ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನಯಾನ: ಪ್ರಯಾಣಿಕರ ಸುರಕ್ಷತೆ ಆದ್ಯತೆಯಾಗಲಿ

Last Updated 14 ಮಾರ್ಚ್ 2019, 20:03 IST
ಅಕ್ಷರ ಗಾತ್ರ

ಇಥಿಯೋಪಿಯನ್ ಏರ್‌ಲೈನ್ಸ್‌ ಸಂಸ್ಥೆಗೆ ಸೇರಿದ ವಿಮಾನ ಭಾನುವಾರ ಅಪಘಾತಕ್ಕೆ ತುತ್ತಾಗಿ 157 ಜನ ಸಾವಿಗೀಡಾಗಿದ್ದಾರೆ. ಈ ವರ್ಷದಲ್ಲಿ ನಡೆದಿರುವ ಎರಡನೆಯ ಅತ್ಯಂತ ಭೀಕರ ವಿಮಾನ ದುರಂತ ಇದು.

ಅಲ್ಲದೆ, ಬೋಯಿಂಗ್ ಕಂಪನಿಯ ‘737 ಮ್ಯಾಕ್ಸ್ 8’ ಮಾದರಿಯ ವಿಮಾನ ಟೇಕ್‌-ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೆ ಈಡಾಗಿರುವುದು ಕಳೆದ ಐದು ತಿಂಗಳ ಅವಧಿಯಲ್ಲಿ ಇದು ಎರಡನೆಯ ಬಾರಿ. ಇಂಡೊನೇಷ್ಯಾದ ಲಯನ್ ಏರ್ ಸಂಸ್ಥೆಗೆ ಸೇರಿದ್ದ ವಿಮಾನ 2018ರ ಅಕ್ಟೋಬರ್‌ನಲ್ಲಿ ಜಾವಾ ಸಮುದ್ರದಲ್ಲಿ ಪತನಗೊಂಡು 189 ಜನ ಮೃತಪಟ್ಟಿದ್ದರು.

ಈ ಎರಡು ವಿಮಾನ ಅಪಘಾತಗಳಲ್ಲಿ ಕಂಡುಬಂದಿರುವ ಸಮಾನ ಅಂಶಗಳು ಈ ಮಾದರಿಯ ವಿಮಾನದ ಸುರಕ್ಷತೆ ಬಗ್ಗೆ ಪ್ರಶ್ನೆಗಳನ್ನು ಮೂಡಿಸಿವೆ. ಅಪಘಾತಕ್ಕೆ ಒಳಗಾದ ಎರಡೂ ವಿಮಾನಗಳು ಹೊಸದಾಗಿದ್ದವು, ಎರಡೂ ವಿಮಾನಗಳು ಶುಭ್ರ ವಾತಾವರಣದಲ್ಲಿ ಟೇಕ್‌-ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡವು. ಎರಡೂ ವಿಮಾನಗಳ ಪೈಲಟ್‌ಗಳು ಅನುಭವಿಗಳಾಗಿದ್ದರು. ಅಪಘಾತಕ್ಕೆ ನಿರ್ದಿಷ್ಟ ಕಾರಣಗಳು ಏನು ಎಂಬುದನ್ನು ಪತ್ತೆ ಮಾಡಲು ತನಿಖೆಗಳು ನಡೆಯುತ್ತಿವೆ.

ಎರಡೂ ವಿಮಾನಗಳ ಕಪ್ಪುಪೆಟ್ಟಿಗೆ ಸಿಕ್ಕಿದ್ದು, ಅವುಗಳಲ್ಲಿ ಸಂಗ್ರಹವಾಗಿರುವ ದತ್ತಾಂಶವನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ತನಿಖೆ ಪೂರ್ಣಗೊಂಡು ಒಂದು ತೀರ್ಮಾನಕ್ಕೆ ಬರಲು ತುಸು ಸಮಯ ಬೇಕಾಗಬಹುದು. ಆದರೆ, ಎರಡೂ ಅಪಘಾತಗಳಲ್ಲಿನ ಸಾಮ್ಯತೆಗಳು ವೈಮಾನಿಕ ಜಗತ್ತಿನಲ್ಲಿ ಎಚ್ಚರಿಕೆಯ ಕರೆಗಂಟೆ ಬಾರಿಸಿವೆ. ಈ ಮಾದರಿಯ ವಿಮಾನದ ಬಗ್ಗೆ ವ್ಯಕ್ತವಾಗಿರುವ ಅನುಮಾನಗಳು ಮತ್ತು ಅಪಘಾತ ನಂತರದ ಕೆಲವು ಕ್ರಮಗಳು ವಿಶ್ವದ ವಿಮಾನ ಉದ್ಯಮದಲ್ಲಿ ಬಿರುಗಾಳಿ ಸೃಷ್ಟಿಸುವ ಶಕ್ತಿ ಹೊಂದಿವೆ.

ಬೋಯಿಂಗ್‌ 737 ಮ್ಯಾಕ್ಸ್‌ 8 ಮಾದರಿಯ ಅಂದಾಜು 350 ವಿಮಾನಗಳು ವಿಶ್ವದಾದ್ಯಂತ ಕಾರ್ಯಾಚರಣೆಯಲ್ಲಿ ಇವೆ. ಇಂಡೊನೇಷ್ಯಾ ಮತ್ತು ಇಥಿಯೋಪಿಯಾ ಮಾತ್ರವೇ ಅಲ್ಲದೆ ಭಾರತ, ಚೀನಾ, ಬ್ರಿಟನ್, ಆಸ್ಟ್ರೇಲಿಯಾ, ಜರ್ಮನಿ ಮತ್ತು ಫ್ರಾನ್ಸ್‌ ಸೇರಿದಂತೆ ಹಲವು ರಾಷ್ಟ್ರಗಳು ಈ ಮಾದರಿಯ ವಿಮಾನಗಳ ಹಾರಾಟಕ್ಕೆ ನಿಷೇಧ ಹೇರಿವೆ. ಇದೇ ಕ್ರಮ ಅನುಸರಿಸುವ ಬಗ್ಗೆ ಇನ್ನೂ ಕೆಲವು ದೇಶಗಳು ಪರಿಶೀಲನೆ ನಡೆಸುತ್ತಿವೆ. ಚೀನಾ ಒಂದರಲ್ಲೇ ಈ ಮಾದರಿಯ 97 ವಿಮಾನಗಳು ಇವೆ ಎನ್ನಲಾಗಿದೆ.

ಈ ಮಾದರಿಯ ವಿಮಾನಗಳ ಹಾರಾಟದ ಮೇಲೆ ನಿಷೇಧ ವಿಧಿಸಿದ್ದರಿಂದಾಗಿ ನಾಗರಿಕ ವಿಮಾನಯಾನ ವಲಯದ ಮೇಲೆ ಏಟು ಬೀಳುತ್ತದೆ. ಈ ವಿಮಾನಗಳ ಸುರಕ್ಷತೆ ಕುರಿತ ಪ್ರಶ್ನೆಗಳು ಇತ್ಯರ್ಥವಾಗದಿದ್ದರೆ, ಹಲವು ವಿಮಾನಯಾನ ಸಂಸ್ಥೆಗಳು ಗಂಭೀರ ಸಮಸ್ಯೆಗೆ ಸಿಲುಕಲಿವೆ. ಹಲವು ದೇಶಗಳ ಜನ ಈ ಮಾದರಿಯ ವಿಮಾನಗಳ ಸುರಕ್ಷತೆ ಕುರಿತು ತಮ್ಮ ಆತಂಕ ವ್ಯಕ್ತಪಡಿಸಿದ್ದು, ಇದರಲ್ಲಿ ತಾವು ಇನ್ನು ಪ್ರಯಾಣ ಮಾಡುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೊಂಡಿದ್ದಾರೆ.

ಭಾರತದಲ್ಲಿ ಕೂಡ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನದ ಹಾರಾಟಕ್ಕೆ ನಿಷೇಧ ವಿಧಿಸಲಾಗಿದೆ. ಆದರೆ, ಈ ವಿಚಾರದಲ್ಲಿ ಇನ್ನಷ್ಟು ತ್ವರಿತವಾಗಿ ಕ್ರಮ ಕೈಗೊಳ್ಳಬೇಕಿತ್ತು. ಭಾರತದಲ್ಲಿ ಈ ಮಾದರಿಯ 17 ವಿಮಾನಗಳು ಹಾರಾಟ ನಡೆಸುತ್ತಿದ್ದವು. ವಿಮಾನ ಅಪಘಾತದ ನಂತರ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಸಲಹಾ ಸ್ವರೂಪದ ಮಾತುಗಳನ್ನು ಮಾತ್ರ ಹೇಳಿತು.

ಈ ವಿಮಾನಗಳನ್ನು ನಿಷೇಧಿಸುವಂತೆ ಡಿಜಿಸಿಎಗೆ ನಾಗರಿಕರು ಹಾಗೂ ನಾಗರಿಕ ವಿಮಾನಯಾನ ಸಚಿವಾಲಯ ಒತ್ತಡ ಹೇರಬೇಕಾಯಿತು. ಪ್ರಯಾಣಿಕರ ಸುರಕ್ಷತೆ ತನ್ನ ಮೊದಲ ಆದ್ಯತೆ, ಸುರಕ್ಷತೆಯ ಪ್ರಶ್ನೆಗಳು ಇತ್ಯರ್ಥ ಆಗುವವರೆಗೆ ವಿಮಾನಗಳ ಹಾರಾಟದ ಮೇಲಿನ ನಿಷೇಧ ಮುಂದುವರಿಯಲಿದೆ ಎಂದು ಡಿಜಿಸಿಎ ಹೇಳಿದೆ. ಆದರೆ ಈ ಮಾತನ್ನು ಡಿಜಿಸಿಎ ಮೊದಲೇ ಹೇಳಬೇಕಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT