ತಪ್ಪಿತಸ್ಥ ಎಂದು ಹೇಳಲು ಸಾಧ್ಯವಿಲ್ಲ. ಪರಸ್ಪರರ ನಡುವಣ ಸಮ್ಮತಿ ಮತ್ತು ಕರಾರಿನ ಮೂಲಕ ಹೆಂಡತಿಯು ತನ್ನನ್ನು ಸಮರ್ಪಿಸಿಕೊಂಡಿರುತ್ತಾಳೆ ಮತ್ತು ಅದರಿಂದ ಹಿಂದಕ್ಕೆ ಸರಿಯಲು ಅವಕಾಶ ಇಲ್ಲ’.

ಮದುವೆಯ ಮೂಲಕ ಹೆಂಡತಿಯು ತನ್ನ ದೇಹವನ್ನು ಗಂಡನಿಗೆ ಅರ್ಪಿಸಿಕೊಂಡಿದ್ದಾಳೆ ಎಂಬ ಪರಿಕಲ್ಪನೆಯನ್ನು ರೂಢಿಗತ ಕಾನೂನು ಒಪ್ಪಿಕೊಂಡಿರುವುದರಿಂದ ವೈವಾಹಿಕ ಅತ್ಯಾಚಾರ ಪ್ರಕರಣದಲ್ಲಿ ಗಂಡನು ತ‍ಪ್ಪಿತಸ್ಥ ಎಂದು ಹೇಳಲು ಸಾಧ್ಯವಿಲ್ಲ ಎಂದು ಕಾನೂನು ಹೇಳುತ್ತದೆ. ಇದನ್ನು ಅಪರಾಧ ಸಂಹಿತೆಗಳಲ್ಲಿ ಅಳವಡಿಸಿಕೊಳ್ಳಲಾಗಿದೆ.

ಈ ತತ್ವವು ಈಗ ಸಂಪೂರ್ಣವಾಗಿ ರದ್ದಾಗಿದೆ. ಬ್ರಿಟನ್‌ನಲ್ಲಿ 1991ರಲ್ಲಿ ವೈವಾಹಿಕ ಅತ್ಯಾಚಾರ ವಿನಾಯಿತಿಯಿನ್ನು ತೆಗೆದುಹಾಕಲಾಗಿದೆ. ಆಧುನಿಕ ಸಮಾಜದಲ್ಲಿ ಹೆಂಡತಿಯ ನಿಜವಾದ ಸ್ಥಾನ ಏನು ಎಂಬುದನ್ನು ಈ ರೂಢಿಗತ ಕಾನೂನು ಎಳ್ಳಷ್ಟೂ ಪ್ರತಿನಿಧಿಸುವುದಿಲ್ಲ. ಕಾನೂನನ್ನು ಮಾರ್ಪಡಿಸಲು ಕ್ರಮ ಕೈಗೊಳ್ಳುವುದು ನ್ಯಾಯಾಲಯದ ಹೊಣೆ ಎಂದು ಬ್ರಿಟನ್‌ನ ಮೇಲ್ಮನೆ ಅಭಿಪ್ರಾಯಪಟ್ಟಿತ್ತು. ಹೇಲ್‌ ಹೇಳಿದಂತೆ, ಗಂಡನಿಗೆ ಇರುವ ರಕ್ಷಣೆಗೆ ಈಗ ಅಸ್ತಿತ್ವವೇ ಇಲ್ಲ. ಸಂತ್ರಸ್ತೆಯ ಜತೆಗೆ ಅತ್ಯಾಚಾರಿಯು ಹೊಂದಿರುವ ಸಂಬಂಧ ಯಾವುದೇ ಇದ್ದರೂ ಅತ್ಯಾಚಾರಿಯನ್ನು ಅಪರಾಧ ಕಾನೂನಿನ ಅನ್ವಯ ಅತ್ಯಾಚಾರಿ ಎಂದು ಘೋಷಿಸುವ ಸಮಯ ಬಂದಿದೆ ಎಂದು ಕೋರ್ಟ್‌ ಹೇಳಿತ್ತು. ಕಾಲಕ್ಕೆ ತಕ್ಕುದಾಗಿ ಇಲ್ಲದ ಮತ್ತು ಪ್ರತಿಗಾಮಿಯಾಗಿರುವ ರೂಢಿಗತ ಕಾನೂನುಗಳನ್ನು ರದ್ದು ಮಾಡುವುದು ನ್ಯಾಯಾಲಯದ ಕರ್ತವ್ಯ. ವೈವಾಹಿಕ ಅತ್ಯಾಚಾರಕ್ಕೆ ವಿನಾಯಿತಿ ನೀಡುವುದಕ್ಕೆ ಯಾವ ಸಮರ್ಥನೆಯೂ ಇಲ್ಲ ಎಂದು ಕೋರ್ಟ್‌ ಹೇಳಿತ್ತು. ಇದು 1991ರಲ್ಲಿನ ವಿದ್ಯಮಾನ. 30ಕ್ಕೂ ಹೆಚ್ಚು ವರ್ಷಗಳ ಹಿಂದೆಯೇ ಬ್ರಿಟನ್‌ ಈ ನಿಲುವಿಗೆ ಬಂದಿದೆ. ಆಸ್ಟ್ರೇಲಿಯಾ, ಅರ್ಜೆಂಟೀನಾ, ಕೆನಡಾ, ಬೆಲ್ಜಿಯಂ, ಬ್ರೆಜಿಲ್‌, ಫ್ರಾನ್ಸ್‌, ಜರ್ಮನಿ, ಅಮೆರಿಕ ಸೇರಿ 50ಕ್ಕೂ ಹೆಚ್ಚು ದೇಶಗಳು ವೈವಾಹಿಕ ಅತ್ಯಾಚಾರವನ್ನು ಅಪರಾಧ ಕೃತ್ಯ ಎಂದೇ ಪರಿಗಣಿಸುತ್ತಿವೆ.

ವೈವಾಹಿಕ ಅತ್ಯಾಚಾರಕ್ಕೆ ಇರುವ ವಿನಾಯಿತಿಯನ್ನು ನಾವು ಕೈಬಿಡುವ ಕಾಲ ಬಂದಿದೆ. ವೈವಾಹಿಕ ಅತ್ಯಾಚಾರಕ್ಕೆ ಇರುವ ವಿನಾಯಿತಿಯು ಮಹಿಳೆಯು ಗಂಡನ ಅಧೀನ ಎಂದು ಪರಿಗಣಿಸುವುದರಿಂದ ಮತ್ತು ಸಂವಿಧಾನವು ನೀಡಿರುವ ಸಮಾನತೆಯ ಹಕ್ಕನ್ನು ಉಲ್ಲಂಘಿಸುವುದರಿಂದ ಐಪಿಸಿ ಸೆಕ್ಷನ್‌ 375ರಲ್ಲಿ ಇರುವ ವೈವಾಹಿಕ ಅತ್ಯಾಚಾರ ವಿನಾಯಿತಿಯು ನಮ್ಮ ಕಾಯ್ದೆ ಪುಸ್ತಕದಲ್ಲಿ ಉಳಿಯಬಾರದು. ಈ ವಿನಾಯಿತಿ ರದ್ದಾಗಬೇಕು ಮತ್ತು ಇಬ್ಬರ ನಡುವಣ ಸಂಬಂಧ ಏನೇ ಇದ್ದರೂ ಲೈಂಗಿಕ ದೌರ್ಜನ್ಯವನ್ನು ಅಪರಾಧ ಎಂದೇ ಪರಿಗಣಿಸಬೇಕು.

ಜೈನಾ ಕೊಠಾರಿ

(ಲೇಖಕಿ: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT