ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರಾತನ ವಿವಾದಕ್ಕೆ ತಾರ್ಕಿಕ ಅಂತ್ಯ

Last Updated 9 ನವೆಂಬರ್ 2019, 19:40 IST
ಅಕ್ಷರ ಗಾತ್ರ

ಅಯೋಧ್ಯೆಯ 2.77 ಎಕರೆ ವಿವಾದಿತ ಭೂಮಿಯ ಕುರಿತು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ನೀಡಿದ ಸರ್ವಾನುಮತದ ತೀರ್ಪು, ದೇಶದ ಬಹುಪಾಲು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ತೀರ್ಪನ್ನು ಬಹುತೇಕ ರಾಜಕೀಯ ಪಕ್ಷಗಳು ಸ್ವಾಗತಿಸಿವೆ. ಅಂತೆಯೇ ಜನಸಾಮಾನ್ಯರೂ ಸಂಯಮ ತೋರಿ, ಪ್ರಬುದ್ಧತೆ ಪ್ರದರ್ಶಿಸಿರುವುದು ಶ್ಲಾಘನೀಯ.

ವಿವಾದಿತ ಸ್ಥಳ ತಮಗೆ ಸೇರಿದ್ದೆಂಬ ನಿರ್ಮೋಹಿ ಅಖಾಡ ಮತ್ತು ಶಿಯಾ ವಕ್ಫ್ ಮಂಡಳಿಯ ವಾದವನ್ನು ಆರಂಭದಲ್ಲೇ ತಳ್ಳಿಹಾಕಿದ ಸಂವಿಧಾನ ಪೀಠವು ಉತ್ತರಪ್ರದೇಶ ಸುನ್ನಿ ವಕ್ಫ್‌ ಮಂಡಳಿ ಮತ್ತು ರಾಮಲಲ್ಲಾ ನಡುವಣ ವಿವಾದವನ್ನು ಬಗೆಹರಿಸಲು ಮುತ್ಸದ್ದಿತನವನ್ನು ತೋರಿದೆ. ವಿವಾದಿತ ಭೂಮಿಯನ್ನು ರಾಮಮಂದಿರ ಕಟ್ಟಲು ನೀಡಿದ್ದು, ಅದಕ್ಕಾಗಿ ಮೂರು ತಿಂಗಳ ಒಳಗೆ ಟ್ರಸ್ಟ್‌ ಒಂದನ್ನು ರಚಿಸಿ, ಭೂಮಿಯ ಒಡೆತನವನ್ನು ಟ್ರಸ್ಟ್‌ಗೆ ಹಸ್ತಾಂತರಿಸುವಂತೆ ಸೂಚಿಸಿದೆ. ಅದೇ ವೇಳೆ, ಅಯೋಧ್ಯೆಯ ಪ್ರಮುಖ ಸ್ಥಳವೊಂದರಲ್ಲಿ ಮಸೀದಿಯನ್ನು ನಿರ್ಮಿಸಲು ಮುಸ್ಲಿಮರಿಗೆ ಐದು ಎಕರೆ ಸ್ಥಳವನ್ನು ನೀಡುವಂತೆಯೂ ಸರ್ಕಾರಕ್ಕೆ ಆದೇಶಿಸಿದೆ.

ವಿವಾದಿತ ಸ್ಥಳವೇ ಶ್ರೀರಾಮಚಂದ್ರನ ಜನ್ಮಸ್ಥಳ ಎನ್ನುವ ಹಿಂದೂಗಳ ನಂಬಿಕೆಯನ್ನು ಈ ತೀರ್ಪು ಎತ್ತಿಹಿಡಿದಿದೆ.

‘ಮಸೀದಿ ಇರುವ ಸ್ಥಳ ತಮಗೆ ಸೇರಿದ್ದೆಂದು ನಿರೂಪಿಸಲು ಸುನ್ನಿ ವಕ್ಫ್‌ ಮಂಡಳಿ ವಿಫಲವಾಗಿದೆ. ಹಾಗೆಯೇ ಬಾಬರಿ ಮಸೀದಿ ಕಟ್ಟಲು ದೇವಾಲಯವನ್ನು ಕೆಡವಲಾಗಿದೆಯೆಂಬ ವಾದವನ್ನು ಭಾರತೀಯ ಪುರಾತತ್ವ ಇಲಾಖೆ ದೃಢಪಡಿಸಿಲ್ಲ. ಆದರೆ, ಮಸೀದಿಯ ತಳದಲ್ಲಿ ಮುಸ್ಲಿಮರದ್ದಲ್ಲದ ಕಟ್ಟಡದ ಕುರುಹುಗಳಿರುವುದು ನಿಜ’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ರಾಮ ಮತ್ತು ಸೀತೆಯ ವಿಗ್ರಹಗಳನ್ನು 1949ರಲ್ಲಿ ವಿವಾದಿತ ಸ್ಥಳದಲ್ಲಿ ಇರಿಸಿದ್ದನ್ನು, 1992ರಲ್ಲಿ ಬಾಬರಿ ಮಸೀದಿ ಧ್ವಂಸಗೊಳಿಸಿದ್ದನ್ನು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಹೀಗಿರುವಾಗ, ವಿವಾದಿತ ಸ್ಥಳವನ್ನು ಹಿಂದೂಗಳ ಒಡೆತನಕ್ಕೆ ನೀಡುವ ಕ್ರಮವು ವಿರೋಧಾಭಾಸದಿಂದ ಕೂಡಿದೆ. ಇತಿಹಾಸ, ಪುರಾಣ, ನಂಬಿಕೆ, ರಾಜಕೀಯ ಎಲ್ಲವೂ ಒಂದರೊಳಗೊಂದು ಮಿಳಿತಗೊಂಡಿದ್ದ ಈ ಅತಿಸೂಕ್ಷ್ಮ ವಿವಾದದ ಇತ್ಯರ್ಥದಲ್ಲಿ ಒಂದು ರೀತಿ ಮಧ್ಯಸ್ಥಿಕೆಯ ಮಾರ್ಗ ಹಿಡಿದಂತಿದೆ.

ವಿವಾದಿತ ಭೂಮಿಯ ಒಡೆತನವನ್ನು ತೀರ್ಮಾನಿಸಲು ಸಮರ್ಪಕ ದಾಖಲೆಗಳು ಇಲ್ಲವಾದಾಗ, ಸಂವಿಧಾನದ ಧರ್ಮನಿರಪೇಕ್ಷ ಚೌಕಟ್ಟಿನಲ್ಲಿ ಪರ್ಯಾಯ ಹಾದಿಗಳನ್ನೂ ಸುಪ್ರೀಂ ಕೋರ್ಟ್‌ ಪರಿಗಣಿಸಬಹುದಿತ್ತು. ಅದೇನೇ ಇದ್ದರೂ, ಜಗತ್ತಿನಲ್ಲೇ ಅತ್ಯಂತ ಪುರಾತನ ಎನ್ನಬಹುದಾದ ಭೂವಿವಾದವೊಂದು ನ್ಯಾಯಾಲಯದಲ್ಲಿ ತಾರ್ಕಿಕ ಅಂತ್ಯವೊಂದನ್ನು ಕಂಡಿದೆಯಲ್ಲ ಎನ್ನುವುದು ಸಮಾಧಾನ ತಂದಿರುವ ವಿಷಯ.

ಸುಮಾರು 70 ವರ್ಷಗಳಿಂದ ನ್ಯಾಯಾಲಯದಲ್ಲಿ ನನೆಗುದಿಗೆ ಬಿದ್ದಿದ್ದ ಈ ಭೂವಿವಾದ, ಮೂರು ದಶಕಗಳಿಂದ ಭಾರತೀಯರನ್ನು ಸಂಘರ್ಷ, ನಿರಾಶೆ ಮತ್ತು ಹತಾಶೆಯ ಮಡುವಿಗೆ ತಳ್ಳಿದ್ದು ಸುಳ್ಳಲ್ಲ. ರಾಮಮಂದಿರದ ಪರವಾಗಿರುವವರು ಈ ತೀರ್ಪನ್ನು ಸ್ವಾಗತಿಸಿದ್ದು, ಬಾಬರಿ ಮಸೀದಿ ಕ್ರಿಯಾ ಸಮಿತಿಯ ವಕೀಲರು ‘ತೀರ್ಪು ತೃಪ್ತಿ ತಂದಿಲ್ಲ, ಆದರೆ ತೀರ್ಪನ್ನು ಗೌರವಿಸುತ್ತೇವೆ’ ಎಂದಿದ್ದಾರೆ. ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸುವ ಅವಕಾಶವೂ ಅವರಿಗೆ ಇದೆ. ಅದೇನೇ ಇದ್ದರೂ ತೀರ್ಪಿನಿಂದ ಅಲ್ಪಸಂಖ್ಯಾತರಲ್ಲಿ ಅಭದ್ರ ಭಾವ ಉಂಟಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ಸರ್ಕಾರದ ಮೇಲಿದೆ.

ನ್ಯಾಯಾಲಯದ ತೀರ್ಪಿನಂತೆ, ರಾಮಮಂದಿರ ಟ್ರಸ್ಟ್‌ ರಚಿಸುವ ಮತ್ತು ಮಸೀದಿಗೆ ಸ್ಥಳ ನೀಡುವ ಕೆಲಸವನ್ನು ಸರ್ಕಾರವು ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕು. ಈ ತೀರ್ಪನ್ನೇ ಮುಂದಿಟ್ಟುಕೊಂಡು ಸಂಘ ಪರಿವಾರವು ಮುಂದಿನ ದಿನಗಳಲ್ಲಿ ಕಾಶಿ ಮತ್ತು ಮಥುರಾದ ಪೂಜಾ ಸ್ಥಳಗಳ ವಿವಾದವನ್ನು ಕೆಣಕಲು ಯತ್ನಿಸಿದರೆ ದೇಶ ಮತ್ತೆ ಸಂಘರ್ಷದ ಹಾದಿಗೆ ಹೊರಳಬಹುದು. ಈ ಹಿನ್ನೆಲೆಯಲ್ಲಿ ಎಲ್ಲ ವಿವಾದಿತ ಧಾರ್ಮಿಕ ಸ್ಥಳಗಳಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವ 1991ರ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳ್ಳುವಂತೆ ಸರ್ಕಾರ ನೋಡಿಕೊಳ್ಳಬೇಕು.

ಹಾಗೆ ನೋಡಿದರೆ, ಯಾವುದೇ ಸರ್ಕಾರಕ್ಕೆ ಮಂದಿರ– ಮಸೀದಿ ಕಟ್ಟುವುದು ಆದ್ಯತೆಯ ಕೆಲಸವಲ್ಲ. ಎಲ್ಲ ಧರ್ಮಗಳ ಆಚರಣೆಗೂ ಸಮಾನ ಅವಕಾಶಗಳನ್ನು ನೀಡಿರುವ ಸಂವಿಧಾನದ ಜಾತ್ಯತೀತ ಆಶಯವನ್ನು ಪಾಲಿಸಲು ಸೂಕ್ತ ವಾತಾವರಣ ರೂಪಿಸುವುದಷ್ಟೇ ಸರ್ಕಾರದ ಕೆಲಸ. ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು ನಿರುದ್ಯೋಗಿಗಳ ಸಂಖ್ಯೆ ತೀವ್ರವಾಗಿ ಏರುತ್ತಿದೆ. ಬೆಲೆ ಏರಿಕೆಯಿಂದಾಗಿ ಜನರ ಬದುಕು ದುರ್ಭರಗೊಂಡಿದೆ. ಭಾವುಕ ವಿಷಯಗಳನ್ನು ಬಡಿದೆಬ್ಬಿಸುವ ರಾಜಕೀಯದ ಬದಲು, ಎಲ್ಲ ಧರ್ಮದ ಜನರನ್ನೂ ಬಾಧಿಸುತ್ತಿರುವ ಆರ್ಥಿಕ ಸಮಸ್ಯೆಗಳನ್ನು ನಿವಾರಿಸುವತ್ತ ಕೇಂದ್ರ ಸರ್ಕಾರ ಇನ್ನಾದರೂ ತುರ್ತು ಗಮನ ಹರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT