ಬಾಂಗ್ಲಾ: ಹಸೀನಾ ಅಲೆಗೆ ವಿರೋಧ ಪಕ್ಷಗಳು ತತ್ತರ

7

ಬಾಂಗ್ಲಾ: ಹಸೀನಾ ಅಲೆಗೆ ವಿರೋಧ ಪಕ್ಷಗಳು ತತ್ತರ

Published:
Updated:
Prajavani

ಭಾರತದ ಬಹುಮುಖ್ಯ ನೆರೆರಾಷ್ಟ್ರ ಬಾಂಗ್ಲಾದೇಶ. ಸ್ವಾತಂತ್ರ್ಯಪೂರ್ವ ಭಾರತದ ಪೂರ್ವ ಬಂಗಾಳ. ದೇಶ ವಿಭಜನೆಯ ಹೊತ್ತಿನಲ್ಲಿ ಪಾಕಿಸ್ತಾನದ ಪಾಲಾಯಿತು. ಪೂರ್ವ ಪಾಕಿಸ್ತಾನ ಎನಿಸಿಕೊಂಡಿತು. ಇಲ್ಲಿನ ಶೇಕಡ 99ರಷ್ಟು ಜನ ಬಂಗಾಳಿ ಭಾಷಿಕರು. 1952ರಲ್ಲಿ ಆರಂಭವಾದ ಬಂಗಾಳಿ ಭಾಷಾ ಆಂದೋಲನವು 1971ರಲ್ಲಿ ವಿಮೋಚನಾ ಹೋರಾಟದ ರೂಪ ತಳೆಯಿತು. ಇಂದಿರಾ ಗಾಂಧಿ ನೇತೃತ್ವದ ಭಾರತದ ಅಂದಿನ ಸರ್ಕಾರ ಈ ಹೋರಾಟವನ್ನು ಬೆಂಬಲಿಸಿ ಪಾಕಿಸ್ತಾನದೊಂದಿಗೆ ಯುದ್ಧನಡೆಸಿ ಗೆದ್ದಿತ್ತು.

ಶೇಖ್‌ ಮುಜಿಬುರ್ ರೆಹಮಾನ್ ನಾಯಕತ್ವದಲ್ಲಿ ಬಾಂಗ್ಲಾದೇಶವೆಂಬ ಹೊಸ ದೇಶ ಉದಯವಾಗಿತ್ತು. ಬಡತನ, ಭ್ರಷ್ಟಾಚಾರ, ಸರ್ವಾಧಿಕಾರ, ಇಸ್ಲಾಂ ಮೂಲಭೂತವಾದದಿಂದ ತ್ರಸ್ತವಾಗಿರುವ ದೇಶವಿದು. 1991ರಿಂದ ಜರುಗಿದ ಜನತಾಂತ್ರಿಕ ಚುನಾವಣೆಗಳಲ್ಲಿ ಹಸೀನಾ ಅವರ ಅವಾಮಿ ಲೀಗ್ ಮತ್ತು ಖಲೀದಾ ಜಿಯಾ ಅವರ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ನೇರ ಎದುರಾಳಿಗಳು. ಹತ್ಯೆ, ಹಿಂಸಾಚಾರ, ಸರ್ವಾಧಿಕಾರ, ರಕ್ತಪಾತ, ಸೆರೆಮನೆ, ಮಿಲಿಟರಿ ಆಡಳಿತ, ಚುನಾವಣಾ ಅಕ್ರಮಗಳು ಬಾಂಗ್ಲಾದೇಶ ರಾಜಕಾರಣಕ್ಕೆ ಚಿರಪರಿಚಿತ. ಮೊನ್ನೆ ಅಲ್ಲಿ ನಡೆದ ಸಂಸದೀಯ ಚುನಾವಣೆಯಲ್ಲಿ ಪ್ರಧಾನಮಂತ್ರಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಮಿತ್ರಕೂಟ ಭರ್ಜರಿ ಗೆಲುವು ಸಾಧಿಸಿದೆ.

ವಿರೋಧ ಪಕ್ಷಗಳನ್ನು ದೂಳೀಪಟ ಮಾಡಿದೆ. 300 ಸೀಟುಗಳಲ್ಲಿ 288 ಅನ್ನು ಗೆದ್ದುಕೊಂಡಿದೆ. ಸರ್ವಾಧಿಕಾರಿ ದೇಶಗಳಲ್ಲಿ ಕಾಣಬಹುದಾದ ಫಲಿತಾಂಶವಿದು. ಜನತಾಂತ್ರಿಕ ವ್ಯವಸ್ಥೆಯಲ್ಲಿ ಇಂತಹ ಒಮ್ಮುಖ ಫಲಿತಾಂಶವನ್ನು ಸಂದೇಹದಿಂದ ನೋಡ
ಲಾಗುತ್ತದೆ. ಹಸೀನಾ ಗೆಲುವಿನ ನಿರೀಕ್ಷೆ ಇತ್ತು. ಆದರೆ ವಿರೋಧಪಕ್ಷವನ್ನು ತರಗೆಲೆ ಮಾಡುವ ಇಂತಹ ‘ಸುನಾಮಿ’ಯ ದೈತ್ಯ ಅಲೆ ಅಪ್ಪಳಿಸೀತೆಂದು ಯಾರೂ ಎದುರು ನೋಡಿರಲಿಲ್ಲ. ಬಾಂಗ್ಲಾದೇಶದ ಮೊದಲ ರಾಷ್ಟ್ರಾಧ್ಯಕ್ಷ ಶೇಖ್‌ ಮುಜಿಬುರ್ ರೆಹ
ಮಾನ್ ಅವರ ಮಗಳು ಶೇಖ್‌ ಹಸೀನಾ. 1981ರಿಂದ ಬಾಂಗ್ಲಾದೇಶ ಅವಾಮಿ ಲೀಗ್ ಅಧಿನಾಯಕಿ. ನಾಲ್ಕು ದಶಕಗಳ ರಾಜಕೀಯ ಅನುಭವ. 1986ರಿಂದ 1995ರ ತನಕ ಪ್ರತಿಪಕ್ಷದ ನಾಯಕಿ. 1996ರಿಂದ 2001ರ ತನಕ ಪ್ರಧಾನಮಂತ್ರಿ. 2008ರಲ್ಲಿ ಪುನಃ ಪ್ರಧಾನಿ. 2014ರಲ್ಲಿ ಪುನರಾಯ್ಕೆ. ಮೂರನೆಯ ಬಾರಿಗೆ ಪ್ರಧಾನಿ. ಮೊನ್ನೆ ನಾಲ್ಕನೆಯ ಬಾರಿ ಗೆದ್ದಿದ್ದಾರೆ.

ಹಸೀನಾ ನೇತೃತ್ವದ ಸರ್ಕಾರದ ಚುನಾವಣಾ ನ್ಯಾಯಬದ್ಧತೆಯನ್ನು ಬಾಂಗ್ಲಾದೇಶದ ವಿರೋಧ ಪಕ್ಷಗಳು ಪ್ರಶ್ನಿಸಿವೆ. ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ಹೊಸದಾಗಿ ನಡೆಸಬೇಕೆಂದು ಆಗ್ರಹಪಡಿಸಿವೆ. ಅಂತರರಾಷ್ಟ್ರೀಯ ಸಮುದಾಯ ಕೂಡ ಶಂಕೆ ವ್ಯಕ್ತಪಡಿಸಿದೆ. ಮತದಾನಕ್ಕೆ ಮುನ್ನ ಜರುಗಿದ್ದ ವ್ಯಾಪಕ ಹಿಂಸಾಚಾರದಲ್ಲಿ ಸಾವು ನೋವುಗಳು ಸಂಭವಿಸಿದ್ದವು. 2014ರ ಚುನಾವಣೆಯಲ್ಲಿಯೂ ಹಸೀನಾ ಗೆದ್ದಿದ್ದರು. ಆದರೆ ಆಗ ಬಿಎನ್‌ಪಿ ಮತ್ತು ಇತರೆ ಪ್ರತಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸಿದ್ದವು.

2008ರಿಂದ ಅಧಿಕಾರದಲ್ಲಿರುವ ಹಸೀನಾ ಅವರು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುತ್ತಿಲ್ಲ ಎಂಬುದು ಅವುಗಳ ದೂರು ಆಗಿತ್ತು. ಈ ಸಲದ ಚುನಾವಣೆಯಲ್ಲಿ ಪ್ರತಿಪಕ್ಷಗಳು ಭಾಗವಹಿಸಿದ್ದವು. ಹಿಂಸೆ, ಬೆದರಿಕೆ, ಕಿರುಕುಳ, ಬಂಧನ, ಸುಳ್ಳು ಮೊಕದ್ದಮೆಗಳನ್ನು ಪ್ರತಿಪಕ್ಷಗಳ ಉಮೇದುವಾರರು ಎದುರಿಸಬೇಕಾಯಿತು ಎಂಬ ಆಪಾದನೆಯನ್ನು ಪ್ರಧಾನಿ ಹಸೀನಾ ತಳ್ಳಿಹಾಕಿದ್ದಾರೆ. ಬಿಎನ್‌ಪಿ ಮುಖ್ಯಸ್ಥೆ ಖಲೀದಾ ಜಿಯಾ ಅವರು ಭ್ರಷ್ಟಾಚಾರದ ಮೊಕದ್ದಮೆಗಳಲ್ಲಿ ಜೈಲು ಸೇರಿದ್ದಾರೆ. ಆದರೆ ಹಸೀನಾ ಅವರ ಆಡಳಿತದಲ್ಲಿ ಬಾಂಗ್ಲಾದೇಶವು ಆರ್ಥಿಕ ಬೆಳವಣಿಗೆ, ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಅಭಿವೃದ್ಧಿಯನ್ನು ಕಂಡಿದೆ ಎಂಬುದನ್ನು ಅವರ ಕಡುವಿರೋಧಿಗಳೂ ಒಪ್ಪುತ್ತಾರೆ.

ಆದರೆ ಅಭಿವೃದ್ಧಿಗಾಗಿ ಜನತಂತ್ರದ ಆಶಯಗಳನ್ನು ಮರೆಯುವುದು ಅನಿವಾರ್ಯವೇ ಎಂಬ ಪ್ರಶ್ನೆ ಅತ್ಯಂತ ಪ್ರಸ್ತುತ. ಹಸೀನಾ ಅವರ ಅವಾಮಿ ಲೀಗ್ ಬಾಂಗ್ಲಾ ರಾಜಕಾರಣದಲ್ಲಿ ಎಡಪಂಥದತ್ತ ವಾಲಿದ ಪಕ್ಷವೆಂದು ಪ್ರತೀತಿ. ಅಲ್ಲಿನ ಹಿಂದೂ ಅಲ್ಪಸಂಖ್ಯಾತರಿಗೆ ಅಭಯ ನೀಡುತ್ತ ಬಂದಿರುವ ಪಕ್ಷ. ಆರಂಭದಿಂದಲೂ ಭಾರತದ ಪರ. ಈಶಾನ್ಯ ಭಾರತದ ರಾಜ್ಯಗಳ ಬಂಡುಕೋರ ಉಗ್ರವಾದಿಗಳಿಗೆ ಒಂದು ಕಾಲದಲ್ಲಿ ಬಾಂಗ್ಲಾದೇಶ ಆಶ್ರಯ ತಾಣವಾಗಿತ್ತು. ಈ ಬಂಡುಕೋರರನ್ನು ಹಿಡಿದು ಭಾರತ ಸರ್ಕಾರಕ್ಕೆ ಒಪ್ಪಿಸಿದರು ಹಸೀನಾ. ಬಂಡುಕೋರರು ಮತ್ತು ಐಎಸ್‌ಐ ಬೆಂಬಲಿತ ಭಾರತ ವಿರೋಧಿ ಇಸ್ಲಾಂ ಉಗ್ರವಾದಿಗಳ ಚಟುವಟಿಕೆಗಳಿಗೆ ಕಡಿವಾಣ ಹಾಕಿದರು. ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಭಾರತ- ಬಾಂಗ್ಲಾ ಗಡಿಗ್ರಾಮಗಳ ಅತಂತ್ರ ಸ್ಥಿತಿಯನ್ನು ಕೊನೆಗಾಣಿಸಲು ಸಹಕರಿಸಿದವರು. ಹೀಗಾಗಿ ಅವರ ಗೆಲುವು ಭಾರತದ ಪಾಲಿಗೆ ಸ್ವಾಗತಾರ್ಹ ಬೆಳವಣಿಗೆ.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 2

  Frustrated
 • 1

  Angry

Comments:

0 comments

Write the first review for this !