ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದ ಮಧ್ಯಂತರ ಚುನಾವಣೆ ಏಳದ ನೀಲಿ ಅಲೆ, ಹೊಸ ಸವಾಲು

Last Updated 11 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಅಮೆರಿಕದ ಮಧ್ಯಂತರ ಚುನಾವಣೆಗಳು ಮಿಶ್ರ ಫಲಿತಾಂಶವನ್ನು ನೀಡಿವೆ ಎನ್ನುವುದೇ ಹೆಚ್ಚು ಸೂಕ್ತ. ಡೆಮಾಕ್ರಾಟರು ಭಾವಿಸಿದಂತೆ ಒಂದು ನೀಲಿ ಅಲೆ ಏಳಲಿಲ್ಲ. ಹಾಗೆಂದು ಟ್ರಂಪ್ ಮತ್ತು ರಿಪಬ್ಲಿಕನ್ನರು ಹೆಚ್ಚು ಸಂತೋಷಪಡುವಂತೆಯೂ ಇಲ್ಲ. ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್‌ನಲ್ಲಿ ಡೆಮಾಕ್ರಾಟರು ಪ್ರಾಬಲ್ಯ ಸಾಧಿಸಿದ್ದಾರೆ. ಆದರೆ ಸೆನೆಟ್‌ನ ಮೇಲಿನ ಹಿಡಿತವನ್ನು ರಿಪಬ್ಲಿಕನ್ನರು ಹೆಚ್ಚು ಗಟ್ಟಿಗೊಳಿಸಿಕೊಂಡಿದ್ದಾರೆ.ಹೌಸ್‌ ಆಫ್ ರೆಪ್ರೆಸೆಂಟೆಟಿವ್ಸ್‌ನಲ್ಲಿ ಡೆಮಾಕ್ರಾಟರು ಪ್ರಾಬಲ್ಯ ಸಾಧಿಸಿರುವುದು ಟ್ರಂಪ್‌ ಮುಂದಿನ ದಿನಗಳಲ್ಲಿ ಎದುರಿಸಲಿರುವ ಸವಾಲುಗಳನ್ನು ಸೂಚಿಸುತ್ತಿದೆ. ನೀತಿ ನಿರೂಪಣೆಯ ವಿಷಯದಲ್ಲಿದ್ದ ಏಕಪಕ್ಷೀಯ ನಿಲುವನ್ನು ಟ್ರಂಪ್ ಬದಲಾಯಿಸಿಕೊಳ್ಳಲೇಬೇಕಾಗುತ್ತದೆ. ಆದರೆ ಈ ಸವಾಲುಗಳೆಲ್ಲವೂ ಆಂತರಿಕ ಆಡಳಿತಕ್ಕೆ ಸೀಮಿತವಾಗಿರುತ್ತವೆಯೇ ಹೊರತು ಟ್ರಂಪ್ ಪ್ರಣೀತ ವಿದೇಶಾಂಗ ನೀತಿಯ ಮೇಲೆ ಹೆಚ್ಚಿನ ಪರಿಣಾಮವನ್ನೇನೂ ಬೀರುವುದಿಲ್ಲ. ಸರಳವಾಗಿ ಹೇಳುವುದಾದರೆ ಆಂತರಿಕ ನೀತಿ ನಿರೂಪಣೆ, ಈಗ ಎರಡು ಪಕ್ಷಗಳಲ್ಲಿ ಹಂಚಿಹೋಗಿದೆ. ಆದರೆ ಅಮೆರಿಕದ ಮಧ್ಯಂತರ ಚುನಾವಣೆಗಳಲ್ಲಿ ಶ್ವೇತಭವನದ ನಿಯಂತ್ರಣವಿರುವ ಪಕ್ಷ ಸಾಮಾನ್ಯವಾಗಿ ಎರಡೂ ಜನಪ್ರತಿನಿಧಿ ಸಭೆಗಳಲ್ಲಿ ಪ್ರಾಬಲ್ಯ ಕಳೆದುಕೊಳ್ಳುವುದು ಸಾಮಾನ್ಯ. ಆದರೆ ಈ ಬಾರಿ ಸೆನೆಟ್‌ನಲ್ಲಿ ರಿಪಬ್ಲಿಕನ್ನರು ತಮ್ಮ ಪ್ರಾಬಲ್ಯ ಕಾಯ್ದುಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಟ್ರಂಪ್ ಬಳಗ ವಿಜಯ ತಮ್ಮದೂ ಹೌದು ಎಂದು ಹೇಳಿಕೊಳ್ಳಬಹುದು. ಫಲಿತಾಂಶಗಳು ಪ್ರಕಟವಾದುದರ ಹಿಂದೆಯೇ ಟ್ರಂಪ್ ಟ್ವೀಟ್ ಒಂದರ ಮೂಲಕ ಇದನ್ನು ಘೋಷಿಸಿಕೊಂಡಿದ್ದರು. ಮತಹಂಚಿಕೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ ಗ್ರಾಮೀಣ ಮತ್ತು ಪುಟ್ಟ ಪಟ್ಟಣ ಪ್ರದೇಶಗಳಲ್ಲಿ ರಿಪಬ್ಲಿಕನ್ನರಿಗೆ ಹೆಚ್ಚಿನ ಸಂಖ್ಯೆಯ ಮತಗಳು ಲಭಿಸಿದ್ದರೆ ಡೆಮಾಕ್ರಾಟರಿಗೆ ನಗರ ಪ್ರದೇಶಗಳಲ್ಲಿ ಹೆಚ್ಚಿನ ಬೆಂಬಲ ದೊರೆತಿದೆ.

ಈ ಫಲಿತಾಂಶವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂಬ ಪ್ರಶ್ನೆಗೆ ಸರಳ ಉತ್ತರಗಳಿಲ್ಲ. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಕಾಣಿಸಿಕೊಂಡ ಎಲ್ಲವೂ ಈಗಲೂ ಮುಂದುವರಿದಿದೆ ಎಂದು ಖಡಾಖಂಡಿತವಾಗಿ ಹೇಳುವಂತಿಲ್ಲ. ಆದರೆ ಟ್ರಂಪ್ ಅವರ ಅತಿರೇಕವನ್ನು ಜನರು ಪೂರ್ಣವಾಗಿ ಅಲ್ಲಗಳೆದಿರುವ ಸೂಚನೆಗಳೂ ಕಾಣಿಸುತ್ತಿಲ್ಲ. ಆದರೆ ಟ್ರಂಪ್ ಅವರ ಏಕಪಕ್ಷೀಯ ನಿರ್ಧಾರಗಳಿಗೆ ತಡೆಯೊಡ್ಡುವುದಕ್ಕೆ ಬೇಕಿರುವ ಫಲಿತಾಂಶ ಇದು ಎಂದು ಹೇಳಬಹುದು. ಟ್ರಂಪ್ ಕೈಗೊಳ್ಳುವ ಎಲ್ಲಾ ಆಡಳಿತಾತ್ಮಕ ನಿರ್ಧಾರಗಳನ್ನೂ ಡೆಮಾಕ್ರಾಟರ ಪ್ರಾಬಲ್ಯವಿರುವ ಹೌಸ್ ಆಫ್ ರೆಪ್ರಸೆಂಟೆಟಿವ್ಸ್ ನಲ್ಲಿ ಪ್ರಶ್ನಿಸಬಹುದು. ತನಿಖೆಗಳಿಗೆ ಮುಂದಾಗಬಹುದು. ಆಂತರಿಕ ಆಡಳಿತಕ್ಕೆ, ಹಣಕಾಸಿಗೆ ಸಂಬಂಧಿಸಿದ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳುವಾಗ ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ ಅನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅನಿವಾರ್ಯವಾಗಿ ಪರಿಣಮಿಸಲಿದೆ. ಟ್ರಂಪ್ ನಿರ್ಧಾರಗಳು ಅತಿರೇಕದವು ಅನ್ನಿಸಿದರೂ ಅದು ಡಾಲರ್‌ ಅನ್ನು ಹೆಚ್ಚು ಗಟ್ಟಿಗೊಳಿಸುವಲ್ಲಿಯೂ ಕೆಲಸ ಮಾಡಿದೆ. ಡೆಮಾಕ್ರಾಟರ ಪ್ರಾಬಲ್ಯವಿರುವ ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್, ಟ್ರಂಪ್ ವಿರುದ್ಧ ಕೆಲವು ತನಿಖೆಗಳನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆಯಾದರೂ ಇದು ಅಧ್ಯಕ್ಷರನ್ನು ಮಹಾಭಿಯೋಗಕ್ಕೆ ಒಳಪಡಿಸುವಂಥ ಕಠಿಣ ನಿರ್ಧಾರಗಳಿಗೆ ಮುಂದಾಗಲಾರದು. ಇದೇ ವೇಳೆ ಟ್ರಂಪ್ ಅವರು ಅನುಸರಿಸುತ್ತಿರುವ ಆಕ್ರಮಣಕಾರಿ ವಿದೇಶಾಂಗ ನೀತಿ ಮತ್ತು ವಲಸೆಯ ವಿರುದ್ಧ ತಳೆಯುತ್ತಿರುವ ನಕಾರಾತ್ಮಕ ನಿಲುವುಗಳನ್ನು ಎದುರಿಸುವಲ್ಲಿ ಈ ಫಲಿತಾಂಶದಿಂದ ಹೆಚ್ಚೇನೂ ಪ್ರಯೋಜನವಾಗುವುದಿಲ್ಲ. 2020ರ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟರು ಆರಿಸಬೇಕಾದ ಅಭ್ಯರ್ಥಿಯ ಕುರಿತಾಗಿಯೂ ಈ ಫಲಿತಾಂಶ ಕೆಲವು ಸೂಚನೆಗಳನ್ನು ನೀಡುತ್ತಿದೆ. ಟ್ರಂಪ್‌ ನಿಲುವುಗಳಿಗೆ ಸಂಪೂರ್ಣ ವಿರುದ್ಧವಾಗಿರುವ ಅಭ್ಯರ್ಥಿಯಿಂದ ಹೆಚ್ಚೇನೂ ಉಪಯೋಗವಾಗಲಾರದು ಎಂಬುದು ಸದ್ಯದ ಫಲಿತಾಂಶದ ಸೂಚನೆ. ಟ್ರಂಪ್ ಬೆಂಬಲಿಗರನ್ನೂ ಒಲಿಸಿಕೊಳ್ಳಬಲ್ಲ ಡೆಮಾಕ್ರಾಟ್ ಅಭ್ಯರ್ಥಿಯ ಶೋಧನೆ ಅವರ ಎದುರು ಇರುವ ಸವಾಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT